ಸರಳತೆಯ ಸಾಕಾರ ಮೂರ್ತಿ: ಲಿಂಗೈಕ್ಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

  •  
  •  
  •  
  •  
  •    Views  

ಲಿಂಗೈಕ್ಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳವರ 31ನೆಯ ವರ್ಷದ ಪುಣ್ಯ ಸ್ಮರಣೆಯ ಶ್ರದ್ಧಾಂಜಲಿ ಕಾರ್ಯಕ್ರಮ ಆಚರಿಸಿರುವ ಸಂದರ್ಭದಲ್ಲಿ ಅವರ ಕುರಿತು ಒಂದೆರಡು ಘಟನೆಗಳನ್ನು ಓದುಗರ ಗಮನಕ್ಕೆ ತರಲು ಇಚ್ಚಿಸುತ್ತೇನೆ.

ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರವರನ್ನು ಹತ್ತಿರದಿಂದ ಕಂಡು ಅವರೊಂದಿಗೆ ಬಾಲಕನಾಗಿದ್ದಾಗ ಮಾತನಾಡಿದ ಮತ್ತು ಮಾತೃ ವಾತ್ಸಲ್ಯವನ್ನು ಅನುಭವಸಿದ ಲಕ್ಷಾಂತರ ಭಕ್ತಾದಿಗಳಂತೆ ನನಗೂ ಅಂತಹ ಅನುಭವ ಆಗಿರುವುದನ್ನು ನೆನೆದಾಗ ಅನೇಕ ಬಾರಿ ಭಾವೋದ್ವೇಗಕ್ಕೆ ಒಳಗಾಗಿ ಮಾಡಿ ಮಾತು ಹೊರಡದಂತಾಗುತ್ತದೆ. ಮನಸ್ಸು ಮೌನವಾಗುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದುಗ್ಗಾಣಿ ಮಠವೆಂದು ಕರೆಸಿಕೊಳ್ಳುತ್ತಿದ್ದ ತರಳಬಾಳು ಶ್ರೀ ಮಠವನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯ ಶಕ್ತಿ ಕೇಂದ್ರವನ್ನಾಗಿ ಬೆಳೆಸಿದ ಕೀರ್ತಿ ಹಿರಿಯ ಜಗದ್ಗುರುಗಳವರಿಗೆ ಸಲ್ಲುತ್ತದೆ.

ಬಡವರು, ದಿಕ್ಕು ದೆಸೆ ಇಲ್ಲದವರ ನೋವಿಗೆ ಸದಾ ಸ್ಪಂದಿಸುತ್ತಿದ್ದ ಕರುಣಾಮಯಿ. ಸಾವಿರಾರು ಭಕ್ತಾದಿಗಳನ್ನು ಗುರುಗಳು ಜಾತಿ, ಮತ ಎಣಿಸದೆ ಓದು, ನೌಕರಿ ಇತ್ಯಾದಿ ಸಹಾಯ ಮಾಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿದ್ದರು. ಅವರೆಲ್ಲರ ಏಳಿಗೆಯನ್ನು ಕಂಡು ಸಂತೋಷಪಡುತ್ತಿದ್ದ ಅಪರೂಪದ ವ್ಯಕ್ತಿತ್ವದ ಶಕ್ತಿ ರೂಪವೇ ಹಿರಿಯ ಜಗದ್ಗುರುಗಳು.ತಮಗೆ ಸರಿ ಕಾಣದಿದ್ದರೆ ಯಾವುದೇ ಮುಲಾಜಿಲ್ಲದೆ ಅಷ್ಟೇ ಕಠಿಣವಾಗಿ ವರ್ತಿಸುತ್ತಿದ್ದ ನೇರ ನಡೆಯ ಧೀರತನ.

ಇಡೀ ರಾಜ್ಯ ಮಾತ್ರವಲ್ಲ, ದೇಶವೇ ಸಿರಿಗೆರೆ ಎಂಬ ಕುಗ್ರಾಮವನ್ನು ಬೆರಗಾಗಿ ನೋಡುವಂತೆ ಮಾಡಿದ್ದ ಜಗದ್ಗುರುಗಳು ರಾಜಕೀಯವಾಗಿಯೂ ಶ್ರೀಮಠವನ್ನು ಅಷ್ಟೇ ಪ್ರಬಲ ಶಕ್ತಿ ಕೇಂದ್ರವನ್ನಾಗಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ರಾಜ್ಯ ಮಾತ್ರವಲ್ಲ, ದೇಶವೇ ಸಿರಿಗೆರೆ ಎಂಬ ಕುಗ್ರಾಮವನ್ನು ಬೆರಗಾಗಿ ನೋಡುವಂತೆ ಮಾಡಿದ್ದ ಜಗದ್ಗುರುಗಳು ರಾಜಕೀಯವಾಗಿಯೂ ಶ್ರೀಮಠವನ್ನು ಅಷ್ಟೇ ಪ್ರಬಲ ಶಕ್ತಿ ಕೇಂದ್ರವನ್ನಾಗಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಸರಕಾರದ ಸಹಾಯವಿಲ್ಲದೆ ತಾವೇ ಖುದ್ದಾಗಿ ನಿಂತು ಶಾಲಾ ಶಿಕ್ಷಕರುಗಳು ಮತ್ತು ವಿದ್ಯಾರ್ಥಿ ಗಳೊಂದಿಗೆ ಶಾಲೆಯನ್ನು ಕಟ್ಟಿ ನಿರ್ಮಿಸಿದ್ದನ್ನು ಆಗ ಶಿಕ್ಷರಾಗಿದ್ದ ನಮ್ಮ ತಂದೆ ಲಿಂಗೈಕ್ಯ ಜಿ.ದುಗ್ಗಪ್ಪನವರು ಆಗಾಗ ಜ್ಞಾಪಿಸಿಕೊಳ್ಳುತ್ತಿದ್ದರು.

ಭಾರತ ಸೇವಾದಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡ ಈ ಶೈಕ್ಷಣಿಕ ಸುಧಾರಣೆಯ ಕ್ರಮಗಳು ದೇಶಾದ್ಯಂತ ವಾರ್ತಾ ಇಲಾಖೆ ಮೂಲಕ ಗಮನ ಸೆಳೆದಿತ್ತು.ಆಗ ಸಿನಿಮಾ ಮಂದಿರಗಳಲ್ಲಿ ಚಲನ ಚಿತ್ರ ಪ್ರದರ್ಶನಕ್ಕೆ ಮುನ್ನ ಸಿರಿಗೆರೆ ಶ್ರೀ ಮಠದ ಈ ಸನ್ನಿವೇಶ ವಾರ್ತಾ ಇಲಾಖೆ ಮೂಲಕ ಬಿತ್ತರವಾಗುತ್ತಿತ್ತಂತೆ. ಹಾಗಾಗಿಯೇ ಇಡೀ ಕರ್ನಾಟಕದಲ್ಲಿ ಸಿರಿಗೆರೆ ಮಠವೆಂದರೆ ಅತ್ಯಂತ ಪ್ರಭಾವಿ ಮಠವೆಂದೇ ಖ್ಯಾತಿ ಗಳಿಸಿದ್ದ ಕಾಲ. ಸಿರಿಗೆರೆ ಮಠವೆಂದರೆ ರಾಜಕೀಯ ಮಠವೆಂದೇ ಬಿಂಬಿತವಾಗಿತ್ತು. ಚುನಾವಣೆಗಳಲ್ಲಿ ಗುರುಗಳು ಯಾರನ್ನು ಬೆಂಬಲಿಸುತ್ತಾರೋ ಅವರೇ ಗೆದ್ದು ಬರುತ್ತಿದ್ದರು. ಚುನಾವಣೆಗೆ ನಿಂತ ಅಭ್ಯರ್ಥಿಯನ್ನು ಗೆಲ್ಲಿಸುವುದು ಮತ್ತು ಸೋಲಿಸುವುದು ಗುರುಗಳಿಗೆ ತಿಳಿದಿತ್ತು.

ಚಿತ್ರದುರ್ಗದ ಪ್ರಬಲ ರಾಜಕಾರಿಣಿಯಾಗಿದ್ದ ಆಗ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರನ್ನು ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಲೇಬೇಕೆಂಬ ಕಾರಣದಿಂದ ಅವರ ವಿರುದ್ಧ ಪ್ರಬಲರಲ್ಲದ ಜಿ.ಟಿ.ರಂಗಪ್ಪ ಎಂಬುವರನ್ನು ಗೆಲ್ಲಿಸಿ ಚರಿತ್ರೆ ನಿರ್ಮಾಣ ಮಾಡಿದ್ದರು.ರಾಜಕೀಯವಾಗಿ 1952 ರಿಂದಲೇ ಜಗಳೂರು ಜೆ.ಮೊಹಮ್ಮದ್ ಇಮಾಮ್ ಸಾಬ್, ಎಚ್.ಸಿದ್ದವೀರಪ್ಪ, ಕೊಂಡಜ್ಜಿ ಬಸಪ್ಪ, ಜಿ.ಶಿವಪ್ಪ, ಜಿ.ದುಗ್ಗಪ್ಪ, ಮಾರ್ಗದ ಮಲ್ಲಪ್ಪ, ಎನ್.ಜಿ. ಹಾಲಪ್ಪ, ಮುಂತಾದವರನ್ನು ನಿರಾಯಾಸವಾಗಿ ಗೆಲ್ಲಿಸುತ್ತಿದ್ದರು.

ಅವರ ಸನ್ಯಾಸ ಜೀವನ ಮುಳ್ಳಿನ ಹಾದಿ. ಯಾವಾಗಲೂ ಅಲೆಗಳ ವಿರುದ್ಧ ಈಜಿದ ಗುರುಗಳು ತಮಗೆ ಬಂದ ತೊಂದರೆ ಅಡಚಣೆಗಳನ್ನೇ ಮೆಟ್ಟಿಲುಗಳನ್ನಾಗಿ ಸ್ವೀಕರಿಸಿ ನುಡಿದಂತೆ ನಡೆದು ಶ್ರೀಮಠದ ಶಿಷ್ಯ ಕೋಟಿಯನ್ನು ಕಾಯಕದಲ್ಲಿ ತೊಡಗಿಸಿ ದುಡಿಯುವ ಮಠವನ್ನಾಗಿ ಪರಿವರ್ತಿಸಿ ಬೆಳೆಸಿದ ಕೀರ್ತಿ ಹಿರಿಯ ಜಗದ್ಗುರುಗಳಿಗೆ ಸಲ್ಲುತ್ತದೆ.

ಸಮಾಜದ ಹಿರಿಯ ಗಣ್ಯರಾಗಿದ್ದ ಲಿಂಗೈಕ್ಯ ಎಸ್.ಆರ್.ಮಲ್ಲಪ್ಪ (ಸಿರುಮ) ಅವರ ಅಭಿಪ್ರಾಯದಂತೆ ದಸರಾ ಉತ್ಸವದ ಮಾದರಿಯಲ್ಲಿ “ತರಳಬಾಳು” ಪರಂಪರೆಯ ಹೆಸರಿನಿಂದಲೇ ಚರಿತ್ರಾರ್ಹವಾದ “ತರಳಬಾಳು ಹುಣ್ಣಿಮೆ” ಮಹೋತ್ಸವವನ್ನು 1950ರ ದಶಕದಿಂದಲೇ ಪ್ರಾರಂಭ ಮಾಡಿ ಅವ್ಯಾಹತವಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ರೀ ಮಠದ ಇತಿಹಾಸದ ದಾಖಲೆ.

ಕಾಶಿಯಲ್ಲಿ ತಮ್ಮ ವಿದ್ಯಾಗುರುಗಳಾದ ಗೌರಿನಾಥ್ ಪಾಠಕ್ (ಕುಳಿತಿರುವವರು) ಅವರೊಂದಿಗೆ ಹಿರಿಯ ಜಗದ್ಗುರುಗಳವರು (ಬಲಭಾಗದಲ್ಲಿ ಬಿಳಿಕೋಟು ಧಾರಿ)

ಒಮ್ಮೆ ನೂರಾರು ಭಕ್ತಾದಿಗಳೊಂದಿಗೆ ಕಾಶಿಗೆ ದಯಮಾಡಿಸಿದ್ದ ಹಿರಿಯ ಜಗದ್ಗುರುಗಳು ತಮ್ಮ ಪೂರ್ವಾಶ್ರಮದ ವಿದ್ಯಾರ್ಥಿ ದೆಸೆಯಲ್ಲಿ ಸಂಸ್ಕೃತ ಪಾಠವನ್ನು ಕಲಿಸಿದ್ದ ಗೃಹಸ್ಥರಾಗಿದ್ದ ಗೌರಿನಾಥ್ ಪಾಠಕ್ ಎಂಬ ಶಿಕ್ಷಕರನ್ನು ಕಾಣಲು ಭಕ್ತಾದಿಗಳನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದರಂತೆ.ಆಗ ಸಂಸ್ಕೃತ ಶಿಕ್ಷಕರನ್ನು ಕಂಡೊಡನೆ ಹಿರಿಯ ಜಗದ್ಗುರುಗಳು “ತಾವೊಬ್ಬ ಕರ್ನಾಟಕದ ಉತ್ತುಂಗದ ಸ್ಥಿತಿಯಲ್ಲಿದ್ದ ಪ್ರಭಾವಶಾಲಿ ಮಠದ ಪೀಠಾಧಿಪತಿ” ಗಳೆನ್ನುವುದನ್ನು ಗಣನೆಗೆ ತೆಗೆದುಕೊಳ್ಳದೆ ವಿನೀತ ಭಾವದಿಂದ ಗೃಹಸ್ಥ ಶಿಕ್ಷಕ ಗೌರಿನಾಥ್ ಪಾಠಕ್ ದಂಪತಿಗಳ ಪಾದಗಳಿಗೆ ಭಕ್ತಿ ಪೂರ್ವಕವಾಗಿ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿದ ಘಟನೆಯನ್ನು ಕಂಡ ಎಲ್ಲಾ ಭಕ್ತಾದಿಗಳಿಗೆ ಆಶ್ಚರ್ಯವಾಯಿತಂತೆ!. ಹಿರಿಯ ಜಗದ್ಗುರುಗಳ ಈ ಸರಳ ಸಾತ್ವಿಕ ಮಾರ್ಗದ ಗುರು ಭಕ್ತಿಯ ಘಟನೆಯನ್ನು ನೋಡಿದ ತಮಗೂ ಜೀವನದಲ್ಲಿ ಇಂತಹ ವಿಶೇಷ ವ್ಯಕ್ತಿತ್ವದ ಪರಮ ಪೂಜ್ಯರ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಿದೆ.

ಇಂತಹ ಅಪರೂಪದ ಮಹಾನ್ ಚೇತನ ಹಿರಿಯ ತರಳಬಾಳು ಜಗದ್ಗುರುಗಳ ಕರಕಮಲ ಸಂಜಾತರಾದ ಪರಮ ಪೂಜ್ಯ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳವರು ಹಿರಿಯ ಜಗದ್ಗುರುಗಳವರ ಕನಸನ್ನು ಅತ್ಯಂತ ಯಶಸ್ವಿಯಾಗಿ ನನಸು ಮಾಡುತ್ತಿದ್ದು ದೇಶ ವಿದೇಶಗಳಲ್ಲಿ ಬಸವ ತತ್ವಗಳ ಪ್ರಚಾರ, ಆಧುನಿಕ ತಂತ್ರಜ್ಞಾನ ಬಳಸಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಚರಿತ್ರಾರ್ಹ ಕಾರ್ಯ ಇಂದು ಇಡೀ ದೇಶದ ಗಮನ ಸೆಳೆಯುವಂತಾಗಿದೆ.

ಮುಂದಿನ ದಿನ ಮಾನಗಳಲ್ಲಿ ಇನ್ನಿತರ ರಾಜ್ಯಗಳಿಗೂ ಸಹ ಇದೇ ಮಾದರಿಯ ಪರಮ ಪೂಜ್ಯರ ಈ ಯೋಜನೆ ಜಾರಿಗೆ ಬಂದು ರೈತರ ಬಾಳು ಬೆಳಕಾಗಿ ದೇಶದ ಕೃಷಿಗೆ ಮತ್ತಷ್ಟು ಬಲ ನೀಡಿ ತನ್ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮ ವಾಗುವುದರಲ್ಲಿ ಸಂಶಯವಿಲ್ಲ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಯಾಗುವುದಾಗಿ ಮನಗಂಡಿರುವ ಪೂಜ್ಯರು ಹಳ್ಳಿಗಾಡಿನ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನ ದಾಸೋಹ, ದುಡಿಯುವ ಕೈಗೆ ಕೆಲಸ, ಸದ್ಧರ್ಮ ನ್ಯಾಯ ಪೀಠದ ತೀರ್ಪುಗಳು, ಹತ್ತು ಹಲವಾರು ಸಮಾಜೋದ್ದಾರಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಶ್ರೀಮಠ ಬಸವ ತತ್ವಗಳನ್ನು ನಿಜ ಅರ್ಥದಲ್ಲಿ ಆಚರಣೆಗೆ ತಂದಿದ್ದು ಲಕ್ಷಾಂತರ ಮಂದಿ ಶ್ರೀಮಠದ ಸಹಾಯದಿಂದ ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವಂತಾಗಿರುವುದು ಹೆಗ್ಗಳಿಕೆಯಾಗಿದೆ. ಹಾಗಾಗಿಯೇ ಮಠಗಳ ಪರಂಪರೆಯಲ್ಲಿ ಸಿರಿಗೆರೆಗೆ ಇಂದಿಗೂ ಅಗ್ರಸ್ಥಾನವೆಂದರೆ ತಪ್ಪಾಗಲಾರದು.

ಲೇಖನ: ಡಿ.ಪ್ರಸನ್ನ ಕುಮಾರ್,
ಬೆಂಗಳೂರು.