ಜರ್ಮನಿಯಿಂದ ಒಂದು ಪತ್ರ

  •  
  •  
  •  
  •  
  •    Views  

ಮೇರಿಕಾ ಜರ್ಮನಿ ಮೊದಲಾದ ಪಾಶ್ಚಾತ್ಯ ದೇಶಗಳಿಗೆ ನಾವು ಬರುವುದು ಈ ದೇಶಗಳನ್ನು ನೋಡಲು ಅಲ್ಲ. ಇಲ್ಲಿರುವ ಭಾರತವನ್ನು ನೋಡಲು. ಈ ದೇಶಗಳಿಗೆ ಬಂದಷ್ಟೂ ಭಾರತದ ಹಿರಿಮೆ-ಗರಿಮೆಗಳ ಅರಿವು ಹೆಚ್ಚುತ್ತಾ ಹೋಗುತ್ತದೆ. ಇಲ್ಲಿರುವ ನಮ್ಮವರ ಸಾಧನೆಯನ್ನು ನೋಡಿ ಬಹಳ ಹೆಮ್ಮೆ ಎನಿಸುತ್ತದೆ. ಯಾವ ಮಂತ್ರಿಮಹೋದಯರ ಶಿಫಾರಸ್ಸು ಇಲ್ಲದೆ ಕೇವಲ ತಮ್ಮ ಬೌದ್ಧಿಕ ಪ್ರತಿಭೆಯಿಂದಲೇ ಈ ದೇಶಗಳಿಗೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದು ನೆಲಸಿದ್ದಾರೆ. ಅಮೇರಿಕಾದ ಒಟ್ಟು 34 ಕೋಟಿ ಜನಸಂಖ್ಯೆಯಲ್ಲಿ ಸುಮಾರು 50 ಲಕ್ಷ ಜನ ಭಾರತೀಯರು ಇದ್ದಾರೆ. “ಕುಛ್ ಪಾನಾ ಹೋ ತೋ ಕುಛ್ ಖೋನಾ ಪಡತಾ ಹೈಂ” ಎಂಬ ಹಿಂದೀ ಗಾದೆ ಮಾತೊಂದು ಇದೆ. ಅಂದರೆ ಜೀವನದಲ್ಲಿ ಒಂದನ್ನು ಗಳಿಸಬೇಕೆಂದರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಇದರ ಅರ್ಥ. ಕಾಲಮಾನ ವ್ಯತ್ಯಾಸದ (time difference) ದೃಷ್ಟಿಯಿಂದ ಹೇಳುವುದಾದರೆ ಭಾರತದಿಂದ ಅಮೇರಿಕೆಗೆ ಪ್ರಯಾಣ ಮಾಡುವಾಗ you gain time (ಕೆಲವಾರು ಗಂಟೆಗಳನ್ನು ಗಳಿಸುತ್ತೀರಿ); ಅಮೇರಿಕೆಯಿಂದ ಭಾರತಕ್ಕೆ ಹಿಂದಿರುಗುವಾಗ you lose time (ಕೆಲವಾರು ಗಂಟೆಗಳನ್ನು ಕಳೆದುಕೊಳ್ಳುತ್ತೀರಿ). ಆದರೆ ಮೇಲಿನ ಹಿಂದೀ ಗಾದೆಯ ಅರ್ಥ ಇದಲ್ಲ. ಇಲ್ಲಿರುವ ಭಾರತೀಯರ ಕೌಟುಂಬಿಕ ಜೀವನವನ್ನು ಅವಲೋಕಿಸಿದಾಗ ಕಂಡು ಬರುವ ಇದರ ಒಳಾರ್ಥ: ಅಮೇರಿಕೆಗೆ ವಲಸೆ ಬಂದ ಯುವ ಸಾಫ್ಟ್ವೇರ್ ಇಂಜಿನಿಯರುಗಳು ಮತ್ತು ಡಾಕ್ಟರುಗಳು ಉನ್ನತ ಹುದ್ದೆಗಳನ್ನು ಗಳಿಸಿದ್ದಾರೆ, ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾರೆ. ಆದರೆ ತಂದೆ-ತಾಯಂದಿರನ್ನು, ಕೌಟುಂಬಿಕ ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. ಅನೇಕ ವರ್ಷಗಳ ಕಾಲ ಇಲ್ಲಿ ದುಡಿದು ಸಂಪಾದನೆ ಮಾಡಿ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿದರೆ ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳನ್ನೂ ಕಳೆದುಕೊಳ್ಳುತ್ತಾರೆ. ಅತ್ತ ಹಿಂದಿರುಗಲೂ ಆಗದ ಇತ್ತ ಇಲ್ಲಿಯೇ ನೆಲಸಲೂ ಆಗದ ತ್ರಿಶಂಕು ಸ್ಥಿತಿ ಇವರದು. ಇವರನ್ನು ನೋಡಿದಾಗಲೆಲ್ಲಾ ನಮಗೆ ನೆನಪಾಗುವುದು ಬಸವಣ್ಣನವರ ಈ ಕೆಳಗಿನ ವಚನ:

ಕಾಲಲ್ಲಿ ಕಟ್ಟಿದ ಗುಂಡು,
ಕೊರಳಲ್ಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು,
ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಂತಕನೆ ಕಾಯೋ, ಕೂಡಲ ಸಂಗಮದೇವಾ!

ಬಸವಣ್ಣನವರು ಸಾಂಸಾರಿಕ ಜೀವನವನ್ನು ಒಂದು ಸಮುದ್ರಕ್ಕೆ ಹೋಲಿಸಿದ್ದಾರೆ. ಈ ಸಂಸಾರ ಸಾಗರವನ್ನು ದಾಟುವುದು ಅಷ್ಟು ಸುಲಭದ ಮಾತಲ್ಲ. ಕಾಲ ತುದಿಗೆ ಕಬ್ಬಿಣದ ಗುಂಡನ್ನು ಕಟ್ಟಿಕೊಂಡು, ಕೊರಳ ಸುತ್ತ ಬೆಂಡನ್ನು ಕಟ್ಟಿಕೊಂಡು ಸಮುದ್ರಕ್ಕೆ ಧುಮುಕಿದಂತೆ! ಕಾಲಲ್ಲಿ ಕಟ್ಟಿರುವ ಗುಂಡು ತೇಲಲು ಬಿಡುವುದಿಲ್ಲ, ಕೊರಳಲ್ಲಿ ಕಟ್ಟಿರುವ ಬೆಂಡು ಮುಳುಗಲು ಬಿಡುವುದಿಲ್ಲ. ಇತ್ತ ತೇಲಲೂ ಆಗದ ಅತ್ತ ಮುಳುಗಲೂ ಆಗದ ವಿಪರೀತ ಪರಿಸ್ಥಿತಿ. ವೃತ್ತಿಯಲ್ಲಿ ಯಶಸ್ವಿ ಸಾಫ್ಟ್ವೇರ್ ಇಂಜಿನಿಯರಾದ ಮತ್ತು ಹೆಸರಾಂತ ವೈದ್ಯರಾದ ಇವರು ಸಾವಿರಾರು ಕಿ.ಮೀ ದೂರದಿಂದ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳನ್ನು ದಾಟಿ ಇಲ್ಲಿಗೆ ಬಂದಿದ್ದರೂ ಸಾಂಸಾರಿಕ ಜೀವನದ ಮಹಾಸಾಗರವನ್ನು ದಾಟಲು ಇವರಿಂದ ಆಗುತ್ತಿಲ್ಲ. ಮದುವೆ ಮಾಡಿಕೊಂಡು ಮಾಯಾಲೋಕದಲ್ಲಿ ವಿಹರಿಸುತ್ತಿದ್ದ ಇವರಿಗೆ ಆರಂಭದ ವರ್ಷಗಳಲ್ಲಿ ಇದ್ದ ವಯೋಸಹಜವಾದ ಆಕರ್ಷಣೆ, ಸ್ವರ್ಗಸುಖ, ಜೀವನೋತ್ಸಾಹ ಕ್ರಮೇಣ ಕಮರಿ ಖಿನ್ನತೆ ಆವರಿಸುತ್ತದೆ. ನಮ್ಮವರಿಲ್ಲ, ಸಾಕಿನ್ನು ಸ್ವದೇಶಕ್ಕೆ ಹಿಂದಿರುಗಿ ಹೋಗೋಣ ಎಂಬ ಹತಾಶೆ ಮೂಡುತ್ತದೆ. ಹೆತ್ತ ತಂದೆ-ತಾಯಿಗಳು ಮತ್ತು ಒಡಹುಟ್ಟಿದವರೊಂದಿಗೆ ಒಂದಾಗಬೇಕೆಂಬ ಹಂಬಲ. ಇತ್ತ ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳನ್ನು ಬಿಟ್ಟು ತಾಯ್ನಾಡಿಗೆ ಹೋಗಲಾಗದ, ಅತ್ತ ತಮ್ಮ ಸ್ವಂತ ತಂದೆ-ತಾಯಿಗಳನ್ನು ಬಿಟ್ಟು ಇಲ್ಲಿಯೇ ಇರಲಾಗದ “ಪರದೇಶಿಗಳು” ಇವರು! 

ವಾರದ ಹಿಂದೆ ಅಮೇರಿಕೆಯ ವಾಷಿಂಗ್ಟನ್ ನಗರದಿಂದ ಅಟ್ಲಾಂಟಿಕ್ ಸಾಗರ ದಾಟಿ ಜರ್ಮನಿಯ ಫ್ರಾಂಕ್ ಪುರ್ಟ್ ನಗರಕ್ಕೆ ನಮ್ಮ ವಿಮಾನ ಬಂದಿಳಿಯಿತು. ನಂತರ ಆಸ್ಟ್ರಿಯಾ ದೇಶದ ಇನ್ಸ್ ಬ್ರುಕ್ ನಗರಕ್ಕೆ ಹೋಗಿ ಅಲ್ಲಿಂದ ಸ್ವಿಟ್ಸರ್  ಲೆಂಡ್ ದೇಶದ ಜೂರಿಚ್ ನಗರಕ್ಕೆ ರೈಲಿನಲ್ಲಿ ನಮ್ಮ ಪ್ರಯಾಣ. ಐರೋಪ್ಯ ದೇಶಗಳಲ್ಲಿ ವಿಮಾನ ಯಾನಕ್ಕಿಂತ ರೈಲು ಪ್ರಯಾಣವೇ ಸೊಗಸು. ದಾರಿಯುದ್ದಕ್ಕೂ ಆಲ್ಪ್ಸ್ ಪರ್ವತ ಶ್ರೇಣಿ. ಸುಂದರವಾದ ನಯನ ಮನೋಹರವಾದ ಸರೋವರಗಳು, ಜಲಪಾತಗಳು, ಕಣಿವೆ ಪ್ರದೇಶಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಲು ಸಾಲಾಗಿ ಆಕಾಶದೆತ್ತರಕ್ಕೆ ನಿಂತ ಓಕ್, ಪೈನ್ ಮತ್ತಿತರ ಗಿಡಮರಗಳು. ಗುಡ್ಡ ಬೆಟ್ಟಗಳ ತಪ್ಪಲಿನಲ್ಲಿ ಹಚ್ಚ ಹಸಿರಿನ ಹುಲ್ಲುಗಾವಲು.  ಅಲ್ಲಲ್ಲಿ ಸುಂದರವಾದ ಪರಿಸರದಿಂದ ಆವೃತವಾದ ಹಳ್ಳಿಯ ಮನೆಗಳು. ಬೆಟ್ಟದ ಇಳಿಜಾರಿನಲ್ಲಿ ಬಳುಕುತ್ತಾ ಹೋಗುವ ಕಿರಿದಾದ ಕಾಂಕ್ರೀಟ್ ರಸ್ತೆಗಳು. ಎಲ್ಲಿಯೂ ಭೂಮಿಯ ಮಣ್ಣು ಹುಡುಕಿದರೂ ಕಾಣಿಸುವುದಿಲ್ಲ. ಇಲ್ಲಿಯ ಯುವ ಮಹಿಳೆಯರು ಎಗ್ಗಿಲ್ಲದೆ ಮೈಮೇಲೆ ಹರಿದ ಅರೆಬರೆ ಬಟ್ಟೆ ಧರಿಸಿ ಬೀದಿ ಭಿಕಾರಿಗಳಂತೆ ಕಾಣಿಸಿದರೆ, ಭೂಮಾತೆಯು ಮಾತ್ರ ಸುಂದರವಾದ ಗುಡ್ಡಬೆಟ್ಟಗಳನ್ನೇ ಆಭರಣಗಳನ್ನಾಗಿ ಮಾಡಿಕೊಂಡು ಮೈತುಂಬಾ ಹಸಿರು ಸೀರೆಯನ್ನುಟ್ಟು ಭಾರತೀಯ ಸದ್ ಗೃಹಿಣಿಯರಂತೆ ಕಾಣಿಸುತ್ತಾಳೆ. ದಾರಿಬೀದಿಗಳಲ್ಲಿ ಯುವಕರಿಗಿಂತ ಇಲ್ಲಿಯ ಯುವತಿಯರೇ ಹೆಚ್ಚು ಸಿಗರೇಟ್ ಸೇದುತ್ತಾರೆ. ಶರೀರದ ತೂಕ ಇಳಿಸಲು ಸಿಗರೇಟ್ ಸೇವನೆ ಸಹಾಯಕವಾಗುತ್ತದೆಯಂತೆ! ಇದು ಹೇಗೆ ಸಾಧ್ಯ ಎಂದು ಕೇಳಿದಾಗ ಜರ್ಮನಿಯಲ್ಲಿರುವ ಅಮೇರಿಕಾ ಸೇನಾನೆಲೆಯ ವೈದ್ಯರೂ, ನಮ್ಮ ಮಠದ ಶಿಷ್ಯರೂ ಆದ ಡಾ. ಮಹೇಂದ್ರ ಕಬ್ಬೂರು ಕೊಟ್ಟ ಉತ್ತರ: ಸಿಗರೇಟ್ ಸೇದುವುದರಿಂದ ಹೆಚ್ಚು ಹಸಿವು ಆಗುವುದಿಲ್ಲ. ಅದರಿಂದ ಆಹಾರ ಸೇವನೆ ಕಡಿಮೆಯಾಗುತ್ತದೆ. ಆದರೆ ಇದರಿಂದ ಯುವ ಮಹಿಳೆಯರಲ್ಲಿ ಕಾನ್ಸರ್ ಕಾಯಿಲೆ ಹೆಚ್ಚಾಗುತ್ತಿದೆ. 

ಜೂರಿಚ್ ನಗರ ತಲುಪಿದ ಮಾರನೆಯ ದಿನವೇ ಆಗಸ್ಟ್15. ಶಿಷ್ಯರಾದ ಶಿವಮೊಗ್ಗೆಯ ಯುವ ಸಾಫ್ಟ್ವೇರ್ ದಂಪತಿಗಳಾದ ರಮ್ಯಾ ಚೇತನ್ ರವರ ಮನೆಯಲ್ಲಿ ಬೆಳಗಿನ ಉಪಾಹಾರ. ಅವರ 8 ವರ್ಷದ ಬಾಲಕಿ ಆನ್ಯಾ ಇದ್ದಕ್ಕಿದ್ದಂತೆಯೇ ಡೈನಿಂಗ್ ಟೇಬಲ್ ನಿಂದ ಬಾಲ್ಕನಿಯತ್ತ ಧಾವಿಸಿದಳು. "Happy Independence Day" ಎಂದು ಹೊರಗೆ ಕೂಗಿದಳು. ಅಕ್ಕಪಕ್ಕದ ಮನೆಗಳಲ್ಲಿದ್ದ ಓರಿಗೆಯ ಭಾರತೀಯ ಮಕ್ಕಳು ಹೊರಾಂಗಣದಲ್ಲಿ ಜಮಾಯಿಸಿದರು. ಆನ್ಯಾ ಜೊತೆಗೆ ಕೆಳಗಿಳಿದು ಹೋದಾಗ ಮಕ್ಕಳು ನಾ ಮುಂದು ತಾ ಮುಂದು ಎಂದು ತ್ರಿವರ್ಣ ಧ್ವಜವನ್ನು ತಮ್ಮ ಎಳವೆಯ ಕೈಗಳಿಗೆ ನಿಲುಕುವಷ್ಟು ಎತ್ತರಕ್ಕೆ ಹಿಡಿದು “ಜನಗಣಮನ...” ಹಾಡತೊಡಗಿದರು. 

ಭಾರತದಲ್ಲಿದ್ದಾಗ ಪ್ರತಿ ವರ್ಷ ತಪ್ಪದೆ ರಾಷ್ಟ್ರಧ್ವಜಾರೋಹಣ ಮಾಡುತ್ತಿದ್ದ ನಮಗೆ ವಿದೇಶದಲ್ಲಿ ಈ ಎಳೆಯ ಮಕ್ಕಳು ನೇರವೇರಿಸಿ ಧನ್ಯತೆಯ ಭಾವವನ್ನು ಉಂಟುಮಾಡಿದರು. ತ್ರಿವರ್ಣ ಧ್ವಜದಲ್ಲಿರುವ ಮೂರೂ ಬಣ್ಣಗಳ ಮತ್ತು ಮಧ್ಯೆ ಇರುವ ಅಶೋಕ ಚಕ್ರದ ಸಾಂಕೇತಿಕ ಅರ್ಥವನ್ನು ಕೇಳಿದಾಗ ಸರಿಯಾದ ಉತ್ತರ ನೀಡಿದರು. 

ನಮಗಾದ ಮತ್ತೊಂದು ಸಂತಸದ ಸಂಗತಿಯೆಂದರೆ 1977-79 ರಲ್ಲಿ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ನಮ್ಮ ಆತ್ಮೀಯ ಸ್ನೇಹಿತರಾಗಿದ್ದ ಪಾಕಿಸ್ತಾನ ಮೂಲದ ಡಾ. ಖಮರ್ ಮುನಿರ್ ರವರ ಭೇಟಿ. ಎರಡು ವರ್ಷಗಳ ಕಾಲ ಒಂದೇ ವಿದ್ಯಾರ್ಥಿನಿಲಯದಲ್ಲಿ ನಮ್ಮೆದುರಿನ ಕೊಠಡಿಯಲ್ಲಿದ್ದ ಇವರು ನಮ್ಮನ್ನು ನೋಡಲು ತವಕಿಸುತ್ತಿದ್ದರು. ನಮ್ಮ ಗೌರವಾರ್ಥ ಜೂರಿಚ್ ನಲ್ಲಿ 125 ವರ್ಷಗಳ ಸುದೀರ್ಘ ಇತಿಹಾಸವುಳ್ಳ “ಹೌಸ್ ಹಿಲ್ಟಲ್” ಎಂಬ ಪ್ರಸಿದ್ಧವಾದ ಸಸ್ಯಾಹಾರದ ರೆಸ್ಟೋರೆಂಟ್ ನಲ್ಲಿ ಔತಣಕೂಟ ಏರ್ಪಡಿಸಿದ್ದರು. ಸ್ನೇಹ-ವಿಶ್ವಾಸಗಳಿಗೆ ಜಾತಿ-ಮತ-ಪಂಥಗಳ, ದೇಶ-ಭಾಷೆಗಳ, ಪ್ರಾಂತ್ಯ-ಪ್ರದೇಶಗಳ ಪರಿಮಿತಿ ಇರುವುದಿಲ್ಲ. ಸ್ವಿಟ್ಸರ್ಲೆಂಡ್ ದೇಶದ ಪ್ರಜೆಯಾಗಿ ಇಲ್ಲಿಯೇ ನೆಲೆಸಿರುವ ಅವರು ನಮ್ಮೀರ್ವರ ಗಾಢ ಸ್ನೇಹಭಾವ ಕುರಿತು ಬರೆದ ಮಾತುಗಳು ಹೀಗಿವೆ:

"Our friendship is stronger than the strongest material available on earth. Religion for me is something personal. I am full of praise for the welfare activities you are doing for your people. I am grateful to you that you came all the way from Bangalore to Zurich to see me after 4 decades. When sitting with a holy man like you for ten minutes, one feels like gifting away everything to charity! Sit with a politician for ten minutes, you feel that all our studies are useless!!"

ಜೂರಿಚ್ ನಿಂದ ಪುನಃ ಜರ್ಮನಿ ತಲುಪಿದಾಗ ಅಮೇರಿಕಾ ಸೇನಾ ನೆಲೆಯಲ್ಲಿರುವ ಡಾ.ಮಹೇಂದ್ರ ಕಬ್ಬೂರ್ ರವರ ಮನೆಯಿಂದ ಕ್ಯಾಲಿಫೋರ್ನಿಯಾ ದಲ್ಲಿರುವ ಅವರ ಮಾವನವರಾದ ಹಿರಿಯ ವಯಸ್ಸಿನ ನಿವೃತ್ತ ಕೃಷಿ ಅಧಿಕಾರಿ ಹಾಲಪ್ಪನವರಿಗೆ ಫೋನ್ ಮಾಡಿ “ನೀವು ಸರಿಯಾಗಿ ಉಣ್ಣುತ್ತಿಲ್ಲವೆಂದು ಇಲ್ಲಿರುವ ನಿಮ್ಮ ಮಗಳು-ಅಳಿಯ ಹೇಳುತ್ತಿದ್ದಾರೆ, ನಿಮ್ಮ ಪತ್ನಿ ನಿಮಗೆ ಹೊತ್ತಿಗೆ ಸರಿಯಾಗಿ ಉಣಬಡಿಸುತ್ತಿಲ್ಲವೇ?” ಎಂದು ಹಾಸ್ಯ ಮಾಡಿದಾಗ ನಮ್ಮ ಮಾತನ್ನು ಕೇಳಿಸಿಕೊಂಡ ಅವರ ಧರ್ಮಪತ್ನಿ ಅನ್ನಪೂರ್ಣಮ್ಮ ನೀಡಿದ ಪ್ರತಿಕ್ರಿಯೆ: “ಬುದ್ದಿ! ನನಗೆ ಸಾಯುವ ಸಮಯ ಬಂದರೆ ಬೇಗನೆ ಅಡುಗೆ ಮಾಡಿ ನನ್ನ ಗಂಡನಿಗೆ ಉಣಬಡಿಸಿಯೇ ಸಾಯುತ್ತೇನೆ!” ಅನ್ನಪೂರ್ಣಮ್ಮನ ಈ ಮಾತು ಕನ್ನಡದ ಜನಪದಗೀತೆಯಲ್ಲಿ ಬರುವ ಗರತಿಯ ಹಾಡನ್ನು ನೆನಪಿಗೆ ತಂದಿತು: 

ಅಂಗೈಯ ಒಳಗಣ ಲಿಂಗಮೂರುತಿ ಸ್ವಾಮಿ 
ಮಂಗಳಾರತಿಯ ನಾ ಬೆಳಗಿ | ಬೇಡುವೆ 
ಮಾರಾಯರ ಮುಂದೆ ಮರಣಾವ!

ಸಿರಿಗೆರೆಯಿಂದ ಹೊರಡುವ ಮುನ್ನ ಜರ್ಮನಿಯಲ್ಲಿ ನಮ್ಮ ಆತ್ಮೀಯ ಒಡನಾಟದಲ್ಲಿದ್ದ ಬಾನ್ ಯೂನಿವರ್ಸಿಟಿಯ ಕ್ರೈಸ್ತ-ಧರ್ಮಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ಡಾ.ಹನ್ಸ್ ಯೂರ್ಗೆನ್ ಫಿಂಡೈಸ್ ರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೆವು. ಅವರೂ ಸಹ ನಮ್ಮನ್ನು ನೋಡಲು ತುಂಬಾ ಉತ್ಸುಕರಾಗಿದ್ದರು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದಿತ್ತು ಎನ್ನುವಂತೆ ಇಲ್ಲಿಗೆ ಬರುವ ವೇಳೆಗೆ ಅವರು ಮರಣ ಹೊಂದಿದ ದಾರುಣ ಸುದ್ದಿ ನಮಗೆ ಆಘಾತವನ್ನುಂಟು ಮಾಡಿತು. ಅವರು ನಮ್ಮನ್ನು ಆಹ್ವಾನಿಸಿ ಬರೆದ ಪತ್ರವೇ ಅವರ ಜೀವನದಲ್ಲಿ ಅವರ ಸಹಿಯುಳ್ಳ ಕೊನೆಯ ಪತ್ರ. ಅವರು ಮಲಗುವ ಕೋಣೆಯಲ್ಲಿ ಹಾಸಿಗೆಯ ತಲೆದಿಂಬಿನ ಕಡೆಯ ಗೋಡೆಯ ಮೇಲೆ ಎರಡು ಭಾವಚಿತ್ರಗಳಿವೆಯೆಂದೂ “ಅವುಗಳಲ್ಲಿ ಒಂದು ಅವರ ತಾಯಿಯ ಭಾವಚಿತ್ರ ಮತ್ತೊಂದು ತಮ್ಮ ಭಾವಚಿತ್ರ ಎಂದು ಆ ದೃಶ್ಯವುಳ ಫೋಟೋ ತೆಗೆದು ಅವರ ಪತ್ನಿ ಕಳುಹಿಸಿದ ಸಂದೇಶ ನಮ್ಮನ್ನು ತುಂಬಾ ಭಾವುಕರನ್ನಾಗಿಸಿತು.

ಅವರ ಅಂತ್ಯ ಸಂಸ್ಕಾರ ಇದೇ ಆಗಸ್ಟ್ 23 ರಂದು ಬಾನ್ ನಗರದ ಸಮೀಪ ಅವರ ಹುಟ್ಟೂರಿನಲ್ಲಿರುವ ಕುಟುಂಬದ ರುದ್ರಭೂಮಿಯಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಿ ಅಗಲಿದ ಚೇತನಕ್ಕೆ ನಮ್ಮ ಗೌರವ ಸಲ್ಲಿಸಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡುವ ಸಲುವಾಗಿ ಭಾರತಕ್ಕೆ ಹಿಂದಿರುಗುವ ದಿನಾಂಕವನ್ನು ಮು೦ದೂಡಲು ನಮ್ಮ ನಿರ್ಧಾರ. ಅವರ ದುಃಖತಪ್ತ ಪತ್ನಿ ವಾಟ್ಸಾಪ್ನಲ್ಲಿ ಬರೆದ ಮನದಾಳದ ಅಳಲು:

“Respected Swamiji, if you could attend the burrial, your presence would bless my husband Hans- in a sense a true interreligious dialogue even in his mortal remains!”

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ. 24-8-2023.
ಜರ್ಮನಿ