ಗೋಳಾಕಾರದ ಭೂಮಂಡಲವೇ ಕ್ರೀಡಾಂಗಣ!
ಎರಡು ವಾರಗಳ ಹಿಂದೆ ಭಾರತದಿಂದ ಅಮೇರಿಕೆಗೆ ಏರ್ ಇಂಡಿಯಾ ವಿಮಾನದಲ್ಲಿ ಪಯಣಿಸುವಾಗ ನಮಗೆ ನೆನಪಾಗಿದ್ದು ಶಾಲಾ/ಕಾಲೇಜುಗಳಲ್ಲಿ ನಡೆಯುವ ಕ್ರೀಡಾಸ್ಪರ್ಧೆಗಳು: 1) ಉದ್ದನೆಯ ಜಿಗಿತ (long jump), 2) ಎತ್ತರದ ಜಿಗಿತ (high jump) ಮತ್ತು 3) ದೂರದ ಓಟ (running race). ಉದ್ದನೆಯ ಜಿಗಿತದ ಮೈದಾನದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಎರಡೂ ಬದಿಯಲ್ಲಿ ರನ್ ವೇ, ಟೇಕಾಫ್-ರೋಡ್ ಮತ್ತು ಲ್ಯಾಂಡಿಂಗ್ ಏರಿಯಾ ಇರುತ್ತವೆ. ಎತ್ತರ ಜಿಗಿತದ ಮೈದಾನದಲ್ಲಿ ಸ್ಪರ್ಧೆಯಲ್ಲಿ ಹಾರಿದ ಎತ್ತರವನ್ನು ಅಳೆಯುವ ಅಡ್ಡ ಕೋಲಿನ ಮಾನದಂಡ ಇರುತ್ತದೆ. ದೂರದ ಓಟದ ಮೈದಾನದಲ್ಲಿ ಆಟಗಾರರು ಅಕ್ಕ ಪಕ್ಕದಲ್ಲಿ ನಿಂತು ಓಡಲು ಅನುಕೂಲವಾಗುವಂತೆ ಬಿಳಿಯ ಬಣ್ಣದಲ್ಲಿ ಸಮಾನಾಂತರವಾಗಿ ದಾರಿಯುದ್ದಕ್ಕೂ ಗುರುತು ಮಾಡಿದ ಗೋಳಾಕಾರದ running tracks ಇರುತ್ತವೆ. ಅಂತಾರಾಷ್ಟ್ರೀಯ ವಿಮಾನ ಯಾನದಲ್ಲಿ ಈ ಮೂರೂ ಕ್ರೀಡಾಸ್ಪರ್ಧೆಗಳು ಒಂದೆಡೆ ಮುಪ್ಪುರಿಗೊಂಡಂತೆ ನಮಗೆ ಕಾಣಿಸಿದವು. ನಮ್ಮ ವಿಮಾನವು ಗೋಳಾಕಾರದ ಇಡೀ ಭೂಮಂಡಲವನ್ನೇ ತನ್ನ ಕ್ರೀಡಾಂಗಣವನ್ನಾಗಿ ಮಾಡಿಕೊಂಡಂತೆ ಭಾಸವಾಯಿತು. ಬೆಂಗಳೂರಿನಿಂದ ಸಾಗರದಾಚೆ ಇರುವ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರದವರೆಗಿನ ವಾಯುಮಾರ್ಗವನ್ನೇ ಟೇಕಾಫ್ ರೋಡ್ ಮಾಡಿಕೊಂಡಂತೆ, ಆಗಸದಲ್ಲಿ ಸಂಚರಿಸುವ ಮೋಡಗಳನ್ನೇ ಎತ್ತರದ ಮಾನದಂಡವನ್ನಾಗಿ ಮಾಡಿಕೊಂಡಂತೆ. ದಟ್ಟವಾದ ಮೋಡಗಳಿಂದ ಆವರಿಸಿದ ಆಗಸವನ್ನೇ ಅಡೆತಡೆ ಓಟದ (hurdles race) ದಾರಿಯನ್ನಾಗಿ ಮಾಡಿಕೊಂಡಂತೆ ಕಾಣಿಸಿತು.
ಒಂದೇ ಜಿಗಿತದಲ್ಲಿ 14ಸಾವಿರ ಕಿ.ಮೀ. ದೂರದವರೆಗಿನ ಉದ್ದನೆಯ ಜಿಗಿತ (long jump)! ತ್ರಿವಿಕ್ರಮನಂತೆ ಆಗಸದಲ್ಲಿ 39 ಸಾವಿರ ಅಡಿಗಳಿಗೂ ಹೆಚ್ಚಿನ ಎತ್ತರದ ಜಿಗಿತ (high jump)! ಗಂಟೆಗೆ ಸುಮಾರು 848 ಕಿ.ಮೀ ಗೂ ಹೆಚ್ಚಿನ ವೇಗದಲ್ಲಿ ಚಲಿಸಿ 16 ಗಂಟೆ 30 ನಿಮಿಷಗಳ ಕಾಲ ಆಗಸದಲ್ಲಿ ನಡೆಸಿದ ನಿರಂತರ ಹಾರಾಟ! ಕೆಲವು ವೇಳೆ ಪ್ರಕ್ಷುಬ್ಧ ಹವಾಮಾನದ (turbulance) ಮಧ್ಯೆ ಭೋರ್ಗರೆಯುತ್ತಾ ವಿಮಾನ ಕಂಪಿಸಿದಾಗ ಪ್ರಯಾಣಿಕರಿಗೆ ಉಂಟಾಗುವ ಎದೆ ನಡುಕ! ಕಣ್ಣಿಗೆ ಕಾಣದ ದೇವರಂತೆ ಯಾರಿಗೂ ಕಾಣಿಸದೆ ಕಾಕ್ಪಿಟ್ನಲ್ಲಿ ಕುಳಿತು ಎಲ್ಲರ ರಕ್ಷಣೆ ಮಾಡುವ ಪೈಲೆಟ್ “ಅಭಯ ಹಸ್ತ!” ಅವನ ನಿರ್ದೇಶನದಂತೆ “Please fasten your seat belts” ಎಂದು ಗಗನಸಖಿಯರಿಂದ ಕೇಳಿಬರುವ ಮುನ್ನೆಚ್ಚರಿಕೆಯ ಸೂಚನೆಗಳು! “ಕೋಲ ತುದಿಯ ಕೋಡಗದಂತೆ, ನೇಣ ತುದಿಯ ಬೊಂಬೆಯಂತೆ ಆಡಿದೆನಯ್ಯಾ ನೀನಾಡಿಸಿದಂತೆ, ಆನು ನುಡಿದೆನಯ್ಯಾ ನೀ ನುಡಿಸಿದಂತೆ, ಆನು ಇದ್ದೆನಯ್ಯಾ ನೀನು ಇರಿಸಿದಂತೆ ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನಕ್ಕ” ಎನ್ನುವ ವೈರಾಗ್ಯನಿಧಿ ಅಕ್ಕಮಹಾದೇವಿಯ ವಚನ ನೆನಪಾಯಿತು. ಪ್ರಯಾಣದುದ್ದಕ್ಕೂ ದಣಿವರಿಯದೆ ಹೊತ್ತಿಗೆ ಸರಿಯಾಗಿ ಪ್ರಯಾಣಿಕರಿಗೆ ಆಹಾರ ಪಾನೀಯಗಳನ್ನು ಒದಗಿಸುವ ಗಗನಸಖಿಯರ ಮಾತೃ ಹೃದಯದ ಆರೈಕೆಯೊಂದಿಗೆ ದೈತ್ಯಾಕಾರದ ನಮ್ಮ ವಿಮಾನವು ಪ್ರಕ್ಷುಬ್ಧ ಹವಾಮಾನದಿಂದ ಧೃತಿಗೆಡದೆ ಮುಂದೆ ಸಾಗಿತು!
ಹಿಂದಿನ ಅಂಕಣದಲ್ಲಿ ಬರೆದಂತೆ ಕೆಲಹೊತ್ತಿನಲ್ಲಿಯೇ ಗಗನಸಖಿಯೊಬ್ಬಳು ನಮ್ಮ ಹತ್ತಿರ ಬಂದು ಕುಡಿಯಲು ಮಜ್ಜಿಗೆ, ಓದಲು ಕೆಲವು ವಾರಪತ್ರಿಕೆಗಳನ್ನು ಕೊಟ್ಟಳು. ಮಜ್ಜಿಗೆಯನ್ನು ಗುಟುಕರಿಸುತ್ತಾ ವಾರಪತ್ರಿಕೆಯ ಪುಟಗಳ ಮೇಲೆ ಕಣ್ಣು ಹಾಯಿಸಿದಾಗ ಅದರ ಒಂದು ಪುಟದ ತುಂಬಾ ದೊಡ್ಡ ಅಕ್ಷರಗಳಲ್ಲಿ ಮುದ್ರಿತವಾದ ಒಂದು ಆಕರ್ಷಕವಾದ ಒಕ್ಕಣಿಕೆ ಇತ್ತು: “When a loved one”s memory fades… what you must do?" (ನೀವು ತುಂಬಾ ಪ್ರೀತಿಸುವ ವ್ಯಕ್ತಿ ವಿಸ್ಮೃತಿಗೊಂಡರೆ ….. ನೀವೇನು ಮಾಡಬೇಕು?) ಕುತೂಹಲದಿಂದ ಪತ್ರಿಕೆಯ ಮುಂದಿನ ಪುಟವನ್ನು ತಿರುವಿ ಹಾಕಿದಾಗ ಈ ವಿಷಯಕ್ಕೆ ಸಂಬಂಧಿಸಿದ ಯಾವ ಲೇಖನವೂ ಇರಲಿಲ್ಲ. "The Week Health” ಎಂಬ ಮತ್ತೊಂದು ವಾರಪತ್ರಿಕೆಯ ಜಾಹೀರಾತು ಅದಾಗಿತ್ತು. ಆದರೆ ಆ ಪತ್ರಿಕೆ ಓದಲು ಸಿಗಲಿಲ್ಲ.
ಅದರಲ್ಲಿ ಏನಿರಬಹುದೆಂದು ಚಿಂತನೆ ಮಾಡತೊಡಗಿದಾಗ ನಮಗೆ ನೆನಪಾಗಿದ್ದು ದಾವಣಗೆರೆಯ ಮೆಡಿಕಲ್ ಕಾಲೇಜಿನಲ್ಲಿ ಪ್ರಖ್ಯಾತ ಮಕ್ಕಳ ವೈದ್ಯೆಯಾಗಿದ್ದ ಡಾ. ನಿರ್ಮಲಾ ಕೇಸರಿಯವರು. ಅಮೇರಿಕೆಯಲ್ಲಿ ಬಹಳ ವರ್ಷಗಳ ಕಾಲ ವೈದ್ಯಕೀಯ ವೃತ್ತಿ ನಡೆಸಿ ತಾಯ್ನಾಡಿಗೆ ಮರಳಿ ಬಂದು ಗ್ರಾಮೀಣ ಮಹಿಳೆಯರಿಗೆ ಮಹಾತಾಯಿ ಎನಿಸಿದ್ದರು. ಅವರು ತಮ್ಮ ಇಳಿವಯಸ್ಸಿನಲ್ಲಿ ಆಲ್ ಜೈಮರ್(Alzheimer) ಕಾಯಿಲೆಯಿಂದ ಬಳಲುತ್ತಿದ್ದರು. ಎರಡು ವರ್ಷಗಳ ಕಾಲ ಯಾರನ್ನೂ ಗುರುತಿಸ ಲಾರದಷ್ಟು ವಿಸ್ಮೃತಿಗೆ ಒಳಗಾಗಿದ್ದರು. ನಮ್ಮ ಮೇಲೆ ಅಪಾರ ಭಕ್ತಿಯುಳ್ಳವರಾಗಿದ್ದ ಅವರನ್ನು ಮಾತನಾಡಿಸಲು ಆಸ್ಪತ್ರೆಗೆ ಹೋದಾಗ ನಮ್ಮನ್ನು ದಿಟ್ಟಿಸಿ ನೋಡಿದರೂ ಗುರುತಿಸಲಾರದೆ, ಯಾವ ಪ್ರತಿಕ್ರಿಯೆಯನ್ನು ತೋರಿಸದೆ ಸ್ಥಿತಪ್ರಜ್ಞ ಸ್ಥಿತಿಯಲ್ಲಿದ್ದರು. ಅವರು ಮಾಡಿದ ವೈದ್ಯಕೀಯ ಸೇವೆಯನ್ನು ಸ್ಮರಿಸಿ ಆಸ್ಪತ್ರೆಯ ನರ್ಸ್ ಗಳೆಲ್ಲರೂ ವಿಶೇಷ ಕಾಳಜಿ ವಹಿಸಿ ಅಂತ್ಯಕಾಲದವರೆಗೆ ಅವರ ಶುಶ್ರೂಷೆ ಮಾಡಿದರು.
ಇಳಿ ವಯಸ್ಸಿನಲ್ಲಿ ಜ್ಞಾನವಾಹಿನಿ, ನರತಂತುಗಳು ನಿಷ್ಕ್ರಿಯಗೊಂಡು ಮೆದುಳು ಸಂಪೂರ್ಣ ವಿಸ್ಮರಣೆಗೆ ಒಳಗಾದಾಗ ಯಾರನ್ನೂ ಗುರುತಿಸಲಾಗದ ಕಾರಣ ಅವರ ಮೇಲೆ ಪ್ರೀತಿಯುಳ್ಳವರಿಗೆ ಆಗುವ ವೇದನೆ ಅಸದಳ. ನಮ್ಮ ದೃಷ್ಟಿಯಲ್ಲಿ ಎರಡು ತೆರನಾದ ವಿಸ್ಮೃತಿಗಳಿವೆ. ಒಂದು ವಯೋಸಹಜವಾದ ವಿಸ್ಮೃತಿ, ಮತ್ತೊಂದು ಸ್ವಾರ್ಥಪೂರಿತವಾದ ಮನಸ್ಸಿನ ವಿಕೃತಿ. ನೆನಪು ಇದ್ದರೂ ಉಪಕಾರ ಸ್ಮರಣೆ ಇಲ್ಲದವರು. ಇವರು ನಿರೀಕ್ಷಿತ ಪ್ರಮಾಣದಲ್ಲಿ ತಮಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡಲಿಲ್ಲವೆಂದು ಸಿಡಿಮಿಡಿಗೊಂಡು ಹೆತ್ತ ತಂದೆ-ತಾಯಂದಿರ ವಿರುದ್ಧವೇ ಕೋರ್ಟಿನಲ್ಲಿ ಕೇಸು ದಾಖಲಿಸುವ ಕೆಟ್ಟ ಪ್ರವೃತ್ತಿಯುಳ್ಳ “ಶನಿಸಂತಾನ”! ಇದರಿಂದ ಹೆತ್ತು ಹೊತ್ತು ಪ್ರೀತಿಯಿಂದ ಮಕ್ಕಳ ಪಾಲನೆ ಪೋಷಣೆ ಮಾಡಿದ ತಂದೆತಾಯಿಗಳಿಗೆ ಆಗುವ ನೋವು ಅಷ್ಟಿಷ್ಟಲ್ಲ.
ಇತ್ತೀಚೆಗೆ 84 ವರ್ಷದ ವೃದ್ಧ ತಾಯಿಗೆ ತಲಾ ಐದು ಸಾವಿರ ರೂ. ಗಳ ಜೀವನಾಂಶವನ್ನು ಕೊಡಬೇಕೆಂದು ಜಿಲ್ಲಾಧಿಕಾರಿಗಳು ಮಾಡಿದ ಆದೇಶವನ್ನು ಪ್ರಶ್ನಿಸಿ ಆಕೆಯ ಇಬ್ಬರು ಗಂಡು ಮಕ್ಕಳು ಕರ್ನಾಟಕ ಹೈಕೋರ್ಟಿನಲ್ಲಿ ಕೇಸು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ರವರ ಏಕ ಸದಸ್ಯ ಪೀಠವು “ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ” ಎಂಬ ಭಾರತೀಯ ಸಂಸ್ಕೃತಿಯನ್ನು ಉಲ್ಲೇಖಿಸಿ “With no joy in heart, this Court observes that nowadays, a section of youngsters is failing to look after the aged and ailing parents and the number is swelling. This is not a happy development" ಎಂದು ವಿಷಾದ ವ್ಯಕ್ತಪಡಿಸಿದೆ. ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದುದಲ್ಲದೆ ಐದು ಸಾವಿರ ರೂ. ಗಳ ದಂಡ ವಿಧಿಸಿದೆ. ಒಂದು ತಿಂಗಳೊಳಗೆ ವೃದ್ಧ ತಾಯಿಗೆ ಹತ್ತು ಸಾವಿರ ರೂ. ಗಳ ಜೀವನಾಂಶವನ್ನು ಕೊಡದೇ ಇದ್ದರೆ ದಿನಕ್ಕೆ 100/- ರೂ. ಗಳಂತೆ ಹೆಚ್ಚಿನ ಜುಲ್ಮಾನೆಯನ್ನೂ ವಿಧಿಸಿದೆ.
ಇಂದಿನ ಕೌಟುಂಬಿಕ ಜೀವನದಲ್ಲಿ ಪ್ರೀತಿ ಎಂಬುದು ಯಾವ ನಾಟಕ ನಿರ್ದೇಶಕರೂ ಕಲಿಸದ ಸುಂದರ ನಾಟಕೀಯ ಅಭಿನಯವಾಗಿದೆ! ಕಳೆದ ವಾರ ಹವಾಯಿ ದ್ವೀಪದಲ್ಲಿದ್ದಾಗ ಒಂದು ಅಪರೂಪದ ಕವಿತೆ ನಮ್ಮ ಗಮನಕ್ಕೆ ಬಂತು. ಅದನ್ನು ಬರೆದವರು ಕರ್ನಾಟಕದ ಯಾವ ಪ್ರಸಿದ್ಧ ಕವಿಗಳೂ ಅಲ್ಲ. ವೃತ್ತಿಯಿಂದ ಜೀವ ವಿಜ್ಞಾನಿಯಾದರೂ ಪ್ರವೃತ್ತಿಯಿಂದ ಕವಿ ಹೃದಯವುಳ್ಳ ಚಿಕಾಗೋ ನಗರದ ನಿವಾಸಿ ಡಾ.ಅಣ್ಣಾಪುರ್ ಶಿವಕುಮಾರ್. ಅವರು ತಮ್ಮ ಖುಷಿಗಾಗಿ ಕವಿತೆಗಳನ್ನು ಬರೆಯುತ್ತಾರೆ. ಕವಿಗೋಷ್ಠಿಗಾಗಿ ಅಲ್ಲ. “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್” ಎಂಬ ಕವಿವಾಣಿಗೆ ಅವರು ಒಂದು ಉದಾಹರಣೆ. ಹವಾಯಿ ದ್ವೀಪದ ಫೆಸಿಫಿಕ್ ಸಮುದ್ರ ತೀರದಲ್ಲಿ ಅವರೊಟ್ಟಿಗೆ ಕುಳಿತು ಉಕ್ಕಿ ಬರುತ್ತಿದ್ದ ಅಲೆಗಳ ಮನಮೋಹಕ ದೃಶ್ಯವನ್ನು ಸವಿಯುತ್ತಾ ಪರಿಷ್ಕರಿಸಿದ ಆ ಮನಮಿಡಿಯುವ ಕವಿತೆ ಹೀಗಿದೆ:
ಕುರುಡು ಲೋಕ!
ಇದ್ದಳೊಬ್ಬಳು ಕುರುಡಿಅನುದಿನವು ಬೇಡಿದಳು ಆ ದೇವರನು
ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಲು
“ತಮಸೋ ಮಾ ಜ್ಯೋತಿರ್ಗಮಯ”
ಕಣ್ಣುಳ್ಳ ನೆರೆಹೊರೆಯವರ ಭಾಗ್ಯಕ್ಕೆ
ಅಸೂಯೆಯುಕ್ಕಿ ಬರುತ್ತಿತ್ತು
ಹತಾಶೆಯ ಭಾವ ಬಲಿಯುತ್ತಿತ್ತು
ಕತ್ತಲೆಯ ಜಗದೊಳಗೆ
ಸಿಕ್ಕನೊಬ್ಬ ಪುಣ್ಯಾತ್ಮನವಳಿಗೆ
ಗೆಳೆಯನಾಗಿ, ಅನವರತ ಕಣ್ಣಾಗಿ
ಅವಳ ಸುಖ-ದುಃಖದಲಿ ಭಾಗಿಯಾಗಿ
ಹೇಳಿದರು ಯಾರೋ
ಕುರುಡರಿಗೆ ಕಣ್ಣ ಜೋಡಿಸಿ
ದೃಷ್ಟಿ ಬರುವಂತೆ ಮಾಡುವ
ಚಿಕಿತ್ಸೆ ಬಂದಿದೆಯೆಂದು
ಗೆಳೆಯನ ಒತ್ತಾಸೆಗೆ ಒಪ್ಪಿದಳು ಕುರುಡಿ
ಚಿಕಿತ್ಸೆ ಮಾಂತ್ರಿಕ ಮಾಟ ಮಾಡಿತು
ಕಣ್ಣರಳಿಸಿ ನೋಡಿದಳು
ತನ್ನಾ ಗೆಳೆಯನನು ಮೊದಲ ಬಾರಿಗೆ
ತಿಳಿಯಿತವಳಿಗೆ ಆತನೂ ಕುರುಡನೆಂದು!
ಕಷ್ಟ ನೀಗಿತು ಜೊತೆಗೆ
ಬಾಳಿ ಬೆಳಗೋಣ ಬಾ ನನ್ನ ಗೆಳತಿ
ಎಂದನಾ ಗೆಳೆಯ ಹರುಷದಿಂದ
ಹುಬ್ಬು ಗಂಟಿಕ್ಕಿ ನುಡಿದಳಾ ಗೆಳತಿ
ಹೋಗೋ ಕುರುಡ
ನಿನ್ನೊಡನೆ ಬಾಳುವೆ ಮಾಡಲು
ನಾನೇನು ಕುರುಡಿಯೇ?
ನಡೆಯಾಚೆ ದೂರ!
ಮರುದಿನವೇ ತಿಳಿಯಿತವಳಿಗೆ
ವಿಷ ಕುಡಿದು ಆ ಗೆಳೆಯ ಸತ್ತನೆಂದು!
ಸಾಯುವ ಮುನ್ನ ಬರೆದಿದ್ದನವನೊಂದು
ಉಯಿಲು ಪತ್ರ:
ದುಃಖವೆನಗಿಲ್ಲ ಓ ಗೆಳತಿ
ನೀ ನನ್ನ ಜರಿದುದಕೆ
ಆದರೂ ಬೇಡುವೆನು ನಾನೊಂದ
ಬದುಕಿರುವೆ ನಾ ನಿನ್ನ ಕಣ್ಣಾಲಿಗಳಲಿ!
ಜತನದಿಂದಲಿ ಕಾಪಾಡು
ನಿನಗಿತ್ತ ನನ್ನಯ ಆ ಕಣ್ಗಳನು!
ಕಣ್ಣನಿತ್ತು ಕುರುಡನಾಗಿ ಸತ್ತ ಆ ಗೆಳೆಯ
ಬೆಳಕಿನಿಂದ ಕತ್ತಲೆಗೆ ಸರಿದನೆ?
ಕಣ್ಣ ಪಡೆದು ಬಿಂಕದಿಂದ
ವಾರೆ ನೋಟ ಬೀರಿದ ಆ ಅಂದ(ಧ)ಗಾತಿ
ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿದಳೆ?
“ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗಮಯ”.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ಜಾಕ್ಸನ್ ವಿಲ್ (ಅಮೇರಿಕಾ)
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.10-08-2023.