ವೀರಶೈವ ಲಿಂಗಾಯತರಿಗೆ ವೀರಶೈವ ಲಿಂಗಾಯತರೇ ಶತ್ರುಗಳು, ಸ್ವಾರ್ಥ ಬದಿಗೊತ್ತಿ ಎಲ್ಲರೂ ಒಂದಾಗಬೇಕು : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದಿನಾಂಕ: 23-12-2023
ಸ್ಥಳ: ವೀರಶೈವ ಲಿಂಗಾಯತ ಮಹಾ ಅಧಿವೇಶನ ದಾವಣಗೆರೆ
--------------------------------

ಜಾತಿನಿಂದನೆಗೆ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ವ್ಯಕ್ತಿನಿಂದನೆ ನಿಗ್ರಹಕ್ಕೆ ಕಠಿಣ ಕಾನೂನು ಜಾರಿಯಾಗಬೇಕು: ಶ್ರೀ ತರಳಬಾಳು ಜಗದ್ಗುರುಗಳವರ  ಅಭಿಮತ
--------------------------------

ವೀರಶೈವ ಲಿಂಗಾಯತರಿಗೆ ಶತ್ರುಗಳು ಯಾರು ಎಂದರೆ ವೀರಶೈವ ಲಿಂಗಾಯತರೇ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವೀರಶೈವ ಲಿಂಗಾಯತ ಮಹಾಸಭಾ ಅಧೀವೇಶನದಲ್ಲಿ ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ನಗರದ ಎಂಬಿಎಂ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವೀರಶೈವ ಸಮಾಜಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು. ವೀರಶೈವ ಸಮಾಜವು ಇಂದು ಅಧಃಪತನದತ್ತ ಸಾಗಲು ವೀರಶೈವರೇ ಕಾರಣ ಎಂದು ನೋವು ಹಂಚಿಕೊಂಡರು. ಕಳೆದ ಹತ್ತಾರು ವರ್ಷಗಳಿಂದ ಜಾತಿ ನಿಂದನೆ ಪ್ರಕರಣಗಳು ವೀರಶೈವ ಲಿಂಗಾಯತರ ಮೇಲೆ ಹೆಚ್ಚುತ್ತಿರುವ ಹಿನ್ನೆಲೆ ಗಮನಿಸಿದರೆ ವೀರಶೈವ ಲಿಂಗಾಯತರೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರ ಹಿಂದೆ ನಿಂತು ಕುಮ್ಮಕ್ಕು ನೀಡಿ ವೀರಶೈವ ಲಿಂಗಾಯತರ ಮೇಲೆ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುವಂತಹ ಅಸಹ್ಯಕರ ವರ್ತನೆಗಳು ನಡೆಯುತ್ತಿರುವುದು ವೀರಶೈವರ ದುರಂತವಾಗಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡಗಳಾಗಿ ಹೋದರೆ ಯಾವ ಸೌಲಭ್ಯವೂ ಸಿಗುವುದಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಗದು. ವೀರಶೈವ ಲಿಂಗಾಯತ ಸಮುದಾಯದವರಲ್ಲಿ ಸ್ವಾರ್ಥ ಕಡಿಮೆಯಾಗಬೇಕು. ಸಮಾಜದ ಸಂಘಟನೆಗಾಗಿ ಒಂದಾಗಬೇಕು ಎಂದು ಶ್ರೀಜಗದ್ಗುರುಗಳು ಕರೆ ನೀಡಿದರು.

ಯಾವುದೇ ಒಳಪಂಗಡಗಳಾಗಲೀ, ವೀರಶೈವ ಲಿಂಗಾಯತರು ಒಂದೇ ಎಂಬ ಭಾವನೆ ಮೂಡುವಂತಾಗಬೇಕು. ತಮ್ಮಲ್ಲಿರುವ ಅಲ್ಪವಾದ ಒಳಬೇಧವನ್ನು ತ್ಯಜಿಸಿ ಅನ್ಯೋನ್ಯ ಭಾವದಿಂದ ವರ್ತಿಸಬೇಕು. ವೀರಶೈವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಕರೆ ಕೊಟ್ಟಿದ್ದಾರೆ. ನೂರು ಅಧಿವೇಶನದ ಹಿಂದೆ ಕರೆ ಕೊಡಲಾಗಿದೆ. ಆದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಾರ್ಯರೂಪಕ್ಕೆ ಬರುವ ಹಾಗೆ ಪ್ರಯತ್ನಿಸಿ ಸಮಾಜ ಸಂಘಟಿಸಿ, ಒಗ್ಗೂಡಿಸಲಿ ಎಂದು ಸಲಹೆ ನೀಡಿದರು.

ಮಹಾ ಅಧಿವೇಶನ ಉದ್ಘಾಟನೆಯನ್ನು ದೀಪ ಬೆಳಗಿಸಿ ನೆರವೇರಿಸಲಾಯಿತು. ಆದರೆ ಹೆಚ್ಚಿದ ದೀಪವನ್ನು ಬೇರೆ ಕಡೆಗೆ ತೆಗೆದು ಇರಿಸಲಾಗಿದೆ. ಎಲ್ಲಾ ಕಾರ್ಯಕ್ರಮದಲ್ಲಿ ಧೀಪ ಹಚ್ಚಿದ ನಂತರ  ದೀಪಗಳನ್ನು ತಗೆದಿಡುವರು ಈ ಪದ್ಧತಿ ಸರಿ ಎಲ್ಲ ಎಂಬ ಭಾವನೆ ನಮ್ಮದು ಎಂದರು. ಸಮಾಜದ ಸಂಘಟನೆ ದೃಷ್ಟಿಯಿಂದ ದೀಪ ಹಚ್ಚುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಅದರಲ್ಲಿಯೂ ಇಂದಿನ ಅಧಿವೇಶನದಲ್ಲಿ ಸನ್ಮಾನಿತರಾಗಿರುವವರ ಜವಾಬ್ದಾರಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡಿ ಎಂದು  ಕರೆ ನೀಡಿದರು.

ವೀರಶೈವ ಲಿಂಗಾಯತರನ್ನು  ಹೀನ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿಗೆ ತರುವ ಘಟನೆಯು ನೂರು ವರ್ಷಗಳ ಹಿಂದೆ ನಡೆದಾಗ ಅದನ್ನು ತಡೆದು ವೀರಶೈವ ಲಿಂಗಾಯತ ಸಮಾಜಕ್ಕೆ ರಕ್ಷಣೆ ನೀಡಿದ ಮೈಸೂರು ಬಸವಯ್ಯನವರನ್ನು ಸಮಸ್ತ ವೀರಶೈವ ಲಿಂಗಾಯತರು ಸ್ಮರಿಸಬೇಕು ಎಂದು ವೀರಶೈವ ಲಿಂಗಾಯತರ ಇತಿಹಾಸದ ಘಟನೆಗಳನ್ನು ಆಧಾರ ಗ್ರಂಥಗಳೊಂದಿಗೆ ಉಲ್ಲೇಖಿಸಿ ಮಾತನಾಡಿದರು.

ಜಾತಿನಿಂದನೆಗೆ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ವ್ಯಕ್ತಿನಿಂದನೆ ನಿಗ್ರಹಕ್ಕೆ ಕಠಿಣ ಕಾನೂನು ಜಾರಿಯಾಗಬೇಕು: ಶ್ರೀ ತರಳಬಾಳು ಜಗದ್ಗುರುಗಳವರ  ಅಭಿಮತ
--------------------------------

ಇತ್ತೀಚಿನ ದಿನಗಳಲ್ಲಿ ಮಾಧ್ಯಮದಲ್ಲಿ ಗಮನಿಸಿದರೆ ಬೇಸರ ಎನಿಸುತ್ತದೆ. ಜಾತಿ ನಿಂದನೆ ಮಾಡಿದರೆ ಅಟ್ರಾಸಿಟಿ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ವ್ಯಕ್ತಿನಿಂದನೆ ನಿಗ್ರಹಕ್ಕೆ ಕಾನೂನು ರೂಪಿಸಬೇಕಾದ ಅವಶ್ಯಕೆ ಇದೆ ಶ್ರೀ ಜಗದ್ಗುರುಗಳವರು ಪ್ರತಿಪಾದಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು, ಸ್ವಾಮೀಜಿಗಳ ವಿರುದ್ಧ ಟೀಕೆ ಮಾಡಲು ಬಳಸುತ್ತಿರುವ ಭಾಷೆ ಗಮನಿಸಿದರೆ ಬೇಸರ ಆಗುತ್ತದೆ. ಈ ಕಾರಣಕ್ಕಾಗಿ ಜಾತಿನಿಂದನೆ ಕೇಸ್ ನಂತೆ ವ್ಯಕ್ತಿನಿಂದನೆ ಕಾನೂನು ಜಾರಿಗೆ ತುರ್ತಾಗಿ ಬರಬೇಕಾದ ಅಗತ್ಯತೆ ತುರ್ತು ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ಜಾರಿಗೊಳಿಸುವ ಸಂಬಂಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಧ್ಯಮಗಳಲ್ಲಿ ಬೈಯ್ಯುವಂಥ ಹೇಳಿಕೆ ಪ್ರಕಟವಾಗುವುದು ಅನುಚಿತವಾಗಿದೆ. ಜಾತಿ ನಿಂದನೆ ಮಾಡಿದರೆ ಅಟ್ರಾಸಿಟಿ ಕೇಸ್ ದಾಖಲಿಸಲಾಗುತ್ತದೆ. ಅದೇ ರೀತಿಯಲ್ಲಿ ವ್ಯಕ್ತಿನಿಂದನೆ ಮಾಡಿದರೆ ವ್ಯಕ್ತಿನಿಂದನೆ ತಡೆಗೆ ಕಠಿಣ ಕಾನೂನು ರೂಪಿಸಬೇಕಿದೆ. ಹಿಂದುಳಿದ ವರ್ಗದವರು ಅಟ್ರಾಸಿಟಿ ಕೇಸ್ ದಾಖಲಿಸುವುದು ಕಡಿಮೆ. ಮುಂದುವರಿದ ಜನಾಂಗದವರು ಅವರನ್ನು ಬಳಸಿಕೊಂಡು ಕೇಸ್ ದಾಖಲಿಸುತ್ತಿರುವುದು ಸರಿಯಲ್ಲ ಎಂಬುದು ತಮ್ಮ ಭಾವನೆ. ಹಾಗಾಗಿ, ಇದು ಹೋಗಬೇಕು ಎಂದು ಪ್ರತಿಪಾದಿಸಿದರು.

ಸಾಮಾಜಿಕ ಜೀವನದಲ್ಲಿ ಇರುವವರು ಮಾತನಾಡುವಾಗ ಎಚ್ಚರ ವಹಿಸಬೇಕು. ರಾಜಕೀಯದವರಾಗಲೀ, ಧರ್ಮ ಗುರು ನಿಂದನೆಯಾಗಲೀ ಆಗಬಾರದು. ಯಾರನ್ನು ದೂಷಣೆ ಮಾಡದ ಹಾಗೆ ಹೊಸ ಕಾನೂನು ಆಗಬೇಕಿದೆ. ವ್ಯಕ್ತಿ ನಿಂದನೆ ಮಾಡಿದರೆ ಸಂವಿಧಾನ ಬಾಹಿರ ಎಂಬ ಕಾನೂನು ಜಾರಿಗೊಳಿಸಬೇಕು ಎಂದು ಪೂಜ್ಯ ಶ್ರೀ ಜಗದ್ಗುರುಗಳವರು  ಸಲಹೆ ನೀಡಿದರು.

ಬಸವಣ್ಣ ತಂದದ್ದು ಮೀಸಲಾತಿ ಅಲ್ಲ, ಸಮಾನತೆ. ಹರಿಜನರು, ಮಡಿವಾಳರು, ಗಿರಿಜನರೂ ಸೇರಿದಂತೆ ಎಲ್ಲಾ ವರ್ಗದವರು ಸಮಾನರು ಎಂದು ಬಸವಣ್ಣ ಪ್ರತಿಪಾದಿಸಿದ್ದರು. ಹೋರಾಟ ನಡೆಸಿದ್ದರು.ಸಮಪಾಲು, ಸಮಬಾಳು ಕಲ್ಪನೆ ಬಸವಣ್ಣನವರದ್ದು. ಈ ತತ್ವ ಮೊದಲು ಕೊಟ್ಟವರೇ ಬಸವಣ್ಣ. ಲಿಂಗಧಾರಣೆ ಮಾಡಿದವರೆಲ್ಲರೂ ಶಿವಭಕ್ತರೇ ಎಂದು  ಅಭಿಪ್ರಾಯಪಟ್ಟರು.

ಸಮಾಜವದರು ಸ್ವಾರ್ಥ ಬದಿಗೆ ಸರಿಸಬೇಕು. ಎಲ್ಲರೂ ಒಂದೇ ಎಂಬ ಭಾವನೆ ಇಟ್ಟುಕೊಂಡು ಸಂಘಟನೆ ಮಾಡಬೇಕು. ನಮ್ಮವರೇ ಶತ್ರುಗಳಂತಾದರೆ, ಯಾವುದೇ ರೀತಿಯ ಸಹಾಯ ಮಾಡದಿದ್ದರೆ ಸಮಾಜ ಒಗ್ಗಟ್ಟಾಗುವುದಾದರೂ ಹೇಗೆ? ಅಭಿವೃದ್ಧಿ ಹೊಂದುವುದಾದರೂ ಹೇಗೆ ಎಂದು ಶ್ರೀ ಜಗದ್ಗುರುಗಳವರು ಪ್ರಶ್ನಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪರು ಮಹಾಧಿವೇಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಮಹಾ ಅಧಿವೇಶನಕ್ಕೆ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ದಿವ್ಯ ಸಾನಿಧ್ಯವನ್ನು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ, ಕೇಂದ್ರ ಸಚಿವ ಭಗವಂತ್ ಖೂಬಾ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದ ಜಿ.ಎಂ.ಸಿದ್ದೇಶ್ವರ್, ಸೇರಿದಂತೆ ಸಮಾಜ ಬಾಂಧವರು ಹಾಗೂ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ.ಜಿ.ಶಾಂತನಗೌಡ,  ಬಸವರಾಜ ಶಿವಗಂಗಾ, ಬಿ.ಪಿ.ಹರೀಶ್, ಬಿ.ಕೆ.ಸಂಗಮೇಶ್ವರ,  ಅಥಣಿ ವೀರಣ್ಣ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕರುಗಳು, ಮಾಜಿ ಶಾಸಕರುಗಳು, ಮಾಜಿ ಸಚಿವರುಗಳು ವೀರಶೈವ ಮಹಾಸಭಾಧ ಎನ್.ತಿಪ್ಪಣ್ಣ, ಅಣಬೇರು ರಾಜಣ್ಣ, ಶಂಕರಬಿದರಿ, ಡಾ.ಎ.ಹೆಚ್.ಶಿವಯೋಗಿ ಸ್ವಾಮಿ, ಎಸ್.ಎಸ್.ಗಣೇಶ್, ಸಚ್ಚಿದಾನಂದ ಮೂರ್ತಿ, ಬಿ.ಸಿ.ಉಮಾಪತಿ, ಆಂಧ್ರಪ್ರದೇಶ, ತೆಲಂಗಾಣ,ತಮಿಳುನಾಡಿನಿಂದ ಸಮಾಜ ಬಾಂಧವರು ಆಗಮಿಸಿದ್ದರು.