ಯಾವುದೇ ಧರ್ಮದ ನಿಂದನೆ ಸಲ್ಲದು

  •  
  •  
  •  
  •  
  •    Views  

“ಸನಾತನ ಧರ್ಮ ಕೊರೋನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದರ ನಿರ್ಮೂಲನೆ ಮಾಡಬೇಕು” ಎಂದು ತಮಿಳುನಾಡಿನ ಯುವ ಮಂತ್ರಿಯೊಬ್ಬರು ನೀಡಿದ ಹೇಳಿಕೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರೋಗವನ್ನು ನಿವಾರಣೆ ಮಾಡಬೇಕೋ, ರೋಗಿಯನ್ನೇ ಸಾಯಿಸಬೇಕೋ? “ಸನಾತನ ಧರ್ಮ” ಎಂದರೆ ಏನು? ಅದರ ಮೂಲ ಸ್ವರೂಪವೇನು? ಅದು ಮನುಕುಲಕ್ಕೆ ಮಾರಕವೇ? ಹಾಗಿದ್ದರೆ ಅದರ ನಿವಾರಣೆಗೆ ಹಿಂದೆ ಯಾವ ಪ್ರಯತ್ನವೂ ನಡೆದಿಲ್ಲವೇ? ಸನಾತನ ಎಂದರೆ ಪ್ರಾಚೀನ (ancient). ಧರ್ಮ ಎಂದರೆ ಈಗ religion ಎಂಬ ಅರ್ಥದಲ್ಲಿ ಬಳಕೆಯಲ್ಲಿರುವ ಧರ್ಮ ಅಲ್ಲ. ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಧರ್ಮ ಶಬ್ದದ ಅರ್ಥವೇ ಬೇರೆ. ಈಗ ಎದ್ದಿರುವ ರಾಜಕೀಯ ಗದ್ದಲವನ್ನು ನೋಡಿದರೆ “Politics is a short term religion and religion is a long term politics” (ರಾಜಕೀಯವು ಅಲ್ಪಾವಧಿಯ ಧರ್ಮ, ಧರ್ಮವು ದೀರ್ಘಾವಧಿಯ ರಾಜಕೀಯ) ಎನ್ನುವ ಡಾ.ರಾಮ್ ಮನೋಹರ ಲೋಹಿಯಾ ಅವರ ಮಾತು ನೆನಪಾಗುತ್ತದೆ.

“ಧರ್ಮ” ಎಂಬ ಸಂಸ್ಕೃತ ಶಬ್ದ ಸಂದರ್ಭಾನುಸಾರ ನಾನಾ ಅರ್ಥಗಳನ್ನು ಕೊಡುತ್ತದೆ. ಸ್ಥೂಲವಾಗಿ ಧರ್ಮ ಎಂದರೆ ಕರ್ತವ್ಯ, ಕಟ್ಟಳೆ, ನ್ಯಾಯ, ನೀತಿ, ಗುಣಸ್ವಭಾವ, ಸದಾಚಾರ, ಸನ್ನಡತೆ, ಎನ್ನಬಹುದು. ಈ ಎಲ್ಲ ಅರ್ಥಗಳನ್ನು ಕೊಡಬಲ್ಲ ಒಂದೇ ಶಬ್ದ ಬೇರಾವ ಭಾಷೆಗಳಲ್ಲಿಯೂ ಇಲ್ಲ. ಧರ್ಮ ಶಬ್ದದ ಪೂರ್ಣ ಅರ್ಥವನ್ನು ಪ್ರತಿಧ್ವನಿಸುವ ಪರ್ಯಾಯ ಶಬ್ದ (synonymn) ಸಂಸ್ಕೃತದಲ್ಲಿಯೂ ಇಲ್ಲ. ಇದರ ಅರ್ಥವನ್ನು ವ್ಯಾಖ್ಯಾನಿಸಬಹುದೇ ಹೊರತು ಭಾಷಾಂತರಿಸಲು ಸಾಧ್ಯವಿಲ್ಲ. “ನೀನು ಏನೇ ಹೇಳು, ಇದು ನಿನ್ನ ಧರ್ಮ ಅಲ್ಲ ಎನ್ನುವಾಗ “ನ್ಯಾಯ” ಎಂದು ಅರ್ಥ. “ಸುಡುವುದು ಬೆಂಕಿಯ ಧರ್ಮ” ಎನ್ನುವಾಗ ಬೆಂಕಿಯಲ್ಲಿ ಅಡಗಿರುವ ಸುಡುವ “ಗುಣ”, “ಧರ್ಮ ಮಾಡಿ ತಂದೆ” ಎಂದು ಒಬ್ಬ ಭಿಕ್ಷುಕ ದೈನ್ಯತೆಯಿಂದ ಬೇಡುವಾಗ “ದಾನ” ಎಂದರ್ಥ. “ವೃದ್ಧಾಪ್ಯದಲ್ಲಿ ತಂದೆತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಧರ್ಮ” ಎನ್ನುವಾಗ “ಕರ್ತವ್ಯ ಹೀಗೆ ದೈನಂದಿನ ವ್ಯವಹಾರಗಳಲ್ಲಿ ನಾನಾ ಅರ್ಥದಲ್ಲಿ “ಧರ್ಮ” ಎಂಬ ಪದವು ಬಳಕೆಯಲ್ಲಿರುವುದನ್ನು ನೋಡುತ್ತೇವೆ.

ಮಹಾಭಾರತದ ವನಪರ್ವದಲ್ಲಿ ಯುಧಿಷ್ಠಿರನು ಧರ್ಮವನ್ನು ಕುರಿತು ಹೇಳುವ ಮಾತು: “ಧರ್ಮಸ್ಯ ತತ್ತ್ವಂ ನಿಹಿತಂ ಗುಹಾಯಾಂ, ಮಹಾಜನೋ ಯೇನ ಗತಃ ಸ ಪಂಥಾಃ” ಅಂದರೆ ಧರ್ಮ ನಿಗೂಢವಾದುದು, ಜಟಿಲವಾದುದು. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಶಾಸ್ತ್ರಗ್ರಂಥಗಳು ಏನು ಹೇಳುತ್ತವೆ. ಎನ್ನುವುದಕ್ಕಿಂತ ಸತ್ಪುರುಷರು ನಡೆದು ತೋರಿಸಿದ ದಾರಿಯೇ ನಿಜವಾದ ಧರ್ಮ. ಅನುಕರಣೀಯವಾದ ಮಾರ್ಗ ಎಂಬುದು ಧರ್ಮರಾಯನ ನಿಲುವು. ಷಡ್ದರ್ಶನಗಳಲ್ಲಿ ಒಂದಾದ ವೈಶೇಷಿಕ ದರ್ಶನದ ಕಣಾದ ಮಹರ್ಷಿಗಳು ತಮ್ಮ ವೈಶೇಷಿಕ ಸೂತ್ರದಲ್ಲಿ ಧರ್ಮವನ್ನು ಕುರಿತು “ಯತೋಭ್ಯುದಯ-ನಿಃಶ್ರೇಯಸ-ಸಿದ್ಧಿಃ ಸ ಧರ್ಮ” ಎಂದು ಸೂತ್ರಬದ್ಧವಾಗಿ ಹೇಳಿದ್ದಾರೆ. ಅಂದರೆ ಯಾವುದು ಇಹದ ಅಭ್ಯುದಯಕ್ಕೆ ಮತ್ತು ಪರದ ನಿಃಶ್ರೇಯಸ್ಸಿಗೆ ಕಾರಣವೋ ಅದು ಧರ್ಮ ಎಂದು ಇದರ ಅರ್ಥ. 

“ವೇದೋ ಹಿ ಧರ್ಮಸ್ಯ ಮೂಲಮ್” (ವೇದವೇ ಧರ್ಮದ ಮೂಲ) ಎಂದು ಧರ್ಮಶಾಸ್ತ್ರ ಗ್ರಂಥಗಳು ಹೇಳಿದರೆ ಅದನ್ನು ಪರಿಷ್ಕರಿಸಿ “ದಯವೇ ಧರ್ಮದ ಮೂಲವಯ್ಯಾ” ಎಂದು ಬಸವಣ್ಣನವರು ಪ್ರತಿಪಾದಿಸುತ್ತಾರೆ. ಯಜ್ಞಯಾಗಾದಿಗಳಲ್ಲಿ ಪ್ರಾಣಿಬಲಿ ಕೊಡುವುದು (ಸ್ವರ್ಗಕಾಮೋ ಯಜೇತ, ಪಶುಮಾಲಭೇತ) ಇತ್ಯಾದಿ ವೇದವಿಹಿತವಾದ್ದರಿಂದ ಹಿಂಸೆ ಯಾಗುವುದಿಲ್ಲ ಎಂದು ಷಡ್ದರ್ಶನಗಳಲ್ಲಿ ಒಂದಾದ ಪೂರ್ವಮೀಮಾಂಸಾ ದರ್ಶನವು ಪ್ರತಿಪಾದಿಸಿದರೆ “ದಯವಿಲ್ಲದ ಧರ್ಮ ಅದಾವುದಯ್ಯಾ?” ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. “ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು, ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು!... ಕೊಂದವರುಳಿದರೇ ಕೂಡಲಸಂಗಮದೇವಾ?” ಎಂದು ಬದುಕಿನ ವಾಸ್ತವತೆಯನ್ನು ತೋರಿಸಿದ್ದಾರೆ. “ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತೇ ಅಳು ಕಂಡಾ! ವೇದವನೋದಿದವರ ಮುಂದೆ ಅಳು ಕಂಡಾ! ಶಾಸ್ತ್ರವ ಕೇಳಿದವರ ಮುಂದೆ ಅಳು ಕಂಡಾ! ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲ ಸಂಗಮದೇವ!” ಎಂದು ಆ ಮೂಕ ಪ್ರಾಣಿಗಳಿಗೆ ಅನುಕಂಪೆ ತೋರಿಸಿ “ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ” ಎಂಬ ಮಾನವೀಯ ಭಾವನೆಯನ್ನು ಮಿಡಿದಿದ್ದಾರೆ. ಇನ್ನು ಉಪನಿಷತ್ತುಗಳಲ್ಲಿ ಬರುವ ಶಾಂತಿ ಮಂತ್ರಗಳಂತೂ ವಿಶ್ವಕುಟುಂಬಿತ್ವದ ಸಂವಿಧಾನ: 

ಓಂ ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ| 
ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಭಾಗ್ ಭವೇತ್ || 
ಓಂ ಶಾಂತಿಃ, ಶಾಂತಿಃ, ಶಾಂತಿಃ |

ಈ ಶಾಂತಿ ಮಂತ್ರ ಇಡೀ ಮನುಕುಲದ ಒಳಿತನ್ನು ಹಾರೈಸಿದೆಯೇ ಹೊರತು ಯಾವುದೇ ನಿರ್ದಿಷ್ಟ ಜಾತಿಯ ಜನರಿಗೆ ಸುಖವಾಗಲಿ ಎಂದು ಹಾರೈಸಿಲ್ಲ. ಋಗ್ವೇದದ ಪುರುಷ ಸೂಕ್ತದಲ್ಲಿ ಬಳಸಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಪದಗಳು ಜಾತಿ ಸೂಚಕಗಳಲ್ಲ. ಸಾಸಿರ ತಲೆ, ಸಾಸಿರ ಮುಖ, ಸಾಸಿರ ಕಣ್ಣು ಸಾಸಿರ ಕೈ, ಸಾಸಿರ ಪಾದಗಳುಳ್ಳ ಅಂದರೆ ಸರ್ವಜ್ಞ (omniscient), ಸರ್ವವ್ಯಾಪಿ (omnipresent), ಸರ್ವಶಕ್ತನಾದ (omnipotent) ವಿರಾಟ್ ಪುರುಷ ವಿಶ್ವಾತ್ಮನನ್ನು ಕುರಿತು ಮಾಡಿದ ವರ್ಣನೆ. ಬ್ರಾಹ್ಮಣರನ್ನು ತಲೆಗೂ ಶೂದ್ರರನ್ನು ಪಾದಕ್ಕೂ ಮಾಡಿದ ಹೋಲಿಕೆ ಮೇಲು ಕೀಳೆಂಬ ತಾರತಮ್ಯದಿಂದ ಅಲ್ಲ. ಅನಾದರಣೆಯಿಂದ ಪಾದಗಳಿಗೆ ಹೋಲಿಸಿದ್ದರೆ ತಲೆಬಾಗಿಸಿ ಪಾದಗಳನ್ನು ಮುಟ್ಟಿ ನಮಸ್ಕರಿಸುವ ಗೌರವ ಭಾವನೆ ಹೇಗೆ ಬರುತ್ತಿತ್ತು? ಆರೋಗ್ಯಕರವಾದ ಶರೀರದಲ್ಲಿ ಎಲ್ಲ ಅಂಗಾಂಗಗಳೂ ಮುಖ್ಯ. ಅವು ತಮ್ಮದೇ ಆದ ಕಾರ್ಯನಿರ್ವಹಣೆಯ ವೈಶಿಷ್ಟ್ಯವನ್ನು ಪಡೆದಿರುತ್ತವೆ. ಒಂದು ಮಾಡುವ ಕೆಲಸವನ್ನು ಮತ್ತೊಂದು ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಅವು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಿದಾಗಲೇ ಮನುಷ್ಯ ಆರೋಗ್ಯಕಾಯನಾಗಿ ಇರಲು ಸಾಧ್ಯ. ಹಾಗೆಯೇ ವಿವಿಧ ವೃತ್ತಿಗಳನ್ನು ಒಳಗೊಂಡ ಜನರು ಭಾವೈಕ್ಯದ ಬೆಸುಗೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಆರೋಗ್ಯಕರವಾದ ಆದರ್ಶ ಸಮಾಜ ರೂಪುಗೊಳ್ಳಲು ಸಾಧ್ಯ. 

ಆದರೆ ಹಿಮಗಿರಿಯಿಂದ ಹರಿದು ಬರುವ ಪರಿಶುಭ್ರ ಗಂಗೆಯು ಕ್ರಮೇಣ ಮಲಿನಗೊಂಡಂತೆ ಶ್ರೇಣೀಕೃತ ಸಮಾಜ ರೂಪುಗೊಂಡು ಮೇಲು-ಕೀಳೆಂಬ ದುರ್ಭಾವನೆ ಮೈದಾಳಿದಾಗ “ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾದ್ ದ್ವಿಜ ಉಚ್ಯತೇ” ಎಂದು ಪರಿಮಾರ್ಜನೆಗೊಳಿಸುವ ಪ್ರಯತ್ನ ನಡೆಯಿತು. ಸಮಾಜದಲ್ಲಿ ಎಲ್ಲ ಜನಾಂಗದವರು ಸಹೋದರ ಭಾವದಿಂದ ಸಹಬಾಳ್ವೆ ಮಾಡುವುದೇ ಇಂದಿಗೆ ಬೇಕಾದ ಧರ್ಮ. ಅರ್ಧ ಶತಮಾನದ ಹಿಂದೆ ನಮ್ಮ ಪರಮಾರಾಧ್ಯ ಗುರುವರ್ಯರು ಭರಮಸಾಗರದಲ್ಲಿ ಮಸೀದಿಯನ್ನು ಉದ್ಘಾಟಿಸಿದ ಪ್ರಸಂಗವು ಇದಕ್ಕೆ ಮೇಲ್ಪಂಕ್ತಿಯಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 24 ರಂದು ಸಹಸ್ರಾರು ಭಕ್ತರು ಸೇರುವ ಪರಮಪೂಜ್ಯರ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಕೇಳದೇ ಇದ್ದರೂ ಸಿರಿಗೆರೆ ಸಮೀಪದ ಗೌರಮ್ಮನಹಳ್ಳಿ ಯಲ್ಲಿರುವ ಮುಸ್ಲಿಂ ಸಮಾಜದವರಿಂದ ತರಕಾರಿ ಸಮರ್ಪಣೆ. 

ಭಾರತದ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರು “Wings of Fire” (ಬೆಂಕಿಯ ರೆಕ್ಕೆಗಳು) ಎಂಬ ತಮ್ಮ ಆತ್ಮಕಥನದ ಆರಂಭದ ಪುಟಗಳಲ್ಲಿ ನಿರೂಪಿಸಿರುವ ಬಾಲ್ಯಜೀವನದ ಕೆಲವು ಘಟನೆಗಳು ಮನ ಮಿಡಿಯುವಂತಿವೆ. 1939ರಲ್ಲಿ ಎರಡನೇ ಮಹಾಯುದ್ಧ ಆರಂಭವಾದಾಗ ಕಲಾಂ 8ವರ್ಷದ ಹುಡುಗ, ರಾಮೇಶ್ವರದಲ್ಲಿರುವ ಶಿವನ ಗುಡಿ ಅವರ ಮನೆಯಿಂದ ಕಾಲ್ನಡಿಗೆಯಲ್ಲಿ ಕೇವಲ ಹತ್ತೇ ನಿಮಿಷದ ದಾರಿ. ಸುತ್ತಲೂ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಜನಾಂಗದವರೇ ವಾಸವಾಗಿದ್ದರೂ ಅಕ್ಕಪಕ್ಕದಲ್ಲಿ ಹಿಂದೂಗಳೂ ಸಹ ವಾಸವಾಗಿದ್ದು ಪರಸ್ಪರ ಅನ್ಯೋನ್ಯವಾಗಿದ್ದರು. ಹತ್ತಿರದಲ್ಲಿಯೇ ಇದ್ದ ಮಸೀದಿಗೆ ತಂದೆ ಜೈನುಲ್ಲಾಬ್ದೀನ್ ನಿತ್ಯವೂ ಸಂಜೆ ನಮಾಜು ಮಾಡಲು ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಬಾಲಕ ಕಲಾಂ ಮಸೀದಿಗೆ ಹೋದಂತೆ ರಾಮೇಶ್ವರ ಗುಡಿಗೂ ತನ್ನ ಸಂಬಂಧಿ ಅಹಮದ್ ಜಲಾಲುದ್ದೀನ್ ಜೊತೆಗೆ ಹೋಗಿ ಎಲ್ಲ ಭಕ್ತರಂತೆ ಗುಡಿಯ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದರು. ಗುಡಿಯಲ್ಲಿ ಮಾಡುವ ಪ್ರಾರ್ಥನೆ, ಮಸೀದಿಯಲ್ಲಿ ಮಾಡುವ ನಮಾಜು ಎರಡೂ ಒಬ್ಬನೇ ದೇವರಿಗೆ ಸಲ್ಲುತ್ತದೆಯೆಂಬ ಬಲವಾದ ನಂಬಿಕೆ ಎಳೆಯ ಹೃದಯದಲ್ಲಿಯೇ ಬೇರೂರಿತ್ತು.

ಅಬ್ದುಲ್ ಕಲಾಂ ರಾಮೇಶ್ವರದ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅವರಿಗೆ ಆತ್ಮೀಯರಾಗಿದ್ದ ಬಾಲ್ಯಸ್ನೇಹಿತರೆಂದರೆ ರಾಮನಾಥ ಶಾಸ್ತ್ರಿ ಅರವಿಂದನ್ ಮತ್ತು ಶಿವಪ್ರಕಾಶನ್. ಈ ಮೂವರೂ ಹಿಂದೂ ಬ್ರಾಹ್ಮಣ ಸಂಪ್ರದಾಯದವರಾಗಿದ್ದು ಕಲಾಂ ಮುಸ್ಲಿಮರಾಗಿದ್ದರೂ ಎಳೆ ವಯಸ್ಸಿನವರಾದ ಆ ಬಾಲಕರಲ್ಲಿ ಯಾವ ಭೇದ ಭಾವವೂ ಇರಲಿಲ್ಲ. ತರಗತಿಯಲ್ಲಿ ಕಲಾಂ ಯಾವಾಗಲೂ ಮುಂದಿನ ಬೆಂಚಿನಲ್ಲಿ ಗೆಳೆಯ ರಾಮನಾಥ ಶಾಸ್ತ್ರಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ಬ್ರಾಹ್ಮಣ ಹುಡುಗನಾದ ರಾಮನಾಥ ಶಾಸ್ತ್ರಿಯ ಎದೆಯ ಮೇಲೆ ಜನಿವಾರ, ಮುಸ್ಲಿಂ ಹುಡುಗನಾದ ಕಲಾಂ ತಲೆಯ ಮೇಲೆ ಟೋಪಿ. ಹೊಸದಾಗಿ ಬಂದ ಸಂಪ್ರದಾಯಸ್ಥ ಯುವ ಶಿಕ್ಷಕರೊಬ್ಬರು ತರಗತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಮೊದಲನೆಯ ಬೆಂಚಿನಲ್ಲಿ ಬ್ರಾಹ್ಮಣ ಹುಡುಗನ ಪಕ್ಕದಲ್ಲಿ ಮುಸ್ಲಿಂ ಹುಡುಗ ಕುಳಿತಿರುವುದನ್ನು ನೋಡಿ ಅಸಹನೆಯಿಂದ ಕೆಂಡಾಮಂಡಲವಾದರು. ಕೂಡಲೇ ಹಿಂದಿನ ಬೆಂಚಿಗೆ ಹೋಗು ಎಂದು ಗದರಿಸಿದರು. ಬಾಲಕ ಕಲಾಂ ಮರುಮಾತನಾಡದೆ ದುಃಖಿತನಾಗಿ ಮೇಲೆದ್ದು ಹಿಂದಿನ ಬೆಂಚಿಗೆ ಹೋಗುವಾಗ ಗೆಳೆಯ ರಾಮನಾಥ ಶಾಸ್ತ್ರಿಯ ಕಣ್ಣಲ್ಲಿ ನೀರು! ತನಗಾಗಿ ಕಣ್ಣೀರು ಸುರಿಸುತ್ತಿದ್ದ ಆ ಗೆಳೆಯನ ಮುಖವನ್ನು ನೋಡಿ ಕಲಾಂರವರ ಹೃದಯ ಆದ್ರ್ರಗೊಂಡಿತ್ತು! 

ಶಾಲೆಯಿಂದ ಸಂಜೆ ಮನೆಗೆ ಹಿಂದಿರುಗಿದ ಮೇಲೆ ಇಬ್ಬರೂ ನಡೆದ ಘಟನೆಯನ್ನು ಅವರವರ ತಂದೆಗೆ ವಿವರಿಸಿದರು. ರಾಮನಾಥ ಶಾಸ್ತ್ರಿಯ ತಂದೆ ರಾಮೇಶ್ವರ ಗುಡಿಯ ಪ್ರಧಾನ ಅರ್ಚಕರಾಗಿದ್ದ ಲಕ್ಷ್ಮಣ ಶಾಸ್ತ್ರಿಯವರು. ಅವರು ಕೂಡಲೇ ಆ ಅಧ್ಯಾಪಕನನ್ನು ತಮ್ಮ ಮನೆಗೆ ಕರೆಸಿದರು. ಇಬ್ಬರೂ ಮಕ್ಕಳ ಎದುರಿನಲ್ಲಿ ವಿಚಾರಣೆ ನಡೆಸಿದರು. ಈ ರೀತಿ ಸಾಮಾಜಿಕ ಅಸಮಾನತೆ ಮತ್ತು ಮತೀಯ ದುರ್ಭಾವನೆಗಳ ವಿಷಬೀಜವನ್ನು ಎಳೆಯ ಮಕ್ಕಳ ಮನಸ್ಸಿನಲ್ಲಿ ಬಿತ್ತಬಾರದೆಂದು ತರಾಟೆಗೆ ತೆಗೆದುಕೊಂಡರು. ಹೀಗೆ ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳು ಇಲ್ಲವೇ ರಾಜಿನಾಮೆ ಕೊಟ್ಟು ಹೊರಟುಹೋಗು ಎಂದು ಗದರಿಸಿದರು! ಯುವ ಅಧ್ಯಾಪಕ ವಿಷಾದ ವ್ಯಕ್ತಪಡಿಸಿದ. ಅಂತಹ ತಪ್ಪನ್ನು ಮುಂದೆಂದೂ ಮಾಡುವುದಿಲ್ಲವೆಂದು ಹೇಳಿ ಪರಿವರ್ತನೆಗೊಂಡ. ಇದೇ ಸನಾತನ ಧರ್ಮದ ತಿರುಳು! ಸ್ವತಂತ್ರ ಪೂರ್ವದ ಆ ದಿನಮಾನಗಳಲ್ಲಿ ನಡೆದ ಈ ಘಟನೆ ಈಗ ನಡೆದಿದ್ದರೆ ಏನಾಗುತ್ತಿತ್ತು! “ಸರ್ವ ಜನಾಂಗದ ಶಾಂತಿಯ ತೋಟವಾದ” ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ತದ್ವಿರುದ್ಧವಾಗಿ ನಾಗರೀಕರ ಧಾರ್ಮಿಕ ಭಾವನೆಗಳಿಗೆ ಕಿಚ್ಚಿಟ್ಟು ಕಿತ್ತಾಡುವಂತೆ ಮಾಡುತ್ತಿರುವವರು ಯಾರು? ಏತಕ್ಕಾಗಿ?

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.21-9-2023.