ನಾಡಿನಾಚೆ ಇರುವ ನಾಡು-ನುಡಿಯ ಸೆಳೆತ!
ನವೆಂಬರ್ ತಿಂಗಳು ಪಾದಾರ್ಪಣೆ ಮಾಡಿದೆ. ನಿನ್ನೆಯಿಂದ ತಿಂಗಳುದ್ದಕ್ಕೂ ಕನ್ನಡ ರಾಜ್ಯೋತ್ಸವ. ಕನ್ನಡ ಭುವನೇಶ್ವರಿಯ ತೇರನೆಳೆಯಲು ನಾ ಮುಂದು ತಾ ಮುಂದು ಎಂಬ ತುಡಿತ! ಎಲ್ಲೆಡೆ ಕನ್ನಡ ಬಾವುಟಗಳ ಹಾರಾಟ! ಕನ್ನಡಿಗರೆಲ್ಲರೂ ಒಗ್ಗೂಡಿ ಆಚರಿಸುವ ಸಂಭ್ರಮದ ದಿನ. ಕೆಲವರಿಗೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರದಾಟ! ಸಿಕ್ಕಿದವರಿಗೆ ಸೀರುಂಡೆ; ಸಿಗದವರಿಗೆ “ಬಾಸುಂಡೆ”! ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಎಂಬ ಮಂತ್ರಜಪ ಇದ್ದೇ ಇದೆ. ಧರ್ಮ, ಭಾಷೆ ಮತ್ತು ಪ್ರಾಂತ್ಯ-ಪ್ರದೇಶಗಳು ವ್ಯಕ್ತಿಯ ಬದುಕಿನಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ನಾವು ನಂಬಿದ ಧರ್ಮ, ನಾವು ಆಡುವ ಭಾಷೆ ಮತ್ತು ನಾವು ಹುಟ್ಟಿ ಬೆಳೆದ ಭೌಗೋಳಿಕ ಪರಿಸರದೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳುತ್ತೇವೆ. ಅವುಗಳ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತೇವೆ. ನಮ್ಮ ಆಲೋಚನೆ, ನಡವಳಿಕೆ ಮತ್ತು ಇತರೆ ಜನರೊಂದಿಗಿನ ನಮ್ಮ ಸಂಬಂಧಗಳನ್ನು ಅವು ನಿಯಂತ್ರಿಸುತ್ತವೆ. ದೂರದ ವ್ಯಕ್ತಿ ನಮ್ಮ ಧರ್ಮದವನಾಗಿದ್ದರೆ, ನಮ್ಮ ಭಾಷೆಯವನಾಗಿದ್ದರೆ ಅಥವಾ ನಮ್ಮ ನಾಡಿನವನಾಗಿದ್ದರೆ ಅವನು ಎಷ್ಟೇ ಅಪರಿಚಿತನಾಗಿದ್ದರೂ ನಮಗೆ ಹತ್ತಿರವಾಗುತ್ತಾನೆ.
ಪರದೇಶದ ವಿಮಾನ ನಿಲ್ದಾಣಗಳಲ್ಲಿ ಹಾಯ್ದು ಹೋಗುವಾಗ ಅಥವಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವಾಗ ಕನ್ನಡದ ಇಂಚರ ಕಿವಿಗೆ ಬಿದ್ದರೆ ಕಣ್ಣು, ಕಿವಿ ಶಬ್ದವೇದಿ ಬಾಣಗಳಾಗುತ್ತವೆ! ನಮ್ಮ ಸ್ಥಾನಮಾನಗಳ ಬಿಗುಮಾನವನ್ನು ಬಿಟ್ಟು ಮನಸ್ಸಿನಲ್ಲಿ ಹತ್ತಿರ ಹೋಗಿ ಮಾತನಾಡಿಸಬೇಕೆನ್ನಿಸುತ್ತದೆ.
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು!
ಕಾವ್ಯರ್ಷಿ ಕುವೆಂಪುರವರ ಮೇಲಿನ ಕವಿತೆಯ ಸಾಲುಗಳನ್ನು ಸವಿಯಬೇಕೆಂದರೆ ನೀವು ಬೇರೆ ದೇಶಗಳಿಗೆ ಹೋಗಬೇಕು. ನಾಡು ಮತ್ತು ನುಡಿಯ ಸೆಳೆತ ನಾಡಿನಾಚೆ ಹೋದಷ್ಟೂ ಹೆಚ್ಚುತ್ತಾ ಹೋಗುತ್ತದೆ. ಪರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ನಿರಾಶ್ರಿತರಲ್ಲ (refugees); ದುಡಿಮೆಗಾಗಿ ವೃತ್ತಿಯನ್ನು ಅರಸಿಕೊಂಡು ಹೋದವರು. ಯಾರ ಶಿಫಾರಸ್ಸು ಇಲ್ಲದೇ ಸ್ವಂತ ಪ್ರತಿಭೆ ಮತ್ತು ಪರಿಶ್ರಮಗಳಿಂದ ಮೇಲೆ ಬಂದವರು. ಒಬ್ಬೊಬ್ಬರದೂ ಒಂದೊಂದು ಸಾಹಸಗಾಥೆ. ನಾಲ್ಕಾರು ವರ್ಷ ದುಡಿದು ಸಂಪಾದನೆ ಮಾಡಿಕೊಂಡು ಮರಳಿ ತಾಯ್ನಾಡಿಗೆ ಮರಳಬೇಕೆಂಬ ಅವರ ಆರಂಭದ ಆಲೋಚನೆ ಅವರಿಗೇ ಗೊತ್ತಿಲ್ಲದಂತೆ ಕ್ರಮೇಣ ಬದಲಾಗಿ ಕೌಟುಂಬಿಕ ಜೀವನದ ಅನಿವಾರ್ಯತೆಗಳಿಂದ ಅಲ್ಲಿಯೇ ನೆಲೆಸಿದವರು. “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ರಾಷ್ಟ್ರಕವಿ ಕುವೆಂಪುರವರ ಆಶಯಕ್ಕೆ ಅನುಗುಣವಾಗಿ ಇರುವ ಅಪ್ಪಟ ಕನ್ನಡಿಗರು ಅವರು.
ಕನ್ನಡದ ಹಿರಿಯ ತಲೆಮಾರಿನ ಸಾಹಿತಿಗಳನೇಕರಿಗೆ ಇಂಗ್ಲಿಷ್ ಭಾಷಾ ಸಾಹಿತ್ಯದಲ್ಲಿ ಪ್ರಕಾಂಡ ಪಾಂಡಿತ್ಯವಿದ್ದರೂ ಕನ್ನಡ ಭಾಷೆಯ ಬಗೆಗೆ ಅಪಾರ ಒಲವಿತ್ತು. ಬಿ.ಎಂ.ಶ್ರೀಯವರು ಇಂಗ್ಲಿಷಿನ ಪ್ರಾಧ್ಯಾಪಕರಾಗಿದ್ದರೂ ಕನ್ನಡಕ್ಕಾಗಿ ದುಡಿದರು. ಶಕುಂತಲೆ ಸ್ವಂತ ಮಗಳಲ್ಲದಿದ್ದರೂ ಪ್ರೀತಿಯಿಂದ ಪೊರೆದು ಪೋಷಿಸಿದ ಕಣ್ವ ಮಹರ್ಷಿಗಳಂತೆ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಏಳಿಗೆಗಾಗಿ ಪ್ರೀತಿಯಿಂದ ದುಡಿದು “ಕನ್ನಡದ ಕಣ್ವ” ಎನಿಸಿಕೊಂಡರು. ಶುದ್ಧ ಕನ್ನಡದಲ್ಲಿ ಮಾತನಾಡಬೇಕೆಂದು ಪಣತೊಟ್ಟ ಅಂದಿನ ತರುಣ ಅಧ್ಯಾಪಕರ ವಿಫಲ ಪ್ರಯತ್ನವೊಂದನ್ನು ಕನ್ನಡ ಸಾಹಿತ್ಯದ ಹಿರಿಯ ತಲೆಮಾರಿನ ದಿಗ್ಗಜರಲ್ಲಿ ಒಬ್ಬರಾದ ತೀ.ನಂ.ಶ್ರೀಯವರು “ಕಾಸಿನ ಸಂಘ” ಎಂಬ ತಮ್ಮ ಪ್ರಬಂಧದಲ್ಲಿ ಚೇತೋಹಾರಿಯಾಗಿ ಚಿತ್ರಿಸಿದ್ದಾರೆ.
ಆಗಿನ್ನೂ “ಕಂಗ್ಲೀಷ್” ಪದ ಚಾಲ್ತಿಯಲ್ಲಿ ಇರಲಿಲ್ಲ. ಆಗಲೇ ವಿದ್ಯಾವಂತರ ದೈನಂದಿನ ಸಂಭಾಷಣೆ ಕನ್ನಡ ಮತ್ತು ಇಂಗ್ಲೀಷ್ ಪದಗಳ ಕಲಬೆರಕೆಯಾಗಿತ್ತೆಂದು ತಿಳಿಯುತ್ತದೆ. “ಇತ್ತ ಕನ್ನಡವಲ್ಲ. ಅತ್ತ ಇಂಗ್ಲಿಷ್ ಅಲ್ಲ. ಅದೊಂದು ಹರುಕು ಮುರುಕು ಜಾತಿಯ ಬೆರಕೆ ನುಡಿ..... ಇಲ್ಲಿ ಕಲೆಯುತ್ತಿದ್ದ ಮಾತುಗಳಲ್ಲಿ ಇಂಗ್ಲಿಷಿನ ಪರಿಮಾಣವೇ ಹೆಚ್ಚು; ಹರುಕು ಬಟ್ಟೆಗೆ ತೇಪೆ ಹಾಕಿದಂತೆ ಅಲ್ಲೊಂದು ಇಲ್ಲೊಂದು ಕನ್ನಡ ಪದ ಅಥವಾ ಪ್ರತ್ಯಯ” ಎಂದು ತೀ.ನಂ.ಶ್ರೀ ವಿಡಂಬನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಆಗಿನ ಕಾಲದ ಕನ್ನಡ ಅಧ್ಯಾಪಕರಷ್ಟೇ ಅಲ್ಲ ಕನ್ನಡದ ಹುಚ್ಚು ಇದ್ದ ಇಂಗ್ಲಿಷ್, ಸಂಸ್ಕೃತ, ದರ್ಶನ, ವಿಜ್ಞಾನ ವಿಷಯಗಳ ಯುವ ಅಧ್ಯಾಪಕರು ಸೇರಿ ಕನ್ನಡದಲ್ಲಿ ಮಾತನಾಡುವಾಗ ಇಂಗ್ಲಿಷ್ ಪದಗಳನ್ನು ಬಳಸಬಾರದೆಂದು ಕೆಲವು ನಿಬಂಧನೆಗಳನ್ನು ರೂಪಿಸಿ ಒಂದು “ಕಾಸಿನ ಸಂಘ”ವನ್ನು ಸ್ಥಾಪಿಸಿಕೊಂಡರಂತೆ. ಈ ಸಂಘಕ್ಕೆ “ಕಾಸಿನ ಸಂಘ” ಎಂದು ಹೆಸರು ಬರಲು ಕಾರಣ ನಿಯಮಗಳನ್ನು ಉಲ್ಲಂಘಿಸಿ ಯಾರು ಕನ್ನಡದಲ್ಲಿ ಇಂಗ್ಲಿಷ್ ಪದಗಳನ್ನು ಬೆರಸಿ ಮಾತನಾಡುತ್ತಾರೋ ಅಂಥವರು ಬಳಸಿದ ಪ್ರತಿಯೊಂದು ಇಂಗ್ಲಿಷ್ ಪದಕ್ಕೂ ಒಂದು ಕಾಸಿನಂತೆ ದಂಡ ಕೊಡಬೇಕು ಎಂದು ನಿಯಮಾವಳಿಗಳಲ್ಲಿ ಶಿಕ್ಷೆಯ “ಕಲಂ” (penalty clause) ಸೇರಿಸಿದ್ದರಂತೆ. ದುಬಾರಿ ದಂಡ ತೆತ್ತವರು ಈ ಅಧಿನಿಯಮಕ್ಕೆ ನಂತರ ತಿದ್ದುಪಡಿ ತರಬಯಸಿದರಂತೆ! ಕ್ರಿಕೆಟ್ ಆಟದಲ್ಲಿ ಚೆಂಡನ್ನು ಬೌಂಡರಿ ದಾಟಿ ಎಷ್ಟೇ ದೂರ ಹೊಡೆದರೂ ನಾಲ್ಕೇ “ರನ್” ಕೊಡುವಂತೆ ಒಂದು ವಾಕ್ಯದಲ್ಲಿ ಎಷ್ಟೇ ಇಂಗ್ಲಿಷ್ ಪದಗಳನ್ನು ಬಳಸಿದರೂ 3 ಕಾಸು ದಂಡ ಕೊಟ್ಟರೆ ಸಾಕೆಂಬ ರಿಯಾಯತಿ ಜಾರಿಗೆ ಬಂತಂತೆ. ಆದರೂ ಸಂಘಕ್ಕೆ ಆದಾಯ ಬರುವುದು ಕಡಿಮೆಯೇನೂ ಆಗಲಿಲ್ಲ ಎಂದು ತೀ.ನಂ.ಶ್ರೀ ಬರೆಯುತ್ತಾರೆ. ದಂಡ ವಸೂಲಿ ಮಾಡುವವನು ಎಲ್ಲರಿಗೂ ಕಣ್ಣಾಸರೆಯಾದ ಕಾರಣ ಈ “ಕಾಸಿನ ಸಂಘ” ಬಹಳ ಕಾಲ ಉಳಿಯಲಿಲ್ಲ. ಮಹಾರಾಜ ಕಾಲೇಜಿನ ಕ್ಯಾಂಟೀನ್ ನಲ್ಲಿ ಕಾಫಿ ಕುಡಿಯುವಾಗ ತಲೆಯೆತ್ತಿದ ಈ ಸಂಘ ಕಾಫಿ ಕುಡಿಯುವಾಗಲೇ ಎಲ್ಲಾ ಲೆಕ್ಕ ಚುಕ್ತಾ ಮಾಡಿ ವಿಸರ್ಜನೆಗೊಂಡಿತಂತೆ!
ನವೆಂಬರ್ ತಿಂಗಳು ಬಂತೆಂದರೆ ಕೆಂಡಕ್ಕೆ ಹಾಕಿದ ಸಾಮ್ರಾಣಿಯು ಪರಿಮಳಿಸುವಂತೆ ನಾಡವರಲ್ಲಿ ನುಡಿಜಾಗೃತಿಯು ಗರಿಗೆದರುತ್ತದೆ. ಕನ್ನಡ ಕುರಿತ ಪುಂಖಾನುಪುಂಖ ಭಾಷಣಗಳು, ಘೋಷಣೆಗಳು ಮೊಳಗುತ್ತವೆ. ನಮ್ಮ ಹಿಂದಿನ ಕನ್ನಡ ಕವಿಗಳು, ದ್ರಷ್ಟಾರರ ನಾಡು ನುಡಿಗಳನ್ನು ಕುರಿತ ಅಭಿಮಾನದ ಮಾತುಗಳು ಕಿವಿದೆರೆಗೆ ಅಪ್ಪಳಿಸುತ್ತವೆ. ಪ್ರತಿವರ್ಷವೂ ಆದಂತೆ ಈಗಲೂ ಆ ಪ್ರಸಿದ್ಧ ಪದಪುಂಜಗಳು ಅನುರಣನಗೊಳ್ಳುತ್ತಿವೆ. ಆದರೆ ಅವರ ಸಾಹಿತ್ಯದ ಕುರಿತ ಅನುಸಂಧಾನ ಮಾತ್ರ ಆಗುತ್ತಿಲ್ಲ. ಅಭಿಮಾನ ಅರ್ಥಪೂರ್ಣವಾಗುವುದು ಅರಿವು ಸಂಲಗ್ನಗೊಂಡಾಗ ಮಾತ್ರ. ಪೂರ್ವಸೂರಿಗಳ ಅಭಿಮಾನದ ಮಾತುಗಳನ್ನು ಕೇವಲ ಹಾಸಿ ಹೊದ್ದರೆ, ನಾಡದೇವಿಯ ರಥವನ್ನು ಎಳೆದರೆ ರಂಜನೆಯಾಗಬಹುದೇ ಹೊರತು ಪ್ರಯೋಜನವಾಗದು. ವೃದ್ಧೆಯು ತನ್ನ ಯೌವನದ ದಿನಗಳ ಸೌಂದರ್ಯವನ್ನು ನೆನೆದು ಹಿತ್ತಲಲ್ಲಿ ಅತ್ತಂತಾಗುತ್ತದೆ. ನಾಗಾಲೋಟದಲ್ಲಿ ಓಡುತ್ತಿರುವ ತಂತ್ರಜ್ಞಾನದ ಬೆನ್ನನೇರಿ ಕನ್ನಡವನ್ನು ಬೆಳೆಸುವ ಕೆಲಸವೀಗ ತುರ್ತಾಗಿ ಆಗಬೇಕಾಗಿದೆ.
ಆಧುನಿಕ ಕಾಲಮಾನಕ್ಕೆ ಅನುಗುಣವಾಗಿ ಕನ್ನಡ ಸಾಹಿತ್ಯವು ಕನ್ನಡ ನಾಡಿಗೆ ಮಾತ್ರ ಸೀಮಿತಗೊಳ್ಳದೆ ನವೀನ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ವಿಶ್ವಾದ್ಯಂತ ಹೊಸ ಹೊಸ ಆಯಾಮಗಳಿಗೆ ತೆರೆದು ಕೊಳ್ಳಬೇಕಾಗಿದೆ. ಕನ್ನಡದ ಅಧ್ಯಯನಕ್ಕೆ ಕಿಟೆಲ್ ಜನ್ಮ ಭೂಮಿಯಾದ ಜರ್ಮನಿಯ ಹೈಡಲ್ ಬೆರ್ಗ್, ಮ್ಯೂನಿಚ್ ಮೊದಲಾದ ವಿಶ್ವವಿದ್ಯಾನಿಲಯಗಳಲ್ಲಿ ಇದ್ದ ಅವಕಾಶಗಳು ಕೊನೆಗೊಳ್ಳುತ್ತಿರುವುದನ್ನು ಕಳೆದ ಆಗಸ್ಟ್ ತಿಂಗಳು ಅಲ್ಲಿಗೆ ಹೋದಾಗ ಸ್ವತಃ ಮನಗಂಡು ತುಂಬಾ ವ್ಯಥೆಯಾಯಿತು. ಹಾಗಾಗದಂತೆ ಕರ್ನಾಟಕ ಸರಕಾರ ಎಚ್ಚೆತ್ತು ಕಾರ್ಯನಿರ್ವಹಿಸುವ ಮತ್ತು ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಹೋರಾಟ ಮಾಡಿ ಸರಕಾರಕ್ಕೆ ಜಾಗೃತಿ ಮೂಡಿಸುವ ಅವಶ್ಯಕತೆ ತುಂಬಾ ಇದೆ.
ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಕನ್ನಡಕ್ಕಾಗಿ ದನಿಯೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.2-11-2023.