ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ

  •  
  •  
  •  
  •  
  •    Views  

ತ್ತೀಚೆಗಂತೂ ರಾಜಕೀಯ ನೇತಾರರ ಮಧ್ಯೆ “ಕಳ್ಳ, ಸುಳ್ಳ, ನೀನು, ನಿಮ್ಮಪ್ಪ” ಎಂದೆಲ್ಲಾ ಪರಸ್ಪರ ನಿಂದೆ-ಪ್ರತಿನಿಂದೆಗಳ ಕೆಸರೆರಚಾಟ ಎಗ್ಗಿಲ್ಲದೆ ನಡೆಯುತ್ತಿದೆ. ಯಾವ ರಾಜಕೀಯ ಧುರೀಣರಿಗೂ ಇನ್ನೊಬ್ಬರನ್ನು ಹಳಿಯುವ ನೈತಿಕ ಹಕ್ಕು ಇಲ್ಲ. ಅನೀತಿಯುತ ಜೀವನ ನಡೆಸಿದ ಮಹಿಳೆಯೊಬ್ಬಳನ್ನು ಕಲ್ಲು ಹೊಡೆದು ಸಾಯಿಸಲು ಮುಂದಾಗಿದ್ದ ಜನರಿಗೆ “ಯಾರೂ ಯಾವ ಪಾಪವನ್ನೂ ಮಾಡದವರು ಮೊದಲ ಕಲ್ಲು ಎಸೆಯಿರಿ” ಎಂದು ಸವಾಲು ಹಾಕಿದ ಏಸುಕ್ರಿಸ್ತನ ಮಾತುಗಳು ಇಲ್ಲಿ ಸ್ಮರಣೀಯ. ಹಾಗೆಯೇ ಸಮಾಜದಲ್ಲಿ ಶಾಂತಿ, ನೆಮ್ಮದಿ, ಭ್ರಾತೃತ್ವ, ಸೌಹಾರ್ದ ಭಾವನೆಗಳನ್ನು ಮೂಡಿಸಬೇಕಾಗಿದ್ದ ಧಾರ್ಮಿಕ ನೇತಾರರೂ ಸಹ ತಮ್ಮ ನಾಲಿಗೆಯ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ತಮ್ಮ ತಮ್ಮ ಧರ್ಮೀಯರ ಪರವಹಿಸಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಅನ್ಯ ಧರ್ಮೀಯರ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಜನರಿಂದ ಸಮೂಹ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಕೀಳು ಮಟ್ಟದ ಪರ ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ. ಇದರಿಂದಾಗಿ ಉನ್ನತ ಸ್ಥಾನಮಾನ ಹೊಂದಿರುವ ರಾಜಕೀಯ/ಧಾರ್ಮಿಕ ನೇತಾರರ ಬಗ್ಗೆ ಇದುವರೆಗೂ ಇದ್ದ ಗೌರವಾದರ ಭಾವನೆಗಳು ಹರಾಜಾಗುತ್ತಿವೆ. ಇವರಿಗೇನಾದರೂ ಮಾನ-ಮರ್ಯಾದೆ ಎಂಬುದು ಇದೆಯೇ? ಎಂದು ಪ್ರಶ್ನಿಸುವಂತಾಗಿದೆ. 

ಮೊನ್ನೆ ತಾನೇ (ನ.26) ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಬಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶಾದ್ಯಂತ ಆಗಿನ ಪ್ರಜ್ಞಾವಂತ ನಾಗರೀಕರೆಲ್ಲರೂ ಒಂದೆಡೆ ಸೇರಿ ಸತತವಾಗಿ ಮೂರು ವರ್ಷಗಳ ಕಾಲ ಸುದೀರ್ಘ ಚರ್ಚೆ ನಡೆಸಿ ರೂಪಿಸಿದ ಸಂವಿಧಾನದ ಪೀಠಿಕೆಯಲ್ಲಿ ನಾಲ್ಕು ಪ್ರಮುಖ ಅಂಶಗಳಿವೆ: 1. Justice (ನ್ಯಾಯ), 2. Liberty (ಸ್ವಾತಂತ್ರ್ಯ), 3. Equality (ಸಮಾನತೆ) ಮತ್ತು 4. Fraternity (ಭ್ರಾತೃತ್ವ). ಇವುಗಳಲ್ಲಿ ಎರಡನೆಯದಾದ Liberty ಅಡಿಯಲ್ಲಿ ಭಾರತೀಯ ನಾಗರೀಕರೆಲ್ಲರಿಗೂ ಐದು ತೆರನಾದ ಸ್ವಾತಂತ್ರ್ಯಗಳನ್ನು ಕೊಡಲಾಗಿದೆ: ವಿಚಾರ (thought), ಅಭಿವ್ಯಕ್ತಿ (expression), ನಂಬಿಕೆ (belief), ಧರ್ಮ (faith) ಮತ್ತು ಪೂಜೆ (worship). ನಿಮ್ಮ ನಂಬಿಕೆ, ಧರ್ಮ ಮತ್ತು ಪೂಜಾ ವಿಧಾನಗಳನ್ನು ಅನುಸರಿಸಲು ಯಾವ ಅಭ್ಯಂತರವೂ ಇಲ್ಲ. 

ಆದರೆ ನಿಮಗೆ ವಿಚಾರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೆಂದು ಇನ್ನೊಬ್ಬರ ನಂಬಿಕೆ, ಧರ್ಮ ಮತ್ತು ಪೂಜಾ ವಿಧಾನಗಳನ್ನು ಖಂಡಿಸಿದರೆ, ಟೀಕಿಸಿದರೆ, ಅವಹೇಳನ ಮಾಡಿದರೆ ಅದು ನಮ್ಮ ದೇಶದ ಸಂವಿಧಾನದ ಮೇಲೆಯೇ ಹಲ್ಲೆ ಮಾಡಿದಂತಾಗುತ್ತದೆ, ದಂಡನಾರ್ಹ ಅಪರಾಧವಾಗುತ್ತದೆ ಎಂಬುದನ್ನು ವಿಚಾರವಂತರು ನೆನಪಿಟ್ಟುಕೊಳ್ಳಬೇಕು. “ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ” (ಪರರ ವಿಚಾರಗಳು ಮತ್ತು ಪರಧರ್ಮದ ಬಗೆಗೆ ಸಹನೆಯಿಂದ ಇರುವುದೇ ನಿಜವಾದ ಸಂಪತ್ತು) ಎಂದು ಒಂಬತ್ತನೆಯ ಶತಮಾನದ ಕವಿ ಶ್ರೀವಿಜಯ ತನ್ನ “ಕವಿರಾಜ ಮಾರ್ಗ” ಕೃತಿಯಲ್ಲಿ ಹೇಳಿರುವ ನೀತಿ ಬೋಧೆಯನ್ನು ಇಂದಿನ ಧರ್ಮರಾಜಕಾರಣ ಮಾಡುವವರಿಗೆ ಕೌನ್ಸೆಲಿಂಗ್ ಮಾಡುವುದು ಒಳಿತು. 

ಜಗತ್ತೇ ನಿಬ್ಬೆರಗಾಗುವಂತೆ ಚಂದ್ರನ ಮೇಲ್ಮೈಗೆ ಸುರಕ್ಷಿತವಾಗಿ ಪ್ರಜ್ಞಾನ್ ರೋವರನ್ನು ಇಳಿಸಿದ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ರ ಉಡ್ಡಯನಕ್ಕೆ ಮೊದಲು ತಿರುಪತಿಯಲ್ಲಿ ಪೂಜೆ ಸಲ್ಲಿಸಿದರು. ಇದು ವಿಚಾರವಾದಿಗಳ ಕೆಂಗಣ್ಣಿಗೆ ಗುರಿಯಾಯಿತು. ಆದರೆ ಉಡಾವಣೆ ಯಶಸ್ವಿಯಾಯಿತು. ಹಾಗಂತ ಪೂಜೆಯೇ ಯಶಸ್ಸಿಗೆ ಕಾರಣವಾಯಿತೆಂದು ಹೇಳಲಾಗದು; ವಿಜ್ಞಾನಿಗಳ ಶ್ರದ್ಧೆಯನ್ನೂ ಹಂಗಿಸಲಾಗದು. ಪುರುಷ ಪ್ರಯತ್ನಕ್ಕೆ ದೇವರ ಅನುಗ್ರಹ ಬೇಕೆಂಬ ಭಾರತೀಯರ ನಂಬುಗೆಯ ಪ್ರತೀಕವಿದು. 

ನೀನೊಲಿದರೆ ಕೊರಡು ಕೊನರುವುದಯ್ಯಾ; 
ನೀನೊಲಿದರೆ ಬರಡು ಹಯನಹುದಯ್ಯಾ; 
ನೀನೊಲಿದರೆ ವಿಷವು ಅಮೃತವಹುದಯ್ಯಾ; 
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪುವು; 
ಕೂಡಲಸಂಗಮದೇವಾ?. 

ಎಂಬ ಬಸವಣ್ಣನವರ ವಚನವೇ ಇದಕ್ಕೆ ಸಾಕ್ಷಿ. ಒಣ ಕೊರಡು ಚಿಗುರಲು ಹೇಗೆ ಸಾಧ್ಯ? ಬರಡು ಹಸು ಹಾಲು ಕೊಡಲು ಹೇಗೆ ಸಾಧ್ಯ? ವಿಷವು ಅಮೃತವಾಗಲು ಹೇಗೆ ಸಾಧ್ಯ? ಎಂಬುದು ತಾರ್ಕಿಕ ಬುದ್ದಿ, ಅದು ಸಾಧ್ಯ ಎಂಬುದು ದೇವರ ಮೇಲಿನ ಶ್ರದ್ಧಾ ಭಕ್ತಿ, ಪೂಜೆಯಲ್ಲಿ ಭಕ್ತಿ ಮುಖ್ಯವೇ ಹೊರತು ಪೂಜಾರ್ಹ ವಿಗ್ರಹವಲ್ಲ, ಭಕ್ತಿಯಿಲ್ಲದೆ ಮಾಡುವ ಯಾವುದೇ ಪೂಜೆಯಾಗಲಿ ವ್ಯರ್ಥವೇ. ಅಂತಹ ಪೂಜೆಯನ್ನು ಕುರಿತು “ಎರೆದರೆ ನೆನೆಯದು, ಮರೆದರೆ ಬಾಡದು: ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ! ಎನ್ನುತ್ತಾರೆ” ಬಸವಣ್ಣನವರು. ಪೂಜಿಸುವುದು ಗಣಪತಿಯೇ ಆಗಲಿ, ಶಿವನೇ ಆಗಲಿ, ಶ್ರೀ ರಾಮನೇ ಆಗಲಿ, ಶ್ರೀಕೃಷ್ಣನೇ ಆಗಲಿ, ಸತ್ಯನಾರಾಯಣನೇ ಆಗಲಿ, ಸ್ಥಾವರಲಿಂಗವೇ ಆಗಲಿ, ಇಷ್ಟಲಿಂಗವೇ ಆಗಲಿ ‘ ಏಕಂ ಸತ್ ವಿಪ್ರಾಃ ಬಹುಧಾ ವದಂತಿ’, ‘ದೇವನೊಬ್ಬ ನಾಮ ಹಲವು’, ‘ಅವರವರ ಭಾವಕ್ಕೆ ಅವರವರ ಭಕುತಿಗುಂ ಅವರವರಿಗೆಲ್ಲ ದೇವ ನೀನೊಬ್ಬನೇ’ ಎಂದ ಮೇಲೆ ಯಾವ ಜಗಳವೂ ಇರಬಾರದು. ನಮ್ಮ ಪೂಜಾ ಪದ್ಧತಿಯೇ ಸರಿ, ನಿಮ್ಮ ಪೂಜಾ ಪದ್ಧತಿ ಸರಿಯಲ್ಲ ಎಂದು ತೆಗಳುವವರು ಮೂಲಭೂತವಾದಿಗಳು ಎನಿಸುತ್ತಾರೆ. ‘ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ?’ ಎನ್ನುವ ಮುಪ್ಪಿನ ಷಡಕ್ಷರಿಯವರ ಮಾತಿನಲ್ಲಿ ‘ಹೋರಾಟವಿಕ್ಕಿಸಲು ಬೇರಾದೆಯಲ್ಲದೆ’ ಎಂಬ ಪದಕ್ಕೆ ಗಹನವಾದ ತಾತ್ವಿಕ ಅರ್ಥವಿದೆ. ಆದರೆ ಇಂದಿನ ಜನಜೀವನದಲ್ಲಿ ‘ನಮ್ಮ ದೇವರೇ ಬೇರೆ, ನಿಮ್ಮ ದೇವರೇ ಬೇರೆ’ ಎಂದು ಭ್ರಮಿಸಿರುವ ಮತಾಂಧರ ಮಧ್ಯೆ ಈ ದೇಶದಲ್ಲಿ ದೊಡ್ಡ ಹೋರಾಟವೇ, ಹೊಡೆದಾಟವೇ, ಕಗ್ಗೊಲೆಗಳೇ ನಡೆಯುತ್ತಿರುವುದು ಖೇದಕರ ಹಾಗೂ ಖಂಡನೀಯ.

ಜೀವಿಗೆ ಮುಕ್ತಿ ಪಡೆಯಲು ಭಕ್ತಿಮಾರ್ಗ, ಕರ್ಮಮಾರ್ಗ, ಜ್ಞಾನಮಾರ್ಗ ಎಂಬ ಮೂರು ಮಾರ್ಗಗಳಿವೆ ಎಂಬುದು ಭಾರತೀಯರ ನಂಬಿಕೆ. ಇವು ಅವರವರ ಬುದ್ದಿ ಭಾವ  ಮನಃಸ್ಥಿತಿಯನ್ನು ಅವಲಂಬಿಸಿ ಆತ್ಮಸಾಕ್ಷಾತ್ಕಾರಕ್ಕೆ ಅನುಸರಿಸುವ ವಿಭಿನ್ನ ಮಾರ್ಗಗಳು. ಜ್ಞಾನಮಾರ್ಗಕ್ಕೆ ಆಳವಾದ ಅಧ್ಯಯನ ಮತ್ತು ಚಿಂತನೆ ಅವಶ್ಯಕ. ಕರ್ಮಮಾರ್ಗಕ್ಕೆ ಮಾಡುವ ಕೆಲಸದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಆವಶ್ಯಕ. ಭಕ್ತಿಮಾರ್ಗದಲ್ಲಿ ಭಗವಂತನನ್ನು ದಾಸ-ಸಖ, ಸತಿ-ಪತಿ, ತಂದೆ-ತಾಯಿ ಮುಂತಾದ ಭಾವಗಳಿಂದ ಪರಿಭಾವಿಸಿ ಏಕದೇವತಾ ನಿಷ್ಠೆಯಿಂದ ಉಪಾಸನೆ ಮಾಡುವುದು ಆವಶ್ಯಕ. ಭಕ್ತಿ ಮಾರ್ಗವನ್ನು ಅನುಸರಿಸುವವರು ಮಾಡುವ ಉಪಾಸನೆಯು ಬೇರೆಯವರಿಗೆ ವಿಚಿತ್ರವಾಗಿ ಕಂಡರೂ ಭಕ್ತರಿಗೆ ಸಹಜವೆನಿಸುತ್ತದೆ. ಅವರ ಉಪಾಸನಾ ಕ್ರಮದಿಂದ ವೈಯಕ್ತಿಕವಾಗಿ ಅವರಿಗಾಗಲೀ, ಸಮಾಜಕ್ಕಾಗಲೀ ಯಾವುದೇ ಹಾನಿಯಾಗದಿದ್ದಲ್ಲಿ ಅದನ್ನು ಗೌರವಿಸಬೇಕು. ಅದನ್ನು ಟೀಕಿಸುವ, ಲೇವಡಿ ಮಾಡುವ ಹಕ್ಕು ಸಂವಿಧಾನದ ಪ್ರಕಾರ ಯಾರಿಗೂ ಹಕ್ಕಿಲ್ಲ. ಒಂದು ವೇಳೆ ಅಂತಹ ಉಪಾಸನಾ ಕ್ರಮದಿಂದ ವ್ಯಕ್ತಿಗೆ ಅಥವಾ ಸಮಾಜಕ್ಕೆ ಹಾನಿಯಾಗುವುದಾದರೆ ಅದರ ವಿರುದ್ಧ ಹೋರಾಡಲು ಮುಂದಾಗಬೇಕು. ನಮ್ಮ ಮಠದ ಮೂಲ ಪುರುಷರೂ ಬಸವಣ್ಣನವರ ಹಿರಿಯ ಸಮಕಾಲೀನರೂ ಆದ ವಿಶ್ವಬಂಧು ಮರುಳಸಿದ್ದರು ತಮ್ಮ ಬಾಲ್ಯದಲ್ಲಿಯೇ ಪ್ರಾಣಿಬಲಿಯ ವಿರುದ್ಧ ಹೋರಾಡಿದ ಇತಿಹಾಸವೇ ಇದೆ. ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಗಾವು ಜಿಗಿಯುವುದು ಮುಂತಾದವು ಇದೇ ಗುಂಪಿಗೆ ಸೇರುತ್ತವೆ. ಇಂಥವುಗಳ ಬಗ್ಗೆ ವಿರೋಧ ವಿಹಿತ. ಕಠಿಣ ಕಾನೂನಿನ ಮೂಲಕವಾದರೂ ಇವುಗಳ ಮೂಲೋತ್ಪಾಟನೆ ಆಗಬೇಕು.

ನಾಲ್ಕು ದಶಕಗಳ ಹಿಂದೆ ನಡೆದ ಒಂದು ಘಟನೆ. ದಾವಣಗೆರೆ ಸಮೀಪದ ಆನೆಕೊಂಡ ಎಂಬ ಹಳ್ಳಿಯಲ್ಲಿ ಒಂದು ದೇವಸ್ಥಾನದ ಉದ್ಘಾಟನೆ ಮತ್ತು ದೇವಾಲಯದ ಆವರಣದಲ್ಲಿ ನವಗ್ರಹ ಪ್ರತಿಷ್ಠಾಪನೆ. ಡೈರಿಯನ್ನು ತೆಗೆದು ನೋಡಿದಾಗ ಆ ದಿನ ಖಾಲಿ ಇತ್ತು. ಮರುಮಾತಿಲ್ಲದೆ ಒಪ್ಪಿಕೊಂಡು ಕಾರ್ಯಕ್ರಮಕ್ಕೆ ಹೋಗಿದ್ದೆವು. ಕಾರ್ಯಕ್ರಮ ನಡೆದ ಒಂದೆರಡು ದಿನಗಳಲ್ಲಿಯೇ ದಾವಣಗೆರೆಯ ಕೆಲವು ಬಸವ ತತ್ತ್ವಾಭಿಮಾನಿಗಳಿಂದ ನಮಗೆ ಒಂದು ರಿಜಿಸ್ಟರ್ಡ್ ಪತ್ರ ಬಂದಿತು. ಪತ್ರದ ಒಕ್ಕಣಿಕೆಯು ಲಾಯರ್ ನೋಟೀಸ್ ಮಾದರಿಯಲ್ಲಿ ಇತ್ತು. “ಈ ಪತ್ರ ತಲುಪಿದ ಒಂದು ವಾರದೊಳಗೆ” ಉತ್ತರವನ್ನು ನೀಡಬೇಕೆಂದು ಏರು ದನಿಯಲ್ಲಿ ಬರೆದಿದ್ದರು. ಅವರ ಪ್ರಶ್ನೆ ಹೀಗಿತ್ತು: “ಬಸವಣ್ಣನವರ ತತ್ತ್ವಗಳಲ್ಲಿ ನಿಷ್ಠೆಯುಳ್ಳವರಾಗಿ ದೇಶ-ವಿದೇಶಗಳಲ್ಲಿ ಶರಣರ ತತ್ತ್ವಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಾ ಬಂದಿರುವ ತಾವು ಗುಡಿ-ಗುಂಡಾರಗಳ ಕಾರ್ಯಕ್ರಮಕ್ಕೆ ಅದರಲ್ಲೂ ನವಗ್ರಹ ಪ್ರತಿಷ್ಠಾಪನೆಗೆ ಹೇಗೆ ಹೋದಿರಿ?” 

ನಿತ್ಯ ಜೀವನದಲ್ಲಿ  ಮರ್ಯಾದಸ್ಥರು, ಧರ್ಮಗುರುಗಳು ಇಂತಿಂಥಾ ಸ್ಥಳಗಳಿಗೆ ಹೋಗಬಾರದು ಎಂಬ ಸಭ್ಯ ನಡವಳಿಕೆ ಸಮಾಜದಲ್ಲಿದೆ. ಅಂತಹ ಸ್ಥಳಗಳ ಪಟ್ಟಿಗೆ ಗುಡಿಗಳನ್ನು ಸೇರಿಸಬಹುದೇ? ಎಂಬುದು ನಮ್ಮ ಪ್ರಶ್ನೆ, ಹೇಗೆ ಹೋದಿರೆಂದು ಪ್ರಶ್ನೆ ಕೇಳಿದವರಿಗೆ ಒಂದು ಪೋಸ್ಟ್ ಕಾರ್ಡಿನಲ್ಲಿ ನಮ್ಮ ನಾಲ್ಕೇ ನಾಲ್ಕು ಸಾಲುಗಳ ಜವಾಬು: 

“ನಮ್ಮನ್ನು ಆಹ್ವಾನಿಸಲು ಬಂದಿದ್ದ ಆ ಹಳ್ಳಿಯ ಯುವಕರು ಊರ ಮುಂದಿನ ಗುಡಿಸಲಿಗೆ (ಅಂದರೆ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ) ಹೋಗುವುದಕ್ಕಿಂತ ಊರ ಮಧ್ಯದಲ್ಲಿರುವ ಗುಡಿಗೆ ಹೋಗುವುದು ಎಷ್ಟೋ ಲೇಸು ಎಂದು ನಮಗೆ ಅನ್ನಿಸಿದ್ದರಿಂದ ಹೋಗಿದ್ದೆವು.” 

ಅಂದಿನ ಸಭೆಯಲ್ಲಿ ನಾವು ಮುಖ್ಯವಾಗಿ ಹೇಳಿದ್ದು ಇಷ್ಟು: “ಜನರಿಗೆ ಬಹಳ ಕಾಟ ಕೊಡುತ್ತವೆನ್ನುವ ಈ ಕಲ್ಲಿನ ನವಗ್ರಹಗಳು ಪರಸ್ಪರ ಕಚ್ಚಾಡದೆ ಈ ಕಟ್ಟೆಯ ಮೇಲೆ ಬೇವಿನ ಮರದ ನೆರಳಿನಲ್ಲಿ ಒಂದೆಡೆ ತಣ್ಣಗೆ ಕುಳಿತಿವೆ. ಆದರೆ ಪರಸ್ಪರರ ಮೇಲೆ ಕಲ್ಲು ತೂರಾಡಿ ಜಗಳ ಕಾಯುವ, ಕಣಿಗೆ ಕುಡುಗೋಲು ಹಿಡಿದು ಜೀವ ತೆಗೆಯುವ ಜೀವಂತ ಗ್ರಹಗಳು ಊರೊಳಗೇ ಇವೆ!” ಇದನ್ನು ಕೇಳಿದ ಸಭೆ ನಗೆಗಡಲಲ್ಲಿ ತೇಲಿತು. ಯಾರನ್ನು ಕುರಿತು ಈ ಮಾತುಗಳನ್ನು ಗುರುಗಳು ಹೇಳಿರಬಹುದೆಂದು ಹಳ್ಳಿಯ ವಿದ್ಯಮಾನಗಳನ್ನು ಬಲ್ಲ ಹಿರಿಯರು ಹುಬ್ಬೇರಿಸಿ ಪಕ್ಕದಲ್ಲಿ ಕುಳಿತವರೊಡನೆ ಪಿಸುದನಿಯಲ್ಲಿ ಮಾತನಾಡತೊಡಗಿದರು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.30-11-2023.