ಸಂಚಿಗೆ ಶಾಂತಸ್ವರೂಪಿಯ ಪ್ರಾಣ ಹರಣ
ನಿನ್ನೆಯ ದಿನ 83 ವರ್ಷಗಳ ಹಿಂದೆ ನಮ್ಮ ಮಠದ ಗುರುಪರಂಪರೆಯ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹ ದಾರುಣ ಪ್ರಸಂಗ. ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಬಡ ವಿದ್ಯಾರ್ಥಿಗಳಿಗೆಂದು ದಾವಣಗೆರೆಯ ನರಸರಾಜಪೇಟೆಯಲ್ಲಿ ಒಂದು ಉಚಿತ ಪ್ರಸಾದನಿಲಯವನ್ನು (1924) ಸ್ಥಾಪಿಸಿದ್ದರು. 1938ನೆಯ ಇಸವಿ ಆಗಸ್ಟ್ 11ರಂದು ಈ ವಿದ್ಯಾರ್ಥಿನಿಲಯದ ಮೇಲ್ವಿಚಾರಣೆಯನ್ನು ಮುಗಿಸಿಕೊಂಡು ಮಧ್ಯಾಹ್ನ ದಾವಣಗೆರೆಯಿಂದ ಸಿರಿಗೆರೆಗೆ ದಯಮಾಡಿಸಿದ್ದರು. ಪ್ರಯಾಣದಿಂದ ದಣಿದಿದ್ದ ಪೂಜ್ಯ ಗುರುಗಳಿಗೆ ಬಾಯಾರಿಕೆಯಾಗಿತ್ತು. ಕುಡಿಯಲು ನೀರನ್ನು ಕೇಳಿದರು. ಒಡನೆಯೇ ಅವರಿಗೆ ಅತ್ಯಂತ ಪ್ರಿಯವಾಗಿದ್ದ ಮಜ್ಜಿಗೆಯನ್ನು ತಂದು ಕೊಡಲಾಯಿತು. ಶಿವದಾನವೆನಿಸಿದ ಮಜ್ಜಿಗೆಯಲ್ಲಿ ಶಿವದ್ರೋಹದ ಷಡ್ಯಂತ್ರ ನಡೆದಿದೆಯೆಂಬುದನ್ನು ಶಿವಭಾವದ ಹೃದಯವು ಅರಿಯದೇ ಹೋಯಿತು! ಶ್ರೀ ಗುರುಗಳವರು ಭೀಮಸಮುದ್ರಕ್ಕೆ ಹೋದಾಗ ಮಠದ ಚರಮೂರ್ತಿಗಳು ಮತ್ತು ವಿರಕ್ತರ ದುರ್ನಡತೆ, ಅನೈತಿಕತೆ ಬಗ್ಗೆ ವಿಚಾರಣೆ ನಡೆಸಲು ಶಿಷ್ಯಪ್ರಮುಖರಾದ ಎಂ.ಸಿ.ಗೌಡರೊಡನೆ (ಪ್ರಸಿದ್ದ ಅರ್ಥಶಾಸ್ತ್ರಜ್ಞ ಡಿ.ಎಂ.ನಂಜುಂಡಪ್ಪನವರ ತಂದೆ, ಆಗಿನ ಅಮಲ್ದಾರರು) ಸಮಾಲೋಚನೆ ನಡೆಸಿ ಆಗಸ್ಟ್ 20ರಂದು ಸಮಾಜದ ಸಭೆ ಕರೆಯಬೇಕೆಂದು ತೀರ್ಮಾನಿಸಿದರು. ಈ ವಿಷಯ ಮಠದಲ್ಲಿದ್ದ ಮೇಲ್ಕಂಡ ಈರ್ವರು ಸ್ವಾಮಿಗಳಿಗೆ ತಿಳಿಯಿತು. ಸಮಾಜದಲ್ಲಿ ಪಟ್ಟದ ಸ್ವಾಮಿಗಳಿಗೇ ಹೆಚ್ಚಿನ ಅಧಿಕಾರ ಮತ್ತು ಮನ್ನಣೆ ಇರುವುದನ್ನು ನೋಡಿ ಈರ್ಷ್ಯಾಸೂಯೆಗಳಿಂದ ಕುದಿಯುತ್ತಿದ್ದ ಆ ಇಬ್ಬರು ಸ್ವಾಮಿಗಳು ಅವರು ಬದುಕಿದ್ದರೆ ತಾನೆ ಮೀಟಿಂಗ್ ನಡೆಸುವುದು ಎಂದು ಒಳಸಂಚು ನಡೆಸಿ ಮಜ್ಜಿಗೆಯಲ್ಲಿ ವಿಷವನ್ನು ಬೆರೆಸಿ ಕುಡಿಸಿದರು. ಕ್ಷಣಾರ್ಧದಲ್ಲಿ ವಿಷವು ಶ್ರೀ ಗುರುಗಳವರ ಪ್ರಾಣವನ್ನು ಆಹುತಿ ತೆಗೆದುಕೊಂಡಿತು!
ಈ ಘೋರ ಕೃತ್ಯದ ಸುದ್ದಿಯು ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿ ಇಡೀ ಸಮಾಜವನ್ನು ಶೋಕಸಾಗರದಲ್ಲಿ ಮುಳುಗಿಸಿತು. ರೊಚ್ಚಿಗೆದ್ದ ಶಿಷ್ಯರು ಮಠದಲ್ಲಿ ಅವಿತುಕೊಂಡಿದ್ದ ಆ ಇಬ್ಬರು ಸ್ವಾಮಿಗಳ ಮೇಲೆ ಪ್ರತೀಕಾರವನ್ನು ತೆಗೆದುಕೊಳ್ಳಲು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಮುನ್ನುಗ್ಗಿದರು. ಮುಖ ಮೋರೆಯನ್ನು ನೋಡದೆ ಆ ಪಾತಕಿಗಳನ್ನು ಹಿಡಿದು ಬಡಿಯ ತೊಡಗಿದರು. ಆದರೆ ಆ ಪಾಪಾತ್ಮರು ತೊಟ್ಟಿದ್ದ ಕಾವಿಯೇ ಅವರ ಪ್ರಾಣಕ್ಕೆ ರಕ್ಷಣೆಯಾಯಿತು. ಸಮಾಜದ ಹಿರಿಯರು ಕಾವಿಗೆ ಮನ್ನಣೆ ಕೊಟ್ಟು ಉದ್ರಿಕ್ತ ಗುಂಪನ್ನು ಹಿಂದಕ್ಕೆ ಸರಿಸಿದರು. ಕಾವಿಗೆ ಕಳಂಕ ತಂದ ಆ ನೀಚ ಸ್ವಾಮಿಗಳನ್ನು ಮಠದಿಂದ ಹೊರದೂಡಿದರು.
ಪ್ರತೀಕಾರದಿಂದ ಯಾವ ಪ್ರಯೋಜನವೂ ಇರಲಿಲ್ಲ, ಆಗಬಾರದ ಅನಾಹುತ ಆಗಿ ಹೋಗಿತ್ತು. ಮಠಪೀಠಗಳ ಇತಿಹಾಸದಲ್ಲಿ ಎಂದೂ ಕಂಡರಿಯದ, ಕೇಳರಿಯದ ದುರ್ಘಟನೆಯೊಂದು ಸಂಭವಿಸಿತ್ತು. ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ನವನ್ನು ನೀಡಿ ಪೋಷಣೆ ಮಾಡಿದ ಪುಣ್ಯ ಜೀವಕ್ಕೆ ಕೊನೆಯಲ್ಲಿ ದೊರೆತದ್ದು ಅನ್ನವಲ್ಲ; ಪ್ರಾಣಾಂತಿಕ ವಿಷ! ಇದೆಂತಹ ಹೃದಯವಿದ್ರಾವಕ ಸನ್ನಿವೇಶ! ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಬಹುಶಃ ಪ್ರಪಂಚದ ಎಲ್ಲ ಮಹಾಪುರುಷರ ಜೀವನವು ಹೀಗೆ ದುಃಖಾಂತವಾಗಿ ಪರ್ಯವಸಾನಗೊಂಡಿರುವುದು ಕಾಣಬರುತ್ತದೆ. ಏಸುಕ್ರಿಸ್ತನನ್ನು ಶಿಲುಬೆಗೆ ಏರಿಸಲಾಯಿತು. ಮಹಾತ್ಮಾ ಗಾಂಧೀಜಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಆ ಮಹಾನುಭಾವರಂತೆಯೇ ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ವಿಷಪ್ರಾಶನದಿಂದ ಅಸುನೀಗಿದರು. ಅವರ ಸಾವಿನ ದಾರುಣ ವಾರ್ತೆಯನ್ನು ಕೇಳಿ ದೂರದ ಬೇಲೂರು ತಾಲೂಕು ಯಲಹಂಕ ಮಠದ ಸ್ವಾಮಿಗಳಾಗಿದ್ದ ನಮ್ಮ ಪರಮಾರಾಧ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆಗೆ ಧಾವಿಸಿ ಬಂದರು. ಅನಿರೀಕ್ಷಿತ ಘಟನೆಯಿಂದ ಮರಣವನ್ನಪ್ಪಿದ್ದ ತಮ್ಮ ಗುರುವರ್ಯರ ಕಳೇಬರವನ್ನು ನೋಡಿ ದುಃಖತಪ್ತರಾದರು. ಬೇಡನ ಬಾಣದಿಂದ ಗಾಯಗೊಂಡು ಆಕ್ರಂದಿಸುತ್ತಾ ಸತ್ತುಬಿದ್ದ ಕ್ರೌಂಚಪಕ್ಷಿಯನ್ನು ನೋಡಿ ಮರುಗಿದ ಮಹರ್ಷಿ ವಾಲ್ಮೀಕಿಯ ಬಾಯಿಂದ ಹೊರಟ “ಮಾ ನಿಷಾದ” ಎಂಬ ಕಾವ್ಯಮಯ ಮಾತಿನಂತೆ ಅಂದಿನ ನಮ್ಮ ಗುರುವರ್ಯರ ಹೃದಯಲ್ಲಿದ್ದ ಆರ್ದ್ರ ಭಾವನೆಗಳು ಅವರ ದಿನಚರಿಯಾದ “ಆತ್ಮನಿವೇದನೆ”ಯಲ್ಲಿ ಅವರ ಲೇಖನಿಯಿಂದಲೆ ಕಾವ್ಯಮಯವಾಗಿ ಈ ಮುಂದಿನಂತೆ ಹೊರಹೊಮ್ಮಿವೆ.
ಗುರುದೇವ! ನೀನು ನನ್ನ ಮೇಲೆ ಎಷ್ಟೊಂದು ಕೃಪೆಯನ್ನಿಟ್ಟಿದ್ದೆ. ಅದೆಲ್ಲಾ ಎಲ್ಲಿ ಹೋಯಿತು ಅಕಸ್ಮಾತ್ ನೀನು ಈ ರೀತಿ ನಿಷ್ಠುರನಾಗಲು ಕಾರಣವೇನು? ನಾನೇನು ನಿನಗೆ ಅಪರಾಧವನ್ನು ಮಾಡಿದೆನು? ದೇವ! ನಿನ್ನ ವಿಶಾಲ ಶಾಂತ ಹೃದಯವು ನನ್ನ ಅಪರಾಧವನ್ನು ಕ್ಷಮಿಸಲಿಲ್ಲವೇಕೆ ದಯಾಘನ! ನೀನೆಂದೂ ಈ ರೀತಿಯಾಗಿ ನಿಷ್ಠುರವಾದ ವ್ಯವಹಾರವನ್ನು ಮಾಡಿರಲಿಲ್ಲ. ಈ ರೀತಿ ಏಕಾಏಕಿಯಾಗಿ ನನ್ನೊಬ್ಬನಲ್ಲ, ಇಡೀ ಈ ದೊಡ್ಡ ಸಮಾಜಕ್ಕೇನೆ ಘೋರತರವಾದ ವಿರಹ ವಿಪತ್ತನ್ನುಂಟು ಮಾಡಿದೆಯಲ್ಲಾ! ಪರಮ ಗುರುದೇವ ನಮ್ಮ ಔಪಚಾರಿಕ ವ್ಯವಹಾರವು ನಿನಗೆ ಅರಮಣಿಯವಾಯಿತೇ? ಪರಮಾತ್ಮನ್! ನನ್ನ ಮನೋರಥಗಳೆಲ್ಲಾ ಭಗ್ನವಾದವು. ನಃ ಬಯಕೆಯನ್ನು ಯಾರ ಮುಂದಿಡಲಿ? ಇನ್ನು ಮುಂದೆ ಯಾರನ್ನು ಗುರುವೇ ಎಂದು ಕರೆಯಲಿ? ಯಾರಿಗೆ ವಂದಿಸಲಿ? ನಿನ್ನ ವಾತ್ಸಲ್ಯ ದಯಾ ಪ್ರೇಮಗಳನ್ನು ಇನ್ನು ಮುಂದೆ ಯಾರಲ್ಲಿ ನೋಡಲಿ? ಹಾ ದಯಾ ಸತ್ಯ ಶಾಂತಿ ಗುಣಗಳೇ! ನಿಮ್ಮೆಲ್ಲರ ಆಧಾರವು ಕಣ್ಮರೆಯಾಯಿತು. ಇನ್ನು ನೀವು ಅನಾಥರಾದಿರಿ. ಇನ್ನೆಲ್ಲಿಗೆ ಹೋಗುವಿರಿ ಗುರುದೇವ! ನಿನ್ನ ಹಸನ್ಮುಖವು ನನ್ನ ಕಣ್ಣೆದುರಿನಲ್ಲಿ ಕುಣಿಯುತ್ತ ಇದೆ. ಪರಮೇಶ್ವರ! ಸಮಾಜಕ್ಕೆ ನೀನು ಗುರುವಿನೋಪಾದಿಯಲ್ಲೂ ತಂದೆಯೋಪಾದಿಯಲ್ಲೂ, ಬಂಧುವಿನೋಪಾದಿಯಲ್ಲೂ, ಮಿತ್ರನೋಪಾದಿಯಲ್ಲೂ ಇರುತ್ತಿದ್ದು ನಿಷ್ಕಾರಣವಾಗಿ ಅಲ್ಪ ದಿನಗಳಲ್ಲಿ ಎಲ್ಲರನ್ನೂ ಕೈಬಿಟ್ಟೆಯಲ್ಲಾ ನಾವು ನಿರ್ಭಾಗ್ಯರು! ಗುರುದೇವ ಸಮಾಜಕ್ಕೆ ಕಳಸೋಪಾದಿಯಲ್ಲಿದ್ದೆ. ಕಳಸವು ಮುರಿಯಿತು. ಇನ್ನು ಮುಂದೇನು ಗತಿ? ಸಮಾಜದ ಕಷ್ಟನಿಷ್ಟುರಗಳನ್ನು ನೋಡುವವರಾರು? ಗುರುದೇವ! ನಾನಂತೂ ಅತಿ ದುಃಖಿತನಾಗಿರುತ್ತೇನೆ ನನ್ನ ಹೃದಯದ ದುಃಖಾಗ್ನಿಯನ್ನು ಶಾಂತಿ ಮಾಡುವ ಬಗೆ ಹೇಗೆ ಗುರುದೇವ! ಗುರುದೇವ ಗುರುದೇವ ಗುರುದೇವ ನಾನೆಂದು ಕಣ್ಣೀರು ಹಾಕಿದ್ದಿಲ್ಲ. ಈ ಪ್ರಸಂಗದಲ್ಲಿ ಮಾತ್ರ ಹಾಕುವ ಸಂದರ್ಭ ಬರುತ್ತದೆಂದು ಭಾವಿಸಿದ್ದೆನಾದರೂ, ನನ್ನ ಜೀವಮಾನ….
ಇಲ್ಲಿಂದ ಮುಂದಕ್ಕೆ ಭಾವುಕತೆಯಲ್ಲಿ ಲೇಖನಿ ಮುಂದುವರಿದಿಲ್ಲ ಆದರೆ ಕಾಲಚಕ್ರ ನಿಲ್ಲುವಂತಿರಲಿಲ್ಲ. ಭೌತಿಕ ಶರೀರವು ವಿನಷ್ಟವಾದರೂ ತ್ಯಾಗ-ಬಲಿದಾನಗಳ ಹಿಂದೆ ಇದ್ದ ಸಂಕಲ್ಪ ಶಕ್ತಿ ಮಾತ್ರ ವಿನಷ್ಟಗೊಳ್ಳಲಿಲ್ಲ. ಸಮಾಜದ ಅಪೇಕ್ಷೆಯಂತೆ ನಮ್ಮ ಗುರುವರ್ಯರು ಮಠದ ಗದ್ದುಗೆಯನ್ನೇರಿದರು. ಬಡತನ, ದಾರಿದ್ರ್ಯ, ಅಜ್ಞಾನ ಅಂಧಕಾರದಲ್ಲಿದ್ದ ಜನರನ್ನು ಜಾತಿಭೇದವನ್ನೆಣಿಸದೆ ಮುನ್ನಡೆಸಿದರು ಸ್ವಾತಂತ್ರ್ಯ ಪೂರ್ವದ ದಿನದಿಂದಲೇ ನೂರಾರು ಶಾಲಾಕಾಲೇಜುಗಳನ್ನು ಹಳ್ಳಿಹಳ್ಳಿಗಳಲ್ಲಿ ಸ್ವಾಪಿಸುತ್ತಾ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಕೈಂಕರ್ಯದಲ್ಲಿ ಮುಂದಾದರು. ಸಾಮಾಜಿಕ ಹೊಣೆಗಾರಿಕೆಯ ನಿರ್ವಹಣೆಯಿಂದ ಅವರ ಸಾಹಿತ್ಯ ಕೃಷಿ ಸೊರಗಿ ಹೋಯಿತು. ಆದರೆ ಅವರ ಜೀವನವೆ ಒಂದು ಸಾಹಸಗಾಥೆಯಾಗಿ ಜನಮಾನಸದಲ್ಲಿ ನೆಲೆಗೊಂಡಿತು. ಕಾಶಿಯಲ್ಲಿ ಓದಿ ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಅವರು ಈ ಘಟನೆಯನ್ನು ಕುರಿತು “ದ್ರುತವಿಲಂಬಿತ” ಛಂದಸ್ಸಿನಲ್ಲಿ ರಚಿಸಿರುವ ಸಂಸ್ಕೃತ ಶ್ಲೋಕವು ಕಾಳಿದಾಸನ ಕಾವ್ಯ ಪ್ರತಿಭೆಯನ್ನು ಸರಿಗಟ್ಟುವಂತಿದೆ.
ಪ್ರಲಯಕೇಲಿವಿಕರ್ಕಶಮೀಶ್ವರಂ
ಶಮಯಿತುಂ ವಿಬುಧಾಃ ಶಮನಾಮೃತೈಃ
ಶಮನಿಧಿಂ ಗುರುಶಾಂತಯತೀಶ್ವರಂ
ಸಮನಯನ್ನ ಯನೋತ್ಸುಕದರ್ಶನಮ್ |
ಹತವಿಧೇ ಬಹುಧಾನ್ಯಶರದ್ ವರ!
ತ್ವಯಿ ಗುರೋರಿಹಲೋಕವಿಸರ್ಜನಮ್
ಇತಿ ನೃಣಾಮಪವಾದಮಹೀಧರಂ
ಕಥಮಮುಂ ವಹಸಿ ವ್ಯಸನಾವಹಮ್ ||
(ಭಾವಾನುವಾದ)
ಪ್ರಳಯಕಾಲದಿ ಶಿವನು ರುದ್ರಭೀಕರನಾಗಿ
ಘುಡುಘುಡಿಸಿ ಆರ್ಭಟಿಸಿ ನೃತ್ಯಗೈಯುತಿರಲು
ಆ ಶಿವನ ಉಪಶಮನಗೊಳಿಸಲೋಸುಗ ಸುರರು
ಶಮನಾಮೃತವನರಸುತ್ತ ಧರೆಗೆ ಬರಲು
ಶಾಂತಿಯೇ ಮೈವೆತ್ತ ಗುರುಶಾಂತಯತಿವರನ
ಕಂಡು ಬಿನ್ನೈಸಿ ಕರೆದೊಯ್ದರು ಕೈಲಾಸಪುರಕೆ
ಇತ್ತ ಧರೆಯೊಳಗೆ ಇದನರಿಯದ ಮುಗ್ಧಭಕ್ತರು
“ನಿನ್ನ ಕಾಲದಿ ನಮ್ಮ ಗುರುಗಳೀ ಲೋಕವನು
ತ್ಯಜಿಸುವಂತಾಯಿತು” ಎಂದು ಶಪಿಸುತಿಹರು
ಹಾ ಹಂತ ಹತಭಾಗ್ಯ! ಬಹುಧಾನ್ಯಸಂವತ್ಸರ!
ಇಂತು ಲೋಕಾಪವಾದದ ಹೊರೆಯಂ ಹೊತ್ತು
ನೀನದೆಂತು ಬದುಕುವೆ ಈ ಭುವನದೊಳಗೆ?
ಈ ಶ್ಲೋಕದ ತಾತ್ಪರ್ಯ ಹೀಗಿದೆ: ಪ್ರಳಯಕಾಲದಲ್ಲಿ ಶಿವನು ರುದ್ರಭೀಕರವಾಗಿ ಘುಡುಘುಡಿಸಿ, ಆರ್ಭಟಿಸಿ ತಾಂಡವ ನೃತ್ಯ ಮಾಡುತ್ತಿದ್ದ. ಅವನ ಕ್ರೋಧಾಗ್ನಿಯನ್ನು ಶಮನಗೊಳಿಸಲು ಬೇಕಾದ ಶಮನಾಮೃತವನ್ನು ಅರಸುತ್ತಾ ದೇವತೆಗಳು ಸಿರಿಗೆರೆಗೆ ಬಂದರು. ಶಾಂತಿಯೇ ಮೈವೆತ್ತಂತಿದ್ದ ಶ್ರೀ ಗುರುಶಾಂತ ಯತೀಶ್ವರರನ್ನು ನೋಡಿ ಆಕರ್ಷಿತರಾಗಿ ಶಿವನನ್ನು ಸಮಾಧಾನಪಡಿಸಲು ಈ ಗುರುಗಳಿಂದ ಮಾತ್ರ ಸಾಧ್ಯ ಎಂದು ಕೈಲಾಸಕ್ಕೆ ಕರೆದುಕೊಂಡು ಹೋದರು. ಇದನ್ನು ಅರಿಯದ ಮುಗ್ಧ ಭಕ್ತರು “ನಿನ್ನ ಕಾಲದಲ್ಲಿ ನಮ್ಮ ಗುರುಗಳು ಕೈಲಾಸವಾಸಿಗಳಾದರು” ಎಂದು “ಬಹುಧಾನ್ಯ” ಸಂವತ್ಸರವನ್ನು ನಿಂದಿಸತೊಡಗಿದರು. ಹೀಗೆ ಲೋಕಾಪವಾದವನ್ನು ಹೊತ್ತು ಜನರಿಂದ “ಛೀ, ಥೂ” ಎನಿಸಿಕೊಂಡು ನೀನು ಹೇಗೆ ಈ ಲೋಕದಲ್ಲಿ ಬದುಕಿರುತ್ತೀಯಾ? ಎಂದು “ಬಹುಧಾನ್ಯ” ಸಂವತ್ಸರವನ್ನು ಒಬ್ಬ ವ್ಯಕ್ತಿಯನ್ನಾಗಿ ಪರಿಭಾವಿಸಿಕೊಂಡು ರಚಿಸಿರುವ ಈ ಸಂಸ್ಕೃತ ಶ್ಲೋಕವು ಅತ್ಯದ್ಭುತವಾದ ಕಾವ್ಯಪರಿಕಲ್ಪನೆಯನ್ನು ಹೊಂದಿದೆ. ಬೇಡನ ಬಾಣದಿಂದ ಸತ್ತುಬಿದ್ದ ಕ್ರೌಂಚ ಪಕ್ಷಿಯನ್ನು ನೋಡಿ ಆದಿಕವಿ ವಾಲ್ಮೀಕಿಯ ಹೃದಯಾಂತರಾಳದಿಂದ ಮೂಡಿಬಂದ ಶೋಕವು ಶ್ಲೋಕ ರೂಪವನ್ನು ತಾಳಿದಂತೆ (ಶೋಕಃ ಶ್ಲೋಕತ್ವಮಾಗತಃ!) ತಮ್ಮ ಗುರುವರ್ಯರ ಅನಿರೀಕ್ಷಿತ ಸಾವಿನಿಂದ ಅವರ ಹೃದಯದಲ್ಲಿ ಆವಿರ್ಭವಿಸಿದ ಆರ್ದ್ರ ಭಾವನೆಗಳು ಛಂದೋಬದ್ದವಾಗಿ ಹೀಗೆ ಮತ್ತೊಂದು ಸಂಸ್ಕೃತ ಶ್ಲೋಕದಲ್ಲಿ ರೂಪುಗೊಂಡಿವೆ:
ಮುಗ್ದಾಃ ವಯಂ ತವ ಗುಣಾಮೃತಪಾನಪೀತಾಃ
ದಗ್ದಾಃ ಸುದೀರ್ಘವಿರಹಾತ್ ತವ ದೇಶಿಕೇಂದ್ರ |
ಪೀಯೂಷಸಾರಸದೃಶಂ ತವ ನಾಮ ಪೀತ್ವಾ
ಜೀವಾಮ ಏವ ಭುವನೇ ಕರುಣಾಂಬುವಾಹ ||
(ಮುಗ್ಧರಾದೆವು ನಿನ್ನಗುಣಾಮೃತವ ಪಾನಮಾಡಿ
ಬೆಂದುಹೋದೆವು ನಿನ್ನೀ ಸುದೀರ್ಘವಿರಹಾಗ್ನಿಯಲಿ ನೊಂದು
ಸಂಜೀವಿನೀಸಾರ ಸದೃಶ ನಿನ್ನಯ ನಾಮಾಮೃತವ ಜಪಿಸಿ
ಜೀವಿಸುವೆವೀ ಲೋಕದಲಿ ಹೇ ಕರುಣಾಳು ಗುರುವೇ!)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ ದಿನಪತ್ರಿಕೆ
ದಿನಾಂಕ : 12-8-2021
ಬಿಸಿಲು ಬೆಳದಿಂಗಳು