ಆನಗೋಡು ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಜಿ ಚನ್ನಪ್ಪ ಪದವಿ ಪೂರ್ವ ಕಾಲೇಜಿನ ನೂತನ ಭವ್ಯವಾದ ಕಟ್ಟಡ : ಪ್ರಗತಿಯಲ್ಲಿರುವ ಕಾಮಗಾರಿ

  •  
  •  
  •  
  •  
  •    Views  

ನಮ್ಮ ಮಠದ ಮೂಲ ಪುರುಷ ಕ್ರಾಂತಿಯೋಗಿ ವಿಶ್ವಬಂಧು ಮರುಳಸಿದ್ಧರಿಗೂ ದಾವಣಗೆರೆ ತಾಲ್ಲೂಕಿನ  ಆನಗೋಡು ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಮರುಳಸಿದ್ಧರು ತಮ್ಮ ಹೋರಾಟದ ಬದುಕಿನಲ್ಲಿ ಪುರೋಹಿತ ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಪಾಂಡ್ಯ ಅರಸರ ಸೇನೆಯು ಇವರನ್ನು ಬೆನ್ನಟ್ಟಿತು. ಆಗ ಮರುಳಸಿದ್ಧರು ಸೇನೆಯಲ್ಲಿದ್ದ ಆನೆಯ ದಂತ  (ಕೋಡು)ವನ್ನು ಮುರಿದು ತಮ್ಮ ಶೌರ್ಯವನ್ನು ತೋರಿದ ಸ್ಥಳವೇ ಆನಗೋಡು. ಹೀಗಾಗಿ ಈ ಐತಿಹ್ಯದ ನೆನಪಿಗಾಗಿ ಮರುಳಸಿದ್ಧರ ದೇವಾಲಯವಿದೆ. ಅಲ್ಲದೆ ಇಲ್ಲೊಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವೂ ಇತ್ತು. ಮತ್ತು ಕ್ರಿ ಶ ೧೮೪೧ ಸುಮಾರಿನಲ್ಲಿ 'ಮರುಳಸಿದ್ಧ ದೇವರ ಚರಿತ್ರೆ' ಎಂಬ  ಸಾಗಂತ್ಯ ಬರೆದ ಕವಿ ರೇವಣಸಿದ್ಧರು ಓದುವ ಮಠದ ಉಪಾಧ್ಯಾಯರಾಗಿದ್ದುದು  ಇದೇ ಊರಿನಲ್ಲಿ. ಹೀಗಾಗಿ  ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಊರಿನ ಶೈಕ್ಷಣಿಕ ಪ್ರಗತಿಗೆ ಅಪಾರವಾಗಿ ಶ್ರಮಿಸಿದರು.  

ಸುತ್ತಮುತ್ತಲಿನ ೨೦-೩೦ ಹಳ್ಳಿಗಳಿಗೆ ಆನಗೋಡು ಕೇಂದ್ರ ಸ್ಥಾನ. ಇಲ್ಲಿಯ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕಾಗಿ ದೂರದ ದಾವಣಗೆರೆ ನಗರವನ್ನು ಅವಲಂಬಿಸಬೇಕಾಗಿತ್ತು. ಅದಕ್ಕಾಗಿ ಇಲ್ಲೊಂದು ಪ್ರೌಢಶಾಲೆಯ ಅಗತ್ಯವಿದೆ ಎಂಬುದನ್ನು ಮನಗಂಡ ಶ್ರೀಗಳು ಪ್ರೌಢಶಾಲೆಯೊಂದನ್ನು ಪ್ರಾರಂಭಿಸಲು ಮುಂದಾದರು. ‌ಆ ಶಾಲೆಗೆ 'ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ' ಎಂದು ನಾಮಕರಣ ಮಾಡಿದರು. ‌ಸ್ಥಳೀಯರ ಸಹಕಾರದಿಂದ ಶಾಲೆಗೆ ಬೇಕಾದ ನಿವೇಶನಕ್ಕಾಗಿ ಹೊಳಲ್ಕೆರೆ ರಸ್ತೆಯ ಬದಿಯಲ್ಲಿರುವ ಸರಕಾರಿ ಜಮೀನನ್ನು ಪಡೆಯಲಾಯಿತು. ಆನಂತರದ ದಿನಗಳಲ್ಲಿ ಇಲ್ಲಿ ಪದವಿ ಪೂರ್ವ ಕಾಲೇಜನ್ನೂ ಸಹ ಪ್ರಾರಂಭಿಸಬೇಕೆಂದು ಸ್ಥಳೀಯ ಮುಖಂಡರು ಶ್ರೀ ಶಿವಕುಮಾರ   ಶಿವಾಚಾರ್ಯ ಮಹಾಸ್ವಾಮಿಗಳವರಲ್ಲಿ ಅರಿಕೆ ಮಾಡಿಕೊಂಡರು.  ಅಷ್ಟೊತ್ತಿಗೆ ದಾವಣಗೆರೆ ನಗರದ ಹೃದಯ ಭಾಗದಲ್ಲಿರುವ ನಮ್ಮ ಶ್ರೀ ಗುರುಶಾಂತೇಶ್ವರ ಸ್ಮಾರಕ ವಿದ್ಯಾರ್ಥಿ ನಿಲಯದ ಕಟ್ಟಡದಲ್ಲಿ ಶ್ರೀ  ಜಿ ಚನ್ನಪ್ಪ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲಾಗಿತ್ತು.  ಕಾರಣಾಂತರಗಳಿಂದ  ಈ ಕಾಲೇಜನ್ನೇ ಆನಗೋಡು ಗ್ರಾಮಕ್ಕೆ ಸ್ಥಳಂತರಿಸಬೇಕೆಂಬ ಚರ್ಚೆಯು ನಡೆಯುತಿತ್ತು. ಅದಕ್ಕೆ ಸ್ಪಂದಿಸಿದ ಪೂಜ್ಯರು ದಾವಣಗೆರೆಯ ಪದವಿ ಪೂರ್ವ ಕಾಲೇಜನ್ನು ಆನಗೋಡಿಗೆ ಸ್ಥಳಾಂತರಿಸಲು ಒಪ್ಪಿದರು. ೧೯೭೨ರ ಶೈಕ್ಷಣಿಕ ವರ್ಷದಿಂದ ಆನಗೋಡಿನಲ್ಲಿ ಕಾಲೇಜು ಪ್ರಾರಂಭವಾಯಿತು.

ಶ್ರೀ ಜಿ ಚನ್ನಪ್ಪ ನಮ್ಮ ಸಮಾಜದ ಪ್ರಾತಃಸ್ಮರಣೀಯ ವ್ಯಕ್ತಿಗಳಲ್ಲಿ ಹೊಳಲ್ಕೆರೆ ತಾಲ್ಲೂಕಿನ  ದೊಗ್ಗನಾಳ್ ಗ್ರಾಮದ ಶ್ರೀ ಜಿ ಚನ್ನಪ್ಪನವರು ಪ್ರಮುಖರು. ನ್ಯಾಯಶಾಸ್ತ್ರ ಪದವೀಧರರಾಗಿದ್ದ ಇವರು ಶ್ರೀ ಸಾಧು ಸದ್ಧರ್ಮ ಸಂಘದ ಮೊದಲ ಅಧ್ಯಕ್ಷರಾಗಿದ್ದ ಬಿ. ಲಿಂಗಯ್ಯನವರ ಮಗಳು ಪಾರ್ವತಮ್ಮನವರನ್ನು ವಿವಾಹವಾಗಿದ್ದರು. ಚನ್ನಪ್ಪನವರು ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದವರು. ಇವರ ಕಾಲದಲ್ಲಿ ಹಳ್ಳಿಗಳು ಶಾಲೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಕಂಡವು. ಮೈಸೂರು ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಮಂಡಳಿಯ ಸದಸ್ಯರಾಗಿ ಅಪಾರ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ನಂತರ ಮೈಸೂರು ಸರ್ಕಾರದ ಸಹಾಯಕ ಅಡ್ವಕೇಟ್ ಜನರಲ್ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾಗಿ  ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು. ಬಿ ಲಿಂಗಯ್ಯನವರು ಲಿಂಗೈಕ್ಯರಾದ ನಂತರ ಶ್ರೀ ಸಾಧು ಸದ್ಧರ್ಮ ಸಂಘದ ಅಧ್ಯಕ್ಷರಾಗುವ ಯೋಗವು ಇವರಿಗೆ ಒದಗಿ ಬಂದಿತು. ಅಂದಿನಿಂದ ಶ್ರೀ ಜಿ ಚನ್ನಪ್ಪನವರು

ಶ್ರೀ ಮಠದ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ದುಡಿದರು. ಇವರ ಸೇವೆಯ ಸ್ಮರಣೆಗಾಗಿ ಶ್ರೀ ಶಿವಕುಮಾರ   ಶಿವಾಚಾರ್ಯ ಮಹಾಸ್ವಾಮಿಗಳವರು ಈ ಕಾಲೇಜಿಗೆ ಶ್ರೀ ಜಿ ಚನ್ನಪ್ಪ ಪದವಿ ಪೂರ್ವ ಕಾಲೇಜು ಎಂದು ನಾಮಕರಣ ಮಾಡಿದರು. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ೨೧ನೆಯ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಟ್ಟಾಭಿಷೇಕ(೧೯೭೯) ಸಮಿತಿಯ ಅಧ್ಯಕ್ಷರಾಗಿಯೂ ಶ್ರೀ ಜಿ ಚನ್ನಪ್ಪನವರು ಕಾರ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 ನೂತನ ಭವ್ಯ ಕಟ್ಟಡ

ನಾನಾ ಕಾರಣಗಳಿಂದ ಆನಗೋಡಿನ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಕಾಲಕೂಡಿ ಬಂದಿರಲಿಲ್ಲ. ಏಳೆಂಟು ನೂರು ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದು ಕೊಠಡಿಗಳ ಕೊರತೆಯಿದ್ದೂ ಸ್ಥಳೀಯ ಜನರ ಒತ್ತಾಯವಿದ್ದರೂ ಸಮನ್ವಯದ ಕೊರತೆಯಿಂದ ಕಟ್ಟಡ ನಿರ್ಮಾಣ ಕಾರ್ಯ ಹಿನ್ನಡೆಯಾಗಿತ್ತು. ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪ ಶಕ್ತಿಯಿಂದ ಈಗ  ಶಾಲಾ ಸಮುಚ್ಚಯದ ಭವ್ಯವಾದ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಸು. ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂರು ಮಹಡಿಗಳ ವಿಶಿಷ್ಟ ವಾಸ್ತುಶಿಲ್ಪದಿಂದ ಕೂಡಿದ ಕಟ್ಟಡ ತಲೆಯೆತ್ತುತ್ತಿದೆ. ನೂತನ ಕಟ್ಟಡದಲ್ಲಿ ಮೂವತ್ತಾರು ಕೊಠಡಿಗಳು ಲಭ್ಯವಿದ್ದು, ವಿಶಾಲ ತರಗತಿ ಕೋಣೆಗಳು, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ವಿಶ್ರಾಂತಿ ಕೋಣೆಗಳು, ಪ್ರತ್ಯೇಕ ಶೌಚಾಲಯಗಳು ಮತ್ತು ಮೂಲಭೂತ  ಸೌಕರ್ಯಗಳಿರುತ್ತವೆ.ಈಗಾಗಲೇ ನೆಲ ಮಹಡಿಗೆ ಆರ್ ಸಿ ಸಿ ಮುಗಿದಿದ್ದು, ಸಮಾರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ. ಬಹುದಿನಗಳ ನಿರೀಕ್ಷೆಯ, ಬಹುಜನರ ಅಪೇಕ್ಷಿತ ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಜಿ ಚನ್ನಪ್ಪ ಪದವಿ ಪೂರ್ವ ಕಾಲೇಜಿನ ಶಾಲಾ ಸಮುಚ್ಚಯದ ನೂತನ ಕಟ್ಟಡ ೨೦೨೩-೨೪ನೆಯ ಶೈಕ್ಷಣಿಕ ಸಾಲಿನಲ್ಲಿ ಭಾಗಶಃ ಭಾಗ ಸಿದ್ದಗೊಳ್ಳುತ್ತಿದೆ. ನಂತರದ ಕೆಲವೇ ದಿನಗಳಲ್ಲಿ  ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ.

 - ನಾಗರಾಜ ಸಿರಿಗೆರೆ