ಮಣ್ಣು ಮುಕ್ಕಿಸಿದವನೆ ಪೈಲ್ವಾನ
ಕುಸ್ತಿ ಭರತ ಭೂಮಿಯ ಅಸ್ಮಿತೆ ಲೇಖನದ ಮುಂದುವರೆದ ಭಾಗವಾಗಿ ಇಂದು ವಾಡಿಕೆಯಲ್ಲಿರುವ ಕುಸ್ತಿಯ ಬಗೆಗಳು-ಭಾರತೀಯ ಮಾದರಿ, ಸ್ವಚ್ಛಂದ(ಫ್ರೀಸ್ಟೈಲ್ ಅಥವಾ ಕ್ಯಾಚ್ ಆ್ಯಸ್ ಕ್ಯಾಚ್ ಕ್ಯಾನ್)ಮಾದರಿ ಮತ್ತು ಗ್ರೀಕೋರೋಮನ್ ಮಾದರಿ. ಇಲ್ಲಿ ಬಳಸಲಾಗುವ ಕೌಶಲ್ಯಗಳಿಗೆ ಆಂಗ್ಲ ಹೆಸರಿನಿಂದ ಕರೆಯುವುದಾದರೂ, ಅವುಗಳ ಮೂಲ ಒಂದೇ.
ಇಲ್ಲಿ ಅಂತರಾಷ್ಟ್ರೀಯ ನಿಯಮಗಳಿಗ ಅನುಸಾರವಾಗಿ ಕೌಶಲ್ಯಗಳಿಗೆ ಅಂಕಗಳನ್ನು ನೀಡುವುದರ ಮೂಲಕ,ವಿವಿಧ ದೇಹ ತೂಕಕ್ಕೆ ಮತ್ತು ಸಮಯಾನುಸಾರ ಕುಸ್ತಿ ನಡೆಸಲಾಗುತ್ತದೆ.
ಮೈಸೂರಿನಲ್ಲಿ ದಸರಾ ಕುಸ್ತಿ ನಡೆಯಲು ಆರಂಭಿಸಿದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಎಲ್ಲಾ ಕುಸ್ತಿ ಕೇಂದ್ರಗಳ ಕುಸ್ತಿಪಟುಗಳು, ತರಬೇತುದಾರರು,ಕುಸ್ತಿ ಪ್ರೇಮಿಗಳು ಮೈಸೂರು ಕುಸ್ತಿ ಅಖಾಡದಲ್ಲಿ ಹಾಜರು. ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವವರ ಪೈಕಿ ಮತ್ತು ಬಹುಮಾನ ಗೆಲ್ಲುವವರಲ್ಲಿ ಬಹುಪಾಲು ಉತ್ತರ ಕರ್ನಾಟಕ, ದಾವಣಗೆರೆ, ಮೈಸೂರು, ಬೆಳಗಾವಿ ಎಂಬುದು ಮತ್ತೊಂದು ಕಾರಣ ಎಂಬುದು ಇಲ್ಲಿನವರ ವಿಶ್ಲೇಷಣೆ.
ದಸರಾ ಕುಸ್ತಿಯಂತೆ ಉತ್ತರ ಕರ್ನಾಟಕದಲ್ಲಿ ಹಬ್ಬ–ಉತ್ಸವಗಳಲ್ಲಿ ಕುಸ್ತಿಗೆ ಆದ್ಯತೆ ಇದೆ. ಜಾತ್ರೆಗಳಿಗೆ ಇಲ್ಲಿ ಕುಸ್ತಿಗಳು ಕಳೆಗಟ್ಟುತ್ತವೆ. ದಶಕಗಳ ಹಿಂದೆ ಥಿಯೇಟರ್ ಕುಸ್ತಿ (ಟಿಕೆಟ್ ಇರಿಸಿ ಆಡಿಸುವ ಸ್ಪರ್ಧೆ) ನಡೆಯುತ್ತಿದ್ದ ಈ ಭಾಗದಲ್ಲಿ ನಂತರ ಕುಸ್ತಿ ಅನೇಕ ಬದಲಾವಣೆಗಳನ್ನು ಕಂಡಿದೆ.
ಮಣ್ಣಿನಲ್ಲಿ ನಡೆಯುತ್ತಿದ್ದ “ಮಟ್ಟಿ ಕುಸ್ತಿ” ನಿಧಾನಕ್ಕೆ ಮ್ಯಾಟ್ ಮೇಲೇರಿದೆ. ಫ್ರೀ ಸ್ಟೈಲ್ ಕುಸ್ತಿಯಿಂದ ಗ್ರೀಕೊ ರೋಮನ್ ಶೈಲಿಗೂ ಪದಾರ್ಪಣೆಯಾಗಿದೆ. ಇದ್ಯಾವುದೂ ಕುಸ್ತಿ ಮೇಲಿನ ಮೋಹಕ್ಕೆ ಧಕ್ಕೆ ತಂದಿಲ್ಲ ಮೈಯನ್ನು ಕಟ್ಟು ಮಸ್ತಾಗಿಸಲು,ಹೆಸರುಗಳಿಸಲು ಮತ್ತು ಊರ ಜನರ ಪ್ರೀತಿಗೆ ಪಾತ್ರರಾಗಲು ಕುಸ್ತಿ ಆಡುತ್ತಿದ್ದವರು ಈಗ ಪಾಯಿಂಟ್ ಕುಸ್ತಿಯ ಬೆನ್ನುಹತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ಕುಸ್ತಿ ಜೀವನೋಪಾಯ ಮಾರ್ಗವಾಗಿಯೂ ಮಾರ್ಪಟ್ಟಿದೆ.
ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್)ಧಾರವಾಡ ತರಬೇತಿ ಕೇಂದ್ರ,ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಗದಗ, ಹಳಿಯಾಳದಲ್ಲಿ ಕುಸ್ತಿ ತರಬೇತಿಯನ್ನೂ ನೀಡುತ್ತಿರುವ ಕ್ರೀಡಾನಿಲಯಗಳು ಮುಂತಾದ ಸಂಸ್ಥೆಗಳು ಕೂಡ ಇಲ್ಲಿನ ಕುಸ್ತಿ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಕರ್ನಾಟಕದ ಇತ್ತೀಚಿನ ಕುಸ್ತಿ ಪೈಲ್ವಾನರುಗಳಾದ ರಫಿಕ್ ಹೂಳಿ, ಅರ್ಜುನ್ ಹಲಕುರ್ಕಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಭಾರತೀಯ ಶೈಲಿ ಕುಸ್ತಿಯಲ್ಲಿ ಕಾರ್ತಿಕ್ ಕಾಟೆ,ಭದ್ರಾವತಿ ಕಿರಣ್ ಮುಂತಾದವರು ಸಾಧನೆ ಮಾಡಿದ್ದಾರೆ.
ಮೈಸೂರು,ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಯ ಕುಸ್ತಿ ಸಂಘಗಳು ಭಾರತೀಯ ಶೈಲಿ ಮಣ್ಣಿನ ಕುಸ್ತಿಯ ಜೋಡಿ ಮಾಡಿ ಕುಸ್ತಿ ನಡೆಸುವ ಮೂಲಕ ಸಾಕಷ್ಟು ಕುಸ್ತಿ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸುತ್ತಿವೆ.ಕುಸ್ತಿಯ ಸೊಗಡು ಮಾಸದಂತೆ ಕಾಪಾಡಿಕೊಂಡು ಬರುತ್ತಿವೆ.
ಇತ್ತೀಚಿನ ದಿನಗಳಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಚಿತ್ರದುರ್ಗ(ಜಿಲ್ಲೆ)ಸಿರಿಗೆರೆಯ ಪರಮಪೂಜ್ಯರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕುಸ್ತಿ ಕಲೆಯನ್ನು ಬೆಳೆಸುವ ದೃಷ್ಟಿಯಿಂದ ಪ್ರತಿ ತರಳಬಾಳು ಹುಣ್ಣಿಮೆಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಕ್ರೀಡೆಯನ್ನು ಆಯೋಜಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಪಟುಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆಗೆ ಮಾರ್ಗದರ್ಶನ ನೀಡಿ ಗೌರವಿಸಿ ಪ್ರೋತ್ಸಾಹಿಸುತ್ತಿದ್ದಾರೆ ಇತ್ತೀಚೆಗೆ 2023 ನಡೆದ ಕೊಟ್ಟೂರಿನ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಇದಕ್ಕೆ ಸಾಕ್ಷಿ.
ಭಾರತೀಯ ಮಾದರಿ ಕುಸ್ತಿ ಕೆಂಪು ಮಣ್ಣಿನ ಮೇಲೆ ನಡೆಯುವಂಥದಾಗಿದ್ದು,ಭಾರತದ ಎಲ್ಲ ಭಾಗಗಳಲ್ಲಿ ಪ್ರಸಿದ್ಧವಾಗಿದೆ. ಜಟ್ಟಿಗಳು ಬಿಗಿಯಾಗಿ ಕಾಚವನ್ನು ಕಟ್ಟಿ,ಅದರ ಮೇಲ್ಭಾಗದಲ್ಲಿ ಹನುಮಾನ್ ಚಡ್ಡಿಯನ್ನು ಧರಿಸುತ್ತಾರೆ.ಅನಧಿಕೃತವಾಗಿ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಜಟ್ಟಿಗಳು ಮೈಗೆ ಎಣ್ಣೆ ಬಳಿದುಕೊಂಡು ಅಖಾಡಕ್ಕಿಳಿಯಲು ಅವಕಾಶವಿರುತ್ತದೆ. ಅಖಾಡಕ್ಕಿಳಿಯವ ಜಟ್ಟಿ ಸಾಮಾನ್ಯವಾಗಿ ತನ್ನ ತಲೆಯನ್ನು ನುಣ್ಣನೆ ಬೋಳಿಸಿರುತ್ತಾನಲ್ಲದೆ ಮೈಕೈ ಕಾಲುಗಳ ಮೇಲಿನ ಕೂದಲನ್ನು ತೆಗೆಸಿರುತ್ತಾನೆ. ಅವಿದ್ದಲ್ಲಿ ಎದುರಾಳಿಗೆ ಹಿಡಿತ ಸಿಕ್ಕುತ್ತದೆಂದೇ ಜಟ್ಟಿಗಳ ಭಾವನೆ. ಜಟ್ಟಿಗಳಲ್ಲಿ ಒಬ್ಬ ಕೆಳಕ್ಕುರುಳಿ ಅವನ ಎರಡು ಭುಜಗಳೂ ಒಮ್ಮೆಗೇ ನೆಲಕ್ಕೆ ಸೋಕಿದರೆ ಆತ ಸೋತಂತಾಗುತ್ತದೆ. ಯಾರೊಬ್ಬರೂ ಬೀಳದಿದ್ದರೆ ಪಂದ್ಯ ಸಮ ಆಟದಲ್ಲಿ ಮುಕ್ತಾಯವಾಗುತ್ತದೆ.
ಈ ಬಗೆಯ ಕುಸ್ತಿಯಲ್ಲಿ ಹನುಮಾನ್ ಚಡ್ಡಿಯನ್ನು ಹಿಡಿಯಲು ಅವಕಾಶವಿರುತ್ತದೆ. ಭಾರತದ ಜಟ್ಟಿಗಳಲ್ಲಿ ಫ್ರೀಸ್ಟೈಲ್ ಕುಸ್ತಿಕಲೆಯಲ್ಲಿ ಪರಿಣಿತರನ್ನಾಗಿ ಮಾಡಲೋಸುಗ ಭಾರತೀಯ ರೀತಿಯ ಕುಸ್ತಿ ಸಂಘದವರು ನಿಯಮಗಳನ್ನು ಸ್ವಲ್ಪ ಬದಲಿಸಿ, ಕುಸ್ತಿಯ ರೀತಿಯಲ್ಲಿ ಹೊಸತಂತ್ರಗಳನ್ನು ಅಳವಡಿಸಿದ್ದಾರೆ.
ಭಾರತೀಯ ಮಾದರಿ ಕುಸ್ತಿಸಂಘದ ನಿಯಮದ ಪ್ರಕಾರ ನಿಗದಿಯಾದ ಸಮಯದಲ್ಲಿ ಕುಸ್ತಿಪಟುಗಳು ಸೋಲದಿದ್ದರೆ,ಇಡೀ ಕುಸ್ತಿ ನಡೆದ ಕಾಲಾವಧಿಯಲ್ಲಿ,ಯಾವ ಜಟ್ಟಿ ಉತ್ತಮವಾಗಿ ಕಾದಾಡಿದ,ಉತ್ತಮ ಡಾವುಗಳನ್ನು ಮಾಡಿದ ಮತ್ತು ತನ್ನ ಎದುರಾಳಿ ಮಾಡಿದ ಡಾವುಗಳಿಗೆ ಪ್ರತಿಯಾಗಿ ತೋಡುಮಾಡಿ ಎದುರಾಳಿ ಮಾಡಿದ ಡಾವಿನಿಂದ ತಪ್ಪಿಸಿಕೊಂಡ, ಎದುರಾಳಿಯೊಡ್ಡಿದ್ದ ಇಂಥ ಅಪಾಯದಿಂದ ಹೇಗೆ ಪಾರಾದ-ಮುಂತಾದ ಎಲ್ಲ ಅಂಶಗಳನ್ನೂ ಪರಿಗಣಿಸಿ, ಯಾವ ಜಟ್ಟಿ ಹೆಚ್ಚು ಅಂಕ ಗಳಿಸಿದ ಎನ್ನುವ ಆಧಾರದ ಮೇಲೆ ತೀರ್ಪುಗಾರರಿಂದ ಜಟ್ಟಿಯ ಸೋಲು-ಗೆಲುವು ನಿರ್ಧಾರವಾಗುತ್ತದೆ.
ಭಾರತದಲ್ಲಿನ ಅತ್ಯುತ್ತಮ ಕುಸ್ತಿಪಟುವನ್ನು ಆರಿಸಲು ಹಿಂದ್ ಕೇಸರಿ ಪ್ರಶಸ್ತಿ ಸ್ಪರ್ಧೆಯನ್ನು ಪ್ರತಿವರ್ಷವೂ ನಡೆಸಲಾಗುತ್ತಿದೆ. ಮಧ್ಯಪ್ರದೇಶದ ರಾಮಚಂದ್ರ, ಮಹಾರಾಷ್ಟದ ಶ್ರೀಪತಿ ಕಂಚಿನಾಳ್, ಪಂಜಾಬಿನ ಕರಣ್ ಸಿಂಗ್, ಡೆಲ್ಲಿಯ ಚಾಂದ್ಗಿ ರಾಮ್, ಮಹಾರಾಷ್ಟದ ಮಾರುತಿ ಮಾನೆ, ರಾಜಾಸ್ತಾನದ ಮೆಹರುದ್ದೀನ್ ಇವರು ಹಿಂದ್ ಕೇಸರಿ ಕುಸ್ತಿಪಟುಗಳು.
ಫ್ರೀಸ್ಟೈಲ್-ಅಂತರರಾಷ್ಟ್ರೀಯ ಕುಸ್ತಿ ಸಂಘದವರಿಂದ ಮತ್ತು ಒಲಿಂಪಿಕ್ಸ್ ಸಮಿತಿಯಿಂದ ಅಂಗೀಕರಿಸಲ್ಪಟ್ಟಿದೆ. ಇಲ್ಲಿ ಅಧಿಕೃತ ತೂಕಗಳ ವಿಭಾಗಗಳಿವೆ,ಮ್ಯಾಟ್ಗಳ ಮೇಲೆ ಪಂದ್ಯ ನಡೆಯುತ್ತದೆ. ಜಟ್ಟಿಗಳನ್ನು ತೂಕದ ಆಧಾರದ ಮೇಲೆ ವಿಂಗಡಿಸಿ,ವೈದ್ಯಕೀಯ ಪರೀಕ್ಷೆ ನಡೆಸಿದ ಆಡಿಸಲಾಗುತ್ತದೆ.
ಪ್ರತಿ ತೂಕದ ವಿಭಾಗಕ್ಕೂ ಕಾಲಾವಕಾಶವನ್ನು ನಿಗದಿಮಾಡಿದೆ. ಜಟ್ಟಿಗಳು ನಿಗದಿಯಾದ ವೇಷವನ್ನು(ಕಾಸ್ಟ್ಯೂಮ್) ತೊಟ್ಟು, ಕಾಲಿಗೆ ನಿಗದಿಯಾದ ಶೂಸ್ ಧರಿಸಿ, ಕುಸ್ತಿ ಮ್ಯಾಟ್ಗಿಳಿಯಬೇಕು. ಕಾಲಾವಧಿ ಹಾಗೂ ಪಾಯಿಂಟು ಗಳಿಸುವ ಪದ್ಧತಿಯಲ್ಲಿ ನಡೆಯುತ್ತದೆ.
ಜಟ್ಟಿಗಳು ಸುಮ್ಮನೆ ಕುಳಿತಲ್ಲಿ ಕೂರದೆ,ನಿಂತಲ್ಲಿ ನಿಲ್ಲದೆ ಏನಾದರೂ ಡಾವುಗಳನ್ನು ಮಾಡುತ್ತಿರಬೇಕು ಅಂತೂ ಇಬ್ಬರೂ ಚಟುವಟಿಕೆಯಿಂದ ಕುಸ್ತಿಯಲ್ಲಿ ಭಾಗವಹಿಸಬೇಕು. ಯಾವ ಡಾವುಗಳನ್ನೂ ಮಾಡದೆ, ನಿಂತಲ್ಲಿ ನಿಂತಹಾಗೆಯೇ ಅಥವಾ ಕುಳಿತಲ್ಲಿ ಕುಳಿತ ಹಾಗೆಯೇ ಒಬ್ಬರಿಗೊಬ್ಬರು ಮಾಡುತ್ತಿದ್ದರೆ, ರೆಫರಿ ಎಚ್ಚರಿಕೆ ನೀಡುತ್ತಾನೆ. ಎಚ್ಚರಿಕೆ ನೀಡಿದರೂ ಅದಕ್ಕೆ ಕಿವಿಗೊಡದೆ ಮತ್ತೆ ಅದೇ ರೀತಿ ಮುಂದುವರೆಸಿದರೆ ಅಥವಾ ನಿಯಮಕ್ಕೆ ವಿರುದ್ಧವಾದ ಡಾವುಗಳನ್ನು ಮಾಡುತ್ತಿದ್ದರೆ ಮ್ಯಾಟ್ ಚೇರ್ಮೆನ ಸಲಹೆ ತೆಗೆದುಕೊಂಡು ರೆಫರಿ ತೀರ್ಮಾನ ಕೈಗೊಳ್ಳುತ್ತಾರೆ.
ಈ ಮಾದರಿ ಕುಸ್ತಿಯಲ್ಲಿ ಜಟ್ಟಿಯ ಎರಡೂ ಭುಜಗಳು ಕೆಳಕ್ಕೆ ತಗಲಿದಾಗ, ರೆಫರಿ ತನ್ನ ಕೈಯಿಂದ ಹಾಸಿಗೆಯನ್ನು ಬಡಿದ ಮೇಲೆ ಪಂದ್ಯ ಮುಕ್ತಾಯವಾಗುತ್ತದೆ. ರೆಫರಿ ಕೈತಟ್ಟುವವರೆಗೂ ಕುಸ್ತಿಯನ್ನು ಮುಂದುವರಿಸಬೇಕು.
ಭಾರತೀಯ ಕುಸ್ತಿಪಟುಗಳು ಕಾಮನ್ ವೆಲ್ತ್ ಕ್ರೀಡಾಕೂಟ,ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಹೆಸರುಗಳಿಸಿದ್ದಾರೆ. ದೇಶಕ್ಕೆ ಖ್ಯಾತಿ ತಂದ ಕುಸ್ತಿಪಟುಗಳೆಂದರೆ ಕೆ.ಡಿ.ಜಾದವ್, ಲೀಲರಾಮ್, ಯೋಗೇಶ್ವರ್ ದತ್, ರವಿಕುಮಾರ್ ದಯಿಯ, ಭಜರಂಗ್ ಪುನಿಯಾ ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಇನ್ನಿತರೆ ಕುಸ್ತಿಪಟುಗಳು.
ಗ್ರೀಕೋರೋಮನ್ ಸ್ಟೈಲ್ ಕುಸ್ತಿಯೂ ಅಂತರರಾಷ್ಟ್ರೀಯ ಕುಸ್ತಿ ಸಂಘ ಮತ್ತು ಒಲಂಪಿಕ್ ಸಮಿತಿಯಿಂದ ಅಂಗೀಕರಿಸಲ್ಪಟ್ಟಿದೆ. ಫ್ರೀಸ್ಟೈಲ್ ಮಾದರಿ ಕುಸ್ತಿಯ ಪ್ರತಿರೂಪವಾಗಿದೆ. ಆದರೆ ಯಾವ ಡಾವುಗಳನ್ನೂ ಸೊಂಟದ ಕೆಳಗೆ ಮಾಡುವಂತಿಲ್ಲ. ಜಟ್ಟಿಯನ್ನು ಸಿಕ್ಕಿಸಿಕೊಳ್ಳಲು ಕಾಲುಗಳನ್ನು ಉಪಯೋಗಿಸುವಂತಿಲ್ಲ. ಭಾರತದಲ್ಲಿ 1964 ರಿಂದ ಈ ಬಗೆಯ ಕುಸ್ತಿ ನಡೆಯುತ್ತಿದೆ.
ವಿಶ್ವಕುಸ್ತಿ ಸ್ಪರ್ಧೆ ಅತ್ಯಂತ ಪ್ರಖ್ಯಾತವಾದ ಕುಸ್ತಿ ಸ್ಪರ್ಧೆಗಳಲ್ಲಿ ಒಂದು. ಈ ಹಿಂದೆ ಇದರ ಹೊಣೆ ಹೊತ್ತಿದ್ದವರು ಮಹಾರಾಜ ನೃಪೇಂದ್ರ ನಾರಾಯಣ್ ರವರು. ಈ ಸ್ಪರ್ಧೆಯಲ್ಲಿ ಭಾರತದ ಅಂದು ವಿಶ್ವದಲ್ಲೆಲ್ಲಾ ಪ್ರಮುಖ ಕುಸ್ತಿ ಪಟುವಾಗಿದ್ದ ಟಾಮ್ ಕ್ಯಾನನ್ ಎಂಬಾತನನ್ನು ಸೋಲಿಸಿ ವಿಶ್ವಕುಸ್ತಿ ಪ್ರಶಸ್ತಿಯನ್ನು ಗೆದ್ದುಕೊಂಡು ಭಾರತಕ್ಕೆ ಕೀರ್ತಿತಂದ.
ಪಂಡಿತ್ ಮೋತಿಲಾಲ್ ನೆಹ್ರೂ ಅವರು ಭಾರತೀಯ ಕುಸ್ತಿ ಪಟುಗಳಿಗೆ ಆಶ್ರಯ ದಾತರಾಗಿದ್ದರು. ಪ್ಯಾರಿಸ್ನಲ್ಲಿ ನಡೆದ ವಿಶ್ವಕುಸ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದ ಖ್ಯಾತ ಪೈಲ್ವಾನ್ ಗುಲಾಂನನ್ನು ಅವರು ಕರೆದೊಯ್ದರು.ಗುಲಾಂನ ದೇಹದಾಢ್ರ್ಯ, ಸಾಮಥ್ರ್ಯ, ಚಾಕಚಕ್ಯತೆಗಳ ವಿಷಯದಲ್ಲಿ ಮೋತಿಲಾಲರಿಗೆ ಅಚಲ ವಿಶ್ವಾಸವಿತ್ತು. ಅಂತೆಯೇ ಗುಲಾಂ ತುರ್ಕಿಯ ಖಾದರ್ ಅಲಿಯನ್ನು ಸೋಲಿಸಿ ವಿಶ್ವಪ್ರಶಸ್ತಿ ಗೆದ್ದು ತಂದ.
1910 ರಲ್ಲಿ,ಲಂಡನ್ನಿನಲ್ಲಿ ನಡೆದ ಜಾನ್ ಬುಲ್ ವಿಶ್ವಕುಸ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಗಾಮ ಮತ್ತು ಇಮಾಂ ಬಕ್ಷ್ ಎಂಬಿಬ್ಬರನ್ನು ಅವರಿಗೆ ತಗುಲುವ ಖರ್ಚಿನ ಹೊಣೆಯನ್ನು ಪೂರ್ಣವಹಿಸಿಕೊಂಡು ಬಂಗಾಳದ ಅತಿ ದೊಡ್ಡ ಶ್ರೀಮಂತರಾದ ಸರತ್ ಕುಮಾರ್ ಮಿತ್ರರು ಲಂಡನಿಗೆ ಕರೆದೊಯ್ದರು.ಭಾರತದಲ್ಲೆಲ್ಲ ತುಂಬ ಪ್ರಖ್ಯಾತಿಯನ್ನು ಪಡೆದಿದ್ದ ಗಾಮನಿಗೆ ವಿಶ್ವಕುಸ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅಂದು ಅವಕಾಶ ನೀಡಲಿಲ್ಲ. ಕೇವಲ 5 ಅಡಿ 7 ಅಂಗುಲ ಎತ್ತರವಿದ್ದು,250 ಪೌಂಡು ತೂಕವಿದ್ದ ಗಾಮ, ಇವನಿಗಿಂತ ಎತ್ತರ ಹಾಗೂ ಹೆಚ್ಚು ತೂಕವಿರುವ ಪ್ರಪಂಚದ ಇತರ ಖ್ಯಾತ ಕುಸ್ತಿ ಪಟುಗಳ ಎದುರಿನಲ್ಲಿ ನಿಲ್ಲಲಾರನೆಂಬುದೇ ಕಾರಣವಾಗಿತ್ತು.
ಕಡ್ಲೆಕಾಯಿಯನ್ನು ಹೊಸಗುವ ರೀತಿಯಲ್ಲಿ ಬಾದಾಮಿ ಕಾಯಿಗಳನ್ನು ಎರಡು ಬೆರಳಿನಿಂದ ಹೊಸಗಿ ತಿನ್ನುತ್ತಿದ್ದ ಅಸಾಧಾರಣ ಶಕ್ತಿ ಸಾಮಥ್ರ್ಯವನ್ನು ಹೊಂದಿದ್ದ ಗಾಮ.
ಇದರಿಂದಾಗಿ ಸಿಡಿದೆದ್ದು ಸ್ಪರ್ಧೆ ನಡೆಯಲಿದ್ದ ಕ್ರೀಡಾಂಗಣದಲ್ಲಿ ನಿಂತು ಇಡೀ ಇಂಗ್ಲೆಂಡಿನಲ್ಲಿ ಯಾರೇ ಆಗಲಿ, ತನ್ನ ಎದುರು ನಿಂತು ಐದು ನಿಮಿಷ ಹೋರಾಡಿದವರಿಗೆ 15 ಪೌಂಡ್ ಬಹುಮಾನ ಕೊಡುವುದಾಗಿ ಸವಾಲು ಹಾಕಿದ.ಇವನ ಸವಾಲನ್ನು ಎದುರಿಸಲು ಮೊದಲ ದಿವಸ ಮೂರು ಜನ ಪೈಲ್ವಾನರು ಮುಂದೆ ಬಂದರು.ಈ ಮೂರು ಜನರನ್ನೂ ಎರಡು ನಿಮಿಷದ ಒಳಗೇ ಮಣ್ಣು ಮುಕ್ಕಿಸಿದ ಗಾಮ.ಮಾರನೆಯ ದಿನ ಇವನನ್ನೆದುರಿಸಲು ಬಂದ 12 ಜನ ಕುಸ್ತಿ ಪಟುಗಳಿಗೆ ಅದೇ ಗತಿ ಕಾಣಿಸಿದ. ದಿಗ್ಬ್ರಮೆ ಹಿಡಿಸುವಂತೆ ಜಯದ ಮೇಲಿನ ಜಯವನ್ನು ಗಳಿಸುತ್ತ ಬಂದ ಗಾಮನಿಗೆ ವ್ಯವಸ್ಥಾಪಕರು ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲೇಬೇಕಾಯಿತು.
ಅನಂತರ ಗಾಮ 1910 ಸೆಪ್ಟೆಂಬರ್ 12 ರಂದು, ಹೆಸರಾಂತ ಅಮೆರಿಕದ ಪೈಲ್ವಾನ್ ಇ.ರೋಲರನನ್ನು ಎದುರಿಸಿ ನಿಂತನಲ್ಲದೆ ಆತನನ್ನು ಹದಿನೈದು ನಿಮಿಷಗಳಲ್ಲಿ ಹನ್ನೆರಡು ಬಾರಿ ಸೋಲಿಸಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಆಶ್ಚರ್ಯ ವುಂಟುಮಾಡಿದ.ಇದಾದ ಅನಂತರ ಅಂದು ವಿಶ್ವದಲ್ಲೆಲ್ಲ ಪ್ರಖ್ಯಾತಿ ಗಳಿಸಿ ವಿಶ್ವ ಕುಸ್ತಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಆಸ್ಟ್ರೇಲಿಯದ ಜಿಬಿಸ್ಕೊನನ್ನು ಎದುರಿಸಿದ.
ಮೂರು ಗಂಟೆಗಳ ಕಾಲ ಇಬ್ಬರಿಗೂ ಪಂದ್ಯ ನಡೆದು, ಯಾರೂ ಸೋಲದ ಕಾರಣ ಪಂದ್ಯವನ್ನು ಮುಂದಿನ ದಿವಸಕ್ಕೆ ಮುಂದೂಡಲಾಯಿತು. ಅಂದು ನಡೆದ ಕುಸ್ತಿ ಪಂದ್ಯದಲ್ಲಿ ಕೊನೆಯವರೆಗೂ ಗಾಮನದೇ ಮೇಲುಗೈಯಾಗಿತ್ತು. ಕುಸ್ತಿ ಪಂದ್ಯದ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದರೆ ಅಂದೇ ಗಾಮನಿಗೆ ಜಯ ದೊರಕಬೇಕಿತ್ತು.ಇದರಿಂದ ಗಾಮ ಕೊಂಚವೂ ಸಹನೆಯನ್ನು ಕಳೆದುಕೊಳ್ಳಲಿಲ್ಲ. ಇದಕ್ಕೆ ಪ್ರತಿಯಾಗಿ ಮಾರನೆಯ ದಿವಸ ಅತ್ಯಂತ ಉತ್ಸಾಹದಿಂದ ಕುಸ್ತಿ ಅಖಾಡಕ್ಕಿಳಿದ. ಆದರೆ ಅವನ ಎದುರಾಳಿ ಹಿಂದಿನ ದಿವಸದ ಕುಸ್ತಿಪಂದ್ಯದಲ್ಲಿ ಮೈಮೂಳೆ ಮುರಿಸಿ ಕೊಂಡಿದ್ದರಿಂದ ನಿಶ್ಚೇತಸನಾಗಿ ಸ್ಪರ್ಧೆಗೆ ಗೈರುಹಾಜರಾದ.ಅಂದೇ ಗಾಮ ವಿಶ್ವಕುಸ್ತಿ ಪ್ರಶಸ್ತಿಯನ್ನು ಸಂಪಾದಿಸಿ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿದ.
ಮತ್ತೆ ವಾಪಸ್ಸು ಪಡೆಯಲು ತನ್ನ ದೇಶದ ಜನತೆಯಿಂದ ಪ್ರೇರಿತನಾದ ಜಿಬಿಸ್ಕೊ ಮತ್ತೆ ಗಾಮನನ್ನು ಎದುರಿಸಿದ. ಆದರೆ ಈ ಸಾರಿ ಗಾಮ ಕೇವಲ ಎರಡು ಸೆಕೆಂಡಿನಲ್ಲಿ ಆತನನ್ನು ಸೋಲಿಸಿ, ಇಡೀ ವಿಶ್ವದಲ್ಲಿ ಅಜೇಯನೆಂದು ಕೀರ್ತಿ ಸಂಪಾದಿಸಿಕೊಂಡ.
ಗಾಮ ಬೆಳಕಿಗೆ ಬರುವ ಮುಂಚೆ ಕಿಕಾರ್ಸಿಂಗ್ ಮತ್ತು ಗುಲಾಂ-ಇವರ ಹೆಸರು ಕುಸ್ತಿ ಪ್ರಪಂಚದಲ್ಲಿ ಮನೆಮಾತಾಗಿತ್ತು. ಲಾಹೋರಿನ ಸತಾರ-ಎ-ಹಿಂದ್ನಲ್ಲಿದ್ದ ವಿದ್ದೊ ಪೈಲ್ವಾನನ ಹೆಸರನ್ನು ಇಲ್ಲಿ ಸ್ಮರಿಸಬಹುದು.
ಕುಸ್ತಿಯಲ್ಲಿ ಗಾಮ ಸ್ವಲ್ಪ ಹೆದರುತ್ತಿದ್ದುದು ಬಹುಷಃ ಈತನೊಬ್ಬನಿಗೇ ಹೆಚ್ಚು ಕಡಿಮೆ ಈತ ಗಾಮನಿಗೆ ಸರಿಸಮನಾಗಿ ನಿಲ್ಲುತ್ತಿದ್ದ, ಅನಂತರ ಬಂದ ಭಾರತದ ಹೆಸರಾಂತ ಕೆಲವು ಕುಸ್ತಿಪಟುಗಳೇಂದರೆ-ಭೂಲರ್, ಗೊಂಗಾಬಲಿವಾಲ, ಹರ್ಬಾನ್ಸಿಂಗ್, ಗುಟ್ಟಾಸಿಂಗ್, ಇಮಾಂಬಕ್ಷ್, ಗರ್ದಾವರ್, ಹಮೀದಾ, ಗಂಧಾಸಿಂಗ್, ಹಕೀಮ್, ಮಾಧೋಸಿಂಗ್, ವುಸ್ತಾದ್ಕರೀಮ್ಬಕ್ಷ್, ಪಲೇರ್ವಾಲ, ಗೋಬರ್ಬಾಬು, ಕಲ್ಲು, ರಹೀಂಸುಲ್ತಾನಿವಾಲಾ, ದಾರಾಸಿಂಗ್, ಜೋಗಿಂದರ್ಸಿಂಗ್-ಮುಂತಾದವರು. ಫ್ರೀಸ್ಟೈಲ್ ಕುಸ್ತಿಯಲ್ಲಿವರು ಹೆಸರುವಾಸಿಯಾದವರು. ಹೀಗೆ ಭಾರತ ಕಾಮನ್ವೆಲ್ತ್ ರಾಷ್ಟ್ರಗಳ ಪೈಕಿ ಉನ್ನತ ಮಟ್ಟದ ಕುಸ್ತಿಯ ರಾಷ್ಟ್ರವೆಂದು ಹೆಸರುಗಳಿಸಿಕೊಂಡಿದೆ.
ಹೀಗೆ ಕುಸ್ತಿ ತನ್ನದೇ ಆದ ಛಾಪು ಮೂಡಿಸಿಕೊಳ್ಳುವುದರೊಂದಿಗೆ ಇಂದಿಗೂ ಪ್ರಚಲಿತದಲ್ಲಿದೆ. ಇತ್ತೀಚಿನ ದಿನಗಳು ವೈಜ್ಞಾನಿಕ ಮತ್ತು ವೇಗದಿಂದ ಕೂಡಿದ ಕುಸ್ತಿಯನ್ನು ಬಯಸುತ್ತವೆ ಆದರೂ ಕೂಡ ಹಳ್ಳಿಗಳಲ್ಲಿ ಮಣ್ಣಿನ ಕುಸ್ತಿಯನ್ನು ಹೆಚ್ಚಿನ ಕ್ರೀಡಾ ಪ್ರೇಮಿಗಳು ಸಂಭ್ರಮಿಸುತ್ತಾರೆ.
-ಡಾ.ಸುಧಾಕರ.ಜಿ.ಲಕ್ಕವಳ್ಳಿ.
ಲೇಖಕರು-ದೈಹಿಕ ಮತ್ತು ಆರೋಗ್ಯ ಶಿಕ್ಷಣ