ಭೂದೇವಿಯು ಬಂಜೆಯಾಗದಿರಲಿ!
ಈ ಜಗತ್ತು ಕಗ್ಗತ್ತಲೆಯಿಂದ ಆವರಿಸಿದೆ. ಆಕಾಶದಲ್ಲಿ ಮಿನುಗುವ ಅಗಣಿತ ಗ್ರಹ ನಕ್ಷತ್ರಗಳು ಇಲ್ಲದೇ ಹೋಗಿದ್ದರೆ ಈ ಜಗತ್ತಿನಲ್ಲಿ ಬರೀ ಕತ್ತಲು ತುಂಬಿರುತ್ತಿತ್ತು. “ತಮಸೋಮಾ ಜ್ಯೋತಿರ್ಗಮಯ...” (ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿ) ಎಂದು ಸಾವಿರಾರು ವರ್ಷಗಳಿಂದ ಪ್ರಾರ್ಥಿಸುತ್ತಾ ಬಂದಿದ್ದರೂ ಮನುಕುಲ ಕತ್ತಲೆಯಿಂದ ಬೆಳಕಿನೆಡೆಗೆ ಒಂದು ಹೆಜ್ಜೆಯೂ ಮುಂದೆ ಸಾಗಿಲ್ಲ. ತದ್ವಿರುದ್ಧವಾಗಿ ನಿತ್ಯವೂ ಬೆಳಕಿನಿಂದ ಕತ್ತಲೆಯತ್ತ ದಾಪುಗಾಲಿಡುತ್ತಿದೆ. ಕಳೆದ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳು, ಅದಕ್ಕೂ ಮೊದಲು ಇತಿಹಾಸದಲ್ಲಿ ರಾಜಮಹಾರಾಜರುಗಳು ಮತ್ತು ಚಕ್ರವರ್ತಿಗಳ ಮಧ್ಯೆ ನಡೆದ ಘನ ಘೋರ ಯುದ್ಧಗಳು, ಇತ್ತೀಚೆಗೆ ನಡೆಯುತ್ತಿರುವ ರಷ್ಯಾ-ಯುಕ್ರೇನ್ ಯುದ್ಧ, ಇಸ್ರೇಲ್-ಹಮಾಸ್ ಯುದ್ಧ ಅಮಾಯಕರ ಮಾರಣಹೋಮಕ್ಕೆ ಕಾರಣವಾಗಿವೆ. ಹಿಂದಿನ ಕಾಲದ ಬಿಲ್ಲು-ಬಾಣ, ಕತ್ತಿ-ಗುರಾಣಿ, ಚತುರಂಗಬಲದ (ಪದಾತಿ, ರಥ, ಆನೆ, ಅಶ್ವ) ಬದಲು ಈಗ ಹೊಸ ಹೊಸ ಶಸ್ತ್ರಾಸ್ತ್ರಗಳು, ಯುದ್ಧನೌಕೆಗಳು, ಯುದ್ಧವಿಮಾನಗಳು, ಜಲಾಂತರ್ಗಾಮಿಗಳು, ಟ್ಯಾಂಕರ್ ಗಳು, ಸ್ಫೋಟಕಗಳು, ಅಣುಬಾಂಬ್ ಗಳು ಮನುಷ್ಯ ಸಂತತಿಯನ್ನೇ ಅಳಿವಿನ ಅಂಚಿಗೆ ತಳ್ಳುತ್ತಿವೆ. ಎಲ್ಲಿಯೋ ಯುದ್ಧ ನಡೆಯುತ್ತಿದೆ ನಮಗೇನಂತೆ ಎನ್ನುವಂತಿಲ್ಲ. ಬದುಕು ಕಟ್ಟಿಕೊಳ್ಳಲು ವಿಶ್ವದೆಲ್ಲೆಡೆ ಜನರು ವಲಸೆ ಹೋಗಿರುವುದರಿಂದ ಯಾವುದೇ ದೇಶದಲ್ಲಿ ಯುದ್ಧ ನಡೆದರೂ ಎಲ್ಲ ದೇಶಗಳ ಜನರು ತಮ್ಮ ತಮ್ಮ ಬಂಧುಗಳ ಸಾವು-ನೋವಿನಿಂದ ಕಣ್ಣೀರು ಸುರಿಸುವಂತಾಗಿದೆ. ಹಿಂಸೆ ಹಾಗೂ ಕ್ರೌರ್ಯಗಳಿಗೆ ಗುರಿಯಾದ ಅಮಾಯಕರ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಇದೇ ಕ್ರೂರ ಹಾದಿಯಲ್ಲಿ ಸಾಗಿದರೆ ಮುಂದೊಂದು ದಿನ ಈ ಜಗತ್ತನ್ನು ನೋಡುವ ಕಣ್ಣುಗಳೇ ಇಲ್ಲವಾಗಬಹುದು. ಮನುಷ್ಯ ಸಂತತಿಯೇ ನಾಶವಾಗಿ ಭೂದೇವಿಯು ಬಂಜೆಯಾಗಬಹುದು!
ಈ ಹಿನ್ನೆಲೆಯಲ್ಲಿ “The Pale Blue Dot: A Vision of the Human Future in Space” ಎಂಬ ಪುಸ್ತಕ ತುಂಬಾ ಅರ್ಥಪೂರ್ಣ. ಪ್ರಸಿದ್ಧ ಖಗೋಳ ಶಾಸ್ತ್ರಜ್ಞರಾದ ಕಾರ್ಲ್ ಸಾಗನ್ 1994 ರಲ್ಲಿ ಬರೆದ ಈ ಪುಸ್ತಕಕ್ಕೆ ಪ್ರೇರೇಪಣೆ. 1977 ರಲ್ಲಿ ಅಮೇರಿಕೆಯ ಬಾಹ್ಯಾಕಾಶ ಸಂಸ್ಥೆಯಾದ ನಾಸಾ(NASA) ಉಡಾಯಿಸಿದ ವಾಯೇಜರ್-1. ಕಳೆದ 46 ವರ್ಷಗಳಿಂದ ಆಕಾಶವನ್ನು ಸೀಳಿಕೊಂಡು ಮೇಲೇರುತ್ತಿರುವ ಈ ಗಗನನೌಕೆಯು ಈಗಲೂ ಕಾರ್ಯ ನಿರ್ವಹಿಸುತ್ತಿರುವುದು ಸೋಜಿಗದ ಸಂಗತಿ. ಸೌರವ್ಯೂಹದಾಚೆಯ ಆಕಾಶವನ್ನು ಅಧ್ಯಯನ ಮಾಡುವುದು ಇದರ ಮೂಲ ಉದ್ದೇಶ. ಪ್ರತಿ ಸೆಕೆಂಡಿಗೆ 17ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಈ ವಾಯೇಜರ್ ಗಗನನೌಕೆಯು ಭೂಮಿಯಿಂದ ಇಂದು 24 ಬಿಲಿಯನ್ (2400 ಕೋಟಿ) ಕಿ.ಮೀ ದೂರದಲ್ಲಿದ್ದು ಇನ್ನೂ ಮೇಲೇರುತ್ತಲೇ ಇದೆ. ಇದರಿಂದ ರವಾನೆಯಾಗುವ ಸಂದೇಶಗಳು ಭೂಮಿಗೆ ತಲುಪಲು 22 ಗಂಟೆಗಳು ಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. 1990ರಲ್ಲಿ ಈ ಗಗನನೌಕೆಯು ಭೂಮಿಯಿಂದ ಸುಮಾರು 6 ಮಿಲಿಯನ್ ಕಿ.ಮೀ ದೂರದಲ್ಲಿ ಸೌರಮಂಡಲದ ಅಂಚಿನಲ್ಲಿದ್ದಾಗ ಖಗೋಳ ಶಾಸ್ತ್ರಜ್ಞ ಕಾರ್ಲ್ ಸಾಗನ್ ರವರ ಸಲಹೆ ಮೇರೆಗೆ ನಾಸಾ ವಿಜ್ಞಾನಿಗಳು ಇದರ ಕ್ಯಾಮಾರಾವನ್ನು ಭೂಮಿಯತ್ತ ತಿರುಗಿಸಿದರು. ಆಗ ಮೂಡಿ ಬಂದ ಚಿತ್ರವೇ 0.12 ಪಿಕ್ಸೆಲ್ ಗಾತ್ರದ “ತಿಳಿ ನೀಲಿ ಬಣ್ಣದ ಚುಕ್ಕೆ”ಯಾಗಿ (Pale Blue Dot) ಕಾಣಿಸಿದ ಭೂಮಿ! ಇಲ್ಲಿರುವ ಮನುಷ್ಯ ಸಂತತಿಯನ್ನು ಉಳಿಸಬೇಕೆಂದರೆ ಬಾಹ್ಯಾಕಾಶದಲ್ಲಿರುವ ಗ್ರಹ ನಕ್ಷತ್ರಗಳ ಅಧ್ಯಯನ ಅತ್ಯವಶ್ಯಕ ಎನ್ನುತ್ತಾರೆ ಸಾಗನ್. ತಾಯಂದಿರು ಮುದ್ದು ಮಕ್ಕಳಿಗೆ ಚಂದ್ರನನ್ನು ತೋರಿಸಿದಂತೆ ಕೋಟ್ಯಂತರ ಕಿ.ಮೀ ದೂರದ ಸೌರಮಂಡಲದ ಆಚೆ ಇರುವ ಆಕಾಶದಿಂದ ಭೂಮಿಯನ್ನು ತೋರಿಸಿ ಕಾರ್ಲ್ ಸಾಗನ್ ಬರೆದ ಮಾತುಗಳು ಚಿಂತನಾರ್ಹವಾಗಿವೆ:
Link: taralabalu.org/video/PaleBlueDot.mp4
ಅಗೋ! ಆ ತಿಳಿ ನೀಲಿ ಬಣ್ಣದ ಚುಕ್ಕೆಯೇ ನಾವು ವಾಸಿಸುವ ತಾಣ! ನೀವು ಪ್ರೀತಿಸುವ, ನಿಮಗೆ ಗೊತ್ತಿರುವ ಮತ್ತು ನೀವು ಕೇಳಿರುವ ಪ್ರತಿಯೊಬ್ಬ ವ್ಯಕ್ತಿಯೂ ಅಲ್ಲಿಯೇ ಇರುವುದು. ಇತಿಹಾಸದಲ್ಲಿ ಬಾಳಿ ಬದುಕಿ ಕಣ್ಮರೆಯಾದ ಮನುಷ್ಯರೆಲ್ಲರೂ ಸಹ ಇದ್ದುದು ಅಲ್ಲಿಯೇ. ಅದು ಬದುಕಿನ ಎಲ್ಲ ಸಂತೋಷ ಮತ್ತು ಸಂಕಟಗಳ ಸಂಗಮ! ನೂರಾರು ವಿಭಿನ್ನ ಧರ್ಮಗಳು, ತತ್ತ್ವಸಿದ್ಧಾಂತಗಳು, ಆರ್ಥಿಕ ಚಿಂತನೆಗಳು! ಸೂರ್ಯನ ಕಿರಣಗಳ ಆ ಒಂದು ಸಣ್ಣ ಕಣದಲ್ಲಿ ಬೇಟೆಗಾರರು ಮತ್ತು ಪ್ರಾಣಿಗಳು, ವೀರರು ಮತ್ತು ಹೇಡಿಗಳು, ನಾಗರೀಕತೆಯ ನಿರ್ಮಾತೃಗಳು ಮತ್ತು ವಿಧ್ವಂಸಕರು, ರಾಜರು ಮತ್ತು ರೈತರು, ಪ್ರೀತಿಯ ಗಾಢಾಲಿಂಗನದಲ್ಲಿರುವ ಯುವ ದಂಪತಿಗಳು, ತಾಯಿ-ತಂದೆಗಳು ಮತ್ತು ಮುದ್ದಿನ ಮಕ್ಕಳು, ಸಂಶೋಧಕರು ಮತ್ತು ಸಾಹಸಿಗಳು, ನೀತಿಬೋಧಕರು, ಭ್ರಷ್ಟ ರಾಜಕಾರಣಿಗಳು, ಮೇರುನಟರು, ಧೀರ ನಾಯಕರು, ಶ್ರೇಷ್ಠ ಸಂತರು ಮತ್ತು ಪಾಪಿಗಳು ಮಾನವನ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ.
ವಿಶಾಲವಾದ ವಿಶ್ವದಲ್ಲಿ ಭೂಮಿಯೊಂದು ತೀರಾ ಚಿಕ್ಕದಾದ ತಾಣ. ಭೌಮಾಕಾಶದಲ್ಲಿ ತೃಣಮಾತ್ರದಂತಿರುವ ಈ ಭೂಮಿಯ ಒಡೆತನಕ್ಕಾಗಿ ಚಕ್ರವರ್ತಿಗಳು, ರಾಜಮಹಾರಾಜರುಗಳು ಎಷ್ಟೊಂದು ರಕ್ತದ ಹೊಳೆ ಹರಿಸಿದ್ದಾರೆ!ಬಾಹ್ಯಾಕಾಶದಿಂದ ನೋಡುವಾಗ ಒಂದು ಪಿಕ್ಸೆಲ್ ಗಿಂತಲೂ ಕಡಿಮೆ ಗಾತ್ರದಷ್ಟು ಕಾಣುವ ಈ ಭೂಮಿಯ ಅಜ್ಞಾತ ಮೂಲೆಯೊಂದರಲ್ಲಿದ್ದು ಮತ್ತೊಂದು ಅಜ್ಞಾತ ಮೂಲೆಯಲ್ಲಿರುವವರ ಮೇಲೆ ತಮ್ಮ ಕೀರ್ತಿ ಪ್ರತಿಷ್ಠೆಗಳಿಗಾಗಿ ಎಷ್ಟೊಂದು ಕೊನೆಯಿಲ್ಲದ ಕ್ರೌರ್ಯ ಮತ್ತು ಹಿಂಸೆಗಳನ್ನು ನಡೆಸಿದ್ದಾರೆ!ದ್ವೇಷ, ಅಸೂಯೆಗಳಿಂದ ಕುದಿಯುತ್ತಾ, ಅಧಿಕಾರದ ದರ್ಪ, ಅಹಂಕಾರಗಳಿಂದ ಬೀಗುತ್ತಾ ಒಬ್ಬರನ್ನೊಬ್ಬರು ಕೊಲ್ಲಲು ತುದಿಗಾಲ ಮೇಲೆ ನಿಂತು ತಮಗಾಗದವರ ವಿರುದ್ಧ ನಡೆಸಿದ ಸನ್ನಾಹ, ಷಡ್ಯಂತ್ರಗಳು ಅದೆಷ್ಟೋ! ಆಲೋಚಿಸಿರಿ. ಸುತ್ತಲೂ ಗಾಢಾಂಧಕಾರದಿಂದ ಕವಿದಿರುವ ವಿಶ್ವದ ವಿಶಾಲವಾದ ಪರಿಧಿಯಲ್ಲಿ ಈ ಭೂಮಿಯು ಒಂದು ಧೂಳಿನ ಕಣಕ್ಕೂ ಸಮನಲ್ಲ. ಇದರಲ್ಲಿ ಗುರುತಿಸಲಾಗದಷ್ಟು ಇರುವ ಮೂಲೆಯ ಜಾಗದಲ್ಲಿ ಚಕ್ರಾಧಿಪತಿಗಳೆಂದು ಹಮ್ಮಬಿಮ್ಮುಗಳಿಂದ ಬೀಗುವ ಈ ಜನರಿಗೆ ಸ್ವಲ್ಪವೂ ನಾಚಿಕೆ ಎಂಬುದು ಇಲ್ಲವಲ್ಲಾ!
ವಿಶಾಲವಾದ ಬ್ರಹ್ಮಾಂಡದಲ್ಲಿ ಜೀವಜಂತು ಇರುವುದು ಈ ಭೂಮಿಯ ಮೇಲೆ ಮಾತ್ರ. ಬೇರೆಲ್ಲಿಯೂ ಇಲ್ಲ. ಸದ್ಯಕ್ಕಂತೂ ಬೇರಾವ ಗ್ರಹ ನಕ್ಷತ್ರಗಳಲ್ಲಿಯೂ ಕಂಡುಬಂದಿಲ್ಲ. ಬೇರೆ ದೇಶಗಳಿಗೆ ವಲಸೆ ಹೋದಂತೆ ಆಗಸದಲ್ಲಿ ಕಾಣುವ ಗ್ರಹ ನಕ್ಷತ್ರಗಳಿಗೆ ಮನುಷ್ಯ ವಲಸೆ ಹೋಗಬಹುದೇ? ಹೌದು, ಹೋಗಬಹುದು. ಅಲ್ಲಿ ಖಾಯಂ ಆಗಿ ನೆಲೆಸಲು ಸಾಧ್ಯವೇ? ಇಲ್ಲ, ಸದ್ಯಕ್ಕಂತೂ ಇಲ್ಲ. ನಿಮಗೆ ಇಷ್ಟವಿರಲಿ ಇಲ್ಲದಿರಲಿ, ನೀವು ವಾಸಿಸಬೇಕಾಗಿರುವುದು ಈ ಭೂಮಿಯ ಮೇಲೆಯೇ ಹೊರತು ಬೇರೆಲ್ಲೂ ಸಾಧ್ಯವಿಲ್ಲ. ತಿಳಿ ನೀಲಿ ಚುಕ್ಕೆಯಂತೆ ಕಾಣಿಸುವ ಈ ಭೂಮಿಯ ಚಿತ್ರ ನಿಮ್ಮನ್ನು ಕುಬ್ಜರನ್ನಾಗಿಸಬೇಕು. ಈ ಖಗೋಳ ಜ್ಞಾನದಿಂದ ನಿಮ್ಮೊಳಗಿರುವ ಹಮ್ಮು ಬಿಮ್ಮು, ಮೋಸ, ವಂಚನೆ, ಕೃತ್ರಿಮತೆಗಳು ದೂರಾಗಬೇಕು. ಎಲ್ಲರೂ ನೆಮ್ಮದಿಯಿಂದ ಬಾಳುವಂತೆ ನೀವು ಬದಲಾಗಬೇಕು. ಈ ಹೊಣೆಯನ್ನರಿತು ಬಾಳಿದಾಗ ಮಾತ್ರ ಮನುಕುಲದ ಮನೆಯಾದ ಈ ತಿಳಿ ನೀಲಿ ಬಣ್ಣದ ಭೂಮಿಯು ಸ್ವರ್ಗಸುಖವನ್ನು ನೀಡಬಲ್ಲದು! ಅಮೇರಿಕೆಯ ಖಗೋಳತಜ್ಞ ಕಾರ್ಲ್ ಸಾಗನ್ (Carl Sagan) ರವರ ಈ ಕಾವ್ಯಮಯವಾದ ಮಾತುಗಳು ಬಸವಣ್ಣನವರ ಮುಂದಿನ ವಚನವನ್ನು ಮಾರ್ದನಿಸುತ್ತವೆ:
ಆನೆಯನೇರಿಕೊಂಡು ಹೋದಿರೆ ನೀವು
ಕುದುರೆಯನೇರಿಕೊಂಡು ಹೋದಿರೆ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ ಅಣ್ಣಾ!
ಸತ್ಯದ ನಿಲವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತಿ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಸದಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವರನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ. 19-10-2023.