ಪತ್ರಿಕೋದ್ಯಮಿ, ಹೋರಾಟಗಾರ, ಸಂಘಟಕರಾದ ಆರ್.ಟಿ.ಮಜ್ಜಗಿ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರ ಸಂತಾಪ
ದಿಟ್ಟ ಪತ್ರಿಕೋದ್ಯಮಿ, ಹೋರಾಟಗಾರ, ಅನನ್ಯ ಸಂಘಟಕ ಆರ್.ಟಿ.ಮಜ್ಜಗಿ ಲಿಂಗೈಕ್ಯರಾದರೆಂಬ ಸುದ್ದಿಯನ್ನು ಕೇಳಿ ನಮಗೆ ತುಂಬಾ ದುಃಖ ಉಂಟಾಯಿತು.
ನಮ್ಮ ಪರಮಾರಾಧ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮೆಚ್ಚಿನ ಶಿಷ್ಯರಾಗಿದ್ದ ಆರ್. ಟಿ. ಮಜ್ಜಗಿಯವರು ಶಿವ ಸಾಯುಜ್ಯ ಹೊಂದಿದ್ದನ್ನು ತಿಳಿದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಶ್ವಬಂಧು ಮರಳುಸಿದ್ದರಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದ್ದಾರೆ.
ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪರೂಪದ ಪ್ರತಿಭೆಯಾಗಿದ್ದ ಆರ್.ಟಿ.ಮಜ್ಜಗಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಅನನ್ಯ ಭಕ್ತರು. “ವಿಶಾಲ ಕರ್ನಾಟಕ” ಪತ್ರಿಕೆಯ ಮೂಲಕ ಪತ್ರಿಕೋದ್ಯಮದಲ್ಲಿ ಕಾಲಿರಿಸಿ, ಮುಂದೆ ಸ್ವತಃ “ಜಾಗೃತ ವಾಣಿ” ಎಂಬ ಪಾಕ್ಷಿಕವನ್ನು ಪ್ರಾರಂಭಿಸಿ ಬಹುದಿನಗಳ ಕಾಲ ನಡೆಸಿಕೊಂಡು ಬಂದಿದ್ದರು. ಹಿರಿಯ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಪ್ತ ಒಡನಾಡಿಗಳಾಗಿದ್ದ ಮಜ್ಜಗಿಯವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಾರ್ಷಿಕ - ಬೃಹತ್ ಕಾರ್ಯಕ್ರಮ, ಭಾವೈಕ್ಯ ಪರಿಷತ್ತು ಎಂಬ ಅಭಿಧಾನದ ತರಳಬಾಳು ಹುಣ್ಣಿಮೆ ಮಹೋತ್ಸವವು ಧಾರವಾಡ, ಹುಬ್ಬಳ್ಳಿ, ವಿಜಯಪುರ, ಸೊಲ್ಲಾಪುರ( ಮಹಾರಾಷ್ಟ್ರ) ನಗರಗಳಲ್ಲಿ ಜರುಗಲು ಪ್ರಮುಖ ಕಾರಣಕರ್ತರು.
ಅವರ ಸಂಘಟನಾ ಚತುರತೆಗೆ ಈ ಹುಣ್ಣಿಮೆ ಮಹೋತ್ಸವಗಳೇ ಸಾಕ್ಷಿ. ಕರ್ನಾಟಕದ ಹೊರಗೆ ಸೊಲ್ಲಾಫುರದಲ್ಲಿ ಈ ಹುಣ್ಣಿಮೆ ನಡೆಸಲು ಅಪಾರ ಶ್ರಮವಹಿಸಿದ್ದರು. ಆಗ (೧೯೭) ಮಹಾರಾಷ್ಟ್ರ ಸರಕಾರದ ವಾರ್ತಾ ಇಲಾಖೆ ಈ ಹುಣ್ಣಿಮೆ ಮಹೋತ್ಸವದ ಸಾಕ್ಷ್ಯಚಿತ್ರ ತಯಾರಿಸಿ, ರಾಜ್ಯದ ಸಿನಿಮಾ ಟಾಕಿಸಿನಲ್ಲಿ ಪ್ರದರ್ಶನ ಮಾಡಿಸಿದ್ದು ಈ ಉತ್ಸವದ ಹೆಗ್ಗಳಿಕೆಯಾಗಿದೆ.
ಅಪಾರ ನೆನಪಿನ ಶಕ್ತಿಯುಳ್ಳ ಮಜ್ಜಗಿಯವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಪೂಜ್ಯರ ಬಗ್ಗೆ ಅರ್ಪಿಸಿದ್ದ ನುಡಿ ನಮನದ ಮಾತುಗಳನ್ನು ಒಂದು ವಾಕ್ಯವೂ ವ್ಯತ್ಯಾಸವಾಗದಂತೆ ಬರೆದುಕೊಟ್ಟಿದ್ದರು. ನೇರ ಮತ್ತು ಖಡಕ್ ಮಾತಿಗೆ ಹೆಸರಾಗಿದ್ದ ಮಜ್ಜಗಿಯವರಿಗೆ ಅಸಹನೆ, ಸಿಡುಕತನಗಳೂ ಮೂಗಿನ ತುದಿಯಲ್ಲಿ ಇರುತಿದ್ದವು.
ಆರ್.ಟಿ ಮಜ್ಜಗಿ (83) ಅವರದು ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿ ಮಜ್ಜಗಿಯವರ ಜನ್ಮಸ್ಥಳ. (ಜನನ ೪ ಮೇ ೧೯೪೦) ಕನ್ನಡ ಸಾರಸ್ವತ ಲೋಕಕ್ಕೆ ಈ ಊರಿನ ಕೊಡುಗೆ ಅಪಾರ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತೋರ್ವ ಖ್ಯಾತ ಪತ್ರಿಕೋದ್ಯಮಿ, ಹೋರಟಗಾರ ಡಾ. ಪಾಟೀಲ ಪುಟ್ಟಪ್ಪ ಮತ್ತು ಅವರ ಸಹೋದರ ಹೆಸರಾಂತ ವೈದ್ಯಕೀಯ ಬರಹಗಾರ ಡಾ. ಪಿ. ಎಸ್. ಶಂಕರ್ ಇದೇ ಗ್ರಾಮದವರು.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧುಗಳಿದ್ದಾರೆ. “ವಿಶಾಲ ಕರ್ನಾಟಕ” ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದ ಇವರು ಬಳಿಕ “ಜಾಗೃತವಾಣಿ” ಪತ್ರಿಕೆ ಪ್ರಾರಂಭಿಸಿ ಸಂಪಾದಕರಾಗಿ 25 ವರ್ಷಗಳಿಂದ ಮುನ್ನಡೆಸಿಕೊಂಡು ಬಂದಿದ್ದರು. ಮೃತರ ಅಂತ್ಯಕ್ರಿಯೆ ರವಿವಾರ ಮಧ್ಯಾಹ್ನ 2 ಗಂಟೆಗೆ ಮಂಟೂರ ರಸ್ತೆಯ ಕಲಬುರ್ಗಿ ಮಠದ ಹತ್ತಿರದ ರುದ್ರಭೂಮಿಯಲ್ಲಿ ಜರುಗಿತು ಎಂದು ಕುಟುಂಬದವರು ತಿಳಿಸಿದ್ದಾರೆ.