ಪ್ರಸ್ತುತ ಸಮಾಜದ ನೈಜ ಸಂಗತಿಗಳನ್ನು ಕೃಷ್ಣೇಗೌಡರ ಆನೆ ಕಥೆಯಲ್ಲಿ ಕಥೆಗಾರ ಚಿತ್ರಿಸಿದ್ದಾರೆ : ಪ್ರಾಧ್ಯಾಪಕ ಹೆಚ್.ಎಸ್.ಸತ್ಯನಾರಾಯಣ
ಸಿರಿಗೆರೆ ಡಿ.28 : ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡರ ಆನೆ” ಎಂಬ ನೀಳ್ಗಗತೆಯು ಅತ್ಯಂತ ಮಹತ್ವದ ರಚನೆಗಳಲ್ಲಿ ಒಂದೆನಿಸಿದ್ದು, ಆನೆಯ ಲೆಕ್ಕದಲ್ಲಿ ಊರಿನಲ್ಲಿ ನಡೆಯುವ ಎಲ್ಲಾ ದುರಂತ ಘಟನೆಗಳಿಗೆ ವಿಚಿತ್ರವಾದ ಸಂಬಂಧಗಳು ಬೆಳೆದು ನಿಗೂಢವಾಗಿ ಮನುಷ್ಯ ಮತ್ತು ಪರಿಸರದ ನಡುವಿನ ವಿಷಮತೆಗೆ ಕಾರಣವಾಗಿರುವ ಸಾಮಾಜಿಕ ಸನ್ನಿವೇಶದ ಮುಖವನ್ನು ಕೃಷ್ಣೇಗೌಡರ ಆನೆ ಕಥೆ ಚಿತ್ರಿಸಿದೆ ಎಂದು ವಿಮರ್ಶಕ, ಅಂಕಣಕಾರ ಮತ್ತು ಕನ್ನಡ ಪ್ರಾಧ್ಯಾಪಕ ಹೆಚ್.ಎಸ್.ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದ ಒಳಾವರಣದಲ್ಲಿ ಗುರುವಾರ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದ ಪಠ್ಯವಾಗಿರುವ ಕೃಷ್ಣೇಗೌಡರ ಆನೆ ನೀಳ್ಗತೆಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನ ಗಂಭೀರ ಕಾಳಜಿಗಳನ್ನು ಮತ್ತು ಕಾಣದ ಕ್ಷುದ್ರ ರಹಸ್ಯಗಳನ್ನು ಪತ್ತೆದಾರಿ ರೀತಿಯಲ್ಲಿ ಕಾಣಿಸುವ ಅಂಶಗಳು ಕಥೆಯಲ್ಲಿವೆ. ಪ್ರಸ್ತುತ ಭಾರತದ ಸಾಮಾಜಿಕ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಧಿಕಾರಸ್ಥಾಯಿ ವ್ಯವಸ್ಥೆಯ ಸತ್ಯಾಸತ್ಯತೆಗಳ ಏಕತೆಯನ್ನು ಚಿತ್ರಿಸಿದೆ. ವೈರುಧ್ಯ ಹಾಗೂ ದುರಂತಗಳಿಗೆ ಇಲ್ಲಿನ ಆನೆಯೇ ಅಪರಾಧಿಯಾಗಿ ಕಾಣುತ್ತದೆ. ಪ್ರಸ್ತುತ ವಿವಿಧ ಇಲಾಖೆಗಳಲ್ಲಿರುವ ಅವ್ಯವಸ್ಥೆ, ಭ್ರಷ್ಟಾಚಾರ, ಮನುಷ್ಯನ ಸಂಕುಚಿತ ಮನಸ್ಥಿತಿ ಹೊಂದಿದ್ದು ಮತ್ತೊಬ್ಬರನ್ನು ಆರೋಪಿಸುವಂತದ್ದು ಕಥೆಯಲ್ಲಿದೆ. ಬಾಯಿ ಇಲ್ಲದ ಎಲ್ಲರಿಗೂ ಎಲ್ಲದಕ್ಕೂ ಸಂಕೇತದಂತೆ ಕಾಣುವ ಏಕ ಆನೆಯನ್ನು ಕೇಂದ್ರವಾಗಿರಿಸಿಕೊಂಡು ಲೇಖಕರು ಅನೇಕ ಸಂಗತಿಗಳನ್ನು, ದುರಂತಗಳನ್ನು ನಿರೂಪಿಸಿ, ಪಾತ್ರಗಳ ಮೂಲಕ ನಿರೂಪಿಸಿ ಪ್ರಸ್ತುತ ಸಮಾಜದ ನೈಜ ಸಂಗತಿಗಳನ್ನು ತಮ್ಮ ಬರವಣಿಗೆಯಲ್ಲಿ ಚಿತ್ರಿಸಿದ್ದಾರೆ ಎಂದರು.
ಬೆಂಗಳೂರಿನ ರಂಗಕರ್ಮಿ, ಪತ್ರಕರ್ತ ಶಶಿಕಾಂತ ಯಡಹಳ್ಳಿ ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಸರಳಭಾಷೆ, ಹಾಸ್ಯಮಯವಾಗಿ ಕಥೆಯನ್ನು ಮಾನವಧರ್ಮ, ವಿಶ್ವಧರ್ಮದ ದೃಷ್ಠಿಕೋನವನ್ನು ಇಟ್ಟುಕೊಂಡು ಈ ಕಥೆಯನ್ನು ಸೃಷ್ಠಿಸಿದ್ದಾರೆ. ಕೆಳವರ್ಗದ ನೌಕರರ ಬಗೆಗಿನ, ವ್ಯವಸ್ಥೆಯಲ್ಲಿನ ನೂನ್ಯತೆ ಹಾಗೂ ದೌರ್ಬಲ್ಯಗಳನ್ನು ಹಾಗೂ ಇತ್ತೀಚಿನ ಘಟನೆಗಳನ್ನು ಆಧರಿಸಿ ಕಥೆಗಾರರು ಇಲ್ಲಿ ವಿವರಿಸಿದ್ದರಿಂದ ಈ ಶ್ರೇಷ್ಠಕಥೆಗೆ ರಾಷ್ಟ್ರೀಯ ಕಥಾಪುರಸ್ಕಾರ ಎಂಬ ಪ್ರಶಸ್ತಿ ದೊರೆತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವನಗೌಡ ಕೆ. ಸುರಕೋಡ ಪ್ರಾಸ್ತಾವಿಕ ನುಡಿಗಳನ್ನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ನಾಡಿನ, ಶೈಕ್ಷಣಿಕ, ಸಾಮಾಜಿಕ, ಅಭಿವೃದ್ಧಿಗೆ ನಾಲ್ಕು ದಶಕಗಳ ಕಾಲ ಶ್ರಮಿಸಿ ಜನಮಾನಸದಲ್ಲಿ ಶಾಶ್ವತವಾಗಿ ವಿರಾಜಮಾನರಾಗಿದ್ದಾರೆ. ಪಠ್ಯೇತರ ಚಟುವಟಿಕೆಗಳಿಗೆ ಸಹಕಾರಿಯಾಗಿರುವ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಆಟದ ಮೂಲಕ ಪಾಠದ ವಿವರಣೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದರು.
ಪ್ರಾಚಾರ್ಯ ಜಿ.ಸಿ.ಪ್ರವೀಣ್ ಕುಮಾರ್ ಹಾಗೂ ನರೇಂದ್ರಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು, ಎಂ. ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೃಷ್ಣೇಗೌಡರ ಆನೆ ಕಥೆಯ ವಿಷಯವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳುವುದರ ಮೂಲಕ ತಮ್ಮ ಸಂಶಯಗಳಿಗೆ ಉತ್ತರ ಕಂಡುಕೊಂಡರು.
ಸಮಾರಂಭದಲ್ಲಿ ಕನ್ನಡ ಭಾಷಾ ಉಪನ್ಯಾಸಕರಾದ ಈ.ದೇವರಾಜು, ನರೇಶ್ ಕುಮಾರ್, ಎಸ್.ಪಿ.ಸುಜಾತ ಮತ್ತು ರಮ್ಯ ಉಪಸ್ಥಿತರಿದ್ದರು. ನಯನ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಎಸ್.ಪಿ.ಸುಜಾತ ಸ್ವಾಗತಿಸಿದರು, ಉಪನ್ಯಾಸಕಿ ರಮ್ಯ ನಿರೂಪಿಸಿದರು.