ಕೈಗಾರಿಕಾ ಕಾರಿಡಾರ್ ಯೋಜನೆಗೆ ಕೃಷಿ ಭೂಮಿ ಬದಲು ಬಂಜರು ಭೂಮಿ ಬಳಕೆಗೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಕೈಗಾರಿಕಾ ಸಚಿವರಿಗೆ ಸಲಹೆ

  •  
  •  
  •  
  •  
  •    Views  

ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಶ್ರೀ ಜಗದ್ಗುರುಗಳವರ ಆಶೀರ್ವಾದ ಪಡೆದ ಸಚಿವ ಎಂ.ಬಿ.ಪಾಟೀಲ್
-------------------------------------

ಜಾಗತೀಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಶ್ರೀ ಜಗದ್ಗುರುಗಳವರೊಂದಿಗೆ ಚರ್ಚಿಸಿದ ಸಚಿವರು
-------------------------------------

ಬೆಂಗಳೂರು: ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರೊಂದಿಗೆ ಆದರಣೀಯ ಬಾಂಧವ್ಯ ಹೊಂದಿರುವ ಭಾರಿ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀ ಎಂ.ಬಿ.ಪಾಟೀಲ್  ರವರು ಬೆಂಗಳೂರಿನ ಆರ್.ಟಿ.ನಗರದ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಫಲ ಪುಷ್ಪದೊಂದಿಗೆ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದರು.

ಶ್ರೀ ಜಗದ್ಗುರುಗಳವರೊಡನೆ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ನೂತನ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿದ ಸಚಿವ ಶ್ರೀ ಎಂ.ಬಿ.ಪಾಟೀಲರು ಜಾಗತೀಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಶೀಘ್ರದಲ್ಲಿ ಆಯೋಜಿಸ ಲಾಗುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ನಿರಂತರವಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ  ಹೊಡಿಕೆದಾರರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ.  ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.

ಕೈಗಾರಿಕಾ ಕಾರಿಡಾರ್ ಯೋಜನೆಗೆ ರೈತರ ಫಲವತ್ತಾದ ಭೂ ಸ್ವಾಧೀನ ಬೇಡ : ಸಚಿವರಿಗೆ ಶ್ರೀ ಜಗದ್ಗುರುಗಳವರ ಸಲಹೆ. -------------------------------------

ದಾವಣಗೆರೆಯ ಕೈಗಾರಿಕಾ ಕಾರಿಡಾರ್ ಯೋಜನೆಗೆ ಫಲವತ್ತಾದ ಕೃಷಿ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ  ದಾವಣಗೆರೆ  ಸಮೀಪದ  ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಮುಂತಾದ ಗ್ರಾಮಗಳ ರೈತರು ಸದ್ಧರ್ಮ ನ್ಯಾಯ ಪೀಠಕ್ಕೆ ಮನವಿ ಸಲ್ಲಿಸಿರುವುದನ್ನು ಸಚಿವರಿಗೆ ಪ್ರಸ್ತಾಪಿಸಿದ ಶ್ರೀ ಜಗದ್ಗುರುಗಳವರು: ದಾವಣಗೆರೆ ಸಮೀಪ ಕೈಗಾರಿಕಾ ಕಾರಿಡಾರ್ ಉದ್ದೇಶಕ್ಕಾಗಿ ಫಲವತ್ತಾದ 1,156 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ  ಮುಂದಾಗಿದೆ. ನಮ್ಮ ರೈತರ ಜಮೀನಲ್ಲಿ ಅಡಿಕೆ, ತೆಂಗು, ಮಾವು, ಹಣ್ಣಿನ ಬೆಳೆ, ಸಾಂಬಾರ್ ಪದಾರ್ಥ ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. 6–7 ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ರೈತರ ಬದುಕನ್ನು ಕಸಿದುಕೊಳ್ಳುವುದು ಬೇಡ ಹಾಗಂತ ನಿಮ್ಮ ಯೋಜನೆಯು ನಿಲ್ಲುವುದು ಬೇಡ ಉಳಿಮೆಗೆ ಯೋಗ್ಯವಲ್ಲದ ಭೂಮಿಯಲ್ಲಿ ನಿಮ್ಮ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸುವುದು ಸೂಕ್ತ ಪರಿಹಾರವಾಗಿದೆ ಎಂದು ಸಲಹೆ ನೀಡಿದರು.

ರೈತರ ಭೂಮಿಗೆ ಹೊಂದಿಕೊಂಡಿರುವ ಈ ವ್ಯಾಪ್ತಿಯಲ್ಲಿ ನವಿಲು, ಗೂಬೆ, ಮೊಲ, ನರಿ, ಕಾಡುಹಂದಿ, ಪುನುಗು ಬೆಕ್ಕು, ಕಾಡುಬೆಕ್ಕು, ಕಾಡುಕುರಿ, ಕರಡಿ, ಜಿಂಕೆ ಸೇರಿದಂತೆ ವನ್ಯಜೀವಿ ಸಂಕುಲ ಆಶ್ರಯ ಪಡೆದಿದೆ. ಇಂತಹ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ಮಾಡಿದರೆ ಜೀವವೈವಿಧ್ಯ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಕೆಲ ರೈತರಿಗೆ ಭೂಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ನೊಟೀಸ್ ಜಾರಿಗೊಳಿಸಲಾಗಿದೆ. ಇಲ್ಲಿ ಫಲವತ್ತಾದ ಭೂಮಿ ಇದೆ. ನೀರಾವರಿ ಸೌಲಭ್ಯ ಚನ್ನಾಗಿದ್ದು, ರೈತರು ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಿದರೆ ಪರಿಸರ ಹಾಳಾಗಲಿದೆ. ನೀರಾವರಿ ಜಮೀನು ವಶಪಡಿಸಿಕೊಳ್ಳುವ ಬದಲು ಬರಡು ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲಿ. ರೈತರನ್ನು ಒಕ್ಕಲೆಬ್ಬಿಸುವುದು ಸಾಧುವಲ್ಲವೆಂದು ಸಚಿವರಿಗೆ ಶ್ರೀ ಜಗದ್ಗುರುಗಳವರು ಮನವರಿಕೆ ಮಾಡಿಕೊಟ್ಟರು.

ಪೂಜ್ಯರ ಸಲಹೆ ಮತ್ತು ಮಾರ್ಗ ದರ್ಶನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಚಿವರು ಈ ರೈತರ ಹಿತವೇ ವೈಯಕ್ತಿಕವಾಗಿ ನನ್ನ ಆದ್ಯತೆಯಾಗಿದೆ. ರೈತರ ಒಕ್ಕಲೆಬ್ಬಿಸುವ ಯಾವುದೇ ಕ್ರಮ ಕೈಗೊಳ್ಳದೇ ತಮ್ಮ ಮಾರ್ಗದರ್ಶನದಲ್ಲಿ ಮುನ್ನಡೆ ಯುವುದಾಗಿ ತಿಳಿಸಿದರು.

ಶ್ರೀ ಜಗದ್ಗುರುಗಳವರು ಕರ್ತೃತ್ವದಲ್ಲಿ ಹೊರತಂದಿರುವ, ವಿವಿಧ ಭಾಷೆಗಳಲ್ಲಿ ತರ್ಜುಮೆಯಾಗಿ ಲಕ್ಷಾಂತರ ಅನುಯಾಯಿಗಳಿಂದ ಮೆಚ್ಚುಗೆಗೆ ಕಾರಣವಾಗಿರುವ 20 ಸಾವಿರಕ್ಕೂ ಹೆಚ್ಚು ಬಸವಾದಿ ಶರಣರ ವಚನಗಳು ಮೊಬೈಲ್ ಆಫ್ ಬಗ್ಗೆ ಸಚಿವರು ಆಸಕ್ತಿಯಿಂದ ಪೂಜ್ಯರ ಬಳಿ ತಿಳಿದುಕೊಂಡರು.