ನಿನ್ನ ಕೊಡುಗೆಯನಿತ್ತು ಹೊರಟು ಹೋಗು!
ಕವಿ ಚಮೂಪತಿಯಾಗಿ
ಚಮೂಪತಿಯು ಕವಿಯಾಗಿ
-ಎಂಬ ಉಕ್ತಿ ಇದೆ ಕನ್ನಡದಲ್ಲಿ. ಅದರ ಭಾವಾರ್ಥ ಖಡ್ಗ ಹಿಡಿದ ಕೈ ಲೇಖನಿಯನ್ನೂ ಹಿಡಿಯಬಲ್ಲುದು ಎಂದು. ಅದರಂತೆ ಡಾ.ಮಹದೇವ ಬಣಕಾರರು ರಾಜಸೂತ್ರವನ್ನು ಹಿಡಿದ ಕೈಯಲ್ಲಿ ಸಾಹಿತ್ಯ ಸೂತ್ರವನ್ನೂ ಹಿಡಿದು ಸವ್ಯಸಾಚಿಯಾಗಿದ್ದಾರೆ. ಅವರು ರಾಜಕಾರಣಿ ಆಗುವುದಕ್ಕೆ ಮೊದಲೇ ಸಾಹಿತಿಯಾಗಿದ್ದರು. ಅವರದು “ಓದು ಒಕ್ಕಾಲು, ಬುದ್ಧಿ ಮುಕ್ಕಾಲು”; ಅವರಲ್ಲಿನ ಪ್ರತಿಭೆಯಂತೂ ಸಿಂಹಪಾಲು! ಅಂದರೆ ಅವರು ಓದಿದ್ದು ಹೈಸ್ಕೂಲ್ ತರಗತಿಯವರೆಗೆ, ಬರೆದದ್ದು ಭಾವ ಗೀತದಿಂದ ಮಹಾಕಾವ್ಯದವರೆಗೆ ಎಂದು. ದೈವದತ್ತವಾದ ಪ್ರತಿಭೆ, ಬದುಕು ಕೊಟ್ಟ ಅನುಭವ ಇವುಗಳಿಂದಾಗಿ ಕವಿ, ವಿಮರ್ಶಕ, ಸಣ್ಣಕತೆಗಾರ, ನಾಟಕಕಾರ, ವಚನಕಾರ, ಸಂಶೋಧಕ, ಪತ್ರಿಕೋದ್ಯಮಿ, ವಿಚಾರವಾದಿ ಏನೆಲ್ಲ ಆಗಿದ್ದಾರೆ. ತನ್ಮೂಲಕ ಕನ್ನಡಮ್ಮನ ಮಡಿಲು ತುಂಬಿದ್ದಾರೆ, ಮುಡಿಯ ಸಿಂಗರಿಸಿದ್ದಾರೆ. ರಾಜಕೀಯ ರಂಗದಲ್ಲೂ ಅವರದು ಗಣನೀಯ ಸೇವೆ. ಅನೇಕ ವರ್ಷಗಳವರೆಗೆ ಕರ್ನಾಟಕ ರಾಜ್ಯದ ಎರಡೂ ಸದನಗಳಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಮಹದೇವ ಬಣಕಾರರ ರಾಜಕೀಯ ಗುರುಗಳು ಪಾಟೀಲ್ ಪುಟ್ಟಪ್ಪನವರು, ಅಧ್ಯಾತ್ಮ ಗುರುಗಳು ಸಿರಿಗೆರೆಯ ಬೃಹನ್ಮಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಜಗದ್ಗುರು ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಪೂಜ್ಯರ ಬಗೆಗೆ ಬಣಕಾರರದು ಅನನ್ಯವಾದ ಭಕ್ತಿ. ಒಂದೆಡೆ ಸ್ಮರಿಸುತ್ತಾರೆ- “ನಾನೊಂದು ಸುಟ್ಟ ಬಟ್ಟೆ ಇಡಲೂ ಬಾರದು, ಉಡಲೂ ಬಾರದು, ಅದನ್ನು ಇಡಲೂ ಬರುವಂತೆ, ಉಡಲೂ ಬರುವಂತೆ ಮಾಡಿದ ಕಾರುಣ್ಯ, ಸಿರಿಗೆರೆ ಶ್ರೀಗಳವರದು. ಅದಕ್ಕಾಗಿಯೇ ಅವರು ನನ್ನ ಆರಾಧ್ಯ ದೇವರು. ಅವರ ಮೂಲಕವೇ ನಾನು ಇಹದ ಸುಖವನ್ನೂ, ಪರದ ನಿಃಶ್ರೇಯಸ್ಸನ್ನೂ ಕಾಣಬೇಕಾಗಿದೆ” ಎಂದು.
ಇಂತಿದ್ದರೂ ಗುರುಗಳು ಬಣಕಾರರ ರಾಜಕೀಯ ತಪ್ಪಿಸಲಾಗಲಿಲ್ಲ, ಪಾಟೀಲ ಪುಟ್ಟಪ್ಪನವರು ಬೀಡಿ ಬಿಡಿಸಲಾಗಲಿಲ್ಲ! ಜುಬ್ಬದ ಎಡ ಬಲದ ಜೇಬುಗಳಲ್ಲಿ ಬೀಡಿ, ಬೆಂಕಿ ಪೊಟ್ಟಣ ಇದ್ದ ಹಾಗೆ ಸಾಹಿತ್ಯ ಮತ್ತು ರಾಜಕೀಯಗಳು ಬಣಕಾರರ ಜೊತೆಯಲ್ಲೇ ಬದುಕು ಮಾಡಿದವು.
ಶ್ರೀಯುತರಿಗೆ ಪತ್ನಿ ಪುತ್ರರ ಮೇಲೆ ಎಷ್ಟು ಪ್ರೇಮವೋ, ಅಷ್ಟೇ ಪ್ರೇಮ ನಾಡು-ನುಡಿಗಳ ಬಗೆಗೆ. ಹೆತ್ತ ತಾಯಿ ಹೊತ್ತ ನೆಲ ಎರಡೂ ಪವಿತ್ರ, ಅಷ್ಟೇ ಪವಿತ್ರ ಬದುಕು ಕೊಟ್ಟ ಭಾಷೆ ಎನ್ನುತ್ತಾರೆ. ಅವರ ಗದ್ಯ ಪದ್ಯಗಳಲ್ಲಿ, ವಚನಗಳಲ್ಲಿ ಮಣ್ಣಿನ ವಾಸನೆ ಇದೆ, ಕನ್ನಡದ ಕಳಕಳಿ ಇದೆ. ಅಲ್ಲದೆ, ಅವರದು ಜಾನಪದೀಯ ಸೊಗಡನ್ನು ಮೈಗೂಡಿಸಿಕೊಂಡ ಚೇತನ. ಅವರ ನುಡಿ ನುಡಿಯಲ್ಲೂ ಮಣ್ಣಿನ ಮೋಹ, ಭಾಷಾ ವ್ಯಾಮೋಹಗಳು ಗರಿಗೆದರಿ ನಿಂತಿರುವುದನ್ನು ಕಾಣುತ್ತೇವೆ. ಅವರ ಜೀವನೋತ್ಸಾಹವೂ ಮೆಚ್ಚುವಂಥದು.
ಮಹದೇವ ಬಣಕಾರರು ಹುಟ್ಟಿದ್ದು ಈಗಿನ ಹಾವೇರಿ ಜಿಲ್ಲೆಯ, ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ, ಅಕ್ಟೋಬರ್ 3, 1932ರಲ್ಲಿ. ಲಿಂಗೈಕ್ಯರಾದದ್ದು ನವೆಂಬರ್ 12, 2001ರಂದು. ಸರಿಯಾಗಿ 69 ವರ್ಷ 45 ದಿನಗಳ ಸಾರ್ಥಕ ಬದುಕು ಅವರದು. ಬದುಕೇನೋ ಸಾರ್ಥಕ, ಆದರೆ ಪಟ್ಟ ಬವಣೆ ಹೇಳತೀರದು. ಅವರು ಮನೆಯಲ್ಲಿದ್ದುದಕ್ಕಿಂತ ಹೆಚ್ಚು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದರು. ಅವರೇ ಹೇಳುತ್ತಾರೆ:
ಪೆನ್ನಿಗಂಟಿತು ಬದುಕು, ಪೆನ್ನಿಗಂಟಿತು ಬರಹ
ಒಂದನೊಂದೆಂದಿಗೂ ಅಗಲದಂತೆ
ಕವಿಯನಾಶ್ರಯಿಸಿದುವು ಬದುಕು ಬರಹಗಳೆರಡು
ಒಂದೆ ನಾಣ್ಯದ ಎರಡು ಮೊಗಗಳಂತೆ
ಹಸಿದ ದಿನಗಳಿಗಿಂತ ಉಂಡ ದಿನಗಳನೆಣಿಸಿ
ಉಳಿದುಕೊಂಡರೆ ಹೆಚ್ಚು ಬದುಕಿನಲ್ಲಿ
ಉಗುಳನು೦ಡರು ಸರಿಯೆ ಉಳಿದುಕೊಳ್ಳಲೆ ಬೇಕು
ಏನನಾದರೂ ಸಾಧಿಸುವ ದೃಷ್ಟಿಯಲ್ಲಿ!
ಇದು ಅವರು ಕಟ್ಟಿದ ಹಾಡು, ಪಟ್ಟಂಥ ಪಾಡು! ಆದರೂ ಅವರು ಧ್ಯೇಯವಾದಿ. ಮುಂದುವರಿದು ಹೇಳುತ್ತಾರೆ:
ಮಣ್ಣ ಕೊಡುವ ದೇಹ ತಣ್ಣಗಾಗುವ ತನಕ
ಹಿಡಿದ ಕಾಯಕದಲ್ಲಿ ನಿರತನಾಗು
ಜನರ ಕಲ್ಯಾಣಕ್ಕೆ ಜಗದ ಉದ್ಧಾರಕ್ಕೆ
ನಿನ್ನ ಕೊಡುಗೆಯನಿತ್ತು ಹೊರಟು ಹೋಗು!
ಇದು ಅವರ ಆಶಾವಾದಿತ್ವ, ಅವರ ಜೀವನ ಗಾಯತ್ರಿಯೂ ಅಹುದು! ನೋವುಂಡು ನಲಿವು ನೀಡಿದ ಈ ಕವಿಗೆ ಜೀವನ ಒಂದು ಸವಾಲಾಯಿತೇ ಹೊರತು ಸಮಸ್ಯೆಯಾಗಲಿಲ್ಲ; ಅಪರಿಹಾರವೂ ಎನಿಸಲಿಲ್ಲ. ಇದು ಅನುಕರಣೀಯ, ಶ್ಲಾಘನೀಯ ಕೂಡ.
ಮಹದೇವ ಬಣಕಾರರು ಹುಟ್ಟು ಕವಿ, ಕಟ್ಟಿದ ಕವಿ ಅಲ್ಲ. ಇವರು ಧಾರವಾಡದ ಕರ್ನಾಟಕ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ (1951ರಲ್ಲಿ) “ಕಾವ್ಯೋದಯ” ಎಂಬ ಕವನ ಸಂಕಲನವನ್ನು ಹೊರತಂದರು ಅವರ ಅಣ್ಣ ಎಂ.ಜಿ.ಬಣಕಾರರ ನೆರವಿನಿಂದ, ಅದಕ್ಕೆ ಅವರ ವಿದ್ಯಾಗುರು ಸಾಲಿ ರಾಮಚಂದ್ರರಾಯರು ಮುನ್ನುಡಿ ಬರೆದಿದ್ದಾರೆ. ಅಂದಿಗೆ ಅವರ ವಿದ್ಯೆ ನೈವೇದ್ಯವಾಯಿತು. ಶಾಲೆಗೆ ಶರಣು ಹೊಡೆದು ಹಳ್ಳಿಗೆ ಬಂದು ಎಮ್ಮೆ ಕಾಯುತ್ತಲೇ ಕವನ ಬರೆಯತೊಡಗಿದರು. ಅನಂತರ ಪತ್ರಿಕೋದ್ಯಮ ಅವರನ್ನು ಕೈ ಬೀಸಿ ಕರೆಯಿತು. ದಾವಣಗೆರೆಗೆ ಬಂದು “ಜಾಗೃತಿ” ಎಂಬ ಮಾಸಪತ್ರಿಕೆಯನ್ನು ಹೊರಡಿಸಿದರು. ಆದರೆ ಅದರಲ್ಲಿ ಕೈ ಸಾಗಲಿಲ್ಲ. ಶ್ರೀ ಗುರುಗಳ ಆದೇಶದಂತೆ ಸಾಹಿತ್ಯ, ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಅದರ ಫಲವಾಗಿ, “ಬಣ್ಣದ ಕಾರಂಜಿ”, “ಹೊನ್ನ ಹುಟ್ಟು” (ಕವಿತೆಗಳು), “ಮಹದೇವ ಬಣಕಾರ ವಚನಗಳು” (ವಚನ ಸಂಕಲನ), “ವಿಶ್ವಬಂಧು ಮರುಳಸಿದ್ಧ ಮತ್ತು ಶ್ರೀ ಶಿವಕುಮಾರ ಚರಿತೆ” (ಭಾಮಿನೀ ಷಟ್ಟದಿ ಮಹಾ ಕಾವ್ಯಗಳು), “ಮಾದನ ಮಗ ಮತ್ತು ಇತರ ಕಥೆಗಳು” (ಸಣ್ಣಕಥಾ ಸಂಕಲನ), “ಕಲ್ಯಾಣ ಕ್ರಾಂತಿ” (ನಾಟಕ), “ಆಂಗ್ಲರ ಆಡಳಿತದಲ್ಲಿ ಕನ್ನಡ” (ಸಂಶೋಧನಾ ಕೃತಿ) ಮೊದಲಾದ ಸುಮಾರು ನಲವತ್ತು ಮೌಲಿಕ ಗ್ರಂಥಗಳು ಬೆಳಕು ಕಂಡಿವೆ. “ಬಣ್ಣದ ಕಾರಂಜಿ” ಅವರಿಗೆ ಕವಿ ಪಟ್ಟ ಕೊಟ್ಟಿದ್ದರೆ, “ವಿಶ್ವ ಬಂಧು ಮರುಳಸಿದ್ಧ”, ಮಹಾಕವಿ ಪಟ್ಟ ಕೊಟ್ಟಿದೆ. ಕುವೆಂಪು ಅವರ “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯದಿಂದ ಚ೦ದ್ರಶೇಖರ ಕಂಬಾರರ “ಚಕೋರಿ”ಯವರೆಗೆ ಅಂದರೆ ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಹದಿನೈದು ಮಹಾಕಾವ್ಯಗಳು ಬಂದಿವೆ ಕನ್ನಡದಲ್ಲಿ. ಅವುಗಳಲ್ಲಿ ಮಹದೇವ ಬಣಕಾರರ “ವಿಶ್ವ ಬಂಧು ಮರುಳಸಿದ್ಧ” ಒಂದು. ಅವರ ವಚನ ಸಂಪುಟಗಳಲ್ಲಿ “ಮಹದೇವ ಬಣಕಾರ ವಚನಗಳ” ಆತ್ಮ, ಅಧ್ಯಾತ್ಮ, ಲೌಕಿಕ, ಪಾರಮಾರ್ಥ ವಿಷಯಗಳನ್ನು ಗರ್ಭೀಕರಿಸಿಕೊಂಡಿರುವ ಶ್ರೇಷ್ಠ ವಚನ ಸಾಹಿತ್ಯ ಗ್ರಂಥ. “ಆಂಗ್ಲರ ಆಡಳಿತದಲ್ಲಿ ಕನ್ನಡ” ಶ್ರೀಯುತರ ಆಚಾರ್ಯ ಕೃತಿ (master piece). ಕನ್ನಡದ ಒಂದು ಶ್ರೇಷ್ಠ ಸಂಶೋಧನ ಗ್ರಂಥ.
ಮಹದೇವ ಬಣಕಾರರ ಬಹುಮುಖ ಪ್ರತಿಭೆಯನ್ನು ಗುರುತಿಸಿ, 1986ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ಲಭಿಸಿವೆ. ಕುವೆಂಪು ವಿಶ್ವವಿದ್ಯಾಲಯವು 1997ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ಇಂಥವೆಷ್ಟೋ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಬಣಕಾರರು ಬದುಕನ್ನು ಅಪ್ಪಿದರು. ಸಾವನ್ನು ಕ್ರೀಡಾ ಮನೋಭಾವದಿಂದಲೇ ಸ್ವೀಕರಿಸಿದರು. ಸಾವು ಅವರಿಗೆ ಭೀತಿಯ ವಸ್ತುವಾಗಿರಲಿಲ್ಲ, ಪ್ರೀತಿಯ ನೇಹಿಗನಾಗಿತ್ತು. ಹಿಂದೊಮ್ಮೆ ಕಾಯಿಲೆ ಉಲ್ಬಣಿಸಿ ಈಗಲೋ ಆಗಲೋ ಎನ್ನುವಂತಾಗಿತ್ತು. ಪುಣ್ಯವಶಾತ್ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದರು. ಆ ಸಂದರ್ಭ ಕುರಿತು ಈಗಿನ ಸಿರಿಗೆರೆ ಬೃಹನ್ಮಠಾಧ್ಯಕ್ಷರಾದ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಗಡ ಮಾತನಾಡುತ್ತಾ ನಿಂತೆಡೆಯಲ್ಲೇ ಒಂದು ವಚನ ಕಟ್ಟಿ ವಾಚಿಸಿದರು.
ಇದೇ ಅವರ ಲೇಖನಿಯಿಂದ ಬಂದ ಅಪ್ರಕಟಿತ ಕೊನೆಯ ರಚನೆ, ಅದು ಹೀಗಿದೆ:
ಶರಣಂಗೆ “ಮರಣವೇ ಮಹಾನವಮಿ” ಎಂಬುದು
ಎನಗೆ ಮರಣ ಸಂದಿ ಮರಳಿ ಪೋದುದೇಕೆ?
ಕಸುಗಾಯ ಹಿಸುಕಿ ಮೆಲಿದವರುಂಟೇ?
ಆನು ಹಣ್ಣಾಗದ ಕಾರಣ ನೀನುಣ್ಣಲೊಲ್ಲೆಯಾದೆಯಯ್ಯಾ!
ಎನ್ನ ಹಣ್ಣ ಮಾಡಿ ನೀನುಣ್ಣುವಂತೆ ಮಾಡಾ
ಎನ್ನ ವರಗುರು ಶಿವಕುಮಾರ ಪ್ರಭುವೆ!
ಅಂದಿನ ಕಸುಗಾಯಿ ಇಂದು ಉಣ್ಣುವ ಹಣ್ಣಾಯಿತೆ? ಇಷ್ಟು ಬೇಗ ಆ ಹಣ್ಣು "ವರಗುರು ಶಿವಕುಮಾರ ಪ್ರಭುವಿಗೆ” ಬೇಕಾಯಿತೆ? ಹಣ್ಣು ತೊಟ್ಟು ಕಳಚಿ ಬೀಳುವಾಗ ತನಗೇ ಬೇಕೆಂದು ಕೈಗೆತ್ತಿಕೊಂಡನೆ? ನೆನೆದರೆ ಸಾಕು ಮಾತು ಮೂಕವಾಗುತ್ತೆ, ಮನಸ್ಸು ಗರಿ ಮುದುಡಿ ಕೂರುತ್ತೆ. ಮಣ್ಣಿನಲ್ಲಿ ಹುಟ್ಟಿ, ಮಣ್ಣಿಗಾಗಿ, ಮಾತಿಗಾಗಿ ದುಡಿದ, ಮಡಿದ ಡಾ. ಮಹದೇವ ಬಣಕಾರರು ನಿಜಕ್ಕೂ ಒಬ್ಬ ಬ೦ಗಾರದ ಮನುಷ್ಯ.
-ಡಾ. ಸ. ಶಿ. ಮರುಳಯ್ಯ