03-11-2023 10:43 PM
ಪರಮ ಪೂಜ್ಯ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಭಕ್ತಿಪೂರ್ವಕ ನಮಸ್ಕಾರಗಳು. ಕನ್ನಡ ರಾಜ್ಯೋತ್ಸವವನ್ನು ಕನ್ನಡ ಭಾಷಾ ಏಳ್ಗೆಗೆ ಶ್ರಮಿಸುತ್ತಿರುವ ಕವಿಗಳು ಮತ್ತು ಬರಹಗಾರರ ಸಮ್ಮುಖದಲ್ಲಿ ಸಿರಿಗೆರೆ ಮಠದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಸ್ವಾಮೀಜಿಯವರ “ಬಿಸಿಲು ಬೆಳದಿಂಗಳು” ಶೀರ್ಷಿಕೆಯ ಬರಹ “ನಾಡಿನಾಚೆ ಇರುವ ನಾಡು - ನುಡಿಯ ಸೆಳೆತ!” ನಮ್ಮಂತಹ ಪರದೇಶ ವಾಸಿಗಳಿಗೆ ಚೈತನ್ಯ ತುಂಬಿದೆ. ಮೂವತ್ತಾರು ವರ್ಷಗಳಿಂದ ಅಮೇರಿಕಾದಲ್ಲಿ ವಾಸಿಸುತ್ತಿರುವ ನಮಗೆ ಮಾತೃಭಾಷೆ ಕನ್ನಡವು ರಕ್ತದ ಕಣಕಣಗಳಲಿ ಬೇರೂರಿದೆ. ನಿಮ್ಮ ಬರಹ ನಮ್ಮ ಅನಿಸಿಕೆಗಳನ್ನು ಸೊಗಸಾಗಿ ವರ್ಣಿಸಿದೆ. ಕೆಲವು ದಿವಸಗಳ ಹಿಂದೆ ತಾವು ಜರ್ಮನಿಯಲ್ಲಿದ್ದಾಗ ಪ್ರಯಾಣದ ಆಯಾಸವನ್ನು ಮರೆತು ಕನ್ನಡ ಬರಹದಲ್ಲಿ ನಿರತರಾಗಿದ್ದುದನ್ನು ತಿಳಿದು ಆಶ್ಚರ್ಯವಾಯಿತು. ಕನ್ನಡ ರಾಜ್ಯೋತ್ಸವದ ಸಲುವಾಗಿ ನನ್ನದೊಂದು ಅರುಕು ಮುರುಕು ಕವನದಲ್ಲಿ ಕನ್ನಡ ಭಾಷಾ ಚರಿತ್ರೆಯ ಸಾರಾಂಶದ ಸಾರಾಂಶವನ್ನು ಸೆರೆಹಿಡಿಯುವ ಹುಚ್ಚು ಪ್ರಯತ್ನ ಮಾಡಿದ್ದೇನೆ.
ಕನ್ನಡ
ಹಳೆಗನ್ನಡ ನಡುಗನ್ನಡ
ನವಗನ್ನಡ ಇರಲೆ|
ಕಾಲಚಕ್ರದಲಿ ಬೆಳೆದು,
ಬ್ರಹ್ಮಗಿರಿ, ನಿಶದಿ, ಹಲ್ಮಿಡಿ,
ಐಹೊಳೆ ಶಾಸನಗಳಲಿ
ಉಳಿದೆದ್ದ ತಾಳ್ಮೆಯ ಕನ್ನಡ ||೧||
ಕನ್ನಡ… ಕನ್ನಡ… ಕನ್ನಡ…
ಅಮರರು ಪುರಾತನರು
ಕನ್ನಡವ ಧರೆಗೆ ತಂದವರು|
ಕ್ರಿಸ್ತಪೂರ್ವ ಶತಕ
ಮೂರರ ‘ಅಶೋಕನ ಬ್ರಾಹ್ಮಿ’
ಲಿಪಿಯಲೇ ಉದಯಿಸಿದ
ಕನ್ನಡವನೆ ಆಡಿದವರು || ೨||
ಮೊದಲ ಕನ್ನಡ ಲಕ್ಷಣಕಾವ್ಯ
ರಾಷ್ಟ್ರಕೂಟರ ‘ಕವಿರಾಜ ಮಾರ್ಗ’|
ಮೊದಲ ಕನ್ನಡಕಥಾ ಸಂಗ್ರಹ
ಜಿನ ಚರಿತೆಯ ‘ವಡ್ಡಾರಾಧನೆ’|
ಪಂಪ ಬರೆದ ‘ಆದಿ ಪುರಾಣ’ದ ಜೊತೆ
‘ವಿಕ್ರಮಾರ್ಜುನ ವಿಜಯ’ ||೩||
ಪೊನ್ನ, ರನ್ನ, ನಾಗವರ್ಮ
ದುರ್ಗಸಿಂಹ, ಶಾಂತಿನಾಥ
ನಾಗಚಂದ್ರ, ಎಲ್ಲಾ ಸೇರಿ
ಬರೆದರೆಮ್ಮ ಹಳೆಗನ್ನಡವ|
ನೆಟ್ಟರವರು ಕಸುವಾದ
ಮಣ್ಣಿನಲಿ ಕನ್ನಡ ಸಸಿಯ ||೪||
ಕನ್ನಡ… ಕನ್ನಡ… ಕನ್ನಡ…
ಕನ್ನಡದ ಹೃದಯ ಮಿಡಿ
ನಡುಗನ್ನಡ ಸಾಹಿತ್ಯ |
ಕ್ರಾಂತಿಕಾರಿ ವಚನ ಸಾಹಿತ್ಯ
ಕೀರ್ತನೆ, ರಗಳೆ, ಷಟ್ಪದಿ,
ಕಥಾಮಂಜರಿ, ದಾಸರ
ಭಕ್ತ ಸಾಹಿತ್ಯದಿರುಮೆ ||೫||
ಅಲ್ಲಮ, ಬಸವ
ಅಕ್ಕಮಹಾದೇವಿ
ಹರಿಹರ, ರಾಘವಾಂಕ, ಷಡಕ್ಷರಿ
ಜನ್ನ, ಕುಮಾರ ವ್ಯಾಸ|
ಕನಕ, ಪುರಂದರ ತತ್ವ ವರೇಣ್ಯರ
ಸರ್ವಜ್ಞರ ಸರಳ ಸುಮಧುರ ಕನ್ನಡ ||೬||
ಕನ್ನಡ… ಕನ್ನಡ… ಕನ್ನಡ…
ಹೊಸಗನ್ನಡವಿಂದಿನ ಜಾಗೃತಿ
ಸಂಸ್ಕೃತಿ, ಪ್ರಕೃತಿ ವಿವರಣೆಯೆ|
ಜನಪದ, ನವೋದಯ,
ಪ್ರಗತಿಶೀಲ, ನವ್ಯ, ದಲಿತ-ಬಂಡಾಯ
ಸಾಹಿತಿಗಳ ಚಿಂತನೆ, ಬಯಕೆ
ಭಾವನೆಗಳ ಪರಿಶೋಧನೆಯ ಫಲ ||೭||
ಹೊಸಗನ್ನಡದ ಕೆಂಪುವಾರಣ ಮುದ್ದಣ್ಣ|
ಶರೀಫರು, ಡಿವಿಜಿ
ಬೇಂದ್ರೆ, ಕುವೆಂಪು ಕಾದಂಬರಿ
ಕಾರಂತರ ಜೊತೆ ನೂರಾರು
ಕವಿಗಳ ಬರಹ ವೈವಿಧ್ಯತೆಯೆ
ಸಿರಿಗನ್ನಡದ ಹಿರಿಮೆ ||೮||
ಕನ್ನಡ… ಕನ್ನಡ… ಕನ್ನಡ…
ತಿಮ್ಮಪ್ಪ ಸಿದ್ಧಪ್ಪ ಆನೆಕೊಂಡ
ಮೆಳ್ಳೆಕಟ್ಟೆ (ದಾವಣಗೆರೆ ತಾ||)
Dr. Thimmappa Anekonda
Lake Oswego, Oregon, USA