ಮಲೆನಾಡ ಕ್ರೀಡಾ ಸಿರಿ ರಕ್ಷಿತ
ಪ್ರಕೃತಿಯೇ ಹಾಗೆ ತನ್ನ ಗರ್ಭದೊಳಗೆ ವಿಶಿಷ್ಟವಾದದನ್ನು ಅಡಗಿಸಿಕೊಂಡು ಕಾಲಕ್ಕೆ ತಕ್ಕಂತೆ ತನಗೆ ಇಷ್ಟ ಬಂದಾಗ ಪ್ರತಿಭೆಗಳನ್ನು ಹೊರ ಜಗತ್ತಿಗೆ ಸೂಸುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾನನದೂಳಗಡಗಿರುವ ಚಿಕ್ಕ ಗ್ರಾಮ ಬಾಳೂರಿನ ಗುಡ್ನಳ್ಳಿ. ಇಂತಹ ಚಿಕ್ಕ ಹಳ್ಳಿಯನ್ನು ಇಂದು ರಾಷ್ಟ್ರವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಆ ಊರಿನ ಮಗಳು ರಕ್ಷಿತಾರವರಿಗೆ ಸಲ್ಲುತ್ತದೆ.
ಏಷ್ಯಾದ ಬಂಗಾರ ಪದಕ ತಂದ 17ರ ಹರೆಯದ ಕುಮಾರಿ ರಕ್ಷಿತ 2001ರ ಜನವರಿ 15ರಂದು ಜನಿಸಿರುತ್ತಾರೆ. ತನ್ನ ಎರಡನೇ ವಯಸ್ಸಿನಲ್ಲಿ ತಾಯಿಯನ್ನು ಹಾಗೂ ಹತ್ತನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು ಮೂಕ ಹಾಗೂ ಕಿವುಡುತನ ಹೊಂದಿರುವ ತನ್ನಜ್ಜಿಯ ಆಸರೆಯಲ್ಲಿ ಗಟ್ಟಿಗಿತ್ತಿಯಾಗಿ ಬೆಳೆದಿದ್ದಾರೆ. ಮೊದಮೊದಲು ಮಾಮೂಲು ಶಾಲೆ ಸೇರಿ ಕಲಿಯಲು ಆರಂಭಿಸಿದ ಇವರಿಗೆ ಸಿಂತಾ ಪಾಯಜ ಶಿಕ್ಷಕಿ ಅವರಿಂದ ಮಾರ್ಗದರ್ಶನ ದೊರೆತು, ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ಆಶಾಕಿರಣ ಅಂದರ ಶಾಲೆಗೆ ಸೇರಿಕೊಳ್ಳುತ್ತಾರೆ.
ಅಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ದಿವಂಗತ ಗೋಪಾಲ್ ಸರ್ ರವರು ಕ್ರೀಡಾ ಆಸಕ್ತಿ ಮೊಳೆಯುವಂತೆ ಮಾಡಿ ಪ್ರಾರಂಭಿಕ ಕೌಶಲ್ಯಗಳನ್ನು ಕಲಿಸುತ್ತಾರೆ. ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶೇಷ ಚೇತನರ ಕ್ರೀಡಾಕೂಟ ದಲ್ಲಿ ಭಾಗವಹಿಸಿದ ರಕ್ಷಿತಾರನ್ನು ಗುರುತಿಸಿದ್ದು ಅವರ ಇಂದಿನ ತರಬೇತುದಾರರಾದ ರಾಹುಲ್ ರವರು. ರಕ್ಷಿತಾರವರು ಮಲೆನಾಡಿನ ತಪ್ಪಲಿನಲ್ಲಿ ಬಸ್ಸಿನ ಪ್ರಯಾಣದ ಹಿತವನ್ನು ಅನುಭವಿಸಿದ್ದು ಅವರಿಗೆ ರೈಲಿನ ಪ್ರಯಾಣವೆಂದರೆ ಬಲು ಅಚ್ಚು ಮೆಚ್ಚು ಇದಕ್ಕಾಗಿ ತಾನು ಕ್ರೀಡಾಕೂಟದಲ್ಲಿ ಭಾಗವಹಿಸಲು ಒಪ್ಪಿದೆ ಎಂದಾಗ ಬರಹಗಾರರಾದ ನನಗೆ ಆಶ್ಚರ್ಯ!
ಏಕೆ? ಹೇಗೆ? ಎಂದು ಕೇಳಿದಾಗ ರಾಹುಲ್ ಸರ್ ರವರು ನನ್ನನ್ನು ಗುರುತಿಸಿ ಏಷ್ಯನ್ ಗೇಮ್ಸ್ ಗೆ ಬರಲು ಸಲಹೆ ಕೊಟ್ಟರು ಮೊದಲು ನನಗೆ ಆಸಕ್ತಿ ಇರಲಿಲ್ಲ ಆದರೆ ಒಪ್ಪಿಕೊಂಡರೆ ರೈಲಿನಲ್ಲಿ ಪ್ರಯಾಣಿಸಬಹುದೆಂಬ ಆಸೆಗಾಗಿ ಒಪ್ಪಿಕೊಂಡೆ ಎಂದು ರಕ್ಷಿತ ಮುಗುಳ್ನಕ್ಕರು. ಅದೆಷ್ಟೋ ಬಾರಿ ತನಗೆ ಬೇಕಾದಂತಹ ವಸ್ತುಗಳನ್ನು ಹಾಗೂ ಕ್ರೀಡಾ ಪರಿಕರಗಳನ್ನು ಹಾಗೂ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಪ್ರಯಾಣಿಸುವ ವೆಚ್ಚವನ್ನು ತಮ್ಮ ತರಬೇತುದರರಾದ ರಾಹುಲ್ ಸರ್ ರವರೇ ಬರಿಸಿರುತ್ತಾರೆ ಅವರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ ಎಂದು ಭಾವುಕರಾಗುತ್ತಾರೆ ರಕ್ಷಿತ. ತಬರೀಶ್ ಮತ್ತು ಗೋವಿಂದ್ ಸರ್ ಗೈಡ್ ರನ್ನರ್ ಗಳು ನನ್ನನ್ನು ತಿದ್ದಿ ತಿಡಿದ ತರಬೇತುದಾರರು ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ತಿಳಿಸುತ್ತಾರೆ ರಕ್ಷಿತ.
2018 ರಲ್ಲಿ ಬೆಂಗಳೂರು ಪ್ರಯಾಣ ಬೆಳೆಸಿದ ರಕ್ಷಿತಾ, ರಾಹುಲ್ ಹಾಗೂ ಅವರ ಮಡದಿ ಸೌಮ್ಯರವರ ಮಡಿಲಿಗೆ ಸೇರಿದರು ಇವರ ಬದುಕು ಇತಿಹಾಸವಾಗಿ ಮಾರ್ಪಟ್ಟಿತ್ತು. 2018 ಅಕ್ಟೋಬರ್ 9ರಲ್ಲಿ ತಾವುಗಳಿಸಿದ ಏಷ್ಯನ್ ಗೇಮ್ಸ್ ನ 1500 ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ ಗೆದ್ದ ಚಿನ್ನದ ಪದಕ ನನ್ನ ಜೀವಿತದಲ್ಲಿ ಮರೆಯಲಾಗದ ಕ್ಷಣ ಎಂದು ಭಾವುಕತೆಯೊಂದಿಗೆ ಗರ್ವದಿಂದ ನುಡಿಯುತ್ತಾರೆ ರಕ್ಷಿತ. ಅಂದಿನ ದಿನ ನನ್ನಲ್ಲಿದ್ದ ಉನತೆ(ಕಣ್ಣಿಲ್ಲದವಳೆಂಬ)ಕಳೆದು ನಾನು ಏನನ್ನಾದರೂ ಸಾಧಿಸಬಲ್ಲೆ ನನ್ನಲ್ಲೂ ಸಾಧಿಸುವ ಛಲ, ಶಕ್ತಿ ಇದೆ ಎಂದು ಒಪ್ಪಿಕೊಂಡ ದಿನ ಎಂದು ಹೇಳುತ್ತಾರೆ ರಕ್ಷಿತ.
1500 ಮೀಟರ್ ದೂರದ ಓಟದ ಸ್ಪರ್ಧೆಗಳಲ್ಲಿ 2019ರ ಪ್ಯಾರಿಸ್ ಗ್ರಾಂಡ್ ಫಿಕ್ಸ್ ನಲ್ಲಿ ಬೆಳ್ಳಿ ಪದಕ, 2020 ದುಬೈನ ಫಾಝಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, 2022ರ ಸೀನಿಯರ್ ಪ್ಯಾರಾ ವರ್ಲ್ಡ್ ಕಪ್ ನಲ್ಲಿ ಐದನೇ ಸ್ಥಾನ, 2022 ರ ಪ್ಯಾರ ಏಷ್ಯನ್ ಗೇಮ್ಸ್ ನಲ್ಲಿ ಎರಡನೇ ಬಾರಿ ಚಿನ್ನದ ಪದಕ ಗೆದ್ದಿರುತ್ತಾರೆ.
ಪದಕ ಪಡೆದ ಸುಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ರಕ್ಷಿತಾ ತಮ್ಮ ಎರಡನೇ ಗೆಲುವಿನಲ್ಲೂ ಜೊತೆಗಿದ್ದ ಓಟಕ್ಕೆ ಅನುಕೂಲವಾಗುವ “ಟೆಟರ್“ ಎಂಬ ಉಪಕರಣವನ್ನು ಉಡುಗೊರೆಯಾಗಿ ನೀಡಿದ್ದಲ್ಲದೆ ಪ್ರಧಾನಿಯವರು ದೇಶಕ್ಕೆ ಒಲಂಪಿಕ್ ಪದಕ ನಿಮ್ಮಿಂದ ನಿರೀಕ್ಷಿಸಿದ್ದೇವೆ ಎಂದಾಗ ಪ್ರಯತ್ನಿಸುತ್ತೇವೆ ಎಂದು ರಕ್ಷಿತಾ ರವರು ಮಾತುಕೊಟ್ಟಿದ್ದಾರೆ. ಈವರೆಗೆ 20 ರಿಂದ 25 ಬಾರಿ ರಾಷ್ಟ್ರೀಯ ಚಾಂಪಿಯನ್ ಷಿಪ್ ಗಳಲ್ಲಿ ಭಾಗವಹಿಸಿ ರಾಜ್ಯಕ್ಕೆ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ.
ಪದಕಗಳನ್ನು ಗೆದ್ದಾಗ ಅದನ್ನು ಮುಟ್ಟಿ ಮತ್ತು ಮೈಕ್ ನಲ್ಲಿ ಅನೌನ್ಸ್ ಮಾಡುವಾಗ ನನಗೆ ಬಹಳ ಸಂತೋಷವಾಗುತ್ತದೆ ಅವುಗಳನ್ನು ನೋಡಲು ಸಾಧ್ಯವಾಗದಿದ್ದರೂ ಸಹ ಅವುಗಳನ್ನು ಸ್ಪರ್ಶಿಸುವ ಮೂಲಕ ಹೆಚ್ಚಿನ ಆನಂದವನ್ನು ಹೊಂದುತ್ತೇನೆ ಎಂದು ರಕ್ಷಿತಾ ಅವರು ನುಡಿಯುತ್ತಾರೆ.
ಭಾರತದ ಶ್ರೇಷ್ಠ ಓಟಗಾರ ಮಿಲ್ಕಾ ಸಿಂಗ್ ರವರನ್ನು ತಮ್ಮ ರೋಲ್ ಮಾಡಲಾಗಿ ರಕ್ಷಿತರವರು ಒಪ್ಪಿಕೊಂಡಿದ್ದಾರೆ ಅವರಂತೆಯೇ ದೇಶಕ್ಕಾಗಿ ನಾನು ಏನಾದರೂ ಕೊಡಬೇಕು ಎಂಬ ಅಪೇಕ್ಷೆಯೊಂದಿಗೆ ಪದಕಗಳನ್ನು ಗೆದ್ದು ನೀಡುತ್ತಿದ್ದಾರೆ.
ಆಟದೊಂದಿಗೆ ಓದಿನಲೂ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಐ.ಎ.ಎಸ್ ಪಾಸ್ ಮಾಡಬೇಕೆಂಬ ಕನಸನ್ನು ಹೊಂದಿದ್ದು ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಇದಕ್ಕಾಗಿ ಸ್ಪೂರ್ತಿಯ ಚಿಲುಮೆ ಎಂಬ ಯುಟ್ಯೂಬ್ ಚಾನೆಲ್ ಅನ್ನು ತೆಗೆದು ತಾವು ಅಭ್ಯಾಸ ಮಾಡಿದ ವಿಷಯಗಳನ್ನು ಅದರಲ್ಲಿ ಬಿತ್ತರಿಸುವ ಮೂಲಕ ಇತರರಿಗೂ ಜ್ಞಾನವನ್ನು ಉಣಬಡಿಸುತ್ತಿದ್ದಾರೆ.
ಇಂದಿನ ಯುವಕರು ತಮ್ಮ ಅಮೂಲ್ಯವಾದ ಸಮಯವನ್ನು ಸಾಧನೆಗೆ ಉಪಯೋಗಿಸದೆ ಹಾಳು ಮಾಡುತ್ತಿದ್ದು ಅದನ್ನು ಸರಿಯಾಗಿ ಬಳಸಲು ಕಿವಿಮಾತು ಹೇಳುತ್ತಾರೆ ರಕ್ಷಿತಾ.
ಏನನ್ನಾದರೂ ಸಾಧಿಸಬೇಕು ಎಂಬುವ ಸಾಧಕನಿಗೆ ಯಾವುದೇ ಅಂಗವೈಕಲ್ಯ ಏನನ್ನು ಮಾಡಲಾರದು ಸಾಧಕನಿಗೆ ಬೇಕಾಗಿರುವುದು ಮಾನಸಿಕ ದೃಢತೆ, ಶ್ರದ್ಧೆ, ನಿರಂತರತೆ, ಸಮಯ ಪ್ರಜ್ಞೆ, ಆಸಕ್ತಿ, ಕಾನ್ಫಿಡೆನ್ಸ್ ಹೊರತು ಮತ್ತಿನ್ನೇನು ಅಲ್ಲ ಇವುಗಳಿದ್ದರೆ ಸಾಧನೆ ಸಾಧಕನ ಸ್ವತ್ತಾಗುತ್ತದೆ ಅದಕ್ಕೆ ನಾನೇ ಉದಾಹರಣೆ ಎಂದು ಹೇಳುತ್ತಾರೆ ರಕ್ಷಿತಾ.
ನನ್ನ ಪಾಲಿಗೆ ಚಿಕ್ಕಮ್ಮ,ಅಣ್ಣ ತರಬೇತುದಾರರು ದೇವರುಗಳು ನನಗೆ ನಿಸರ್ಗದ ಮಡಿಲಿನಲ್ಲಿ ಕಾಲ ಕಳೆಯುವುದೆಂದರೆ ತುಂಬಾ ಇಷ್ಟ ಮಲೆನಾಡಿನ ಕಡಬು, ಅಕ್ಕಿ ರೊಟ್ಟಿ, ಕೆಸ ಸೊಪ್ಪು ಎಂದರೆ ಅಚ್ಚುಮೆಚ್ಚು ಹಾಗೂ ನಮ್ಮ ಸುತ್ತಮುತ್ತಲಿನ ಊರಿನ ಕ್ರೀಡಾ ಪ್ರೋತ್ಸಾಹಕರ ಬೆಂಬಲ ನನಗೆ ಸ್ಪೂರ್ತಿ ನೀಡುತ್ತದೆ ಎಂದು ಹೇಳುತ್ತಾರೆ. ನನ್ನ ನೋಡಿ ಯಾರಾದರೂ ಪ್ರೇರಣಗೊಂಡು ವಿಶಿಷ್ಟವಾದದನ್ನು ಸಾಧಿಸಿ ನಾನು ರಕ್ಷಿತಾರವರಿಂದ ಪ್ರೇರಣೆಗೊಂಡೆ ಎಂದರೆ ನನ್ನ ಜನ್ಮ ಸಾರ್ಥಕವೆಂದು ಹೇಳುತ್ತಾರೆ ಕುಮಾರಿ ರಕ್ಷಿತ.
ಪುರುಷ ಕ್ರೀಡಾಪಟುಗಳಷ್ಟೇ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಪದಕ ಗಳಿಸುವರಷ್ಟೇ ಅಲ್ಲ, ಮಹಿಳೆಯರಲ್ಲೂ ಸಾಧಕರಿದ್ದಾರೆ. ಅಂತವರನ್ನು ಗುರುತಿಸಿ ಭಾರತೀಯ ಕ್ರೀಡಾಕ್ಷೇತ್ರಕ್ಕೆ ಪದಕವನ್ನು ಗಳಿಸುವುದರೊಂದಿಗೆ ಭಾರತಮಾತೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂಬ ಕನಸನ್ನು ಕಂಡಿದ್ದ ರಾಹುಲ್ ಅವರಿಗೆ ದೊರಕಿದ್ದು ರಕ್ಷಿತ. ಇವರ ದೈಹಿಕ ಕ್ಷಮತೆ ಹಾಗೂ ಮನೋಬಲ ಇಲ್ಲಿಯವರೆಗೂ ಇವರನ್ನು ತಂದಿದೆ ಮುಂದೆ ಇವರಿಂದ ಒಲಂಪಿಕ್ ಪದಕ ಗೆಲ್ಲಿಸುವ ಗುರಿಯನ್ನು ಹೊಂದಿದ್ದು, ಕೇವಲ ಓಟದಲ್ಲಿ ಮಾತ್ರವಲ್ಲದೆ ಮುಂದೊಂದು ದಿನ ಐ.ಎ.ಎಸ್ ಆಗಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಲಿದ್ದಾಳೆ. ನನ್ನ ಮಗಳು ರಕ್ಷಿತಾ ಎಂದು ತರಬೇತುದಾರರಾದ ರಾಹುಲ್ ರವರು ಭಾವುಕರಾಗುತ್ತಾರೆ.
ಕ್ರೀಡಾ ಸಾಧಕರು ಬಯಸುವುದಾದರೂ ಏನು? ಕ್ರೀಡಾ ಪ್ರೇಮಿಗಳ ನಾಲ್ಕು ಪ್ರಸಂಶನ ನುಡಿಗಳು, ಹಿರಿಯರ ಆಶೀರ್ವಾದ, ಹೆಚ್ಚೆಂದರೆ ಕ್ರೀಡಾ ಪೋಷಕರಿಂದ ಒಂದಿಷ್ಟು ಆರ್ಥಿಕ ಸಹಾಯ ಇದರಿಂದ ಇನ್ನಷ್ಟು ಸಾಧಿಸಲು ಅವರಿಗೆ ಪ್ರೇರಣೆಯಾಗುತ್ತದೆ. ಇವರ ಸಾಧನೆಯನ್ನು ಮನಗಂಡ ಟಿವಿ9 ಹೆಮ್ಮೆಯ ಕನ್ನಡತಿ-2023 ಪ್ರಶಸ್ತಿ ನೀಡಿ ಗೌರವಿಸಿದೆ.
ಇದೇ ತಿಂಗಳು ಅಂದರೆ ಡಿಸೆಂಬರ್ 29 ರಿಂದ 31 ರವರೆಗೆ ಸಿರಿಗೆರೆಯಲ್ಲಿ ನಡೆಯಲಿರುವ ತರಳಬಾಳು ಕ್ರೀಡಾ ಮೇಳದಲ್ಲಿ ಪರಮ ಪೂಜ್ಯರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಇವರನ್ನು ಗೌರವಿಸಿ ಆಶೀರ್ವದಿಸಲಿದ್ದಾರೆ. ಸರ್ವರು ಬಂದು ಈ ಸುಕ್ಷಣಕ್ಕೆ ಸಾಕ್ಷಿಯಾಗಿ ಎಲ್ಲರಿಗೂ ಆದರದ ಸುಸ್ವಾಗತ.
ಡಾ. ಸುಧಾಕರ ಜಿ. ಲಕ್ಕವಳ್ಳಿ
ಲೇಖಕರು-ದೈಹಿಕ ಮತ್ತು ಆರೋಗ್ಯ ಶಿಕ್ಷಣ.