ಕಲ್ಹತ್ತಿಗಿರಿಯಲ್ಲಿ ಕಾರ್ತೀಕ ಮಹೋತ್ಸವಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಚಾಲನೆ.

  •  
  •  
  •  
  •  
  •    Views  

ದಿನಾಂಕ:14-12-2023
ಸ್ಥಳ: ಕಲ್ಹತ್ತಿಗಿರಿ, ಚಿಕ್ಕಮಗಳೂರು 
-----------------------------------
ಪವಿತ್ರ ಕ್ಷೇತ್ರ ಮಲಿನಗೊಳಿಸದಂತೆ ಶ್ರೀ ಜಗದ್ಗುರುಗಳವರ ಕರೆ
-----------------------------------

ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ತಿಗಡ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಪವಿತ್ರ ದೈವೀ ಕ್ಷೇತ್ರವಾಗಿ ನಿಸರ್ಗ ಸೌಂದರ್ಯದ ಕಲ್ಹತ್ತಿಗಿರಿಯ ಶ್ರೀ ವೀರಭದ್ರೇಶ್ವರಸ್ವಾಮಿ ಕಾರ್ತೀಕೋತ್ಸವಕ್ಕೆ ಸರ್ವತ್ರ ಪೂಜನೀಯರಾದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಚಾಲನೆ ನೀಡಿದರು.

ಭಕ್ತರ ಅಪೇಕ್ಷೆಯಂತೆ ಪ್ರತಿ ವರ್ಷವು ಕಾರ್ತೀಕ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಶ್ರೀ ಜಗದ್ಗುರುಗಳವರು ಕಾರ್ತೀಕ ದೀಪ ಹಚ್ಚಿ ಭಕ್ತರಿಗೆ ಸಂತಸ ಉಂಟು ಮಾಡಿದರು. ಕಲ್ಹತ್ತಿಗಿರಿಯ ನಿಸರ್ಗ ಸೌಂದರ್ಯವನ್ನು ಸವಿದ ಪೂಜ್ಯರು ಸುಮಾರು 400 ಅಡಿ ಎತ್ತರದಿಂದ ಚಂದ್ರ ದ್ರೋಣ ಬೆಟ್ಟಗಳ ಕೆಳಗೆ ಬೀಳುವ ಕಲ್ಲತ್ತಿಗಿರಿ ಜಲಪಾತದ ನೀರನ್ನು ನೆರೆದಿದ್ದ ಭಕ್ತರಿಗೆ ಪ್ರೋಕ್ಷಿಸಿದರು ಹರಿಯುವ ಜಲಧಾರೆಯ ಬಹುಕಾಂತೀಯ ದೃಶ್ಯವನ್ನು ಮನತುಂಬಿಕೊಂಡರು.

ಮೂಢನಂಬಿಕೆಯ ಹೆಸರಲ್ಲಿ ಪವಿತ್ರ ಕ್ಷೇತ್ರದ ವಾತಾವರಣಕ್ಕೆ ದಕ್ಕೆ ಬಾರದಿರಲಿ: 

ಪೂಜ್ಯ ಶ್ರೀ ಜಗದ್ಗುರುಗಳವರನ್ನು ಭಕ್ತಿ ಶ್ರದ್ಧೆಗಳಿಂದ ಸ್ವಾಗತಿಸಿ ಕ್ಷೇತ್ರ ಪರಿಕ್ರಮಿಸಲು ಆಗಮಿಸಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವದಿಸಿ ಮಾರ್ಗದರ್ಶನ ದಯಪಾಲಿಸಿದ ಶ್ರೀ ಜಗದ್ಗುರುಗಳವರು: ಕಲ್ಹತ್ತಿಗಿರಿ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವಿದ್ದು, ರಾಮಾಯಣ ಕಾಲದಿಂದಲೂ ಕೂಡಾ ಔಷಧೀಯ ಸಸ್ಯಗಳಿಗೆ,ಧಾರ್ಮಿಕ ನಂಬಿಕೆಗೂ ಕೂಡಾ ಅಷ್ಟೇ ಹೆಸರುವಾಸಿಯಾಗಿದೆ.ಕಲ್ಹತ್ತಿಗಿರಿ ಐತಿಹಾಸಿಕ ಪವಿತ್ರ ಪುಣ್ಯಕ್ಷೇತ್ರ ಹಾಗೂ ಪ್ರಮುಖ ಪ್ರವಾಸಿ ಸ್ಥಳವಾಗಿರುವುದರಿಂದ ಇಲ್ಲಿಗೆ ಪ್ರತಿನಿತ್ಯ ವೀರಭದ್ರೇಶ್ವರ ಸ್ವಾಮಿ, ಚೌಡೇಶ್ವರಿ ದೇವಿಯವರ ದೇವಾಲಯಕ್ಕೆ ಭಕ್ತರು ಮತ್ತು ಸಾವಿರಾರು ಜನ ಪ್ರವಾಸಿಗರು ಬಂದು ಹೋಗುವರು. ಇಲ್ಲಿಗೆ ಬರುವ ಕೆಲವರು ಮೂಢನಂಬಿಕೆಯ ಹೆಸರಲ್ಲಿ ತಮ್ಮ ಹಳೆಯ ಬಟ್ಟೆಗಳನ್ನು ಇಲ್ಲಿಯೇ ಬಿಟ್ಟು ಹೋಗುವುದರಿಂದ ಇಲ್ಲಿನ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುವುದರ ಜೊತೆಗೆ ಪುಣ್ಯ ಕ್ಷೇತ್ರ ಮಲಿನವಾಗುತ್ತಿದೆ, ಕಲ್ಹತ್ತಿಗಿರಿಗೆ ಬರುವ ಪ್ರವಾಸಿಗರು ತಮ್ಮ ಮನಸೋ ಇಚ್ಛೆ ತ್ಯಾಜ್ಯ ಎಸೆದು ಪುಣ್ಯ ಕ್ಷೇತ್ರವನ್ನು ಅಪವಿತ್ರ ಸ್ಥಳವನ್ನಾಗಿ ಮಾಡಬಾರದು. ಇದರಿಂದ ಪರಿಸರದ ಸೂಕ್ಷ್ಮತೆಗೆ ಧಕ್ಕೆ ತರುವುದಲ್ಲದೆ ಜಲಮೂಲದ ಪವಿತ್ರತೆಯನ್ನು ಅಪವಿತ್ರ ಮಾಡಿ ಔಷಧೀಯ ಗುಣಗಳುಳ್ಳ ಸಸ್ಯಗಳ ವಿನಾಶಕ್ಕೆ ಕಾರಣವಾಗುತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ಪರಿಸರ ಸೂಕ್ಷ್ಮ ಹಾಗೂ ಪವಿತ್ರ ಪುಣ್ಯಸ್ಥಳಗಳ ಸಂರಕ್ಷಣೆ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಆದ್ಯ ಕರ್ತವ್ಯವಾಗಿರುವುದರಿಂದ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಿ ಇದನ್ನು ಸಂರಕ್ಷಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಉದ್ದೇಶದಿಂದ ಹಾಗೂ ಧಾರ್ಮಿಕ ನಂಬಿಕೆಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ಔಷಧೀಯ ಸಸ್ಯ ಸಂಕುಲದ ಉಳಿವಿಗೆ ಶ್ರಮಿಸುವ ಕೆಲಸ ಮಾಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.