ಕರ್ನಾಟಕದ ಲೋಕನಾಯಕ ಭೀಮಣ್ಣ ಖಂಡ್ರೆ

  •  
  •  
  •  
  •  
  •    Views  

ಸ್ವಾತಂತ್ರ್ಯಾನಂತರ ರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ, ವೀರಚಕ್ರ, ಪರಮವೀರ ಚಕ್ರ ಮು೦ತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲೂ ಸಹ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸರ್, ರಾವ್ ಬಹದ್ದೂರ್ ಇತ್ಯಾದಿ ಬೇರೆ ಬೇರೆ ಹೆಸರಿನ ಪ್ರಶಸ್ತಿಗಳು ಇದ್ದವು. ಇದೇ ರೀತಿ ಎಲ್ಲ ದೇಶಗಳಲ್ಲೂ ವಿಭಿನ್ನ ಪ್ರಶಸ್ತಿಗಳು, ಬಿರುದುಗಳು ಇವೆ. ಇವುಗಳಿಗೆ ಹೊರತಾಗಿ ಜನರೇ ತಮ್ಮ ಮೆಚ್ಚಿನ ಜನನಾಯಕರಿಗೆ ಅವರ ನಿಸ್ವಾರ್ಥ ದೇಶಸೇವೆಯನ್ನು ಗುರುತಿಸಿ ಕೊಟ್ಟಿರುವ ಬಿರುದುಗಳೂ ಇವೆ. ಉದಾಹರಣೆಗೆ ಲೋಕಮಾನ್ಯ, ಮಹಾತ್ಮಾ/ರಾಷ್ಟ್ರಪಿತ, ಲೋಕನಾಯಕ, ನೇತಾಜಿ, ವೀರ, ಇತ್ಯಾದಿ. ಸರಕಾರದ ಪ್ರಶಸ್ತಿಗಳಿಗೆ ಭಾಜನರಾದವರು ಅನೇಕರು ಇರುತ್ತಾರೆ. ಒಂದೇ ಪ್ರಶಸ್ತಿಯು ಅನೇಕರಿಗೆ ಸಿಕ್ಕಿರುತ್ತದೆ. ವರ್ಷವರ್ಷವೂ ಕೊಡುತ್ತಾ ಬರುವುದರಿಂದ ಅವರ ಸಂಖ್ಯೆ ಕಾಲ ಕಳೆದಂತೆ ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ಪದ್ಮಶ್ರೀ, ಪದ್ಮಭೂಷಣ ಇತ್ಯಾದಿ ಪುರಸ್ಕೃತರು ಅನೇಕರು ಇದ್ದಾರೆ. ಅವರು ಯಾರೆಂದು ದೊಡ್ಡ ಪಟ್ಟಿಯೇ ಇರುತ್ತದೆ. ಬೇರೆ ಪ್ರಶಸ್ತಿ ಪುರಸ್ಕೃತರ ವಿಷಯವೂ ಹೀಗೆಯೇ. ಇತ್ತೀಚೆಗೆ ವಿಶ್ವವಿದ್ಯಾನಿಲಯಗಳೂ ಧಾರಾಳವಾಗಿ ಕೊಡುತ್ತಿರುವ ಗೌರವ ಡಾಕ್ಟರೇಟ್ ಗಳಂತೂ (ಗೌ||ಡಾ||) ಹಿಂದಿನ ಕಾಲದ ಊರ ಗೌಡರ ಗತ್ತು ಗಮ್ಮತ್ತುಗಳಂತೆ ಆಹ್ವಾನ ಪತ್ರಿಕೆಗಳಲ್ಲಿ ವಿಜೃಂಭಿಸುತ್ತವೆ. ಈ ಗೌರವ ಡಾಕ್ಟರೇಟ್ ಗಳ ವಿಚಾರವಾಗಿ 2019 ರಲ್ಲಿ ಯಾರೋ ಸಾರ್ವಜನಿಕ ಹಿತಾಸಕ್ತಿ ಕೇಸನ್ನು (PIL) ಕರ್ನಾಟಕ ಹೈಕೋರ್ಟ್ ನಲ್ಲಿ ದಾಖಲಿಸಿದ್ದು ಉಚ್ಚ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಹಾಗೂ ಯು.ಜಿ.ಸಿ ಗೆ ನೋಟೀಸ್ ಜಾರಿ ಮಾಡಿರುತ್ತದೆ. ತೀರ್ಮಾನ ಆಗಿದೆಯೋ ಇಲ್ಲವೋ ಗೊತ್ತಿಲ್ಲ.     

ಈ ಎಲ್ಲ ಪ್ರಶಸ್ತಿಗಳಿಗಿಂತ ಜನರೇ ಗೌರವಾದರಗಳಿಂದ ನೀಡಿದ ಬಿರುದುಗಳೇ ಶ್ರೇಷ್ಠ. ಮಹಾತ್ಮ/ರಾಷ್ಟ್ರಪಿತ ಎಂದರೆ ಗಾಂಧೀಜಿ ಒಬ್ಬರೇ, ಲೋಕಮಾನ್ಯ ಎಂದರೆ ಬಾಲಗಂಗಾಧರ ತಿಲಕ್ ಒಬ್ಬರೇ, ನೇತಾಜಿ ಎಂದರೆ ಸುಭಾಸ್ ಚಂದ್ರ ಬೋಸ್ ಒಬ್ಬರೇ. ಈ ಬಿರುದುಗಳು ಅವರ ಮೂಲ ಹೆಸರಿನ ಪರ್ಯಾಯ ಪದಗಳಾಗಿ ಗೋಚರಿಸುತ್ತವೆ. ಸರಕಾರ ಕೊಟ್ಟ ಬಿರುದಿಗಿಂತ ಜನರೇ ಪ್ರೀತಿಯಿಂದ ನೀಡಿದ ಈ ಬಿರುದುಗಳು ಹೆಚ್ಚಿನ ಮಹತ್ವ ಪಡೆದಿವೆ. ರಾಷ್ಟ್ರಮಟ್ಟದಲ್ಲಿ ಜಯಪ್ರಕಾಶ ನಾರಾಯಣ್ ಅವರನ್ನು ಲೋಕನಾಯಕ ಎಂದು ಗುರುತಿಸಿದರೆ ಕರ್ನಾಟಕದ ಲೋಕನಾಯಕ ಎಂಬ ಬಿರುದಿಗೆ ಭಾಜನರಾದವರು ಇತ್ತೀಚೆಗೆ ನೂರು ವಸಂತಗಳ ಗಡಿ ದಾಟಿದ ಭೀಮಣ್ಣ ಖಂಡ್ರೆಯವರು. ಕ್ರಿಕೆಟ್ ಮೈದಾನದಲ್ಲಿ ಶತಕ ಬಾರಿಸುವ ಅನೇಕ ಕ್ರೀಡಾಪಟುಗಳು ಇದ್ದಾರೆ. ಆದರೆ ಸಾರ್ವಜನಿಕ ಜೀವನದ ಸಂಘರ್ಷದಲ್ಲಿ ಶತಕ ಬಾರಿಸುವವರು ಬಹಳ ವಿರಳ. ಅವರ ಜನ್ಮಶತಾಬ್ದಿಯನ್ನು ಇದೇ ಡಿಸೆಂಬರ್ 2 ರಂದು ಅವರ ಮಗ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು ಭಾಲ್ಕಿಯಲ್ಲಿ ವಿಜೃಂಭಣೆಯಿಂದ ಏರ್ಪಡಿಸಿದ್ದರು. ನಮ್ಮನ್ನೂ ಒಳಗೊಂಡಂತೆ ಅನೇಕ ಮಠಾಧೀಶರು, ಮುಖ್ಯಮಂತ್ರಿಗಳೂ, ರಾಜಕೀಯ ಧುರೀಣರು ಭಾಗವಹಿಸಿದ್ದರು. ನಮ್ಮೊಂದಿಗೆ ಅನೇಕ ವರ್ಷಗಳ ನಿಕಟ ಸಂಪರ್ಕ ಹೊಂದಿದ್ದ ಅವರನ್ನು ಸಭೆಯಲ್ಲಿ ಸಹಸ್ರಾರು ಜನರ ಮಧ್ಯೆ ಆತ್ಮೀಯವಾಗಿ ಮಾತನಾಡಿಸಲು ಸಾಧ್ಯವಾಗುವುದಿಲ್ಲವೆಂದು ಭಾವಿಸಿ 2 ದಿನಗಳ ಮುಂಚಿತವಾಗಿಯೇ ಬೀದರಿಗೆ ತೆರಳಿ ಅವರ ಮೊಮ್ಮಗಳು ನಡೆಸುತ್ತಿರುವ ಆಸ್ಪತ್ರೆಯಲ್ಲಿ ಖಾಸಗಿಯಾಗಿ ಭೇಟಿಯಾದಾಗ ಅವರ ಹಣೆಯ ಮೇಲೆ ವಿಭೂತಿ ರಾರಾಜಿಸುತ್ತಿತ್ತು.

ಸುಮಾರು ಒಂದು ಗಂಟೆ ಕಾಲ ಅವರ ಪಕ್ಕದಲ್ಲಿಯೇ ಕುಳಿತು ಅವರು ಮತ್ತು ಅವರ ಬಂಧುಗಳೊಡನೆ ನಡೆಸಿದ ಸಂಭಾಷಣೆಯ ಸಂದರ್ಭದಲ್ಲಿ ಅವರಿಂದ ಬಂದ ಪ್ರತಿಕ್ರಿಯೆ: “ಅನೇಕ ವರ್ಷಗಳ ನಂತರ ತಮ್ಮ ದರ್ಶನವಾಯಿತು. ಎಲ್ಲಾ ತಮ್ಮ ಆಶೀರ್ವಾದ, ದೇವರ ಕೃಪೆ!” 

ಅಭಿನಂದನಾ ಸಮಾರಂಭದಲ್ಲಿ “ಲೋಕನಾಯಕ ಭೀಮಣ್ಣ ಖಂಡ್ರೆ” ಎಂಬ ಸುಮಾರು ಒಂದು ಸಾವಿರ ಪುಟಗಳ ಬೃಹತ್ ಗೌರವಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು. ಸಮಾರಂಭಗಳಲ್ಲಿ ಪುಸ್ತಕ ಬಿಡುಗಡೆ ಮಾಡುವಾಗ ಸಾಮಾನ್ಯವಾಗಿ ವೇದಿಕೆಯ ಮೇಲಿರುವ ಗಣ್ಯರು ಎದ್ದು ನಿಂತು ಲೋಕಾರ್ಪಣೆಗೊಂಡ ಪುಸ್ತಕವನ್ನು ಎದೆಯ ಮೇಲೆ ಒತ್ತಿಟ್ಟುಕೊಂಡು ಹಸನ್ಮುಖಿಗಳಾಗಿ ಕ್ಯಾಮರಾ ಕಣ್ಣುಗಳತ್ತ ತೋರಿಸುತ್ತಾರೆ. ಇದನ್ನು ನೋಡಿದಾಗಲೆಲ್ಲಾ ನಮಗೆ ನೆನಪಾಗುವ ದೃಶ್ಯ: ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಪೋಲೀಸರು ಹಿಂದೆ ನಿಂತು ಕಳ್ಳರ ಕೈಗೆ ಕ್ರೈಂ ನಂಬರ್ ಇರುವ ಪ್ಲೇಟ್ ಕೊಟ್ಟು ತೆಗೆಸಿಕೊಂಡ ಫೋಟೋಗಳು! ಪುಸ್ತಕಗಳನ್ನು ಅನಾವರಣ ಮಾಡುವ ಈಗಿನ ಪದ್ಧತಿ ನಮ್ಮ ದೃಷ್ಟಿಯಲ್ಲಿ ಸರಿಯಲ್ಲ. ಶಿವಶರಣ ಹರಳಯ್ಯ ಕೊಟ್ಟ ಪಾದುಕೆಗಳನ್ನು ಬಸವಣ್ಣನವರು ಕಾಲಲ್ಲಿ ಮೆಟ್ಟದೆ ತಲೆಯ ಮೇಲಿಟ್ಟುಕೊಂಡು ಗೌರವಿಸುತ್ತಾರೆ. ಹಾಗೆಯೇ ಲೋಕಾರ್ಪಣೆ ಮಾಡಬೇಕಾದ ಪುಸ್ತಕಗಳನ್ನು ಎದೆಯ ಮೇಲೆ ಒತ್ತಿಟ್ಟುಕೊಳ್ಳುವ ಬದಲು ತಲೆಯ ಮೇಲೆತ್ತರಕ್ಕೆ ಎತ್ತಿ ಹಿಡಿದು ತೋರಿಸಿದರೆ ಬಿಡುಗಡೆಗೊಂಡ ಪುಸ್ತಕಗಳು ಶಿರೋರತ್ನಗಳಾಗಿ ಕಂಗೊಳಿಸುತ್ತವೆ! 

ಈ ಉದ್ ಗ್ರಂಥದ ಆರಂಭದ “ಸ್ಮೃತಿ ಸಂಚಯ” ವಿಭಾಗದಲ್ಲಿ ಭೀಮಣ್ಣ ಖಂಡ್ರೆಯವರು 150 ಪುಟಗಳ ತಮ್ಮ ಆತ್ಮಚರಿತ್ರೆಯನ್ನು ದಾಖಲಿಸಿದ್ದಾರೆ. ಮನಸೂರೆಗೊಳ್ಳುವ ಬಾಲ್ಯದ ನೆನಪುಗಳು, ಮರೆಯಲಾಗದ ಸಂಬಂಧಗಳ ಖಜಾನೆಯೇ ಇಲ್ಲಿ ತೆರೆದುಕೊಳ್ಳುತ್ತದೆ. ವಿಧಾನ ಸೌಧದಲ್ಲಿ ರೈತರ ಹಿತ ಕಾಪಾಡಲು ಗಡಸು ದನಿಯಲ್ಲಿ ಗುಡುಗುತ್ತಿದ್ದ ಭೀಮಣ್ಣ ಖಂಡ್ರೆಯವರ ಸುಕೋಮಲ ಬಾಲ್ಯಜೀವನ ಹಾಗೂ ಸ್ಮರಣೀಯ ಘಟನೆಗಳು ಇಲ್ಲಿ ದಾಖಲಾಗಿವೆ. ಭೀಮಣ್ಣ ಖಂಡ್ರೆಯವರ ತಾಯಿ ಪಾರ್ವತಮ್ಮ ತಂದೆ ಶಿವಲಿಂಗಪ್ಪ ಖಂಡ್ರೆ. ಭೀಮಣ್ಣನವರನ್ನೂ ಒಳಗೊಂಡಂತೆ 9 ಜನ ಮಕ್ಕಳು; ಆದರೆ ಬದುಕುಳಿದವರು ನಾಲ್ಕು ಜನ ಮಾತ್ರ. ತಂಗಿ ತೀರಿಕೊಂಡದ್ದರಿಂದ ತಾಯಿಗೆ ಕೊನೆಯ ಮಗನಾದ ಇವರ ಮೇಲೆಯೇ ಅಪಾರ ಪ್ರೀತಿ. ಬಾಲ್ಯದಲ್ಲಿ ತಾಯಿಯನ್ನು ಬಿಟ್ಟು ಬೇರೆಡೆ ಮಲಗುತ್ತಿರಲಿಲ್ಲ. ಬೆಳ್ಳಿಚುಕ್ಕಿ ಮೂಡುತ್ತಿದ್ದಂತೆಯೇ ಅವರ ತಾಯಿ ಜೋಳ ಬೀಸಲು ಕೂಡುತ್ತಿದ್ದಳು. ಬೀಸುವ ಕಲ್ಲಿನ ಮುಂದೆ ಕುಳಿತು ಒಂದು ಕಾಲು ಮಡಚಿ, ಇನ್ನೊಂದು ಕಾಲನ್ನು ಉದ್ದಕ್ಕೆ ಚಾಚಿ ಬೀಸತೊಡಗಿದಾಗ ತಾಯಿ ಚಾಚಿದ ಕಾಲಿನ ತೊಡೆಯ ಮೇಲೆ ಅವರು ತಲೆಯಿಟ್ಟು ಮಲಗುತ್ತಿದ್ದರಂತೆ. ಬೀಸುವಾಗ ತಾಯಿ ಹಾಡುತ್ತಿದ್ದ ಹೇಮರೆಡ್ಡಿ ಮಲ್ಲಮ್ಮನ ಹಾಡು, ಸಿರಿಯಾಳ ಚಂಗಳೆಯರ ಹಾಡುಗಳನ್ನು ಕೇಳಿಸಿಕೊಂಡಿದ್ದ ಅವರ ಕೆಲವು ಸ್ಮರಣೀಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ಖಂಡ್ರೆಯವರು ದಾಖಲಿಸಿರುವ ಇನ್ನೊಂದು ಮನಮಿಡಿಯುವ ಘಟನೆ: ಅವರು 1962 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ, ಬೆಂಗಳೂರಿಗೆ ಹೋಗಿ ಅಧಿವೇಶನದಲ್ಲಿ ಭಾಗವಹಿಸಿ ಊರಿಗೆ ಬಂದು ಹಳೆಯ ಮನೆಯ ಕಟ್ಟೆಯ ಮೇಲೆ ಕುಳಿತಿದ್ದರಂತೆ. ಆಗ ಅವರನ್ನು ಭೇಟಿಯಾಗಲು ಅಸಿಸ್ಟೆಂಟ್ ಕಮಿಷನರ್ ರಾಮಸ್ವಾಮಿ ಮತ್ತು ಅಂದಿನ ಪೊಲೀಸ್ ವರಿಷ್ಠಾಧಿಕಾರಿಗಳು ಬಂದಿದ್ದರಂತೆ. ಸಂಜೆ ಹೊತ್ತು ವೃದ್ಧೆಯೊಬ್ಬಳು ತಲೆಯ ಮೇಲೆ ಒಗೆದ ಬಟ್ಟೆಗಳ ಬುಟ್ಟಿ, ಕಂಕುಳಲ್ಲಿ ಎರಡು ಸಿವುಡು ಹಸಿರು ಮೇವು ಹಿಡಿದು, ಹೊಲದಿಂದ ಬಂದಳು. “ಯಾವಾಗ ಬಂದ್ಯೋ ಭೀಮಣ್ಣ?” ಎಂದು ಕೇಳಿದಳು. ಆ ವೃದ್ಧೆ ಶಾಸಕರ ಹೆಸರು ಹಿಡಿದು ಏಕವಚನದಲ್ಲಿ ಕರೆದದ್ದನ್ನು ಕಂಡು ಕಸಿವಿಸಿಗೊಂಡ ಅಸಿಸ್ಟೆಂಟ್ ಕಮಿಷನರ್ ರಾಮಸ್ವಾಮಿಯವರು “ಇವರು ಯಾರು ಸಾರ್?” ಎಂದು ಕೇಳಿದರಂತೆ. ಅದಕ್ಕೆ ಖಂಡ್ರೆಯವರು “ಇವರು ನನ್ನ ತಾಯಿ, ನನ್ನ ಮಾತೃದೇವತೆ” ಎಂದು ತುಂಬಾ ಅಭಿಮಾನದಿಂದ ಹೇಳಿ ತಾಯಿಯ ಸಂಪೂರ್ಣ ದಿನಚರಿ, ತ್ಯಾಗ ಮತ್ತು ಪರಿಶ್ರಮಗಳನ್ನು ವಿವರಿಸಿದರಂತೆ. ಅವರಿಗೆ ತಾಯಿಯ ಮೇಲಿರುವ ಗೌರವವನ್ನು ನೋಡಿ ಅಚ್ಚರಿಗೊಂಡ ರಾಮಸ್ವಾಮಿಯವರು ಇತ್ತೀಚೆಗೆ ಓದು-ಬರೆಹ ಕಲಿತು, ಉನ್ನತ ಹುದ್ದೆಗೆ ಸೇರಿದವರಿಗೆ ತಾಯಿ-ತಂದೆಗಳ ಬಗ್ಗೆ ಗೌರವ ನಿಷ್ಠೆಗಳು ಕಡಿಮೆಯಾಗುತ್ತಿದೆ ಎಂದು ವಿಷಾದಿಸುತ್ತಾರೆ. ಭಾಲ್ಕಿಯವರೇ ಆದ ನಮ್ಮ ಕಮಿಷನರ್ ಸಾಹೇಬರನ್ನು ಒಮ್ಮೆ ಅವರ ತಂದೆ ನೋಡಲು ಬಂದಿದ್ದರು. ಇವರು ಯಾರೆಂದು ಕೇಳಿದಾಗ ತಂದೆಯ ಮಾಸಲು ಬಟ್ಟೆ, ಹರಿದ ಪಂಜೆ, ಗ್ರಾಮ್ಯ ನಡೆ-ನುಡಿ ನೋಡಿ ಇವರು ನನ್ನ ತಂದೆ ಎಂದು ಹೇಳಿಕೊಳ್ಳಲು ಸಂಕೋಚಪಟ್ಟುಕೊಂಡರು. ಆಂಗ್ಲಭಾಷೆಯಲ್ಲಿ “He is a servant in my house” ಎಂದು ಉತ್ತರಿಸಿದರು. ಅವರ ತಂದೆಗೆ ಅದು ಹೇಗೋ ಅರ್ಥವಾಯಿತು. ಇಡೀ ಜೀವಮಾನವೆಲ್ಲಾ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ ಕಾಸಿಗೆ ಕಾಸು ಕೂಡಿಟ್ಟು ಸಾಹುಕಾರರಿಂದ ಕಾಡಿ ಬೇಡಿ ಹಣ ಪಡೆದು ಮಗನನ್ನು ಹೈದರಾಬಾದಿನಲ್ಲಿ ಓದಿಸಿದ್ದ ತಂದೆ ದುಃಖಿತರಾಗಿ ಮುಂದೆಂದೂ ತನ್ನ ಮಗನ ಮುಖ ನೋಡಲು ಬಯಸದೆ ಕೊನೆಯುಸಿರೆಳೆದರಂತೆ!

ಸಭೆಯಲ್ಲಿ ಕುಳಿತಿರುವಾಗ ಅಭಿಮಾನಿಗಳು ಮತ್ತು ಪ್ರತಿಷ್ಠಿತರು ಖಂಡ್ರೆಯವರನ್ನು ಅಭಿನಂದಿಸಲು ಕೈಯಲ್ಲಿ ಹಾರ, ತುರಾಯಿ, ಶಾಲು, ಸ್ಮರಣಿಕೆಗಳನ್ನು ಹಿಡಿದು ನಾಮುಂದು ತಾಮುಂದು ಎಂದು ಮುನ್ನುಗ್ಗುತ್ತಿದ್ದರು. ಭೀಮಣ್ಣ ಖಂಡ್ರೆಯವರ ಪಕ್ಕದಲ್ಲಿಯೇ ಕುಳಿತಿದ್ದ ನಮಗೆ ಅದನ್ನು ನೋಡಿ ಆಕ್ರೋಶವುಂಟಾಯಿತು. ಜನ್ಮಶತಾಬ್ದಿಯು ಅಭಿನಂದನಾ ಸಮಾರಂಭವಾಗಿದ್ದರೂ ನೂರರ ವಯಸ್ಸಿನಲ್ಲಿ ಹಣ್ಣಾಗಿರುವ, ವೀಲ್ ಛೇರ್ ಮೇಲೆ ಮುದುಡಿ ಕುಳಿತ ಅವರ ಮೈಮೇಲೆ ಬಿದ್ದು ನೀವು ಹಿಂಸೆ ಕೊಡುತ್ತಿದ್ದೀರಲ್ಲಾ, ನಿಮಗೇನಾದರೂ ಅವರ ಮೇಲೆ ಅಂತಃಕರಣ, ದಯೆ, ಅನುಕಂಪೆ, ಮಾನವೀಯತೆ ಇದೆಯೇ?” ಎಂದು ನಮ್ಮ ಭಾಷಣದಲ್ಲಿ ಏರುದನಿಯಲ್ಲಿ ಗದರಿಸಿದಾಗ ವೇದಿಕೆಯ ಮೇಲಿದ್ದ ಗಣ್ಯರು ತಬ್ಬಿಬ್ಬಾದರು. ಆಗ ನಮಗೆ ನೆನಪಾದ ಬಸವಣ್ಣನವರ ವಚನ:

ಅಯ್ಯೋ, ನಿಮ್ಮ ಮನ್ನಣೆಯೇ ಮಸೆದ ಅಲಗಾಗಿ ತಾಗಿತ್ತಲ್ಲಾ! 
ಅಯ್ಯೋ ನೊಂದೆನು, ಸೈರಿಸಲಾರೆನು... ಕೂಡಲಸಂಗಮದೇವಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.14-12-2023.