ವಿದ್ಯಾವಂತರೇ ಇಂದು ಹೆಚ್ಚಾಗಿ ಮೂಢನಂಬಿಕೆಯನ್ನು ಆಚರಿಸುತ್ತಿರುವುದು ವಿಷಾದನೀಯ

  •  
  •  
  •  
  •  
  •    Views  

ಸಿರಿಗೆರೆ::ಅಜ್ಞಾನದಿಂದ ಕೂಡಿದ ಭಯ ಮೂಢನಂಬಿಕೆ. ವಿದ್ಯಾವಂತರೇ ಇಂದು ಹೆಚ್ಚಾಗಿ ಮೂಢನಂಬಿಕೆಯನ್ನು ಆಚರಿಸುತ್ತಿರುವುದು ವಿಷಾದನೀಯ ಎಂದು ದಾವಣಗೆರೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ.ಬಿ.ಶರಣಪ್ಪ ಅಭಿಪ್ರಾಯಪಟ್ಟರು.  

ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನವರು ಏರ್ಪಡಿಸಿದ್ದ ದಂದಣ ದತ್ತಣ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಪವಾಡಗಳ ರಹಸ್ಯ ಬಯಲು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಮೂಢನಂಬಿಕೆಗಳು ಹಾಸು ಹೊಕ್ಕಾಗಿವೆ. ಎಡಗಡೆ ಮಗ್ಗುಲಿನಿಂದ ಹಿಡಿದು, ಬೆಕ್ಕು, ಹಾವು, ಮುಂಗಸಿ, ಪಕ್ಷಿ, ಪ್ರಾಣಿ, ಏಣಿ, ಇತ್ಯಾದಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಡ್ಡ ಬಂದರೆ ಅಪಶಕುನ ಎಂದು ನಂಬಿ ಹಿಡಿದ ಕೆಲಸವನ್ನು ಮಾಡದೇ ಅರ್ಧಕ್ಕೆ ನಿಲ್ಲಿಸುವ ಪರಿಪಾಠ ಬೆಳೆದು ಬಂದಿದೆ ಎಂದರು.

ಗ್ರಹಣಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಜನರು ಗ್ರಹಣ ಸಂದರ್ಭದಲ್ಲಿ ಊಟ,ತಿಂಡಿ ನೀರು ಕುಡಿಯದೇ ಹಾಗೆ ಇದ್ದು ಗ್ರಹಣ ಮೋಕ್ಷ ಕಾಲದ ನಂತರ ನೀರಿಗೆ ಗರಿಕೆ ಹಾಕಿ ಪವಿತ್ರಗೊಳಿಸುವುದು ಎಷ್ಟರ ಮಟ್ಟಿಗೆ ಸರಿ. ಗ್ರಹಣಗಳು ಖಗೋಳದಲ್ಲಿ ನಡೆಯುವ ನೆರಳು ಬೆಳಕಿನಾಟ ಅವುಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಮೂಢನಂಬಿಕೆಗಳನ್ನು ಪಾಲಿಸದೇ ವೈಜ್ಞಾನಿಕವಾಗಿ ಚಂತನೆ ನಡೆಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಣ್ಣನ ಬಳಗದ ಅಧ್ಯಕ್ಷರಾದ ಶರಣ ಬಿ.ಎಸ್. ಮರುಳಸಿದ್ದಯ್ಯ ಇವರು ಮೂಢನಂಬಿಕಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಸಮಾಜದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಬಹಳ ಹಿಂದಿನಿಂದಲೂ ಪ್ರಯತ್ನ ನಡೆಸಿಕೊಂಡು ಬಂದಿದೆ. ಮೂಢನಂಬಿಕೆಗೆ ಜನರಲ್ಲಿರುವ ಅಜ್ಞಾನವೇ ಮುಖ್ಯ ಕಾರಣ ಎಂದು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ನಲವತ್ತರ ದಶಕದಲ್ಲಿಯೇ ತಿಳಿಸಿದ್ದರು ಎಂದರು. 

ಗ್ರಾಮೀಣ ಪ್ರದೇಶಗಳಲ್ಲಿನ ಜನರ ಜೀವನವನ್ನು ಹಸನು ಮಾಡಲು ಅಜ್ಞಾನ ನಿವಾರಿಸಲು ಶಿಕ್ಷಣ ಒಂದು ಪ್ರಮುಖ ಸಾಧನ ಎಂದು ನಂಬಿ ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ರಾಂತಿ ನಡೆಸಿದರು.

ವಿಶ್ವಗುರು ಬಸವಣ್ಣನವರು ತಮ್ಮ ವಚನಗಳಲ್ಲಿ ಮೂಢನಂಬಿಕೆಯನ್ನು ಕುರಿತು ತುಂಬಾ ಸುಲಭವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ ಎಂದರು. “ಮರವ ಕಂಡಲ್ಲಿ ಸುತ್ತುವರಯ್ಯಾ, ನೀರ ಕಂಡಲ್ಲಿ ಮುಳುಗುವರಯ್ಯಾ!” ಎಂಬ ವಚನದಲ್ಲಿ ಅರ್ಥವಿಲ್ಲದ ಆಚರಣೆಗಳನ್ನು ಪಾಲಿಸಬಾರದು. ಯಾವುದೇ ಸಂಗತಿಯನ್ನು ಅನುಮಾನವನ್ನು ಪಶ್ನಿಸಿ ಬಗೆಹರಿಸಿಕೊಳ್ಳಬೇಕು. ವಿದ್ಯಾರ್ಥಿಗಳಾದ ನೀವು ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಅಮವಾಸ್ಯೆಯ ದಿನದಂದು ಸಾಮೂಹಿಕ ಕಲ್ಯಾಣ ಕಾರ್ಯಕ್ರಮ ಮೂಢನಂಬಿಕೆಗಳ ವಿರುದ್ಧ ಭಕ್ತರಿಗೆ ಜಾಗೃತಿಯನ್ನು ಮೂಡಿಸಿದ್ದರು. ಈಗಿನ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಹ ಜನರಲ್ಲಿರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಂದು ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಕಾರ್ಯದರ್ಶಿಗಳಾದ ಶರಣ ಎಂ. ಗುರುಸಿದ್ದಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮೂಢನಂಬಿಕೆಗಳು- ಪವಾಡಗಳ ರಹಸ್ಯ ಬಯಲು -ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದರ್ಮದ ಗುರಿಯೂ ಸತ್ಯದ ಹುಡುಕಾಟ ಹಾಗೂ ವಿಜ್ಞಾನದ ಗುರಿಯೂ ಸತ್ಯದ ಹುಡುಕಾಟ ಎಂದರು. ಜನರಿಗೆ ಮೋಸಮಾಡಿ, ದೇವರ ಮತ್ತು ದರ್ಮದ ಹೆಸರಿನಲ್ಲಿ ನಂಬಿಸುತ್ತಿದ್ದಾರೋ, ಮೂಢನಂಬಿಕೆಗಳು ಪ್ರಚಲಿತದಲ್ಲಿರುವ ಇಂದು ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ಎಂದರು. 

ಅವರು ಪ್ರದರ್ಶಿಸಿದ ಪ್ರಾತ್ಯಕ್ಷಿಕೆಯಲ್ಲಿ ಎಣ್ಣೆ ಇಲ್ಲದೇ ಉರಿಯುವ ದೀಪ, ತೆಂಗಿನಕಾಯಿಯಲ್ಲಿ ಮಲ್ಲಿಗೆ ಕನಕಾಂಬರ ಹೂವು, ಗಾಳಿಯಿಂದ ವಿಭೂತಿ ಸೃಷ್ಠಿ, ಹಗ್ಗದ ಗಂಟನ್ನು ಮಾಯಾ ಮಾಡುವುದು, ನೀರಿನಿಂದ ಸಕ್ಕರೆ ತಯಾರಿಸುವುದು, ಬೆಂಕಿಯಿಂದ ಮೈ ಸುಟ್ಟುಕೊಳ್ಳವುದು, ಜೇನುತುಪ್ಪದಿಂದ ಪೆಟ್ರೋಲ್ ಮತ್ತು ಬೆಂಕಿ ತರಿಸುವುದು, ಮೊಳೆಗಳ ಮೇಲೆ ನಿಲ್ಲುವುದು, ಹಾಲಿನಿಂದ ರಕ್ತ ಸುರಿಯುವಂತೆ ಮಾಡುವುದು ಇತ್ಯಾದಿ ಕುತೂಹಲಕರವಾದ ವಿಸ್ಮಯಗಳನ್ನು ತಮ್ಮ ಪ್ರಾತ್ಯಕ್ಷಿಕೆಯಲ್ಲಿ ತೋರಿಸಿ ವಿದ್ಯಾರ್ಥಿಗಳನ್ನು ರಂಜಿಸಿದ್ದಲ್ಲದೇ ಅವರ ಕತೂಹಲ ಶಕ್ತಿಯನ್ನು ಹೆಚ್ಚಿಸಿದರು.

ದಂದಣ ದತ್ತಣ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಶರಣ ಶಿವನಗೌಡ ಕೆ.ಸುರಕೋಡ ಮಾತನಾಡಿ ವಿದ್ಯಾರ್ಥಿ ಯಾವುದೇ ಚೀಟಿಗಳ ಸಹಾಯವಿಲ್ಲದೆ ತುಂಬಾ ಸುಂದರವಾಗಿ, ದೈರ್ಯದಿಂದ ವಿಷಯಗಳನ್ನು ಮಂಡಿಸಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಇವರಿಗೆ ಮಾರ್ಗದರ್ಶನ ಮಾಡಿದ ಕನ್ನಡ ಉಪನ್ಯಾಸಕರಾದ ಈ. ದೇವರಾಜ್ ಅವರಿಗೂ ಅಭನಂದನೆಗಳನ್ನು ಸಲ್ಲಿಸಿದರು.

ವಿದ್ಯಾರ್ಥಿಗಳು ಮೂಢನಂಬಿಕೆಗಳನ್ನು ಪಾಲಿಸಬಾರದು. ಯಾವುದೇ ವಿಚಾರ ಸಂಗತಿಗಳನ್ನು ಪ್ರಶ್ನಿಸಿ ಒಪ್ಪಿಕೊಳ್ಳುವ ಮನೋಭಾವ ಬೆಳಸಿಕೊಳ್ಳಬೇಕು. ಜನರಿಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು. ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಕನ್ನಡ ಉಪನ್ಯಾಸಕರಾದ ಈ.ದೇವರಾಜ್ ಇವರು ಸಂವಾದ ಕಾರ್ಯಕ್ರಮನ್ನು ನಡೆಸಿಕೊಟ್ಟರು.

ಮೂಢನಂಬಿಕೆಯ ಅರ್ಥ ಮತ್ತು ಪರಿಕಲ್ಪನೆ, ಸಮೂಹ ಮಾಧ್ಯಮಗಳಲ್ಲಿ ಮೂಢನಂನಿಕೆ, ವಿದ್ಯಾವಂತರ ಮೂಢನಂಬಿಕೆ, ವೈಜ್ಞಾನಿಕ ಸತ್ಯ, ನಮ್ಮ ಬದುಕಿನಲ್ಲಿ ಮೂಢನಂಬಿಕೆ ವಿಷಯದ ಕುರಿತು ಬಿ.ಎಲ್.ಆರ್. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಬೇಬಿ, ಕೆ.ಪ್ರಿಯಾಂಕ, ಎಂ.ರಮೇಶ, ಎಸ್.ತೇಜಸ್ವಿನಿ, ಜೆ.ಪವಿತ್ರ ಇವರು ಉತ್ತಮವಾಗಿ ವಿಷಯವನ್ನು ಮಂಡಿಸಿದರು.

ದಂದಣ ದತ್ತಣಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚೈತ್ರ ಮತ್ತು ಸಂಗಡಿಗರು ವಚನಗಾಯನ ಮಾಡಿದರು. ಮಹಾಲಕ್ಷ್ಮಿ ನಿರೂಪಿಸಿದರು. ದೀಕ್ಷಾ ಸ್ವಾಗತಿಸಿದರು.