ಫ್ಲೋರಿಡಾ(ಯು.ಎಸ್.ಎ)ದ ಪ್ರೊ. ಗಿಲ್ ಬೆನ್ – ಹೆರೂತ್ ಅವರೊಂದಿಗೆ ಶ‍್ರೀ ತರಳಬಾಳು ಜಗದ್ಗುರುಗಳವರಿಂದ ಸಂವಾದ ಕಾರ್ಯಕ್ರಮ

  •  
  •  
  •  
  •  
  •    Views  

ಸಿರಿಗೆರೆ ಅ.10: ಫ್ಲೋರಿಡಾ (ಯು.ಎಸ್.ಎ)ದ  ಪ್ರೊ.ಗಿಲ್ ಬೆನ್-ಹೆರೂತ್ ರವರು ಸಿರಿಗೆರೆಯ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ "ಕನ್ನಡ ಸಾಹಿತ್ಯ ಸಂಶೋಧನೆ" ಹಾಗೂ ಹರಿಹರನ ರಗಳೆಗಳ ಬಗ್ಗೆ ಕುರಿತು ಸಂವಾದ ನಡೆಸಿದರು. 

ಈ ಸಂವಾದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಿದ್ದರು.

ಮಂಗಳವಾರ ಒಂದು ಅವಿಸ್ಮರಣೀಯ ದಿನ. ಪ್ಲೊರಿಡಾ ವಿಶವ್ವಿದ್ಯಾಲಯದ ಕನ್ನಡ ಪೀಠದ ಡಾ. ಗಿಲ್ ಹೆರೂತ್ ಸಿರಿಗೆರೆಗೆ ಆಗಮಿಸಿದ ಸಂದರ್ಭದಲ್ಲಿ  ಕನ್ನಡದ ಅಪೂರ್ವ ಜ್ಞಾನನಿಧಿಯಾದ ಶಿವಶರಣರ 22 ಸಾವಿರ ವಚನಗಳನ್ನು ಅಂತರ್ಜಾಲಕ್ಕೆ ಅಳವಡಿಸಿದ  ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರೊಂದಿಗೆ ವಚನ ಸಾಹಿತ್ಯದ ಬಗ್ಗೆ ದೀರ್ಘಕಾಲ ಸಂವಾದ ನಡೆಸಿದರು. 

ತುಂಬಾ ವೀಶೇಷವಾಗಿ ವಿದೇಶಿಗರೊಬ್ಬರು ಕನ್ನಡ ಸಾಹಿತ್ಯ ಸಂಶೋಧನೆ ಮಾಡಿರುವುದನ್ನು ಶ್ರೀಗಳವರು ಮುಕ್ತ ಕಂಠದಿಂದ ಶ್ಲಾಘಿಸಿದರು. ಡಾ.ಗಿಲ್ ಅವರೂ ಸಹ ಕಿಟೆಲ್ ಶಬ್ದಕೋಶವನ್ನು ಅಂತರ್ಜಾಲಕ್ಕೆ ಅಳವಡಿಸಿದ ಮಹಾನುಭಾವರು. ಕನ್ನಡದ ಬಗೆಗಿನ ಅವರ  ಅನನ್ಯ ಪ್ರೀತಿಗೆ ಇದು ಸಾಕ್ಷಿ.  

ಎ.ಕೆ.ರಾಮಾನುಜನ್ ಅವರ “Speaking of Shiva” ಕೃತಿಯಲ್ಲಿನ "ಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡಲಿ ಬಡವನಯ್ಯ" ಎಂಬ ವಚನದ ಸಾಲುಗಳಿಂದ ಪ್ರೇರಿತವಾಗಿ ಕನ್ನಡಕ್ಕೆ ಮನಸೋತವರು. ಮುಂದೆ ಹರಿಹರನ ರಗಳೆಗಳನ್ನು ಕುರಿತು ಸಂಶೋಧನಾ ಪ್ರಬಂಧಕ್ಕೆ ಪಿ.ಎಚ್.ಡಿ ಪಡೆದಿದ್ದಾರೆ. 

ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಇದೊಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವ ಕಾರ್ಯಕ್ರಮವಾಗಿತ್ತು.

ಈ ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ರಂಗನಾಥ್, ಪ್ರಾದೇಶಿಕ ಅಧಿಕಾರಿ ಕೆ.ಈ.ಬಸವರಾಜಪ್ಪ, ಪ್ರಾಚಾರ್ಯ ಶಿವನಗೌಡ ಕೆ.ಸುರಕೋಡ, ಮುಖ್ಯಶಿಕ್ಷಕ ಎಂ.ಎಸ್.ಸೋಮಶೇಖರ್, ಎಂ.ಎನ್.ಶಾಂತಾ, ಕೆ.ರಮೇಶ್, ಅಣ್ಣನ ಬಳಗದ ಆದ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ, ಸ್ಥಳೀಯ ಶಾಲಾ ಕಾಲೇಜುಗಳ ಉಪನ್ಯಾಸಕರು, ಶಿಕ್ಷಕರು, ನೌಕರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.