ಮದ್ಯದ ಅಂಗಡಿಗಳಿಗೆ ಕಡಿವಾಣ ಹಾಕಿ: ಅಬಕಾರಿ ಸಚಿವರಿಗೆ ತರಳಬಾಳು ಶ್ರೀ ಸಲಹೆ

  •  
  •  
  •  
  •  
  •    Views  

ಸಿರಿಗೆರೆ: “ರಾಜ್ಯದಲ್ಲಿ ಹೊಸ ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರ ಮುಂದಾಗುವುದು ಬೇಡ. ಇರುವ ಹಳೆಯ ಅಂಗಡಿಗಳಿಗೆ ಕಡಿವಾಣ ಹಾಕಲು ಮುಂದಾಗಿ” ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸಲಹೆ ನೀಡಿದರು.

ಸದ್ಧರ್ಮ ನ್ಯಾಯಪೀಠದಲ್ಲಿ ಸಚಿವರು ತಮ್ಮ ಪುತ್ರ, ವಿನಯ್ ತಿಮ್ಮಾಪುರ ಅವರೊಂದಿಗೆ ಶ್ರೀಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಸಲಹೆ ನೀಡಿದರು.

“ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಪದ್ಧತಿಯೂ ಬದಲಾಗಬೇಕು. ಮದ್ಯ ಮಾರಾಟಗಾರರು ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಪರವಾನಗಿ ಪಡೆಯಬೇಕು. ವರ್ಷಕ್ಕೊಮ್ಮೆ ಅವು ನವೀಕರಣಗೊಳ್ಳಬೇಕು. ಆ ಅವಧಿಯಲ್ಲಿ ಅಲ್ಲಿಯ ಜನರು ತಮ್ಮೂರಿಗೆ ಮದ್ಯದ ಅಂಗಡಿ ಬೇಡವೆಂದರೆ, ಅಂತಹ ಪರವಾನಗಿಯನ್ನು ರದ್ದು ಮಾಡಬೇಕು” ಎಂದು ತಿಳಿಸಿದರು.

“ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಹಳ್ಳಿಗರ ಬದುಕು ಅಸಹನೀಯವಾಗಿದೆ. ಮಹಿಳೆಯರ ಮೇಲೆ ಇದು ತುಂಬಾ ದುಷ್ಪರಿಣಾಮ ಉಂಟು ಮಾಡುತ್ತಿದೆ. ಕುಟುಂಬ ನಿರ್ವಹಣೆ ಮಾಡುವಲ್ಲಿ ಮಹಿಳೆಯರು ಸಂಕಟದಲ್ಲಿದ್ದಾರೆ. ಆದ್ದರಿಂದ ಮದ್ಯದ ಅಂಗಡಿಗಳ ಮೇಲೆ ನಿಯಂತ್ರಣ ಇರಲಿ” ಎಂದರು.

“ಕೆಲವು ದಶಕಗಳ ಹಿಂದೆ ಮದ್ಯಪಾನ ನಿಷೇಧ ಅಂದೋಲವನ್ನು ಆರಂಭಿಸಿದ್ದೆವು". ಆ ಚಳವಳಿಗೆ ರಾಜ್ಯದ ಎಲ್ಲ ಭಾಗಗಳಲ್ಲಿ ಉತ್ತಮ ಸ್ಪಂದನೆ ದೊರೆತಿತ್ತು. ಬಹುದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಚಳವಳಿಯನ್ನು ಬೆಂಬಲಿಸಿದ್ದರು ಎಂದು ಶ್ರೀಗಳು ಸಚಿವರಿಗೆ ನೆನಪು ಮಾಡಿದರು.

ಹೊಸ ಅಂಗಡಿಗಳಿಲ್ಲ: ಆರ್.ಬಿ. ತಿಮ್ಮಾಪುರ

ಹೊಸದಾಗಿ ಮದ್ಯದ ಅಂಗಡಿಗಳನ್ನು ತೆರೆಯಲು ಪ್ರಸ್ತಾಪ ಬಂದಿದ್ದು ನಿಜ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಮದ್ಯದ ಹೊಸ ಅಂಗಡಿಗಳಿಗೆ ಪರವಾನಗಿ ನೀಡುವುದಿಲ್ಲ. ಪರವಾನಗಿ ನವೀಕರಣದ ವಿಚಾರವಾಗಿ ಶ್ರೀಗಳ ಅಭಿಪ್ರಾಯವನ್ನು ಮುಖ್ಯಮಂತ್ರಿಯೊಂದಿಗೆ ಮಾತನಾಡುವೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

“ರಾಜ್ಯದಲ್ಲಿ ಹದಿಹರೆಯದ ಯುವಕರು, ವಿದ್ಯಾರ್ಥಿಗಳು ಮದ್ಯದ ಹಾವಳಿಗೆ ಬಲಿಯಾಗಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಮದ್ಯ ನಿಷೇಧ ಮಾಡಿದ್ದ ಕೆಲವು ರಾಜ್ಯಗಳಲ್ಲಿ ಮತ್ತೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಉದಾಹರಣೆಗಳು ಇವೆ” ಎಂದು ಸಚಿವರು ತಿಳಿಸಿದರು.

ಸಚಿವ ಆರ್.ಬಿ. ತಿಮ್ಮಾಪುರ ಪುತ್ರನೊಂದಿಗೆ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದರು. ಹೊಳಲ್ಕೆರೆ ಮಾಜಿ ಶಾಸಕ ಎ.ವಿ. ಉಮಾಪತಿ, ಲಕ್ಷ್ಮೀಸಾಗರ ಜಿಪಂ ಸದಸ್ಯ ಕೃಷ್ಣಮೂರ್ತಿ, ಹೊಳಲ್ಕೆರೆ ಯುವ ಕಾಂಗ್ರೆಸ್ ಮುಖಂಡ ರಘು, ಎಂ.ಜಿ. ದೇವರಾಜ್, ಮತ್ತಿತರರು ಹಾಜರಿದ್ದರು.