ದೀಪಾವಳಿ : ಅಜ್ಞಾನ ನಿವಾರಣೆಯಾಗಿ ಜ್ಞಾನದ ಬೆಳಕು ಮೂಡಬೇಕು : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  


ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು  ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ಬೃಹನ್ಮಠದ ಐಕ್ಯಮಂಟಪದಲ್ಲಿ  ನಿನ್ನೆಯ ಸಂಜೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಮಠದ ಶಿಷ್ಯರುಗಳ ಸಮಾಗಮದಲ್ಲಿ ಶಿವಜ್ಯೋತಿಯನ್ನು ಹಚ್ಚುವುದರ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. ಎಲ್ಲೆಡೆ ಅಜ್ಞಾನ ನಿವಾರಣೆಯಾಗಿ ಜ್ಞಾನದ ಬೆಳಕು ಮೂಡಲೆಂದು ಶ್ರೀ ಜಗದ್ಗುರುಗಳವರು ಸಂದೇಶ ಕರುಣಿಸಿದರು.

ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ,ಮೃತ್ಯುದಿಂದ ಅಮೃತತ್ವದ ಕಡೆಗೆ ನಡೆಯಬೇಕೆಂಬುದು ಉಪನಿಷತ್ತಿನ ಸಂದೇಶ. ಬೆಳಕು ಜ್ಞಾನದ ಸಂಕೇತವಾದರೆ, ಕತ್ತಲು ಅಜ್ಞಾನದ ಸಂಕೇತ. ಭಾರತೀಯರು ಈ ಸಂದೇಶವನ್ನು ಪ್ರಾಚೀನ ಕಾಲದಿಂದಲೂ ಪರಿಪಾಲನೆ ಮಾಡಿಕೊಂಡು ಬಂದಿದ್ದಾರೆ. ಪುರಾಣಗಳಲ್ಲಿ ಬರುವ ತಾರಾಕಾಸುರ, ನರಕಾಸುರ, ರಾವಣಾಸುರರೆಂಬ ರಾಕ್ಷಸರ ವಧೆಯ ಹಿನ್ನೆಲೆಯಲ್ಲಿ ಈ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಆದರೆ ಈಗಲೂ ಮನುಷ್ಯರಲ್ಲಿ ಅಸುರೀಯ ಗುಣಗಳು ಇನ್ನಷ್ಟು ತೀವ್ರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು. 

ಸಿರಿಗೆರೆಯ ಮಠದ ಪರಿಸರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು. ಸ್ವಾಮಿಗಳಿಗೆ ಕಾಣಿಕೆ ಕೊಟ್ಟು ನಮಸ್ಕರಿಸಿದಾಗ  ಇವರು ಸಿರಿಗೆರೆ ಮಠದ ಶಿಷ್ಯರು ಎಂಬ ನಂಬಿಕೆ ತುಂಬಾ ವ್ಯಾಪಕವಾಗಿದೆ.  ಹಾಗೆಯೇ ಸಿರಿಗೆರೆಯಲ್ಲಿ ಓದಿದ ವಿದ್ಯಾರ್ಥಿಗಳು ಸದ್ಗುಣಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ಕಿವಿಮಾತು ಹೇಳಿದರು.  

ಶ್ರೀ ಜಗದ್ಗುರುಗಳವರು  ಭಕ್ತಾದಿಗಳಿಗೆ ದೀಪಾವಳಿಯ ಹಣತೆಯನ್ನು ವಿತರಿಸಿ ಆಶೀರ್ವದಿಸಿದರು.