ತುಂಬಿದ ಕಾತ್ರಾಳು ಕೆರೆಗೆ ಶ್ರೀ ಜಗದ್ಗುರುಗಳವರಿಂದ ಬಾಗೀನ ಅರ್ಪಣೆ
ದಿನಾಂಕ:10-11-2023
ಸ್ಥಳ: ಕಾತ್ರಾಳು, ಚಿತ್ರದುರ್ಗ
ಕೆರೆ ಏರಿ ಅಗಲೀಕರಣಕ್ಕೆ ಕೇಂದ್ರದ ನೆರವಿಗೆ ಪ್ರಸ್ತಾವನೆ : ಶ್ರೀ ಜಗದ್ಗುರುಗಳವರ ಚಿಂತನೆ.
---------------------------------
ದೀಪಾವಳಿ ಮುಂಚಿತವಾಗಿ ರೈತರಿಗೆ ಜಲಬೆಳಕು ಮೂಡಿಸಿದ ಶ್ರೀ ಜಗದ್ಗುರುಗಳವರ ಕೆರೆಪ್ರವಾಸ.
---------------------------------
ಮೂರು ದಿನ 27 ಕೆರೆಗಳಿಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಭೇಟಿ; ಕೃಷಿಕರಲ್ಲಿ ಹೆಚ್ಚಿದ ಉತ್ಸಾಹ.
----------------------------------
ಪ್ರಕೃತಿಯಲ್ಲಿ ನೀರಿಗೆ ಕೊರತೆ ಇಲ್ಲ. ಭಗವಂತ ಸ್ವಾರ್ಥಿ ಅಲ್ಲ, ಎಲ್ಲವನ್ನೂ ಕೊಟ್ಟಿದ್ದಾನೆ. ವಿತರಣೆ ಸರಿಯಾಗಿ ಆಗಬೇಕು. ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಸಿರಿಗೆರೆ ಸಮೀಪದ ಕಾತ್ರಾಳು ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದ ಪೂಜ್ಯರು, “ಕೆರೆ ತುಂಬಿತು ಅಂದರೆ ಸಂಪತ್ತು ತಾನಾಗಿಯೇ ಬರುತ್ತದೆ. ರೈತರು, ಪಶುಪಕ್ಷಿ, ಪ್ರಾಣಿ ಎಲ್ಲರಿಗೂ ನೀರು ಬೇಕು. ಹಿಂದೆ ರಾಜ, ಮಹಾರಾಜರು, ಪಾಳೇಗಾರರಿಗೆ ಯಾರೂ ಅರ್ಜಿ ಹಾಕಿರಲಿಲ್ಲ. ಅವರು ಚುನಾಯಿತ ಪ್ರತಿನಿಧಿಗಳೂ ಆಗಿರಲಿಲ್ಲ. ಆದರೆ, ಜನರ ಹಿತಕ್ಕಾಗಿ ಅವರು ಕೆರೆ ಕಟ್ಟೆ ಕಟ್ಟಿಸಿದ್ದಾರೆ. ಭರಮಸಾಗರ ಕೆರೆಯನ್ನು ಭರಮಣ್ಣನಾಯಕ ಕಟ್ಟಿಸಿದ್ದು,ಈಗ ನೀರು ತುಂಬಿದೆ” ಎಂದರು.
“ನಾವು ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದ ಕಾರಣ, ಯಾರೇ ಸಚಿವರು ಬಂದರು ಹೇಳಿದ ಕೆಲಸ ಮಾಡುತ್ತಾರೆ. ಕಾತ್ರಾಳು ಕೆರೆಯ ಏರಿಯನ್ನು ಅಗಲೀಕರಣ ಮಾಡಲು ₹2 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸಬೇಕು” ಎಂದು ಶ್ರೀ ಜಗದ್ಗುರು ಗಳವರು ತಿಳಿಸಿದರು. ಭರಮಸಾಗರ ಏತನೀರಾವರಿ ವ್ಯಾಪ್ತಿಯ 43 ಕೆರೆಗಳ ಇತಿಹಾಸವನ್ನು ಇತಿಹಾಸಕಾರ ರಾಜಶೇಖರಪ್ಪ ಸಹಾಯ ಪಡೆದು ಶಾಸ್ತ್ರೀಯವಾಗಿ ದಾಖಲಿಸುವ ಕೆಲಸವನ್ನು ಚಿಕ್ಕಪ್ಪನಹಳ್ಳಿ ಷಣ್ಮುಖ ಮಾಡಬೇಕು. ಅದನ್ನು ಮಠದಿಂದ ಪ್ರಕಟಿಸುವುದಾಗಿ ಘೋಷಿಸಿದರು.
ವೇದಿಕೆಯಲ್ಲಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ಅನುದಾನ ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದರು.ಕೆರೆಯಿಂದ ಕೆರೆಗೆ ನೀರು ಹೋಗಬೇಕು ಎನ್ನುವ ಗುರಿ ಇಟ್ಟುಕೊಂಡು ಶ್ರೀಗಳು ಉಬ್ರಾಣಿ, ಸಾಸ್ವೇಹಳ್ಳಿ, ಭರಮಸಾಗರ, ರಾಜಗೊಂಡನಹಳ್ಳಿ, ಬ್ಯಾಡಗಿ, ಬೇಲೂರು, ಹಳೆಬೀಡು, ಜಗಳೂರು ಸೇರಿದಂತೆ ಹಲವು ಏತ ನೀರಾವರಿ ಯೋಜನೆ ರೂಪಿಸಿದ್ದಾರೆ. ನಿಜವಾಗಿಯೂ ನಮ್ಮ ಸ್ವಾಮೀಜಿಯವರು ಆಧುನಿಕ ಭಗೀರಥ. ಸ್ವಾಮೀಜಿ ಅವರಿಗೆ ಇರುವ ಉತ್ಸಾಹ ದೊಡ್ಡದು. ಇಂದು ಕೆರೆಯಿಂದ ಕೆರೆಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ನಾಡಿನಲ್ಲಿ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭರಮಸಾಗರ ಏತನೀರಾವರಿ ವ್ಯಾಪ್ತಿಯ 42 ಕೆರೆಗಳಿಗೆ ತರಳಬಾಳು ಶ್ರೀಗಳು ಏಕಮಾತ್ರ ಪ್ರಯತ್ನದಿಂದ ನೀರು ತರುವ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದಾರೆ. ₹ 550 ಕೋಟಿ ಮೊತ್ತದ ಯೋಜನೆ ಇದು. ಶ್ರೀಗಳ ಬಗ್ಗೆ ಇಡೀ ರೈತ ಸಮುದಾಯಕ್ಕೆ ಉಪಕಾರ ಸ್ಮರಣೆ ಇರಬೇಕು. ಮುಂದೆ ಶ್ರೀಗಳಿಗೆ ರೈತರೆಲ್ಲಾ ಸೇರಿ ದೊಡ್ಡ ಮಟ್ಟದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಂದು ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖರವರು ತಿಳಿಸಿದರು.
ಪೂಜ್ಯರ ಕೆರೆ ಪ್ರವಾಸ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ರೈತ ಸಂಘದ ಬಸ್ತಿಹಳ್ಳಿ ಸುರೇಶ್ ಬಾಬು, ಧನಂಜಯ, ರುದ್ರಸ್ವಾಮಿ, ನೀರಾವರಿ ಇಲಾಖೆ ಇಂಜಿನಿಯರುಗಳಾದ ಮಂಜುನಾಥ್ ರೈತ ಮುಖಂಡರು ಉಪಸ್ಥಿತರಿದ್ದರು.