ಸಿರಿಗೆರೆಯಲ್ಲಿ ನ.3 ರಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಗೋಷ್ಠಿಗಳಲ್ಲಿ ಕನ್ನಡದ ಕಂಪು, ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ

  •  
  •  
  •  
  •  
  •    Views  

ಸಿರಿಗೆರೆ: ಇಲ್ಲಿನ  ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ  ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನ. 3,4 ಮತ್ತು 5 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು  ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ  ದಿವ್ಯ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ಜರುಗಲಿದ್ದು, ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  

ನ.3ರ ಶುಕ್ರವಾರ ಬೆಳಗ್ಗೆ 8ಕ್ಕೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿದೇವಿ ಪ್ರತಿಮೆ ಮೆರವಣಿಗೆ ನಡೆಯುತ್ತದೆ. ನಂತರ ಧ್ವಜಾರೋಹಣ ಮತ್ತು 5000 ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಉದ್ಘಾಟಿಸಲಿದ್ದು, ಪ್ರತಿದಿನ ಸಂಜೆ ನಾಡಿನ ಹೆಸರಾಂತ ಕಲಾತಂಡಗಳಿಂದ ನಾಟಕ, ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗುತ್ತವೆ.

ಗೋಷ್ಠಿಗಳಲ್ಲಿ ಕನ್ನಡ ಕಂಪು : 

ನ.3ರ ಶುಕ್ರವಾರ 10.30ಕ್ಕೆ ಕನ್ನಡ ಸಾಹಿತ್ಯ ಮತ್ತು ಪರಂಪರೆಯ ಗೋಷ್ಠಿಯಲ್ಲಿ ಕನ್ನಡ ಪ್ರಾಚೀನ ಸಾಹಿತ್ಯ ಸಿರಿ ಎಂಬ ವಿಷಯದ ಬಗ್ಗೆ ಚಿಕ್ಕಮಂಗಳೂರಿನ ಡಾ. ಹೆಚ್.ಎಸ್.ಸತ್ಯನಾರಾಯಣ, ನಡುಗನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಬಗ್ಗೆ ಶಿವಮೊಗ್ಗದ ಡಾ. ಶುಭ ಮರವಂತೆ, ಬಂಡಾಯ ಮತ್ತು  ದಲಿತ ಕಾವ್ಯದ ವಿಭಿನ್ನ ನೆಲೆಗಳು ಕುರಿತು ಬೆಂಗಳೂರಿನ ಡಾ. ಟಿ.ಯಲ್ಲಪ್ಪ ಹಾಗೂ ಕನ್ನಡ ಮಹಿಳಾ ಸಾಹಿತ್ಯ ನಡೆದು ಬಂದ ದಾರಿ ಕುರಿತು ಚಿತ್ರದುರ್ಗದ ಸಿ.ಬಿ.ಶೈಲ ಜಯಕುಮಾರ್ ಮಾತನಾಡಲಿದ್ದಾರೆ.

ನ.4ರ ಶನಿವಾರ ಬೆಳಗ್ಗೆ 10.30ಕ್ಕೆ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಗೋಷ್ಠಿಯಲ್ಲಿ ಬೆಂಗಳೂರಿನ ಕವಯತ್ರಿ ಡಾ. ವಿಜಯಶ್ರೀ ಸಬರದ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯರಾದ ಡಾ. ಚಿದಾನಂದ ಸಾಲಿ, ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಡಿ.ಮಂಜುನಾಥ್ ಹಾಗೂ ವಿವಿಧ ಜಿಲ್ಲೆಯ 30 ಕವಿಗಳು ಭಾಗವಹಿಸಲಿದ್ದಾರೆ. 

ನ.4ರ ಮಧ್ಯಾಹ್ನ 2.30ಕ್ಕೆ ಮರೆಯಲಾಗದ ಮಹನಿಯರು ಗೋಷ್ಠಿಯಲ್ಲಿ ಲಿಂ.ಶಿವಕುಮಾರ ಶ್ರೀಗಳ ಜೀವನ ಮತ್ತು ಸಾಧನೆ ಕುರಿತು ಮೈಸೂರು ಶ್ರೀ ಕುಂದೂರು ಮಠದ ಡಾ.ಶರತ್ಚಂದ್ರ ಸ್ವಾಮಿಜಿಯವರು ವಿಷಯ ಮಂಡನೆ ಮಾಡಲಿದ್ದು, ಸಮಾಜ ಶಕಪುರುಷ ಡಾ. ಹಿರೇಮಲ್ಲೂರು ಈಶ್ವರನ್ ಕುರಿತು ಪ್ರೋ.ಶಶಿಧರ ತೋಡಕರ್, ಕನ್ನಡ ಪ್ರಪಂಚ ಪಾಟೀಲ ಪುಟ್ಟಪ್ಪನವರ ಬಗ್ಗೆ ಸಂಕಮ್ಮ ಜಿ ಸಂಕಣ್ಣನವರ, ಚಿಂತನಶೀಲ ಗುರು ಡಾ. ಜಿ.ಎಸ್.ಶಿವರುದ್ರಪ್ಪನವರನ್ನು ಕುರಿತು ಪ್ರೊ. ಬಿ.ಪಿ ವೀರೇಂದ್ರ ಕುಮಾರ್, ಕನ್ನಡದ ಅನನ್ಯ ಪ್ರತಿಭೆ ಡಾ. ಮಹದೇವ ಬಣಕಾರರನ್ನು ಕುರಿತು ಡಾ. ರಾಜಶೇಖರ ಜಮದಂಡಿ ಮಾತನಾಡಲಿದ್ದು, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ ಭಾಗವಹಿಸಲಿದ್ದಾರೆ. 

ನ.5ರ ಭಾನುವಾರ 10.30ಕ್ಕೆ ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿ ಮಠದ ಶ್ರೀ ಅಲ್ಲಮ ಪ್ರಭುಸ್ವಾಮಿಗಳವರ ಸಮ್ಮುಖದಲ್ಲಿ ವಚನ ಸಾಹಿತ್ಯದ ಪ್ರಸ್ತುತೆ ಎಂಬ ಗೋಷ್ಠಿ ನಡೆಯಲಿದ್ದು ಧಾರವಾಡದ ಡಾ. ವೀರಣ್ಣ ರಾಜೂರರ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಕುರಿತು ಡಾ.ಬಿ.ನಂಜುಂಡಸ್ವಾಮಿಯವರು, ಶರಣರ ಸಂಗ ಕರ್ಪೂರ ಗಿರಿಯ ಉರಿಯ ಕೊಂಬಂತೆ ಎಂಬ ವಿಷಯ ಕುರಿತು ಡಾ. ಶ್ರೀಧರ ಹೆಗಡೆಯವರು ಉಪನ್ಯಾಸ ನೀಡಲಿದ್ದು, ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಭಾಗವಹಿಸಲಿದ್ದಾರೆ. 

ನ.5ರ ಮಧ್ಯಾಹ್ನ 2.30ರ ತಂತ್ರಜ್ಞಾನದೊಂದಿಗೆ ಭಾಷಾ ಬೋಧನೆ ಎಂಬ ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ. ಬೆಂಗಳೂರು ಇನ್ಸೈಟ್ಸ್ ಐ.ಎ.ಎಸ್.ಸಂಸ್ಥೆಯ ನಿರ್ದೇಶಕ ಬಿ.ಜಿ.ವಿನಯಕುಮಾರ್ ಅಧ್ಯಕ್ಷತೆಯಲ್ಲಿ ಪ್ರದೀಪ್ ಮತ್ತು ಟಿ.ಎಂ.ಬಸವರಾಜ್ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಡುವರು.

ನ.5ರ ಸಂಜೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರಿನ ಪ್ರಸಿದ್ಧ ಸಂಸ್ಕೃತಿ ಚಿಂತಕ ಡಾ.ಜೆ.ಪಿ.ಕೃಷ್ಣೇಗೌಡರು, ಶ್ರೀಸಂಸ್ಥೆಯ ಪ್ರೊ.ಎಸ್.ಬಿ.ರಂಗನಾಥ, ಡಾ.ವಾಮದೇವಪ್ಪ, ಸಾಹಿತ್ಯ ಪರಿಷತ್ತಿನ ಬಿ.ವಾಮದೇವಪ್ಪ, ಕೆ.ಎಂ.ಶಿವಸ್ವಾಮಿ, ಸೂರಿ ಶ್ರೀನಿವಾಸ, ಕೆ.ಎಸ್.ಸಿದ್ಧಲಿಂಗಪ್ಪ, ಡಿ.ಮಂಜುನಾಥ್ ಮುಂತಾದವರು ಭಾಗವಹಿಸಲಿದ್ದು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ 2023ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು.  

ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ

ನ.3ರ ಶುಕ್ರವಾರ ಸಂಜೆ 6.30ಕ್ಕೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್ ಜೋಷಿ ಭಾಗವಹಿಸಲಿದ್ದು, ಮೈಸೂರಿನ ಡಾ. ಶ್ವೇತ ಮಡಪ್ಪಾಡಿ ತಂಡ ಮತ್ತು ಸುಮಧುರ ಸಂಗೀತ ಗಾಯನವಿರುತ್ತದೆ. ನ.4ರ ಶನಿವಾರ ಸಂಜೆ 6.30ಕ್ಕೆ ಬೆಂಗಳೂರು ಅದಮ್ಯ ಸಾಂಸ್ಕೃತಿಕ ಟ್ರಸ್ಟ್ ಕಲಾವಿದರಿಂದ ಮಾಲತೇಶ ಬಡಿಗೇರ ರಚನೆಯ “ನಾನು ಚಂದ್ರಗುಪ್ತನೆಂಬ ಮೌರ್ಯ” ನಾಟಕ ಪ್ರದರ್ಶನವಿರಲಿದೆ. ನ. 5ರ ಭಾನುವಾರ ಸಂಜೆ 6.30 ಕ್ಕೆ ತುಮಕೂರಿನ  ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ಡಾ.ಸಾಗರ್ ಮತ್ತು ತಂಡದವರಿಂದ “ಕನ್ನಡವೇ ಸತ್ಯ” ನೃತ್ಯ ಕಾರ್ಯಕ್ರಮ ಹಾಗೂ ಪ್ರತಿ ದಿನ ಸಿರಿಗೆರೆಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಜರುಗಲಿದೆ.

ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು

ಸಿರಿಗೆರೆಯ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ ಮತ್ತು ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳು ಜರುಗಲಿದ್ದು, ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಫಲಕ ನೀಡಿ ಗೌರವಿಸಲಾಗುವುದು.