ಕನ್ನಡದ ಜೊತೆ ಪರ ಭಾಷೆ ಕಲಬೆರಕೆ ಬೇಡ : ಶ್ರೀ ತರಳಬಾಳು ಜಗದ್ಗುರುಗಳವರು
ಶಿವಶರಣರ ವಚನ ಸಂಪುಟ ತಂತ್ರಾಂಶದ ವೈಶಿಷ್ಟ್ಯವನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಚಿಕ್ಕಮಂಗಳೂರು, ಧಾರವಾಡ, ದಾವಣಗೆರೆ, ಚಿತ್ರದರ್ಗ ಮತ್ತು ಬೆಂಗಳೂರು ಕ.ಸಾ.ಪ ಅಧ್ಯಕ್ಷರುಗಳಿಗೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವಿವರಿಸಿದರು.
ಅಮೇರಿಕಾದ ಸಿಲಿಕಾನ್ ವ್ಯಾಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಮೊಬೈಲ್ ಆಪ್ ಲೋಕಾರ್ಪಣೆ ಮಾಡಿದ ಕ್ಷಣವನ್ನು ಸ್ಮರಿಸುತ್ತಾ ಈ ತಂತ್ರಾಂಶದಲ್ಲಿ ವಚನದ ಯಾವುದಾದರು ಪದವನ್ನು ಟೈಪಿಸಿದರೆ ಸಾಕು, ಆ ಪದ ಬಳಕೆಯಾಗಿರುವ ಎಲ್ಲಾ ವಚನಗಳನ್ನು ಪರದೆಯ ಮೇಲೆ ತೋರಿಸುತ್ತದೆ. ಎರಡೂವರೆ ದಶಕಗಳ ಅಂತರದಲ್ಲಿ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು, ಆಂಡ್ರಾಯ್ಡ್ ಮೊಬೈಲ್ ಕ್ರಾಂತಿಯಿಂದ ಜಗತ್ತೇ ಬೆರಳ ತುದಿಯಲ್ಲಿದೆ. ಅಲ್ಲದೆ ಸಮಗ್ರ ವಚನ ಸಂಪುಟಗಳು ಸಹ ಈಗಾಗಲೇ ನಾಲ್ಕನೆಯ ಮುದ್ರಣಗಳನ್ನು ಕಂಡು ಸಾಕಷ್ಟು ಪರಿಷ್ಕರಣೆಗೊಂಡಿವೆ. ಈ ಎಲ್ಲಾ ಕಾರಣಗಳಿಂದ ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ತಂತ್ರಾಂಶ ರೂಪಿಸಲಾಗಿದೆ.
ಈ ತಂತ್ರಾಂಶದಲ್ಲಿ 200ಕ್ಕೂ ಹೆಚ್ಚು ವಚನಕಾರರ 22000ಕ್ಕೂ ಹೆಚ್ಚು ವಚನಗಳಿವೆ. ಕನ್ನಡ ಮತ್ತು ಇಂಗ್ಲಿಷ್ ಲಿಪಿಯಲ್ಲಿ ಮೂಲ ಪಠ್ಯ ಲಭ್ಯವಿದ್ದು, ಆ ವಚನ ಇತರೆ ಭಾಷೆಗಳಿಗೆ ಅನುವಾದಗೊಂಡಿದ್ದರೆ ಅದೇ ಲಿಪಿಯಲ್ಲಿ ಕಾಣಬಹುದು. ಉದಾಹರಣೆಗೆ, ಬಸವಣ್ಣನವರ ವಚನಗಳು ಈಗಾಗಲೇ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು ಭಾಷೆಗಳಿಗೆ ವಿವಿಧ ವಿದ್ವಾಂಸರಿಂದ ಅನುವಾದಗೊಂಡಿವೆ. ಈ ಅನುವಾದಗಳನ್ನು ಪ್ರಸ್ತುತ ತಂತ್ರಾಂಶದಲ್ಲಿ ಆಯಾಯ ಭಾಷಿಗರು ಬಸವಣ್ಣನವರ ವಚನಗಳನ್ನು ತಮ್ಮ ತಮ್ಮ ಭಾಷೆಗಳಲ್ಲಿ ಓದಬಹುದಾಗಿದೆ. ಹಾಗೆಯೇ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳ ವಚನಗಳು ಸಹ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದಗೊಂಡಿದ್ದೂ ಈ ಭಾಷಿಗರಿಗೂ ಅಲ್ಲಮ ಮತ್ತು ಅಕ್ಕನ ವಚನಗಳು ಲಭ್ಯ. ಅಲ್ಲದೆ ವಚನಗಳ ತಾತ್ಪರ್ಯ, ಶಬ್ದಕೋಶ ಈ ತಂತ್ರಾಂಶದಲ್ಲಿದೆ. ಈಗಾಗಲೇ ರಾಗ ಸಂಯೋಜನೆಗೊಂಡು, ನಾಡಿನ ಖ್ಯಾತ ಗಾಯಕರಿಂದ ಹಾಡಲ್ಪಟ್ಟ ವಿವಿಧ ವಚನಕಾರರ 300 ವಚನಗಳ ಆಡಿಯೋವನ್ನು ಸಹ ಅಳವಡಿಸಲಾಗಿದೆ ಎಂದರು. ಡಾ.ಮಹೇಶ್ ಜೋಶಿ ಹಾಗೂ ಕ.ಸಾ.ಪ ಅಧ್ಯಕ್ಷರುಗಳು ಸಂತಸ ವ್ಯಕ್ತಪಡಿಸಿದರು.