20ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
ಸ್ವಾಮಿಗಳೆಂದರೆ ಮೂಗುವ ಮುರಿಯುವ ಸನ್ನಿವೇಶದಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತಹ ಸ್ವಾಮಿಗಳೆಂದರೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. "ಜಗತ್ತೆಲ್ಲ ವಿಷಯಾಭಿಮುಖವಾಗಿದೆ. ಯಾರಿಗೆ ಯಾವುದು ಅವಶ್ಯಕವಿಲ್ಲವೊ ಅದೆಲ್ಲ ಈಗ ಅವರಿಗೆ ಅವಶ್ಯಕವಾಗಿದೆ. ಒಬ್ಬರಿಗೂ ತಮ್ಮ ಜವಾಬ್ದಾರಿಯು ಜ್ಞಾಪಕದಲ್ಲೇ ಇಲ್ಲ. ಈಗಿನ ಸನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ. ಅಜ್ಞಾನವಿದ್ದಲ್ಲಿ ಸತ್ಯಕ್ಕೆ ಬೆಲೆಯಿಲ್ಲ. ಕಂದಾಚಾರಕ್ಕೆ ಬೆಲೆ ಇರುವವರೆಗೆ ಜಗತ್ತಿಗೆ ಸುಖವಿಲ್ಲ. ನಿರಕ್ಷರ ಕುಕ್ಷಿಗಳೂ ವಿಷಯ ಕೂಪದಲ್ಲಿ ಬೆಳೆದವರು ಮತ್ತು ವಿಷಯದಲ್ಲೆ ತೊಳಲಿ ಬಳಲಿದವರು ಗುರುಗಳಾದರೆ ಯಾವ ಜಗತ್ತು ಉದ್ಧಾರವಾಗುತ್ತದೆ? ಗುರುಗಳಾಗುವವರೆಂದರೆ ನಾಟಕದಲ್ಲಿ ವೇಷ ಹಾಕಿಕೊಂಡು ಪಾರ್ಟ್ ಮಾಡುವುದೆಂದು ಜನರು ಭಾವಿಸಿರುವಂತೆ ತೋರುತ್ತದೆ. ಶಿವ ಶಿವಾ... ದನ ಕಾಯುವವರೆಲ್ಲ, ಸುಳ್ಳು ಹೇಳುವವರೆಲ್ಲ, ವಿಧವಾ ಪ್ರಿಯರೆಲ್ಲ ನಿನ್ನ ಹೆಸರಿನಿಂದ ದೇಶದಲ್ಲಿ ಮೆರೆಯುತ್ತಾರಲ್ಲ .." ಈ ಮಾತುಗಳನ್ನು “ಆತ್ಮನಿವೇದನೆ” ಎಂಬ ದಿನಚರಿಯಲ್ಲಿ 15-05-1938 ರಲ್ಲಿ ದಾಖಲಿಸಿದವರು ಯಾರೊ ಕ್ರಾಂತಿಕಾರಿ ಬುದ್ಧಿಜೀವಿಗಳಲ್ಲ- ಕರ್ನಾಟಕದ ಪ್ರಮುಖ ಧಾರ್ಮಿಕ ಪೀಠವಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20ನೆಯ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ತಮ್ಮ 24ನೆಯ ವಯಸ್ಸಿನಲ್ಲಿಯೇ ಒಬ್ಬ ಸ್ವಾಮಿಗಳು ಹೇಗಿರಬೇಕು, ಯಾವ ಕಾರ್ಯವನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಬೇಕೆಂದು ಪ್ರತ್ಯಕ್ಷ ಮಾಡಿ ತೋರಿದವರು. ಪೂಜ್ಯರು 1940 ರಲ್ಲಿ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20ನೆಯ ಪಟ್ಟಾಧ್ಯಕ್ಷರಾದರು. ಆಗ ಅವರ ಎದುರಿಗೆ ನಾನಾ ರೀತಿಯ ಸವಾಲುಗಳಿದ್ದವು. ಅವುಗಳಿಗೆಲ್ಲಾ ಸಮರ್ಥವಾಗಿ ಉತ್ತರಿಸುತ್ತಾ ತಮ್ಮ ಮಠವನ್ನು ಮಾದರಿ ಬೃಹನ್ಮಠವಾಗಿ ರೂಪಿಸಿದರು.
ಮಠಗಳ ಬಗೆಗೆ, ಸ್ವಾಮಿಗಳ ಬಗೆಗೆ ಸಂಶೋಧನೆ ಮಾಡುವವರು, ಇತಿಹಾಸ ರಚಿಸುವವರು ಇವರ ಸಾಧನೆಗಳನ್ನು ದಾಖಲಿಸದಿದ್ದರೆ ಅವರ ಅಧ್ಯಯನ, ಸಂಶೋಧನೆ ಅಪೂರ್ಣ ಎಂದು ಭಾವಿಸಬೇಕಾಗುತ್ತದೆ. "ಜನರು ಬಯಸುವುದನ್ನು ಕೊಡುವವನು ಮುಖಂಡನಲ್ಲ; ಜನರಿಗೆ ಅಗತ್ಯವಾದುದನ್ನು ಕೊಡುವವನು ನಿಜವಾದ ಮುಖಂಡನೆಂದು" ಭಾವಿಸಿ ತಮ್ಮ ಸಂಪರ್ಕಕ್ಕೆ ಬಂದ ಎಲ್ಲಾ ಜನಾಂಗದ, ಜಾತಿಯ ಜನರಿಗೆ ಏನನ್ನು ಕೊಡಬೇಕು ಅದನ್ನು ಕೊಟ್ಟು ಸಿರಿಗೆರೆ ಮಠವನ್ನು ಭಾರತದ ನಕ್ಷೆಯಲ್ಲಷ್ಟೇ ಅಲ್ಲ, ವಿಶ್ವದ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ.
ತಾವು ಸ್ವಾಮಿಗಳಾಗಿದ್ದ ಅವಧಿ 39 ವರ್ಷಗಳು. ಈ ಕಾಲಘಟ್ಟದಲ್ಲಿ ನೂರಾರು ವರ್ಷಗಳಲ್ಲಿ ಮಾಡುವ ಮಹಾ ಕಾರ್ಯಗಳನ್ನು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ರಾಜಕೀಯ ಕ್ಷೇತ್ರಗಳಲ್ಲಿ ಮಾಡಿ ಎಲ್ಲಾ ವರ್ಗದವರ ಗಮನವನ್ನು ಸೆಳೆದಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಬಡತನ, ಅನಕ್ಷರತೆ, ಮೂಢನಂಬಿಕೆ ಮುಂತಾದ ಸಾಮಾಜಿಕ ಸಮಸ್ಯೆಗಳು ತಾಂಡವ ವಾಡುತ್ತಿದ್ದವು. ಅವುಗಳನ್ನು ನಿವಾರಿಸಲು ಶಿಕ್ಷಣ ಪ್ರದಾನ ಅಸ್ತ್ರವೆಂದು ತಿಳಿದ ಪೂಜ್ಯರು ಗ್ರಾಮೀಣ ಜನರನ್ನು ಸುಶಿಕ್ಷಿತರನ್ನಾಗಿಸಲು ಮುಂದಾದರು. ಅದಕ್ಕಾಗಿ 1946ರಲ್ಲಿಯೇ ಸಿರಿಗೆರೆಯಲ್ಲಿ ಒಂದು ಶಾಲೆಯನ್ನು ತೆರೆದರು. ಆನಂತರ 1962 ರಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕಿದರು.
ಬಸವಣ್ಣನವರ ವಚನದ "ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ" ಎಂಬ ಹೇಳಿಕೆಯುಳ್ಳ ಲಾಂಛನದಡಿಯಲ್ಲಿ ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಶಾಲಾ ಕಾಲೇಜುಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಎಲ್ಲಾ ಜನಾಂಗದ, ಜಾತಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತರಾದರು. "ಈ ಜಗತ್ತಿನಲ್ಲಿ ಯಾರು ಇಂತಹ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡಿರುವುದಿಲ್ಲ. ಯಾವ ಜಾತಿಯಲ್ಲಿ ಹುಟ್ಟಿರುತ್ತೇವೊ ಆ ಜಾತಿಯ ಹಣೆಪಟ್ಟಿ ಅಂಟಿಕೊಂಡಿರುತ್ತದೆ. ಅದನ್ನು ಮೀರಿ ಒಳ್ಳೆಯ ರೀತಿನೀತಿಗಳನ್ನು ಅಳವಡಿಸಿಕೊಂಡು ಬದುಕಬೇಕು" ಎಂದು ಮಾರ್ಗದರ್ಶನ ನೀಡಿದರು. ಹಾಗಾಗಿ ತಮ್ಮ ಸಂಪರ್ಕಕ್ಕೆ ಬಂದ ಲಕ್ಷಾಂತರ ಜನರಿಗೆ ಪೂಜ್ಯರು ಪ್ರಾತಃ ಸ್ಮರಣೀಯರಾಗಿದ್ದಾರೆ.
"ಭಾರತದ ಆತ್ಮ ಹಳ್ಳಿಗಳಲ್ಲಿದೆ, ಹಳ್ಳಿಗಳು ಉದ್ಧಾರವಾದರೆ ಭಾರತ ಉದ್ಧಾರ ವಾಗುತ್ತದೆ" ಎಂಬ ದರ್ಶನ ದೃಷ್ಟಿಯಿಂದ ನಾಗರಿಕ ಸವಲತ್ತುಗಳಿಲ್ಲದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದರು. ಅದರ ಫಲವಾಗಿ ಇಂದು ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದಿ, ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಯಿತು. ಅವರು ತಮ್ಮ ಆಡಳಿತದ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ಅವಕಾಶವಿದ್ದರೂ ಅದಕ್ಕೆ ಮುಂದಾಗದೆ, ಪ್ರೌಢಶಾಲೆಗಳು, ಕಾಲೇಜುಗಳನ್ನು ತೆರೆದು ನೈತಿಕ ತಳಹದಿಯ ಮೇಲೆ ಅವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಸಿರಿಗೆರೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾರ್ಥಿ ನಿಲಯ ಸ್ಥಾಪಿಸಿ, ಅದರಲ್ಲಿ ಎಲ್ಲಾ ಜಾತಿಯ ಮಕ್ಕಳಿಗೆ ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡುವ ಮೂಲಕ ಶರಣರು ಸಾರಿದ ಸಮಾನತೆಯನ್ನು ಅನುಷ್ಠಾನ ಗೊಳಿಸಿದರು. ಹಾಗೆಯೇ ಈ ಮಠದ ದ್ವಾರ ಎಲ್ಲಾ ಜನಾಂಗದವರಿಗೆ ಸದಾ ತೆರೆದಿರುತಿತ್ತು. ಹೀಗಾಗಿ ಇದೊಂದು ಮೇಲು ನೋಟಕ್ಕೆ ಒಂದು ಪಂಗಡಕ್ಕೆ ಸೇರಿದ ಮಠವೆಂದು ಕಂಡರೂ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಈ ಮಠವನ್ನು ಬೆಳೆಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ.
ನಾವಿಂದು ಬದುಕುತ್ತಿರುವ ಸನ್ನಿವೇಶ ಉಸಿರುಗಟ್ಟುವಂತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಮಗೆ ಆದರ್ಶ ಯಾರು? ಎಂಬುದನ್ನು ಗಂಭೀರವಾಗಿ ಚಿಂತಿಸಿ, ಆಲೋಚಿಸಿ, ಪಟ್ಟಾಭಿಷಿಕ್ತರಾದ ತರುಣದಲ್ಲೇ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಬಸವಾದಿ ಶಿವಶರಣರು ಪ್ರತಿಪಾದಿಸಿದ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವೆಂದು ಬಲವಾಗಿ ನಂಬಿ ಕಾರ್ಯಪ್ರವೃತ್ತರಾದರು.
ಶಾಲಾ ಕಾಲೇಜುಗಳಲ್ಲಿ ಔಪಚಾರಿಕ ಶಿಕ್ಷಣ ಪಡೆಯುವ ಮಕ್ಕಳಿಗೆ “ವಚನ ಮಂಟಪ”ದ ಮೂಲಕ ಪರೀಕ್ಷೆಗಳನ್ನು ನಡೆಸಿ, ಶಿವಶರಣರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಲು ಮಾರ್ಗದರ್ಶನ ಮಾಡಿದರು. ಹಿರಿಯರಿಗೆ ಅನೌಪಚಾರಿಕ ಪದ್ಧತಿಯ ಮೂಲಕ ಸರ್ವಶರಣ ಸಮ್ಮೇಳನ, ಶಿವಶರಣರ ಜಯಂತಿ, ತರಳಬಾಳು ಹುಣ್ಣುಮೆಯಂತಹ ಬೃಹತ್ ಧಾರ್ಮಿಕ, ಸಾಂಸ್ಕೃತಿಕ ಸಮಾವೇಶಗಳ ಮೂಲಕ ಬಸವಾದಿ ಶಿವಶರಣರ ಆದರ್ಶಗಳನ್ನು ಜನಮನದಲ್ಲಿ ಬಿತ್ತುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಿದರು. ಅದಕ್ಕಾಗಿ ಮಠದಲ್ಲಿ ಅಣ್ಣನ ಬಳಗ, ಅಕ್ಕನ ಬಳಗ, ಕಲಾಸಂಘ, ಪ್ರಕಾಶನ ಸಂಸ್ಥೆಗಳನ್ನು ಸ್ಥಾಪಿಸಿದರು. ಅವುಗಳ ಮೂಲಕ ಈ ಕಾರ್ಯವನ್ನು ದೇಶದ ಉದ್ದಗಲಕ್ಕೂ ಮಾಡಿದರು. ಬಸವಣ್ಣನವರ ವಚನಗಳನ್ನು ಮೊಟ್ಟಮೊದಲ ಬಾರಿಗೆ ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆಗಳಿಗೆ ಭಾ಼ಷಾಂತರಿಸಿದ ಹೆಗ್ಗಳಿಕೆ ಪೂಜ್ಯರದು. ತನ್ಮೂಲಕ ಜಗತ್ತಿಗೆ ಜಗಜ್ಯೋತಿ ಎನಿಸಿಕೊಂಡ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳು, ಜೀವನ ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದುಕೊಳ್ಳಲು ಪೂರಕ ವಾತಾವರಣ ಕಲ್ಪಿಸಿಕೊಟ್ಟರು. ವಿಶ್ವ ಮಾನವ ಸಂದೇಶವುಳ್ಳ ವಚನಕಾರರ ಬದುಕು, ಆದರ್ಶ ನಮಗೆ ಪ್ರಸ್ತುತವೆಂದು ಭಾವಿಸಿ ಕುಂತಲ್ಲಿ, ನಿಂತಲ್ಲಿ, ನಡೆದಾಡುವಲ್ಲಿ, ನುಡಿಯಲ್ಲಿ ಜನರ ಮನಸ್ಸಿಗೆ ನಾಟುವಂತೆ ದೃಶ್ಯ, ಶ್ರವ್ಯ ಮಾಧ್ಯಮಗಳ ಮೂಲಕ ತಿಳಿಯಪಡಿಸಿದರು.
ಸ್ವತಃ ಬರಹಗಾರರಾಗಿ "ಕಾವ್ಯೇಷು ನಾಟಕಂ ರಮ್ಯಂ" ಎಂಬ ಮಾತನ್ನು ಅರಿತು, ಶಿವಶರಣರ ಜೀವನಾದರ್ಶಗಳನ್ನು ಕುರಿತು ನಾಟಕಗಳನ್ನು ರಚಿಸಿದರು. ಆ ನಾಟಕಗಳು ಕಲಾಸಂಘದ ಕಲಾವಿದರಿಂದ ದೇಶದೆಲ್ಲೆಡೆ ಪ್ರದರ್ಶನ ಮಾಡಿಸಿದರು. ಸಂಸ್ಕೃತ ಭಾಷಾ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಪೂಜ್ಯರು ಸಾಹಿತ್ಯ ಕ್ಷೇತ್ರಕ್ಕೂ ಅಪೂರ್ವ ಕೊಡುಗೆ ನೀಡಿದ್ದಾರೆ. ಅವರ ಅಂತರಂಗದ ಬದುಕನ್ನು ಅನಾವರಣಗೊಳಿಸುವ ಕೃತಿ "ಆತ್ಮನಿವೇದನೆ"ಯಾದರೆ, ತಮ್ಮ ಬಹಿರಂಗ ಹೋರಾಟದ ಜೀವನವನ್ನು ಚಿತ್ರಿಸುವ ಬೃಹತ್ ಹೊತ್ತಿಗೆ “ದಿಟ್ಟಹೆಜ್ಜೆ ಧೀರಕ್ರಮ”ದಲ್ಲಿ ಶ್ರೀಗಳ ಸಮಗ್ರ ವ್ಯಕ್ತಿತ್ವ ಪ್ರತಿಬಿಂಬಿತವಾಗಿದೆ.
ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವಗಳನ್ನು ಏರ್ಪಡಿಸಿ, ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟರು. ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಪೂಜ್ಯರು ಪ್ರತಿವರ್ಷ “ವನ ಮಹೋತ್ಸವ” ಆಚರಿಸಿ, ಮಕ್ಕಳಿಂದ ಗಿಡ ಮರಗಳನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡಿದರು. ಇತಿಹಾಸ ದ ಬಗ್ಗೆ ಕಳಕಳಿಯುಳ್ಳವರಾದ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನು ಸಂಶೋಧಿಸಿದರು. ಹಾಗೆಯೆ ಅಲ್ಲೆಲ್ಲಾ ಶಾಲೆ-ಕಾಲೇಜುಗಳನ್ನು ತೆರೆದು ಆ ಕ್ಷೇತ್ರಗಳಿಗೆ ಘನತೆಯನ್ನು ತಂದುಕೊಟ್ಟರು.
ಭಾರತದ ಸಂವಿಧಾನದ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಮಿಗಳು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಆಕ್ಷೇಪಣೆ ಎಂಬ ಭಾವನೆಯನ್ನು ತೊಡೆದುಹಾಕಿ, ಸ್ವಾಮಿಗಳು ಸಹ ಈ ದೇಶದ ಮೊದಲು ಪ್ರಜೆಗಳು; ಇವರಿಗೂ ಹಕ್ಕು ಮತ್ತು ಕರ್ತವ್ಯಗಳು ಇವೆಯೆಂದು ಅರಿತು ಮತದಾನಕ್ಕೆ ವಿಶೇಷ ಮಹತ್ವ ನೀಡಿದ್ದರು. ಅಲ್ಲದೆ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಗಮನಾರ್ಹ. ಹೀಗಾಗಿ ಸ್ವಾಮಿಗಳು ರಾಜಕೀಯ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡಿದರು.
ಹನ್ನೆರಡನೆಯ ಶತಮಾನದಲ್ಲಿ ವಿಶ್ಬಬಂಧು ಮರುಳಸಿದ್ಧರು ಸದ್ಧರ್ಮ ಪೀಠವನ್ನು ಸ್ಥಾಪಿಸಿ, ತನ್ನ ಉತ್ತರಾಧಿಕಾರಿಗೆ “ತರಳಾ, ಬಾಳು” ಎಂದು ಆಶೀರ್ವದಿಸಿದರು. ಆ ಪಂಚಾಕ್ಷರಿ ಮಂತ್ರದ ಆಶಯಗಳನ್ನು ಇಪ್ಪತ್ತನೆಯ ಶತಮಾನದ ಅಲ್ಪಾವಧಿಯಲ್ಲಿ ಅನುಷ್ಠಾನಕ್ಕೆ ತಂದರು. ಸಕಲ ಜೀವಾತ್ಮಾರಿಗೆ ಲೇಸನ್ನೇ ಬಯಸಿದ ಪೂಜ್ಯರು ಭೌತಿಕವಾಗಿ ಜೀವಿಸಿದ್ದು ೭೮ ವರ್ಷಗಳ ಕಾಲ. ತಮ್ಮ ಅವಧಿಯಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಘನತೆ-ಗೌರವವನ್ನು ಹೆಚ್ಚಿಸಿದರು. ಅದನ್ನು ಆದರ್ಶ ಮಠವನ್ನಾಗಿ, ತಾವು ಆದರ್ಶ ಗುರುಗಳಾಗಿ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಪೂಜ್ಯರು ಹಾಕಿ ಕೊಟ್ಟ ಮಾರ್ಗದಲ್ಲಿ ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ತರಳಬಾಳು ಜಗದ್ಗುರು ಶ್ರೀಶ್ರೀಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವಿದ್ಯಾಸಂಸ್ಥೆ, ಸಮಾಜ ಮತ್ತು ಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.