ವೇದಗಳಲ್ಲಿ ವಿರೋಧಿಸುವುದು ಏನಿದೆ? ಏನಿಲ್ಲ?

  •  
  •  
  •  
  •  
  •    Views  

ರ್ಮದ ಬಗ್ಗೆ ಮಾತನಾಡುವವರನ್ನು ಕುರಿತು ಸಂಸ್ಕೃತದಲ್ಲಿ ಒಂದು ವಿಷಾದದ ಮಾತು ಇದೆ: “ಧರ್ಮಂ ವಕ್ಷ್ಯಂತ್ಯಧರ್ಮಜ್ಞಾಃ, ಅಧಿರುಹ್ಯೋತ್ತಮಾಸನಮ್", ಅಂದರೆ ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದವರು ಉನ್ನತ ಆಸನಗಳ ಮೇಲೆ ಕುಳಿತು ಮಾತನಾಡುತ್ತಾರೆ. ಇದು ನಿನ್ನೆ ಮೊನ್ನೆ ಮಾಡಿದ ಟೀಕೆಯಲ್ಲ. ಸುಮಾರು 1700 ವರ್ಷಗಳ ಹಿಂದೆ ರಚಿತವಾದ ಶ್ರೀಮದ್ ಭಾಗವತ ಗ್ರಂಥವು ಮಾಡಿದ ವಿಶ್ಲೇಷಣೆ. ಅಭಿಮನ್ಯುವಿನ ಮಗನಾದ ಪರೀಕ್ಷಿತ ರಾಜನಿಗೆ ಶುಕದೇವನು ಹೇಳಿದ ಮಾತು. ಇತ್ತೀಚೆಗೆ ಧರ್ಮದ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ಬರುವ ಮಾತುಗಳಂತೂ ಗೊಂದಲದ ಗೂಡಾಗಿವೆ. ರಾಜಕೀಯ ರಾಡಿಯಾಗಿವೆ. ಇಲ್ಲಿ ಎಲ್ಲ ಬರೆಯಲು ಒಂದು ಅಂಕಣ ಸಾಕಾಗುವುದಿಲ್ಲ. ಮುಂದೆ ಬರೆಯಲಾಗುವುದು. ಒಮ್ಮೆ ನಮ್ಮ ವಿದ್ಯಾಸಂಸ್ಥೆಯ ಪ್ರೌಢಶಾಲಾ ಶಿಕ್ಷಕ ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ “ವೇದಗಳು ಎಷ್ಟು? ಅವು ಯಾವುವು?” ಎಂದು ಕೇಳಿದ ಪ್ರಶ್ನೆಗೆ ಒಬ್ಬ ಅಭ್ಯರ್ಥಿ ಐದು ವೇದಗಳು ಎಂದು ಉತ್ತರಿಸಿ ಆ ಐದನೆಯ ವೇದ “ಆಯುರ್ವೇದ” ಎಂದು ಬರೆದಿದ್ದ! ಭಾರತದ ಯಾವುದೇ ಮೂಲೆಯ ಒಬ್ಬ ಚಿಕ್ಕ ಹುಡುಗನಿಗೂ ವೇದಗಳು ನಾಲ್ಕು, ಅವು ಋಗ್ವೇದ, ಯಜುರ್ವೇದ, ಅಥರ್ವವೇದ ಮತ್ತು ಸಾಮವೇದ ಎಂದು ಗೊತ್ತು. ಆದರೆ ಅವುಗಳಲ್ಲಿ ಏನಿದೆ ಎಂದು ಕೇಳಿದರೆ ಬಾಲಕನಿಗೇ ಏಕೆ ಪಾಲಕರಿಗೂ ಅಷ್ಟಾಗಿ ಗೊತ್ತಿರುವುದಿಲ್ಲ. ಪ್ರತಿಯೊಂದು ವೇದದಲ್ಲಿಯೂ “ಮಂತ್ರ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್” ಎಂಬ ನಾಲ್ಕು ಭಾಗಗಳಿವೆ. ಎರಡನೆಯ ಭಾಗವಾದ “ಬ್ರಾಹ್ಮಣ” ಜಾತಿಯ ಸೂಚಕ ಪದವಲ್ಲ. ಸ್ಥೂಲವಾಗಿ ವೇದಗಳನ್ನು ಕರ್ಮಕಾಂಡ ಮತ್ತು ಜ್ಞಾನಕಾಂಡ ಎಂದು ಎರಡು ಭಾಗಗಳಾಗಿ ವಿಭಾಗಿಸಲಾಗಿದೆ.

ವಿಶ್ವಕ್ಕೆ ಭಾರತದ ಕೊಡುಗೆ ಸೊನ್ನೆ! ಇಲ್ಲಿ ಸೊನ್ನೆ ಎ೦ದರೆ ವಿಶ್ವಕ್ಕೆ ಭಾರತದ ಕೊಡುಗೆ ಏನೂ ಇಲ್ಲ ಎಂದರ್ಥವಲ್ಲ. “ಸೊನ್ನೆ”ಯ ಪರಿಕಲ್ಪನೆ ಭಾರತೀಯರು ವಿಶ್ವಕ್ಕೆ ಕೊಟ್ಟ ಅನೇಕ ಅಪರೂಪದ ಕೊಡುಗೆಗಳಲ್ಲಿ ಒಂದು. ಈ ಪದದ ಅರ್ಥವನ್ನು ಬೌದ್ಧರ “ಶೂನ್ಯವಾದ”ದ (Nihilism) ಅರ್ಥದಲ್ಲಿ ಗ್ರಹಿಸದೆ, ಶಿವಶರಣರ “ಶೂನ್ಯಸಂಪಾದನೆ” ಯ ಅರ್ಥದಲ್ಲಿ ಗ್ರಹಿಸಬೇಕು. ಸಂಸ್ಕೃತದ “ಶೂನ್ಯ” ಶಬ್ದದ ತದ್ಭವವೇ “ಸೊನ್ನೆ”. ಸಂಸ್ಕೃತದಲ್ಲಿ ಇದರ ಸಂವಾದಿಯಾದ ಮತ್ತೊಂದು ಪದ “ಪೂರ್ಣ” ಅಥವಾ “ಪರಿಪೂರ್ಣ”. ಅಚ್ಚಗನ್ನಡದಲ್ಲಿ ಇದರ ಸಮಾನಾರ್ಥಕ ಪದ “ಬಯಲು”. ಅದು ನಿತ್ಯ ಮತ್ತು ಶಾಶ್ವತ. ಯಾವುದೇ ವಸ್ತುವಿರಲಿ ಅದಕ್ಕೆ ಆದಿ, ಮಧ್ಯ ಮತ್ತು ಅಂತ್ಯ ಎಂಬ ಮೂರು ಅವಸ್ಥೆಗಳಿರುತ್ತವೆ. ಈ ಸೃಷ್ಟಿಯ ಒಳ-ಹೊರಗೆ ಇರುವ ವಿಶ್ವಾತ್ಮ ಚೈತನ್ಯಕ್ಕೆ ಆದಿ ಮತ್ತು ಅಂತ್ಯ ಎಂಬುದಿಲ್ಲ. ಅದು ಅನಾದಿ, ಅನಂತ ಮತ್ತು ಪರಿಪೂರ್ಣ. ಅಲ್ಪಜ್ಞನಾದ ಮನುಷ್ಯ ಆ ಪರಿಪೂರ್ಣ ತತ್ತ್ವದ ಅರಿವನ್ನು ಪಡೆದು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಜೀವನದ ಪರಮ ಗುರಿ. ಈ ಕೆಳಗಿನ ಶಾಂತಿಮಂತ್ರದಲ್ಲಿ ಈಶಾವಾಸ್ಯೋಪನಿಷತ್ತು ಆ ಪರಿಪೂರ್ಣತೆಯ ಸ್ವರೂಪವನ್ನು ವಿವರಿಸುತ್ತದೆ:

ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣಮುದಚ್ಯತೇ|
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ||

ಈ ಮಂತ್ರದ ಆಶಯ ಇಂತಿದೆ: “ಅದೂ ಪೂರ್ಣ, ಇದೂ ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ. ಪೂರ್ಣದಿಂದ ಪೂರ್ಣವನ್ನು ತೆಗೆದುಹಾಕಿದರೆ ಪೂರ್ಣವೇ ಉಳಿಯುತ್ತದೆ”. ಕಡಿಮೆ ಜಾಸ್ತಿಯಾಗಲು ಅವಕಾಶವಿಲ್ಲ. ಇಲ್ಲದಿದ್ದರೆ ಅದು ಪರಿಪೂರ್ಣ ಎನಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಧ್ಯಾತ್ಮಿಕ ಸ್ತರದಲ್ಲಿ ಪರಿಪೂರ್ಣತೆಯ ಬಗ್ಗೆ ಇರುವ ಪರಿಕಲ್ಪನೆ (concept) ಅಂಕಗಣಿತದಲ್ಲಿ ಬರುವ ಸೊನ್ನೆಯ ಪರಿಕಲ್ಪನೆಗೆ ಅನುಗುಣವಾಗಿಯೇ ಇದೆ. 

ಸೊನ್ನೆಗೆ ಸೊನ್ನೆಯನ್ನು ಸೇರಿಸಿದರೆ ಸೊನ್ನೆಯಾಗುತ್ತದೆ (0 + 0 = 0). ಸೊನ್ನೆಯಲ್ಲಿ ಸೊನ್ನೆಯನ್ನು ಕಳೆದರೆ ಸೊನ್ನೆ ಉಳಿಯುತ್ತದೆ (0 - 0 = 0). ಸೊನ್ನೆಯಿಂದ ಸೊನ್ನೆಯನ್ನು ಗುಣಿಸಿದರೆ ಸೊನ್ನೆ ಬರುತ್ತದೆ (0 x 0 = 0). ಸೊನ್ನೆಯಿಂದ ಸೊನ್ನೆಯನ್ನು ಭಾಗಿಸಿದರೆ ಸೊನ್ನೆಯೇ ದೊರೆಯುತ್ತದೆ (0 ÷ 0 = 0). ಸೊನ್ನೆಗೆ ಒಂದು ಸ್ವತಂತ್ರ ಅಂಕಿಯಾಗಿ ವ್ಯವಹಾರದಲ್ಲಿ ಬೆಲೆ ಇಲ್ಲ. ಆದರೆ ಅದು ಆಧ್ಯಾತ್ಮಿಕ ಸ್ತರದಲ್ಲಿ ಮಹೋನ್ನತವಾದ ಸಾಂಕೇತಿಕ ಅರ್ಥವನ್ನು ಒಳಗೊಂಡಿದೆ. ಸೊನ್ನೆಯನ್ನು ಪೂಜಿ, ಪೂಜ್ಯ ಎಂದು ಕರೆಯುವುದೂ ವಾಡಿಕೆಯಲ್ಲಿದೆ. ಅಂತಹ ಪರಿಪೂರ್ಣತೆಯ ಸಿದ್ಧಿಯನ್ನು ಪಡೆದ ವ್ಯಕ್ತಿತ್ವ ಅನುಭಾವಿ ಅಲ್ಲಮನದಾಗಿತ್ತು ಎಂಬುದಕ್ಕೆ ಈ ಕೆಳಗಿನ ವಚನವೇ ಸಾಕ್ಷಿ: 

ಬಯಲು ಬಯಲನೆ ಬಿತ್ತಿ,
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ….
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ!
(ಅಲ್ಲಮಪ್ರಭು-639)

ದೀಪಾವಳಿಯ ಸಂದರ್ಭದಲ್ಲಿ ಜೂಜಾಡುವ ಒಂದು ಪದ್ಧತಿ ಇದೆ. ಅದು ಹೇಗೆ ಬಂತೋ ತಿಳಿಯದು. ಋಗ್ವೇದದ ದಶಮ ಮಂಡಲದ 34ನೆಯ ಮಂತ್ರದಲ್ಲಿ ಒಂದು ರೋಚಕವಾದ ಪ್ರಸಂಗ ದಾಖಲಾಗಿದೆ. ಆ ಮಂತ್ರದ ಹೆಸರು “ಕಿತವ” ಅಂದರೆ “ಜೂಜುಗಾರ”. ಆ ಮಂತ್ರದಲ್ಲಿ ಉಲ್ಲೇಖಿತವಾದ ಜೂಜುಗಾರ ತನ್ನ ಜೀವನಾನುಭಾವವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾನೆ. ಅವನಿಗೆ ಹೆಂಡತಿಯ ಮೇಲಿನ ಪ್ರೀತಿಗಿಂತ ಪಗಡೆಯಾಟದಲ್ಲಿ ಬಳಸುವ ದಾಳಗಳ ಮೇಲೆಯೇ ಪ್ರೀತಿ ಜಾಸ್ತಿಯಂತೆ. ಹೆಂಡತಿ ಕೋಪಿಸಿಕೊಂಡಂತೆ ಅವು ಎಂದೂ ಅವನ ಮೇಲೆ ಕೋಪಿಸಿಕೊಂಡಿಲ್ಲವಂತೆ. ಆ ದಾಳಗಳ ಮೇಲಿನ ಪ್ರೀತಿಯ ಕಾರಣದಿ೦ದಾಗಿ ಅವನು ಹೆ೦ಡತಿ ಮತ್ತು ಮಕ್ಕಳಿಂದ ದೂರಾಗುತ್ತಾನೆ. ಮಗ ಜೂಜುಗಾರನೆಂದು ತಿಳಿದು ತಾಯಿಯೂ ಅವನನ್ನು ತುಂಬಾ ದ್ವೇಷಿಸುತ್ತಾಳೆ. ಜೂಜಾಡುವುದನ್ನು ಬಿಡಲು ನಿರ್ಧರಿಸಿದರೆ ಸ್ನೇಹಿತರೂ ದೂರಾಗಿ ಏಕಾಂಗಿಯಾಗುತ್ತೇನೆಂಬ ಭಯ ಅವನಿಗೆ. ದುಬಾರಿ ಬೆಲೆಯ ಕುದುರೆಯು ಮುದಿವಯಸ್ಸಿನಲ್ಲಿ ಮೂಲೆಗುಂಪಾದ ಮೇಲೆ ನಿರ್ಲಕ್ಷ್ಯಕ್ಕೆ ಒಳಗಾದ ದುಃಸ್ಥಿತಿ ಅವನದಾಗುತ್ತದೆ. ಒಂಟಿತನ, ಸಾಲದ ಬಾಧೆ, ಆತಂಕಗಳಿಂದ ತತ್ತರಿಸಿ ದಿಕ್ಕುದೆಸೆ ಇಲ್ಲದೆ ತಿರುಗಾಡುತ್ತಿರುತ್ತಾನೆ. ಆದರೂ ರಾಜಮಹಾರಾಜರ ಕೋಪಕ್ಕೂ ಜಗ್ಗದ, ಅವರ ಗೌರವಾದರಗಳಿಗೆ ಪಾತ್ರವಾದ ಪಗಡೆಯಾಟದ ದಾಳಗಳನ್ನು ಮಾತ್ರ ಕೈಬಿಡಲು ಅವನಿಗೆ ಮನಸ್ಸು ಬರುವುದಿಲ್ಲ. ಈ ಹೊಯ್ದಾಟದಲ್ಲಿ ಆ ಜೂಜುಗಾರ ಒಮ್ಮೆ ಪಗಡೆಯಾಟ ಆಡಿ ಜೇಬಿನಲ್ಲಿದ್ದ ಎಲ್ಲ ಹಣವನ್ನು ಕಳೆದುಕೊಂಡುಬಿಡುತ್ತಾನೆ. ಮೈಮೇಲಿದ್ದ ಆಭರಣಗಳನ್ನೂ ಒತ್ತೆಯಿಟ್ಟು ಜೂಜಾಡಿ ಸೋತು ಅವುಗಳನ್ನೂ ಕಳೆದುಕೊಳ್ಳುತ್ತಾನೆ. ಆದರೂ ಪಗಡೆಯಾಟದ ದಾಳಗಳ ಮೇಲಿನ ಅವನ ಪ್ರೀತಿ ಹೋಗುವುದಿಲ್ಲ. ಎದುರಾಳಿಗಳಿಗೆ ಮುಂದಿನ ಆಟಗಳಲ್ಲಿ ಸೋತರೆ ಮನೆಯ ಟ್ರಜರಿಯಲ್ಲಿರುವ ಹಣ ಮತ್ತು ಆಭರಣಗಳನ್ನು ಕೊಡುವುದಾಗಿ ಹೇಳಿ ಒಪ್ಪಿಸಿ ಆಟವಾಡುತ್ತಾನೆ. ಅವನ ದುರದೃಷ್ಟಕ್ಕೆ ಆ ಎಲ್ಲ ಆಟಗಳಲ್ಲಿಯೂ ಸೋತುಬಿಡುತ್ತಾನೆ. ಎದುರಾಳಿಗಳು ಅವನನ್ನು ಮನೆಗೆ ಎಳೆದುಕೊಂಡು ಬರುತ್ತಾರೆ. ಬಾಗಿಲು ತೆರೆದ ಅವನ ಹೆಂಡತಿ ಅವನನ್ನು ಗುರುತಿಸಿದರೂ ತನ್ನ ಗಂಡ ಎಂದು ಒಪ್ಪಿಕೊಂಡರೆ ಮನೆಯ ಟ್ರಜರಿ ಖಾಲಿಯಾಗುತ್ತದೆ ಎಂದು ಯೋಚಿಸಿ “ಇವನು ಯಾರೋ ನನಗೆ ಗೊತ್ತಿಲ್ಲ, ನೀವು ತಪ್ಪಾಗಿ ನಮ್ಮ ಮನೆಗೆ ಬಂದಿದ್ದೀರಿ” ಎನ್ನುತ್ತಾಳೆ. ಇದೇ ರೀತಿ ಅವನ ತಂದೆ, ತಾಯಿ ಮತ್ತು ಅಣ್ಣತಮ್ಮಂದಿರೂ ಸಹ “ಇವನು ಯಾರೋ ನಮಗೆ ಗೊತ್ತಿಲ್ಲ ಇವನನ್ನು ಹೆಡೆಮುರಿ ಕಟ್ಟಿ ಎಳೆದುಕೊಂಡು ಹೋಗಿರಿ” ಎಂದು ಥಟ್ಟನೆ ಮನೆಯ ಬಾಗಿಲು ಹಾಕುತ್ತಾರೆ. (ಪಿತಾ-ಮಾತಾ-ಭ್ರಾತರ ಏನಮಾಹುಃ ನ ಜಾನೀಮಃ ನಯತ ಬದ್ಧಮೇತಂ-(ಋಗ್ವೇದ 10.34.4) ಅವರ ಈ ಮಾತನ್ನು ಕೇಳಿ ಜೂಜುಗಾರನ ಮನಸ್ಸಿಗೆ ತುಂಬಾ ಆಘಾತವುಂಟಾಗುತ್ತದೆ. ತನ್ನ ಒಡಹುಟ್ಟಿದವರು, ಹೆತ್ತ ತಂದೆ-ತಾಯಿಗಳು, ಮಡದಿ-ಮಕ್ಕಳು ತನ್ನನ್ನು ಗುರುತಿಸಿಯೂ ಅಪರಿಚಿತರಂತೆ ವರ್ತಿಸಿ ತಿರಸ್ಕಾರ ದೃಷ್ಟಿಯಿಂದ ನೋಡಿದ ರೀತಿ ಅವನನ್ನು ಘಾಸಿಗೊಳಿಸುತ್ತದೆ. ಇದಕ್ಕೆಲ್ಲಾ ಕಾರಣ ಒಂದು ಕಡೆ ತನ್ನ ದುರ್ವ್ಯಸನವಾದ ಪಗಡೆಯಾಟ ಎಂದು ಮನವರಿಕೆಯಾದರೂ, ಮತ್ತೊಂದು ಕಡೆ ತನ್ನನ್ನು ಉಳಿಸಿ ಕೊಳ್ಳುವುದಕ್ಕಿಂತ ಟ್ರಜರಿಯಲ್ಲಿರುವ ಒಡವೆ, ವಸ್ತು, ಹಣವನ್ನು ಉಳಿಸಿ ಕೊಳ್ಳುವುದೇ ಇವರಿಗೆ ಮುಖ್ಯವಾಯಿತಲ್ಲಾ ಎಂದು ಜಿಗುಪ್ಪೆಗೊಳ್ಳುತ್ತಾನೆ. “ಈ ಪಗಡೆಯಾಟದಿಂದ ನಾನು ಹಾಳಾದಂತೆ ನೀವಾರೂ ಜೂಜಾಡಿ ಹಾಳಾಗಬೇಡಿರಿ. ಕಷ್ಟಪಟ್ಟು ಜಮೀನನ್ನು ಉಳುಮೆ ಮಾಡಿರಿ, ಪಶುಪಾಲನೆ ಮಾಡಿರಿ, ಬಂದ ಅಲ್ಪ ಸಂಪಾದನೆಯಲ್ಲೇ ಮಡದಿ ಮಕ್ಕಳೊಂದಿಗೆ ಸುಖವಾಗಿ ಜೀವನ ಸಾಗಿಸಿರಿ ಎಂದು ಉಪದೇಶಿಸುತ್ತಾನೆ”.

ಅಕ್ವೈರ್ಮಾ ದೀವ್ಯಃ, ಕೃಷಿಮಿತ್ ಕೃಷಸ್ವ, 
ವಿತ್ತೇ ರಮಸ್ವ ಬಹುಮನ್ಯಮಾನಃ|
ತತ್ರ ಗಾವಃ ಕಿತವ ತತ್ರ ಜಾಯಾ ತನ್ ಮೇ ವಿಚಷ್ಟೇ ಸವಿತಾಯ ಮರ್ಯಃ||
-(ಋಗ್ವೇದ 10.34.13).

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.16-11-2023.