ಚಂದ್ರಯಾನ-3ರ ಸ್ಪರ್ಶೀಯ ಜಾಗವನ್ನು ಶಿವಶಕ್ತಿ ಎಂದು ನಾಮಕರಣ ಮಾಡಿದ ತಾತ್ವಿಕ ಮೀಮಾಂಸೆ!
ಚಂದ್ರಯಾನ-03; ಇಡೀ ಜಗತ್ತಿಗೆ ಭಾರತದ ಇಚ್ಛಾಶಕ್ತಿಯ ಸತ್ವವನ್ನ ಸಾರಿದ ಯೋಜನೆ. ವೈಫಲ್ಯಗಳಲ್ಲೂ ಸಾಫಲ್ಯಗೊಂಡು ಆವಿಷ್ಕಾರಗಳಲ್ಲಿ ಯಶಸ್ಸು ಕಾಣುವುದು ಪಾಶ್ಚಾತ್ಯ ದೇಶದವರಿಗೆ ಮಾತ್ರ ಸಾಧ್ಯ ಎಂಬ ಕುರುಡು ಭಾವನೆಯನ್ನ ಸಾರಾಸಗಟಾಗಿ ಬದಿಗಿಟ್ಟು ಭಾರತದ ಹಿರಿಮೆಯನ್ನ ಜಗದ ತುಂಬೆಲ್ಲಾ ಮತ್ತೊಮ್ಮೆ ಪಸರಿಸಿದ ಕೀರ್ತಿ ಇಡೀ ಚಂದ್ರಯಾನ-03ರ ವಿಜ್ಞಾನಿಗಳಿಗೆ ಸಲ್ಲುತ್ತದೆ.
ಇಂತಹ ಯಶಸ್ಸನ್ನು ಸಾಧಿಸಿದ ವಿಜ್ಞಾನಿಗಳಿಗೆ ಧನ್ಯತೆಯ ಹಾಗೂ ಅಭಿನಂದನೆಯ ಹೃದಯಸ್ಪರ್ಶಿ ಸಂವಹನ ನೀಡಲು ದೇಶದ ಪ್ರಧಾನ ಮಂತ್ರಿಗಳು ನೇರವಾಗಿ ಇಂದು ಬೆಂಗಳೂರಿಗೆ ಆಗಮಿಸಿ ದೇಶದ ಕೀರ್ತಿಗಾಗಿ ಶ್ರಮಿಸಿದ ಪ್ರತಿಯೋರ್ವ ಇಸ್ರೋ ಸಿಬ್ಬಂದಿಯನ್ನು ಅಭಿನಂದಿಸಿದರು. ಪ್ರಧಾನ ಮಂತ್ರಿಗಳು ವಿಜ್ಞಾನಿಗಳ ಸಾಧನೆಯನ್ನು ವಿವರಿಸುವ ಸಂದರ್ಭದಲ್ಲೇ 2019ರಲ್ಲಿ ಚಂದ್ರಯಾನ-02 ವಿಫಲಗೊಂಡು ಚಂದ್ರನ ಮೇಲ್ಮೈ ಪ್ರದೇಶದಲ್ಲಿ ಬಿದ್ದ ಜಾಗವನ್ನು “ತಿರಂಗ ಪಾಯಿಂಟ್” ಎಂತಲೂ ಹಾಗೂ ನಿಗದಿತ ಚಂದ್ರನ ದಕ್ಷಿಣ ಧ್ರುವವನ್ನು ಯಶಸ್ವಿಯಾಗಿ ತಲುಪಿದ ಚಂದ್ರಯಾನ-03ರ ಭೂಸ್ಪರ್ಶಿಸಿದ ಜಾಗವನ್ನ “ಶಿವಶಕ್ತಿ ಪಾಯಿಂಟ್” ಎಂದೂ ನಾಮಕರಿಸಿದರು.
ಇದರ ಬಗೆಗೆ ಪರ ವಿರೋಧದ ನಿಲುವುಗಳು ಏನೇ ಇರಲಿ, ಆದರೆ ಪ್ರಧಾನ ಮಂತ್ರಿಗಳು ಚಂದ್ರಯಾನದಲ್ಲಿ ಶಿವನ ಸ್ವರೂಪವನ್ನು ನೆನೆದದ್ದು ಯಾಕೆ ಹಾಗೂ ಶಿವನ ನಾಮವನ್ನು ನಾಮಕರಣ ಮಾಡಿದ್ದು ಯಾಕೆ ಎಂಬ ಈ ಎರಡು ಪ್ರಶ್ನೆಗಳ ಬಗೆಗೆ ಅವಲೋಕಿಸೋಣ.
ಶಂಕರಾಚಾರ್ಯರ ಹೆಸರಿನಲ್ಲಿರುವ “ಸೌಂದರ್ಯಲಹರೀ” ಎಂಬ ಸ್ತುತಿಕಾವ್ಯದ ಮೊದಲನೆಯ ಪದ್ಯದ ಶ್ಲೋಕವೊಂದರ ಮೊದಲ ಸಾಲು ಹೀಗಿದೆ; "ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ"
ಅಂದರೆ ಶಿವನು ಶಕ್ತಿಯೊಂದಿಗೆ ಜೊತೆಗೂಡಿದರೆ ಮಾತ್ರ ಈ ಭವಕ್ಕೆ/ಪ್ರಪಂಚಕ್ಕೆ ಶಕ್ತಿ ಸಾಮರ್ಥ್ಯ ದೊರಕುತ್ತದೆ ಎಂಬುದು ಅದರ ತಾತ್ಪರ್ಯ. ಶಿವ ಎಂಬುದು ಒಂದು ಐತಿಹ್ಯಕ್ಕಿಂತ ಹೆಚ್ಚಾಗಿ ಒಂದು ಸಾತ್ವಿಕ ಶಕ್ತಿ ಎಂಬುದು ಭಾರತೀಯರ ನಂಬಿಕೆ. ಶಿವನ ಶಕ್ತಿ ಅಥವಾ ಶಿವಶಕ್ತಿ ಎಂಬುದು ಭವದ ಸಂಕೋಲೆಗಳನ್ನ ತೊಡೆದು ಹಾಕಿ ಔಚಿತ್ಯಪೂರ್ಣ ಸಚ್ಚಿದಾನಂದನ ಸನಿಹಕ್ಕೆ ಪರಿಶುದ್ಧಪೂರ್ಣ ಆತ್ಮವನ್ನು ಸೆಳೆಯುವ ಒಂದು ಅನೂಹ್ಯವಾದ ದಿವ್ಯ ಮಾರ್ಗ ಎಂಬುದು ಉಪನಿಷತ್ತುಗಳ ಅಭಿಪ್ರಾಯ.
ಇಂತಹ ಶಿವಶಕ್ತಿ ಎಂಬ ಪದವನ್ನು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ನಿಗದಿಯಂತೆ ಭೂಸ್ಪರ್ಶಿಸಿದ ಜಾಗಕ್ಕೆ ಪ್ರಧಾನ ಮಂತ್ರಿಗಳು ನಾಮಕರಣ ಮಾಡಿದ್ದರ ಉದ್ದೇಶ ಕೂಡ ಶಿವಶಕ್ತಿಯಂತಹ ಭವ್ಯ ಭಾರತೀಯ ಅಭಿವ್ಯಕ್ತವನ್ನ ಜಗತ್ತು ನೆನೆಪಿನಲ್ಲಿಟ್ಟುಕೊಳ್ಳಲಿ ಎಂಬ ಉದ್ದೇಶಕ್ಕಾಗಿಯೇ! ಭಾರತೀಯ ಪರಂಪರೆ ಧರ್ಮ ಮತ್ತು ಪರಂಪರೆಯ ಸಾಪೇಕ್ಷಿತ ಮೌಲ್ಯಗಳನ್ನ ಸದಾಕಾಲ ಅನುಷ್ಠಾನ ಗೊಳಿಸುತ್ತಾ ಕಾಲಕಾಲದ ಆಲೋಚನೆಗಳಿಗೆ ಪೂರಕವಾಗಿ ಮನುಷ್ಯರ ದೃಷ್ಟಿಕೋನದಲ್ಲಿ ತನ್ನ ಸಾಕಾರವನ್ನು ರೂಪಗೊಳಿಸುತ್ತಾ ಸಾಗುತ್ತಿರುವುದು ಶತಮಾನಗಳ ಭಾರತೀಯ ಧಾರ್ಮಿಕ ದೈದಿಪ್ಯವಾಗಿದೆ.
ಇಂತಹ ಭಾರತೀಯ ಧಾರ್ಮಿಕತೆಯ ಶಕ್ತಿಯನ್ನು ಜಗತ್ತು ಎಂದಿಗೂ ನಿರಾಕರಿಸದೆ ಸ್ವೀಕರಿಸಿದ್ದರ ಪರಿಣಾಮ ಇಡೀ ಜಗತ್ತಿಗೆ ಭಾರತವೊಂದು ಆಧ್ಯಾತ್ಮಿಕ ತವರು ನೆಲೆಯಾಗಿರುವುದು ಕೂಡ ವೇದಗಳ ಕಾಲದಿಂದಲೂ ನಿರ್ವಿವಾದ ಸಂಗತಿಯಾಗಿದೆ. ಹೀಗಿರುವ ಪರಿಸ್ಥಿತಿಗಳಿಗೆ ಅನುಗುಣ ಎಂಬಂತೆ ಚಂದ್ರನನ್ನು ಚುಂಬಿಸಿದ ವಿಕ್ರಮ್ ಯಂತ್ರದ ಲ್ಯಾಂಡೆಡ್ ಪಾಯಿಂಟ್ ಶಿವಶಕ್ತಿ ಎಂದು ನಾಮಕರಿಸಿದ್ದರ ಹಿನ್ನಲೆಯೂ ಈ ನೆಲೆಯದ್ದೇ ಆಗಿರುವುದು ಆಶ್ಚರ್ಯವೇನಲ್ಲ.
ಒಟ್ಟಿನಲ್ಲಿ ಸಮಷ್ಠಿಯ ಭಾರತೀಯತೆಯ ಪ್ರಜ್ವಲಮಾನವಾದ ಧಾರ್ಮಿಕ ಅಂತಃಶಕ್ತಿಯನ್ನ ಜಗತ್ತು ಸದಾಕಾಲ ಸ್ಮರಿಸಿಕೊಳ್ಳಲಿ ಹಾಗೂ ಭಾರತೀಯತೆ ಸದಾಕಾಲ ವಸುದೈವ ಕುಟುಂಬಕವಾಗಿಯೇ ಇದೆ, ಇರುತ್ತದೆ ಎಂಬುದು ಚಂದ್ರಯಾನ-03ರ ಶಿವಶಕ್ತಿ ನಾಮಕರಣದ ತಾತ್ವಿಕ ಮೀಮಾಂಸೆ!
- ಶ್ರೀ ತರಳಬಾಳು ಜಗದ್ಗುರು ಶ್ರೀ 1108
ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ.