ದೂರ ದೃಷ್ಟಿಯ ದಾರ್ಶನಿಕ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರು
ಸಿರಿಗೆರೆ : ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಮಠಗಳ ಪರಂಪರೆಯಲ್ಲಿ ಭಿನ್ನವಾಗಿ ನಿಲ್ಲುವಂತಹದ್ದು. ಶ್ರೀಮಠದ ವ್ಯವಸ್ಥೆಯಲ್ಲಿ ಜಂಗಮಶೀಲತೆಯನ್ನು ತಂದು; ಸಕಲಜೀವಿಗಳಿಗೂ ಲೇಸನ್ನೇ ಬಯಸುವ ನಿಟ್ಟಿನಲ್ಲಿ ಅದು ತನ್ನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಇಂತಹದ್ದಕ್ಕೆಲ್ಲ ಪ್ರಗತಿಶೀಲ ಮನಸ್ಸು ಮತ್ತು ಕ್ರಿಯಾಶೀಲ ವ್ಯಕ್ತಿತ್ವವೊಂದು ವ್ಯವಸ್ಥೆಯ ಚುಕ್ಕಾಣಿ ಹಿಡಿದಾಗ ಮಾತ್ರ ಸಾಧ್ಯವಾಗುವಂತಹದ್ದು.
ವೈಚಾರಿಕತೆಯ ತಳಹದಿಯ ಮೇಲೆ ಸಮಾಜವೆಂಬ ಭವನವನ್ನು ಕಟ್ಟಲು ಯೋಚಿಸಿದವರು 19ನೆಯ ಶ್ರೀ ತರಳಬಾಳು ಜಗದ್ಗುರುಗಳಾಗಿದ್ದ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರು. ಅವರ ದೂರದೃಷ್ಟಿಯ ಸತ್ಫಲವೇ ಇಂದು ಸಿರಿಗೆರೆಯ ಶ್ರೀಮಠ ಜಗದಗಲ ಮುಗಿಲಗಲ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ತನ್ನ ವಿಶಿಷ್ಟ ಕಾರ್ಯ ಚಟುವಟಿಕೆಗಳಿಂದ ಸಾಗರದಾಚೆಗೂ ತನ್ನ ಬೆಳಕನ್ನು ಪಸರಿಸಿದೆ. ಒಂದು ಕಾಲಕ್ಕೆ “ದುಗ್ಗಾಣಿ” ಮಠವೆಂದೆನಿಸಿಕೊಂಡಿದ್ದು ಐತಿಹಾಸಿಕ ಸತ್ಯವಾದರೂ, ಇಂದು, ಧರ್ಮ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಪ್ರಸಾರ ಕಾರ್ಯದಲ್ಲಿ; ಸಾಮಾಜಿಕ ಪಿಡುಗುಗಳ ನಿವಾರಣೆ, ಗ್ರಾಮೀಣಭಿವೃದ್ಧಿ, ರೈತಪರ ಕಾಳಜಿ, ಪರಿಸರ ನೈರ್ಮಲೀಕರಣ ಮುಂತಾದ ಹತ್ತಾರು ಜನೋಪಯೋಗಿ ಕಾರ್ಯಗಳಿಂದ ಸೇವಾ ಹಿರಿಮೆಯ ಸಿರಿವಂತ ಗರಿಗಳನ್ನು ತನ್ನ ಕೀರ್ತಿಕಳಸದಲ್ಲಿ ಮುಡಿಸಿಕೊಂಡಿದೆ.
“ಧರ್ಮಗುರುವೊಬ್ಬ ಹೊಸದಕ್ಕೆ ಚಾಲನೆ ಕೊಡದೆ ಹೋದರೆ, ಸಮಾಜವನ್ನು ಪ್ರೀತಿಯಿಂದ ಮುಟ್ಟುತ್ತಾ, ಅದರ ವೈರುಧ್ಯಗಳ ಜೊತೆ ಮಾತಾಡದೆ ಹೋದರೆ ಆ ಧರ್ಮಗುರು ಗುರುವಲ್ಲ” ಎಂಬ ಮಾತನ್ನು ಅಕ್ಷರಶಃ ಪಾಲಿಸಿ, ಕಾರ್ಯರೂಪಕ್ಕಿಳಿಸಿದ ಕೀರ್ತಿ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರದ್ದು. 20ನೆಯ ಶತಮಾನದ ಆರಂಭದ ದಶಕಗಳಲ್ಲಿ ಮಠಗಳೆಂದರೆ ಮೌಢ್ಯದ ತೊಟ್ಟಿಲುಗಳೇ ಆಗಿದ್ದವು.
ವಿದ್ಯೆ ಎಂಬುದು ಸಾಮಾನ್ಯನ ಪಾಲಿಗೆ ಕನ್ನಡಿಯೊಳಗಿನ ಗಂಟೇ ಆಗಿತ್ತು. ಧರ್ಮದ ಹೆಸರಿನಲ್ಲಿ ಸುಲಿಗೆ ಎಂಬ ಯಾಗಕ್ಕೆ ಅಜ್ಞಾನ, ಮೌಢ್ಯ, ಕಂದಾಚಾರಗಳೆಂಬ ಅಂಧಕಾರದಲ್ಲಿ ಮುಳುಗಿದ್ದ ಜನತೆ ಯೂಪಸ್ತಂಭದ ಬಲಿಪಶುಗಳಾಗಿದ್ದರು. ಇಂತಹದ್ದರಿಂದ ಹೊರಬರಲು ಮನುಷ್ಯನಿಗೆ ಶಿಕ್ಷಣ ಎಂಬ ಬೆಳಕಿನಿಂದ ಮಾತ್ರ ಸಾಧ್ಯ ಎಂದು ಅರಿತ ಶ್ರೀಗಳು ತಮ್ಮ ಕಾರ್ಯವ್ಯಾಪ್ತಿಯ ಮಿತಿಯಲ್ಲಿಯೇ ಕ್ರಿಯಾಶೀಲರಾಗತೊಡಗಿದರು. ಧರ್ಮದ ಮೂಲ ಆಶಯಗಳನ್ನು ನಿಜಾರ್ಥದಲ್ಲಿ ಜನತೆಗೆ ಬಿತ್ತುವ ಕಾರ್ಯಕ್ಕೆ ನಾಂದಿ ಹಾಡಿದರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರ ಪೂರ್ವಾಶ್ರಮದ ಜನ್ಮಸ್ಥಳ. ಅಲ್ಲಿನ ಶ್ರೀ ಕರಿಬಸಯ್ಯ ಮತ್ತು ಮೂಗಮ್ಮ ಎಂಬ ಶರಣ ದಂಪತಿಗಳಿಗೆ 1890ರ ವೈಶಾಖ ಶುದ್ಧ ಪಂಚಮಿಯಂದು ಪೂಜ್ಯರು ಜನಿಸಿದರು. ಶಂಕರಯ್ಯ ಎಂಬುದು ಪೂಜ್ಯರ ಪೂರ್ವಾಶ್ರಮದ ಹೆಸರು. ಲೋಯರ್ ಸೆಕೆಂಡರಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಶಂಕರಯ್ಯನವರು ಹರಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಮಠದಯ್ಯ(ಶಿಕ್ಷಕ)ಗಳಾಗಿ ವಿದ್ಯಾದಾನದಲ್ಲಿ ತೊಡಗಿದ್ದರು.
ಇತ್ತ ಸಿರಿಗೆರೆ ಮಠದಲ್ಲಿ ಸೂಕ್ತ ಉತ್ತರಾಧಿಕಾರಿಗಳಿಲ್ಲದೆ ಚರಮೂರ್ತಿಗಳಾಗಿದ್ದ ಹುಲ್ಲೇಹಾಳ್ ಶ್ರೀ ಮರುಳಸಿದ್ಧ ಸ್ವಾಮಿಗಳವರು ಮತ್ತು ವಿರಕ್ತಮೂರ್ತಿಗಳಾಗಿದ್ದ ಇಡೇಹಳ್ಳಿಯ ಶ್ರೀ ಗುರಸಿದ್ಧಸ್ವಾಮಿಗಳವರು ಮಠದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ದುರದೃಷ್ಟವಶಾತ್ 1916 ರಲ್ಲಿ ಪೂಜ್ಯರೀರ್ವರು ಪ್ಲೇಗ್ ಮಾರಿಗೆ ಬಲಿಯಾದರು. ಈ ಘಟನೆಯಿಂದ ಮಠ ಸಂಪೂರ್ಣವಾಗಿ ಖಾಲಿಯಾಗಿತ್ತು. ಆ ತಕ್ಷಣ ಸಮಾಜದ ಮುಖಂಡರು ಸಭೆ ಸೇರಿ ಸೂಕ್ತ ಉತ್ತಾರಧಿಕಾರಿಗಳ ಬಗ್ಗೆ ಚರ್ಚೆ ಮಾಡಿದರು. ಆಗ ಸದಾಚಾರ ಸಂಪನ್ನರಾಗಿ, ತಮ್ಮ ನಡೆನುಡಿಗಳ ಮೂಲಕ ಜನಪ್ರೀತಿ ಗಳಿಸಿದ್ದ ಮೈದೂರಿನ ಶಿಕ್ಷಕ ಶ್ರೀ ಶಂಕರಯ್ಯನವರ ಹೆಸರನ್ನು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಉತ್ತರಾಧಿಕಾರಿ ಸ್ಥಾನಕ್ಕೆ ಸೂಚಿಸಿದರು. ಸಮಾಜ ಬಾಂಧವರ ಈ ಅಭಿಪ್ರಾಯಕ್ಕೆ ಶ್ರೀ ಶಂಕರಯ್ಯನವರ ತಲೆಬಾಗಿದರು.
1917ರಲ್ಲಿ ಶ್ರೀ ಶಂಕರಯ್ಯನವರಿಗೆ ಶ್ರೀ ತರಳಬಾಳು ಜಗದ್ಗುರು ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರು ಎಂಬ ಅಭಿಧಾನದಿಂದ ಸದ್ಧರ್ಮ ಸಿಂಹಾಸನಕ್ಕೆ ಪಟ್ಟಾಭಿಷಿಕ್ತರಾದರು.
ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರು ಸಿರಿಗೆರೆ ಮಠದ ಚುಕ್ಕಾಣಿ ಹಿಡಿದಾಗಿನಿಂದ ಶ್ರೀ ಮಠದಲ್ಲಿ ಹೊಸಶಕೆ ಆರಂಭವಾಯಿತೆಂದೇ ಹೇಳಬಹುದು. ಆಗಿನ ಕಾಲದಲ್ಲಿ ಲೋಯರ್ ಸೆಕೆಂಡರಿವರೆಗೆ ಓದಿದ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರು ಶ್ರೀಮಠದ ಇತಿಹಾಸದಲ್ಲಿಯೇ ಅತಿಹೆಚ್ಚು ಓದಿದ ಸ್ವಾಮಿಗಳಾಗಿದ್ದರು. ಅಂದಿನ ಕಾಲದಲ್ಲಿ ಸಿರಿಗೆರೆ ಮಠವು ಇನ್ನೂ ಸಾರ್ವತ್ರಿಕವಾಗಿ ಜನಮನದ ಗಣನೆಯಲ್ಲಿರಲಿಲ್ಲ. ದುರ್ದೈವದಿಂದ ಲಿಂಗಾಯತ ಸಮಾಜದಲ್ಲಿ ಹತ್ತಾರು ಒಳಪಂಗಡಗಳು ಸೃಷ್ಟಿಯಾಗಿ ಐಕ್ಯಮತವೆಂಬುದು ಕಾಣೆಯಾಗಿತ್ತು. ಜನಾಂಗ ಜನಾಂಗಗಳ ಮಧ್ಯೆ ಆಗಾಗ ಘರ್ಷಣೆಗಳು ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಸಿರಿಗೆರೆ ಮಠದ ಭಕ್ತರು ಕೃಷಿ ಕಾಯಕವನ್ನು ಮಾಡಿಕೊಂಡು, ಗ್ರಾಮೀಣ ವಾಸಿಗಳಾಗಿದ್ದರು. ಅಜ್ಞಾನ, ಬಡತನಗಳೇ ಇವರ ಆಸ್ತಿಗಳಾಗಿದ್ದವು. ಹಣವಂತ, ವಿದ್ಯಾವಂತ ವರ್ಗವು ಈ ಜನರನ್ನು ಪರೋಕ್ಷವಾಗಿ ಶೋಷಿಸುತ್ತಿದ್ದರು. ಇದನ್ನರಿತ ಶ್ರೀಗಳು ಸಮಾಜವನ್ನು ಸಂಘಟಿಸಿ, ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಮುಂದಾದರು. ಆ ವೇಳೆಗೆ ಮಠದ ಕೀರ್ತಿ, ಭಕ್ತರ ಬೆಳವಣಿಗೆಯನ್ನು ಸಹಿಸಲಾರದವರು ಗುರು-ಜಂಗಮ-ಭಕ್ತರ ಸ್ಥಾನಮಾನಗಳ ಬಗ್ಗೆ, ಮಠದ ಒಕ್ಕಣೆ ಬಗ್ಗೆ ಹಲವರು ನ್ಯಾಯಾಲಯದಲ್ಲಿ ಕಟ್ಟಳೆಗಳನ್ನು ಹೂಡಿದರು. ಇದನ್ನೆಲ್ಲ ಶ್ರೀಗಳು ಜಯಿಸಬೇಕಾಗಿತ್ತು.
ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಭಕ್ತರ ಗ್ರಾಮಗಳಿಗೆ ಪ್ರವಾಸ ಮಾಡಿ, ಸಮಾಜದ ಸ್ಥಿತಿಗತಿಗಳನ್ನು ಚನ್ನಾಗಿ ಅರಿತರು. ವಿದ್ಯೆಯೆಂಬ ಅಸ್ತ್ರದಿಂದಲೇ ಜನತೆಯನ್ನು, ಸಮಾಜವನ್ನು ಸರಿದಾರಿಗೆ ತರಬಹುದೆಂದು ಯೋಚಿಸಿ, ಆ ಕಡೆ ಹೆಚ್ಚು ಕಾರ್ಯನಿರತರಾದರು. ಅದರ ಫಲವಾಗಿ ಸಮಾಜದ ಸಂಘಟನೆಗಾಗಿ 1919ರಲ್ಲಿ ಹರಿಹರದಲ್ಲಿ ಶರಣ ಎಂ ಬಸವಯ್ಯನವರ ಅಧ್ಯಕ್ಷತೆಯಲ್ಲಿ ಸಮಾಜದ ಸಭೆ ಕರೆದರು. ಸಮಾಜದ ಸರ್ವೋತೋಮುಖ ಬೆಳವಣಿಗೆಯ ದೃಷ್ಟಿಯಿಂದ ಹರಿಹರದಲ್ಲಿ ನೂತನ ಮಠವನ್ನು ಸ್ಥಾಪಿಸಬೇಕೆಂಬ ತೀರ್ಮಾನವನ್ನು ಸಭೆಯಲ್ಲಿ ಮಂಡಿತವಾಯಿತು. ಆದರೆ ಎಂ ಬಸವಯ್ಯನವರು ದೇಶದಲ್ಲಿ ಹಿಂದುಳಿದವರ ರಾಜಕೀಯ ಬೆಳವಣಿಗೆಗೆ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದರಿಂದ ಮಠದ ಕಾರ್ಯಗಳಿಗೆ ಹಿನ್ನೆಡೆಯಾಯಿತು. ಇದರಿಂದ ಶ್ರೀಗಳು ಚಿಂತಾಕ್ರಾಂತರಾದರು. ಆ ಸಮಯದಲ್ಲಿ ಎಂ ಬಸವಯ್ಯನವರ ಸಹೋದರರಾದ ಬಿ. ಲಿಂಗಯ್ಯನವರು ಮುಂದೆ ಬಂದು ಶ್ರೀಗಳ ಕೆಲಸಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತರು. ಅಲ್ಲದೆ, ಸಾಧು ಸದ್ಧರ್ಮ ಸಂಘದ ಮೊದಲ ಅಧ್ಯಕ್ಷರಾಗಿ ಜನಜಾಗೃತಿ ಮಾಡಲು ಮುಂದಾದರು.
ಸಾಧು ಸದ್ಧರ್ಮ ಸಂಘದ ಆಶ್ರಯದಲ್ಲಿ ದಾವಣಗೆರೆಯಲ್ಲಿ ಸಮಾಜದ ಪ್ರಪ್ರಥಮ ವಿದ್ಯಾರ್ಥಿ ನಿಲಯವನ್ನು ತೆರಯಲು ಮುಂದಾದರು. ಇದಕ್ಕೆ ಸಮಾಜದ ಮುಖಂಡರ ನೆರವು ಅಪಾರವಾಗಿತ್ತು. ಈ ವಿದ್ಯಾರ್ಥಿ ನಿಲಯದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪಟ್ಟಣಕ್ಕೆ ಬಂದು ಉನ್ನತ ವಿದ್ಯಾಭ್ಯಾಸ ಮಾಡಲು ಅನುಕೂಲವಾಯಿತು. ಆಗ ವಿದ್ಯಾರ್ಥಿಗಳ ಖರ್ಚುವೆಚ್ಚಗಳನ್ನೆಲ್ಲ ಶ್ರೀಮಠವೇ ನೋಡಿಕೊಳ್ಳುತಿತ್ತು.
ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಸಿರಿಗೆರೆಗೆ ಮಠಕ್ಕೆ ಪಟ್ಟವಾಗಿ ಬಂದಾಗ ಸಿರಿಗೆರೆ ಗ್ರಾಮವು ಒಂದು ಕುಗ್ರಾಮವಾಗಿತ್ತು. ಸುತ್ತಲೂ 8-10 ಮೈಲಿ ಕಾಡು. ನೀರಿನ ನಡುವಿನ ನಡುಗಡ್ಡೆಯಂತಹ ಊರು. ಸಿರಿಗೆರೆಗೆ ಬರಲು ಉತ್ತಮ ರಸ್ತೆಯೂ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿರಲಿಲ್ಲ. ಶಿಕ್ಷಣ ಪ್ರೇಮಿಗಳಾಗಿದ್ದ ಶ್ರೀಗಳು ಸಿರಿಗೆರೆಯಲ್ಲಿ ಒಂದು ಶಾಲೆಯನ್ನು ತೆರೆಯಲು ಮೊದಲು ಮಾಡಿದರು. ಶಿಕ್ಷಕರಿಗೆ ಸಂಬಳವನ್ನು ಸಹ ಮಠದಿಂದಲೇ ನೀಡುತ್ತಿದ್ದರು. ಇದೇ ಮುಂದೆ ಶ್ರೀಮಠದ ವಿದ್ಯಾದಾನ ಕಾರ್ಯದ ಮೊದಲ ಅಡಿಗಲ್ಲಾಯಿತು. ಆ ನಂತರ ಆ ಶಾಲೆಯನ್ನು ಸರಕಾರ ವಹಿಸಿಕೊಂಡು, ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿತು. ಆಗ ಶಾಲೆ ಪ್ರಾರಂಭೋತ್ಸವಕ್ಕೆ ಮೈಸೂರಿನ ಅಂದಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಸಾಹೇಬರು ಆಗಮಿಸಿದ್ದರು.
ಸಿರಿಗೆರೆಯಲ್ಲಿ ಸ್ಥಾಪನೆಗೊಂಡ ಈ ಶಾಲೆಗೆ ದೂರದೂರದ ಊರುಗಳಿಂದ ವಿದ್ಯಾರ್ಥಿಗಳು ವಿದ್ಯಾಪೇಕ್ಷಿಗಳಾಗಿ ಆಗಮಿಸುವುದನ್ನು ಕಂಡ ಶ್ರೀಗಳಿಗೆ ಅಪಾರ ಸಂತೋಷವಾಗುತಿತ್ತು. ಜಾತಿಭೇದವಿಲ್ಲದೆ, ಬಡವ ಬಲ್ಲಿದನೆಂಬ ತರತಮವಿಲ್ಲದೆ ಮಠ ಎಲ್ಲರಿಗೂ ಅನ್ನ, ಆಶ್ರಯ ನೀಡಿತ್ತು. ಮಠದಲ್ಲಿ ಜಾತ್ಯತೀತ ವ್ಯವಸ್ಥೆಗೆ ಅಂದೇ ಶ್ರೀಗಳು ಭದ್ರ ತಳಹದಿ ಹಾಕಿದ್ದರು. ಅದರ ಪರಿಣಾಮ ಜಗಳೂರಿನ ಇಮಾಂ ಸಾಹೇಬರು ಮತ್ತು ಬಿಳಿಚೋಡಿನ ಭೀಮಪ್ಪ ನಾಯಕರು ಮಠದ ನೆರವಿನಿಂದ ಸಮಾಜ ಮತ್ತು ರಾಜಕೀಯ ರಂಗದಲ್ಲಿ ಮುಂದೆ ಬರಲು ಸಾಧ್ಯವಾಯಿತು.
ಉನ್ನತ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳುತ್ತಿದ್ದ ಸಮಾಜದ ವಿದ್ಯಾರ್ಥಿಗಳಿಗೆ ಅಲ್ಲೊಂದು ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವ ಅವಶ್ಯಕತೆ ಕಂಡುಬಂದಿತು. ತಕ್ಷಣವೇ ಶ್ರೀಗಳು ಕಾರ್ಯಪ್ರವೃತ್ತರಾಗಿ ಅಲ್ಲಿನ ಗುರಿಕಾರ್ ಬಸವಲಿಂಗಪ್ಪ ಮತ್ತು ಭೈರಣ್ಣನವರ ಸಹಾಯದಿಂದ ಒಂದು ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿದರು. ಆ ವಿದ್ಯಾರ್ಥಿ ನಿಲಯವು ಇಂದಿಗೂ ಬನ್ನಿಮಂಟಪ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸುಮಾರು 21 ವರ್ಷಗಳ ಕಾಲ ಶ್ರೀ ಮದುಜ್ಜಯಿನಿಸದ್ಧರ್ಮಸಿಂಹಾಸನದಲ್ಲಿ ರಾಜತೇಜದಂತೆ ಬೆಳಗಿದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಸಮಾಜವನ್ನು ಸರ್ವತೋಮುಖವಾಗಿ ಬೆಳೆಸಲು ಪಟ್ಟಶ್ರಮ ಅಪಾರವಾದುದು.ಸಮಾಜದ ಭವಿಷ್ಯದ ಬಗ್ಗೆ ಮತ್ತು ಅದರ ಒಳಿತಿಗಾಗಿ ಸದಾ ಚಿಂತಿಸುತ್ತಿದ್ದ ಶ್ರೀಗಳ ಕಾರ್ಯವೈಖರಿಯನ್ನು ಕಂಡ ಅವರ ಸುತ್ತಲೂ ವಿಷವರ್ತುಲ ಸೃಷ್ಟಿಯಾಯಿತು. ಸದಾ ಶಾಂತಮೂರ್ತಿಗಳು, ಕಪಟವರಿಯದ ಮುಗ್ದರಾಗಿದ್ದ ಶ್ರೀಗಳು ಸಮಾಜಕ್ಕಾಗಿ ದೀಪದಲ್ಲಿರುವ ಬತ್ತಿಯಂತೆ ತಾವು ಸುಟ್ಟುಕೊಂಡು ಇತರರಿಗೆ ಬೆಳಕು ನೀಡುವಂತೆ ತಮ್ಮ ಜೀವನವನ್ನು ಸವೆಸಿದರು. ಸಿರಿಗೆರೆಯ ಮಠಕ್ಕೆ ಭದ್ರವಾದ ನೆಲೆಯನ್ನು ಒದಗಿಸಿಕೊಟ್ಟ ಶ್ರೀಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಂತಹ ಸಮರ್ಥ, ದಕ್ಷ ಉತ್ತರಾಧಿಕಾರಿಗಳನ್ನು ತಯಾರು ಮಾಡಿ, 1938ನೆಯ ಆಗಷ್ಟ್ 11 ರಂದು ಇಹಲೋಕವನ್ನು ತ್ಯಜಿಸಿದರು.
ಪೂಜ್ಯರ ದೂರದೃಷ್ಟಿಯ ಫಲವೇ 20ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಇವರು ಒಬ್ಬ ಸಾಮಾನ್ಯ ಮಠಾಧಿಪತಿಯಾಗದೆ, ಒಂದು ಶಕ್ತಿಯಂತೆ ಕೆಲಸ ಮಾಡಿ; ಶ್ರೀ ಗುರುಶಾಂತ ರಾಜದೇಶಿಕೇಂದ್ರ ಮಹಾಸ್ವಾಮಿಗಳವರು ಬೆಳಗಿಸಿದ ನಂದಾದೀಪಕ್ಕೆ ಎಣ್ಣೆ ಬತ್ತಿಯಾದರು. ಇಂದು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಹ ಆ ನಂದಾದೀಪವು ಇನ್ನಷ್ಟು ಜ್ವಾಜಲ್ಯಮಾನವಾಗಿ ಬೆಳಗುವಂತೆ ಶ್ರಮಿಸುತ್ತಿದ್ದಾರೆ.
-ನಾಗರಾಜ ಸಿರಿಗೆರೆ