ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಏಕೆ?
ಜಗತ್ತಿನ ಯಾವುದೇ ಧರ್ಮವಿರಲಿ ಜೀವ, ಜಗತ್ತು ಮತ್ತು ದೇವರು ಈ ಮೂರರ ಪರಸ್ಪರ ಸಂಬಂಧಗಳನ್ನು ಕುರಿತು ವಿಶ್ಲೇಷಣೆ ಮಾಡುವುದೇ ಧರ್ಮದ ಮೂಲ ಆಶಯ. ಈ ತ್ರಿಕೋನ ಸಂಬಂಧವನ್ನು ಕುರಿತು ವಿಭಿನ್ನ ಧರ್ಮಗಳು ವಿಭಿನ್ನ ಸಿದ್ಧಾಂತಗಳನ್ನು ಹೊಂದಿವೆ. ಆ ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕೇ ಹೊರತು ತಾನು ನಂಬಿದ ಧರ್ಮವೇ ಶ್ರೇಷ್ಠ ಎಂದು ಪ್ರಪಂಚದಲ್ಲಿ ತನ್ನ ಧರ್ಮದ ಏಕಚಕ್ರಾಧಿಪತ್ಯವನ್ನು ಸಾಧಿಸಲು ಹೊರಡುವುದು ಮೂರ್ಖತನ. ಇಂದು ವಿಭಿನ್ನ ಧರ್ಮೀಯರ ಮಧ್ಯೆ ನಡೆಯುತ್ತಿರುವ ಸಂಘರ್ಷಕ್ಕೆ ಇದೇ ಕಾರಣ. ಎಲ್ಲ ಧರ್ಮಗಳು ನಂಬಿರುವುದು ಒಬ್ಬನೇ ದೇವರನ್ನು. ಅವರವರ ಧಾರ್ಮಿಕ ಆಚರಣೆಗಳು (rituals) ಮಾತ್ರ ವಿಭಿನ್ನ. ಯಾವ ವ್ಯಕ್ತಿಯೂ ತನ್ನ ಮತ್ತು ತನ್ನ ಮನೆತನದ ಬಗ್ಗೆ ಮತ್ತೊಬ್ಬರು ಆಡುವ ಅವಹೇಳನದ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ ಮತ್ತು ಸಹಿಸಿಕೊಳ್ಳುವುದೂ ಇಲ್ಲ. ಇಲ್ಲಿ ವ್ಯಕ್ತಿಗೌರವದ ಪ್ರಶ್ನೆ ಉದ್ಭವಿಸುತ್ತದೆ. ವ್ಯಕ್ತಿನಿಂದನೆಯ ಮಾತುಗಳು ಕಲಹಕ್ಕೆ ಕಾರಣವಾಗುತ್ತವೆ. ಹಾಗೇನೆ ಒಂದು ಧರ್ಮದವರ ನಂಬಿಕೆಗಳ ಬಗ್ಗೆ ಅವಹೇಳನಕಾರಿಯಾಗಿ ಇನ್ನೊಂದು ಧರ್ಮದವರು ಮಾತನಾಡಲು ಹೊರಟರೆ ಅದು ಕೋಮುಘರ್ಷಣೆಗೆ ಇಂಬುಗೊಡುತ್ತದೆ.
ಹಿಂದೂಗಳಲ್ಲಿರುವಂತೆ ಕ್ರೈಸ್ತರಲ್ಲಿಯೂ ಅನೇಕ ಪಂಥಗಳಿವೆ. ವಿಭಿನ್ನ ವಿಚಾರಧಾರೆಗಳಿವೆ. ಅವುಗಳನ್ನು ಪ್ರತಿನಿಧಿಸುವ ವಿಭಿನ್ನ ಚರ್ಚುಗಳಿವೆ. ವಿಭಿನ್ನ ಪಂಥದವರು ಒಂದೆಡೆ ಸೇರಿ ಪರಸ್ಪರ ನಡೆಸುವ ಸಂವಾದಕ್ಕೆ “Ecumenism” ಎಂದು ಕರೆಯುತ್ತಾರೆ. ಅಂತಹ ಒಂದು ಧಾರ್ಮಿಕ ಸಂವಾದ ಜರ್ಮನಿಯ ಬಯರ್ನ್ (Bayern) ಪ್ರಾಂತ್ಯದಲ್ಲಿರುವ Niederaltaich ಎಂಬ ನಗರದಲ್ಲಿ ಏರ್ಪಾಡಾಗಿತ್ತು. ಆಗ(1977) ನೆರೆಯ ದೇಶವಾದ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ನಾವು ಕ್ರೈಸ್ತ ಸ್ನೇಹಿತರೊಂದಿಗೆ ಹೋಗಿದ್ದೆವು. ಸಂವಾದ ನಡೆದ ಸ್ಥಳ “ಬೆನೆಡಿಕ್ಟಿನ್” ಪರಂಪರೆಗೆ ಸೇರಿದ ಕಪ್ಪು ಬಣ್ಣದ ನಿಲುವಂಗಿ ಧರಿಸಿದ ಕ್ರೈಸ್ತಸಂನ್ಯಾಸಿಗಳ ಒಂದು ಆಶ್ರಮ. ಅವರ ಆಶ್ರಮದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದವರೆಲ್ಲರೂ ನಮ್ಮನ್ನು ಹೊರತುಪಡಿಸಿ ವಿಭಿನ್ನ ಪಂಥಗಳ ಕ್ರೈಸ್ತಧರ್ಮದವರೇ ಆಗಿದ್ದರು. ನಮಗೆ ಅವರು ವಿದೇಶೀಯರಾಗಿ ಕಂಡರೆ ಅವರಿಗೆ ನಾವು ವಿದೇಶೀಯರಾಗಿದ್ದೆವು. ಅವರ ಮಾತೃಭಾಷೆಯಾದ ಜರ್ಮನ್ ನಲ್ಲಿ ನಾವು ಮಾತನಾಡುವುದನ್ನು ಕಂಡು ಸಹಜವಾಗಿಯೇ ಅವರಿಗೆ ನಮ್ಮ ಬಗ್ಗೆ ಕುತೂಹಲ ಉಂಟಾಯಿತು.
ಎಂದೂ ಭಾರತವನ್ನು ನೋಡರಿಯದ ಅವರು ನಮ್ಮ ಧರ್ಮದಲ್ಲಿ ಪ್ರಾರ್ಥನಾ ಪದ್ಧತಿ ಹೇಗಿದೆಯೆಂದು ತಿಳಿದುಕೊಳ್ಳುವ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದರು. ಅದರ ವಿವರಣೆಯನ್ನು ನೀಡಿದ ಮೇಲೆ ನಾವು ನಿತ್ಯವೂ ಮಾಡುವ “ಇಷ್ಟಲಿಂಗಪೂಜೆ” ಯನ್ನು ಮಾಡಿ ತೋರಿಸಬೇಕೆಂದು ಬಯಸಿದರು. ಅವರ ಒತ್ತಾಯ ನಮ್ಮನ್ನು ಸಂದಿಗ್ಧತೆಗೆ ಎಡೆಮಾಡಿಕೊಟ್ಟಿತು. ಎಲ್ಲರೆದುರಿಗೆ ವೇದಿಕೆಯ ಮೇಲೆ ಕುಳಿತು ಲಿಂಗಪೂಜೆಯನ್ನು ಮಾಡಿದರೆ ಅದೊಂದು ನಾಟಕೀಯ ಪ್ರದರ್ಶನವಾಗುತ್ತದೆ. ಸಹಜವಾದ ಪೂಜೆ ಎನಿಸುವುದಿಲ್ಲ. ಹಾಗೆಂದು ಅವರ ಜಿಜ್ಞಾಸೆಯನ್ನು ನಿರಾಕರಿಸುವುದೂ ನಮಗೆ ಕಷ್ಟವಾಗಿತ್ತು. ದೂರದ ಜರ್ಮನಿಯಿಂದ ನಮ್ಮ ಗುರುವರ್ಯರನ್ನು ಸಂಪರ್ಕಿಸಿ ಅವರ ನಿರ್ದೇಶನ ಪಡೆಯಲು ಆಗ ಈಗಿನಂತೆ ಮೊಬೈಲ್, ಇ-ಮೇಲ್ ಸೌಲಭ್ಯ ಇರಲಿಲ್ಲ. ಎಲ್ಲಿ ಹೇಳಿದರಲ್ಲಿ ವ್ಯವಸ್ಥೆ ಮಾಡುವುದಾಗಿ ಬೆನೆಡಿಕ್ಟಿನ್ ಸಂನ್ಯಾಸಿ ಒತ್ತಾಯಿಸತೊಡಗಿದರು. ತುಂಬಾ ಆಲೋಚನೆ ಮಾಡಿ ಸಂವಾದ ನಡೆಯುವ ಸಭೆಯ ವೇದಿಕೆಯ ಮೇಲೆ ಮಾಡಲು ಒಪ್ಪದೆ ಅವರ ಚರ್ಚಿನೊಳಗಿದ್ದ ಒಂದು ಪುಟ್ಟ ಪ್ರಾರ್ಥನಾ ಕೊಠಡಿ (Chapel) ಒಳಗೆ ಮಾಡಲು ಸಮ್ಮತಿಸಿದೆವು. ಮಾರನೆಯ ದಿನ ಬೆಳಿಗ್ಗೆ ನಿತ್ಯ ಪೂಜೆ ಮಾಡುವ ವೇಳೆಯಲ್ಲಿ ಆಸಕ್ತರು ಸ್ನಾನಮಾಡಿಕೊಂಡು ಬಂದು ಪೂಜೆಯಲ್ಲಿ ಭಾಗವಹಿಸಬಹುದೆಂದು ಸೂಚಿಸಿದೆವು.
ಪ್ರಾರ್ಥನಾ ಕೊಠಡಿಯಲ್ಲಿ ನಾವು ಪೂಜೆಗೆ ಕುಳಿತುಕೊಳ್ಳಲು ಆಯ್ಕೆ ಮಾಡಿಕೊಂಡ ಸ್ಥಳದ ಹಿಂಭಾಗದ ಕಟ್ಟೆಯ ಮೇಲೆ ಏಸುಕ್ರಿಸ್ತನ ಶಿಲುಬೆ ಇತ್ತು. ಅದರಿಂದ ತಮ್ಮ ಪೂಜೆಗೆ ಏನೂ ತೊಂದರೆಯುಂಟಾಗುವುದಿಲ್ಲವೇ ಎಂದು ಬೆನೆಡಿಕ್ಟಿನ್ ಸಂನ್ಯಾಸಿ ನಮ್ಮನ್ನು ಕೇಳಿದರು. ಆಗ ತಟ್ಟನೆ ನಮ್ಮ ನೆನಪಿಗೆ ಬಂದದ್ದು ಭಕ್ತ ಪ್ರಹ್ಲಾದನ ಕಥೆ. “ನಿನ್ನ ವಿಷ್ಣು ಅರಮನೆಯ ಈ ಕಂಬದಲ್ಲಿ ಇದ್ದಾನೆಯೇ?” ಎಂದು ಹಿರಣ್ಯಕಶಿಪು ಕೇಳಿದಾಗ ಬಾಲಕ ಪ್ರಹ್ಲಾದ ಕೊಟ್ಟ ಉತ್ತರವನ್ನೇ ಕೊಟ್ಟೆವು. ದೈವಭಕ್ತ ಪ್ರಹ್ಲಾದನ ಕಥೆಯನ್ನು ಆ ಪಾದ್ರಿಗೆ ವಿವರಿಸಿ ನಂಬಿದ ಭಕ್ತನಿಗೆ ಅರಮನೆಯ ಕಂಬದಲ್ಲಿ ದೇವರು ಕಾಣಬಹುದಾದರೆ ಚರ್ಚಿನ ಶಿಲುಬೆಯಲ್ಲಿಯೂ ಇರಲೇಬೇಕಲ್ಲವೇ? ಆದಕಾರಣ ನಮಗೆ ಯಾವ ತೊಂದರೆಯೂ ಇಲ್ಲವೆಂದು ಸ್ಪಷ್ಟವಾಗಿ ಹೇಳಿದೆವು. ಆದರೆ ವಾಸ್ತವವಾಗಿ ತೊಂದರೆ ಇದ್ದದ್ದು ಆ ಬೆನೆಡಿಕ್ಟಿನ್ ಸಂನ್ಯಾಸಿಗೆ. ಮಾರನೆಯ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು ಆ ಪ್ರಾರ್ಥನಾ ಕೊಠಡಿಗೆ ಲಿಂಗಪೂಜೆಗೆಂದು ಬಂದಾಗ ಸುತ್ತಲೂ ಅನೇಕ ಕ್ರೈಸ್ತಧರ್ಮೀಯರು ಕುಳಿತಿದ್ದರು. ಆದರೆ ಅಲ್ಲಿ ಹಿಂದಿನ ದಿನ ಇದ್ದ ಶಿಲುಬೆಯೇ ಇರಲಿಲ್ಲ! ಪೂಜೆ ಮುಗಿದ ಮೇಲೆ ನಡೆದ ಸಂವಾದದಲ್ಲಿ ಕೇಳಿದಾಗ ಆ ಬೆನೆಡಿಕ್ಟಿನ್ ಸಂನ್ಯಾಸಿ ಕೊಟ್ಟ ಉತ್ತರ: “ನಮ್ಮ ಧರ್ಮದವರು ಅನೇಕರು ಈ ಶಿಲುಬೆಯನ್ನು ತುಂಬಾ ಭಕ್ತಿಯಿಂದ ಆರಾಧಿಸುತ್ತಾರೆ. ಅನ್ಯಧರ್ಮೀಯರಾದ ತಾವು ಅದರ ಮುಂಭಾಗದಲ್ಲಿ ಕುಳಿತು ಮಾಡುವ ಲಿಂಗಪೂಜೆಯಿಂದ ನಮ್ಮ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಯುಂಟಾಗಬಹುದೆಂಬ ಕಾರಣದಿಂದ ಅದನ್ನು ನಾನು ಪಕ್ಕದ ಕೊಠಡಿಗೆ ಸ್ಥಳಾಂತರಿಸಿದ್ದೆ.” ಆ ಪಾದ್ರಿಯ ಪ್ರಾಮಾಣಿಕ ಉತ್ತರ ನಮ್ಮನ್ನು ಆಲೋಚನಾಪರರನ್ನಾಗಿಸಿತು. ಶಿಲುಬೆಗೆ ನಮ್ಮ ಆಕ್ಷೇಪಣೆ ಎನೂ ಇಲ್ಲದಿದ್ದರೂ ಅವರ ಅನುಯಾಯಿಗಳ ದೃಷ್ಟಿಯಿಂದ ಅದನ್ನು ಸ್ಥಳಾಂತರಗೊಳಿಸಿ ನಮ್ಮ ಭಾವನೆಗಳನ್ನು ಗೌರವಿಸಿ ನಾವು ಬಯಸಿದ ಜಾಗದಲ್ಲಿ ಪೂಜೆಗೆ ಅನುವು ಮಾಡಿಕೊಟ್ಟ ಆ ಪಾದ್ರಿ “ವಿಶಾಲಹೃದಯಿ” ಎನಿಸಿತು. ಅದೇ ರೀತಿ ನಮ್ಮ ಮಠಮಂದಿರಗಳಿಗೆ ಆ ಪಾದ್ರಿ ಬಂದಾಗ ಅವರ ಧರ್ಮದ ಪದ್ಧತಿ ಪ್ರಕಾರ ಪ್ರಾರ್ಥನೆ ಮಾಡಲು ಅವಕಾಶ ಕೊಡಬಲ್ಲೆವೇ ಎಂಬ ಪ್ರಶ್ನೆಯೂ ನಮ್ಮ ಮನಸ್ಸಿನಲ್ಲಿ ಮೂಡಿ ನಮ್ಮನ್ನು “ಕುಬ್ಜ” ರನ್ನಾಗಿಸಿತು!
ಇದೇ ರೀತಿ ಆಸ್ಟ್ರಿಯಾದ ಇನ್ನೊಂದು ನಗರದ ಪ್ರಸಿದ್ಧ ಚರ್ಚಿಗೆ ಕ್ರೈಸ್ತಸ್ನೇಹಿತರು ನಮ್ಮನ್ನು ಕರೆದೊಯ್ದಾಗ ಪ್ರಾರ್ಥನೆ ನಡೆಯುತ್ತಿತ್ತು. ಅವರ ಪ್ರಾರ್ಥನೆ ಮುಗಿದ ಮೇಲೆ ಮೊದಲೇ ನಮ್ಮ ಪರಿಚಯವಿದ್ದ ಪಾದ್ರಿಗಳು ನಮ್ಮನ್ನು ಪ್ರಾರ್ಥನಾ ವೇದಿಕೆಗೆ (Altar) ಕರೆದರು. ನಮ್ಮ ಧರ್ಮದ ಯಾವುದಾದರೂ ಪ್ರಾರ್ಥನೆಯನ್ನು ಮಾಡಲು ಕೇಳಿಕೊಂಡರು. ತಕ್ಷಣವೇ ನಮಗೆ ನೆನಪಾಗಿದ್ದು ಬಸವಣ್ಣನವರ ಪ್ರಸಿದ್ಧ ವಚನ “ಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ..." ಈ ವಚನವನ್ನು ಹೇಳಿ ಜರ್ಮನ್ ಭಾಷೆಯಲ್ಲಿ ಅದರ ಅರ್ಥ ವಿವರಣೆಯನ್ನು ನೀಡಿದಾಗ ಸಂತಸಪಟ್ಟರಲ್ಲದೆ ಹಿಂದಿರುಗುವಾಗ ಅವರ ಚರ್ಚಿನಲ್ಲಿದ್ದ Visitors Book ನಲ್ಲಿ ಆ ವಚನವನ್ನು ಅರ್ಥ ಸಮೇತ ಬರೆಸಿಕೊಂಡರು.
ಅನೇಕರು ತಿಳಿದುಕೊಂಡಂತೆ ಬಸವಣ್ಣನವರ ಈ ವಚನದಲ್ಲಿ ದೇವಾಲಯದ ವಿಡಂಬನೆಯಾಗಲಿ, ನಿಂದನೆಯಾಗಲಿ ಇಲ್ಲ. ಇದನ್ನು ಅಪ್ಪಟ ಕನ್ನಡಿಗರೂ, ಅಂತಾರಾಷ್ಟ್ರೀಯ ಪ್ರಸಿದ್ಧ ಲೇಖಕರೂ ಆದ ಎ.ಕೆ.ರಾಮಾನುಜಮ್ ರವರು ತಮ್ಮ “Speaking of Shiva” ಎಂಬ ಪುಸ್ತಕದಲ್ಲಿ ಬಹಳ ಚೆನ್ನಾಗಿ ಅರ್ಥೈಸಿದ್ದಾರೆ: “Indian temples are traditionally built in the image of the human body... The different parts of a temple are named after body parts. The two side are called the hands (hasta), a pillar is called a foot (pada). The top of the temple is head (shikhara)... The temple thus carries out in brick and stone the primordial blueprint of the human body”. ಶಿಲ್ಪ ಶಾಸ್ತ್ರದಲ್ಲಿ ದೇವಾಲಯವನ್ನು ಹಸ್ತ, ಪಾದ ಇತ್ಯಾದಿ ಮಾನವನ ಶರೀರದ ಅಂಗಾಂಗಗಳ ಹೆಸರಿನಲ್ಲಿ ನಿರ್ಮಾಣ ಮಾಡಿದರೆ, ಮನುಷ್ಯನು ತನ್ನ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳಬೇಕೆಂಬ ತಾತ್ವಿಕ ಅರ್ಥ ಬಸವಣ್ಣನವರ ಈ ವಚನದಲ್ಲಿ ಅಡಗಿದೆ. "This poem draws a distinction between making and being" ಎಂದು ತುಂಬಾ ಮಾರ್ಮಿಕವಾಗಿ ರಾಮಾನುಜಮ್ ವಿವರಿಸಿದ್ದಾರೆ. ಬಸವಣ್ಣನವರ ಈ ವಚನವು ಕ್ರಿ.ಶ 8ನೆಯ ಶತಮಾನದ 63 ಪುರಾತನರಲ್ಲಿ ಒಬ್ಬರಾದ ತಿರುಮೂಲರ್ (ಇವರ ಇನ್ನೊಂದು ಹೆಸರು ಸುಂದರನಾಥರ್) ರವರ ಮೂರು ಸಾವಿರ ಪದ್ಯಗಳು ಇರುವ ತಮಿಳು ಗ್ರಂಥ “ತಿರುಮಂದಿರ”ದ ಈ ಕೆಳಗಿನ ಪದ್ಯಕ್ಕೆ ತುಂಬಾ ಹೋಲಿಕೆ ಇದೆ:
ಉಳ್ಳಂ ಪೆರುಂ ಕೋಯಿಲ್ ಊನುಡಂಬು ಆಲಯಂ
ವಳ್ಳಲ್ ಪಿರಾನಾರ್ಕುಂ ವಾಯ್ ಗೋಪುರ ವಾಸಲ್
ತೆಳ್ಳತ್ತೆಳಿಂದಾರ್ಕು ಜೀವನ್ ಶಿವಲಿಂಗಂ
ಕಳ್ಳಪ್ಪುಲನೈಂದುಂ ಕಾಳಾಮಣಿ ವಿಳಕ್ಕೆ
ಇಲ್ಲಿ ತಿರುಮೂಲರು ದೇಹವನ್ನು ದೇವಾಲಯಕ್ಕೂ, ಹೃದಯವನ್ನು ಅದರ ಗರ್ಭಗುಡಿಗೂ, ಜೀವಾತ್ಮವನ್ನು ಆ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೂ, ಶಿವನಾಮ ಸ್ಮರಣೆಯಿಂದ ಸಾಕ್ಷಾತ್ಕರಿಸಿಕೊಳ್ಳುವ ಸದ್ಭಕ್ತರ ಬಾಯಿಯನ್ನು ಗೋಪುರದ ಮಹಾದ್ವಾರಕ್ಕೂ, ಸ್ವಭಾವದಿಂದ ಚಂಚಲವಾದ ಅಂದರೆ ದೃಢಮನಸ್ಸಿನಿಂದ ಜಯಿಸಬಲ್ಲ ಪಂಚೇಂದ್ರಿಯಗಳನ್ನು ಆ ಗರ್ಭಗುಡಿಯಲ್ಲಿ ತೂಗಾಡುವ ಐದು ದೀಪಗಳಿಗೂ ಹೋಲಿಸಿ ಅತ್ಯಂತ ಸುಂದರವಾದ ಪಾರಮಾರ್ಥಿಕ ಅರ್ಥವನ್ನು ನೀಡಿರುತ್ತಾರೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.28-12-2023.