ಶ್ರೀ ತರಳಬಾಳು ಜಗದ್ಗುರುಗಳವರು ಬೀದರ್ ನಲ್ಲಿ ಶತಾಯುಷಿ ಭೀಮಣ್ಣ ಖಂಡ್ರೆಯವರ ಆರೋಗ್ಯ ವಿಚಾರಿಸಿದರು.
ಬೀದರ್ : ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಬೀದರ್ ನಗರದ ಗುದಗೆ ಆಸ್ಪತ್ರೆಗೆ ಭೇಟಿ ನೀಡಿ, ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ್ ಭೀಮಣ್ಣ ಖಂಡ್ರೆ ರವರ ತಂದೆಯವರಾದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಆರೋಗ್ಯವನ್ನು ವಿಚಾರಿಸಿ, ಶತಾಯುಷಿಯವರನ್ನು ಸನ್ಮಾನಿಸಿದರು.
ಡಾ.ಭೀಮಣ್ಣ ಖಂಡ್ರೆಯವರ ಆರೋಗ್ಯ ವಿಚಾರಿಸಿದ ಶ್ರೀ ತರಳಬಾಳು ಜಗದ್ಗುರುಗಳವರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಭೀಮಣ್ಣ ಖಂಡ್ರೆಯವರ ಸೇವೆ ಸದಾ ಸ್ಮರಣೀಯ. ಶತಮಾನೋತ್ಸವ ಹೊಸ್ತಿಲಲ್ಲಿರುವ ಖಂಡ್ರೆರವರಿಗೆ ಶ್ರೀ ಜಗದ್ಗುರುಗಳವರ ಆಶೀರ್ವಾದ.
ಬೀದರ್ ನಗರದ ಗುದಗೆ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಶ್ರೀ ಜಗದ್ಗುರುಗಳವರು ಡಾ.ಭೀಮಣ್ಣ ಖಂಡ್ರೆ ಅವರನ್ನು ಭೇಟಿಯಾಗಿ ಅಭಿನಂದನಾ ಪೂರ್ವಕ ಅನುಗ್ರಹವಿತ್ತು ಆರೋಗ್ಯ ವಿಚಾರಿಸಿದರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಡಾ.ಭೀಮಣ್ಣ ಖಂಡ್ರೆ ವಿವಿಧ ಕ್ಷೇತ್ರಗಳ ಮೂಲಕ ಅದ್ಭುತ ಕೊಡುಗೆ ನೀಡಿದ್ದಾರೆ.ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದೊಡನೆ ಅವಿನಾಭಾವ ಸಂಬಂಧವಿಟ್ಟುಕೊಂಡಿರುವ ಡಾ.ಭೀಮಣ್ಣ ಖಂಡ್ರೆರವರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರೊಂದಿಗೆ ಸಮಾಜದ ಉನ್ನತಿಗೆ ಶ್ರಮಿಸಿರುವುದನ್ನು ಸ್ಮರಿಸಿದರು.ಭೀಮಣ್ಣ ಖಂಡ್ರೆಯವರು ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದವರು. ಹೋರಾಟಗಳಿಗೆ ಶಕ್ತಿ ತುಂಬಿದವರು. ಅವರಿಗೆ ದೊಡ್ಡ ಇತಿಹಾಸ ಇದೆ. ಅವರ ಸೇವೆ ಸ್ಮರಿಸುವುದು ಅಗತ್ಯವಾಗಿದೆ ಎಂದರು.
ಭೀಮಣ್ಣ ಖಂಡ್ರೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ. ನಿಜಾಮನ ವಿರುದ್ಧವೂ ಹೋರಾಟ, ಸಂಘರ್ಷ ಮಾಡಿದ್ದಾರೆ. ಬಹುಸಂಖ್ಯಾತ ಕನ್ನಡಿಗರಿರುವ ಈ ಭಾಗ ಕರ್ನಾಟಕದಲ್ಲಿ ಉಳಿಯಬೇಕೆಂದು ರೈಲು ರೋಕೋ ಚಳವಳಿ ನಡೆಸಿದ್ದಾರೆ. ಲಕ್ಷಕ್ಕಿಂತ ಹೆಚ್ಚು ಸಹಿ ಸಂಗ್ರಹ ಮಾಡಿ ನೂರಾರು ಜನರನ್ನು ದೆಹಲಿಗೆ ಕರೆದೊಯ್ದು ಹೋರಾಡಿ, ಗಡಿ ಜಿಲ್ಲೆ ಬೀದರ್ ರಾಜ್ಯದಲ್ಲಿ ಉಳಿಸಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ, ರೈತರ ಹಿತಕ್ಕಾಗಿ ಶ್ರಮಿಸಿದ ಹಿರಿಯ ಜೀವ ಶ್ರೀ ಭೀಮಣ್ಣ ಖಂಡ್ರೆರವರು ಅವರ ಸಾರ್ಥಕ ಬದುಕಿಗೆ ಅವರಿಗೆ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಸಂದರ್ಭದಲ್ಲಿ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶ್ರೀ ಜಗದ್ಗುರುಗಳವರು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಾ.ಬೀಮಣ್ಣ ಖಂಡ್ರೆರವರ ಪುತ್ರ ಹಾಗೂ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ರವರು, ಕುಟುಂಬ ವರ್ಗದವರು, ಹಾಜರಿದ್ದರು.
ಡಾ.ಭೀಮಣ್ಣ ಖಂಡ್ರೆರವರು ಶತಮಾನೋತ್ಸವ ಆಚರಿಸಿ ಕೊಳ್ಳುತ್ತಿರುವುದು ಸಂತಸ ತರಿಸಿದೆ. ಅವರಿಗೆ ವಿಶ್ವಗುರು ಬಸವಾದಿ ಶರಣರು ವಿಶ್ವ ಬಂಧು ಮರುಳಸಿದ್ಧರು ಇನ್ನಷ್ಟು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು. ‘ಡಿಸೆಂಬರ್ 2ರಂದು ಮಾಜಿಸಚಿವ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಹಾಗೂ ‘ಲೋಕನಾಯಕ’ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ ಭಾಲ್ಕಿ ಪಟ್ಟಣದ ಬಿಕೆಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ’.
ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ಬೆಂಗಳೂರು, ಡಾ. ಭೀಮಣ್ಣ ಖಂಡ್ರೆ ಜನ್ಮಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಜಿಡಗಾದ ಮುರುಘರಾಜೇಂದ್ರ ಸ್ವಾಮೀಜಿ, ಹುಬ್ಬಳ್ಳಿ ಮೂರು ಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ, ಚಿತ್ತರಗಿಯ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಕಲಬುರಗಿಯ ಶರಣಬಸಪ್ಪ ಅಪ್ಪಾ, ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ನಾಡಿನ ಪ್ರಮುಖ ಧಾರ್ಮಿಕ ಮುಖಂಡರು ವಹಿಸಲಿದ್ದಾರೆ.
ಅಂದು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿನಂದನ ಗ್ರಂಥ ಬಿಡುಗಡೆಗೊಳಿಸುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿನಂದನ ನುಡಿ ಆಡುವರು. ಸಚಿವರುಗಳು, ಶಾಸಕರುಗಳು ಪಾಲ್ಗೊಳ್ಳುವರು.