ಭರಮಸಾಗರ ತರಳಬಾಳು ಹುಣ್ಣಿಮೆ ಮುಂದೂಡಿಕೆ, ಸಿರಿಗೆರೆಯಲ್ಲಿ ಸರಳ ಸಾಂಪ್ರದಾಯಿಕ ಆಚರಣೆ:
ದಿನಾಂಕ : 28-12-2023
ಸ್ಥಳ: ಭರಮಸಾಗರ
ಭರಮಸಾಗರ ಕೆರೆಗೆ ಶ್ರೀ ತರಳಬಾಳು ಜಗದ್ಗುರುಗಳವರ ನಾಮಕರಣಕ್ಕೆ ಶ್ರೀ ಜಗದ್ಗುರುಗಳವರ ಅಸಮ್ಮತಿ. ಕೆರೆ ಕಟ್ಟಿದ ಭರಮಣ್ಣನಾಯಕನ ಹೆಸರು ಇಡುವಂತೆ ಶ್ರೀ ಜಗದ್ಗುರುಗಳವರ ಸೂಚನೆ.
---------------------------------------------
ಹವಾಮಾನ ವೈಪರೀತ್ಯ ಭೂಮಿ ನೀರಿಗೆ ಆಪತ್ತು: ರಾಜೇಂದ್ರ ಪೊದ್ದಾರ್ ಕಳವಳ
---------------------------------------------
ಫೆಬ್ರವರಿ 16 ರಿಂದ 24 ರವರೆಗೆ ಭರಮಸಾಗರದಲ್ಲಿ ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಲಾಗಿದೆ. ಮುಂದಿನ ವರ್ಷ ಮಹೋತ್ಸವ ಭರಮಸಾಗರದಲ್ಲಿ ನಡೆಸಲಾಗುವುದು ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು. ಭರಮಸಾಗರ ಏತ ನೀರಾವರಿ ಯೋಜನೆಯ ಭರಮಣ್ಣನಾಯಕನ ಕೆರೆ ವೀಕ್ಷಣೆ ಮಾಡಿದ ನಂತರ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಜಗದ್ಗುರುಗಳು, ರಾಜ್ಯದಲ್ಲಿ ಭೀಕರ ಬರಗಾಲದ ಬವಣೆ ಇದೆ. ಜನರು ಸಂಕಷ್ಟದಲ್ಲಿದ್ದಾರೆ. ಜನರು ಕಷ್ಟದಲ್ಲಿರುವಾಗ ವಿಜೃಂಬಣೆಯ ಮಹೋತ್ಸವ ಮಾಡುವುದು ಸರಿಯಲ್ಲ ಎಂದರು. ಭರಮಸಾಗರದಲ್ಲಿ ನಡೆಯಬೇಕಾಗಿದ್ದ ಅದ್ದೂರಿ ಆಚರಣೆ ಮುಂದೂಡಿ, ಈ ಬಾರಿ ಸಿರಿಗೆರೆಯ ಮಠದಲ್ಲಿಯೇ ಸರಳವಾಗಿ, ಸಾಂಪ್ರಾದಾಯಿಕವಾಗಿ ಆಚರಿಸಲಾಗುವುದೆಂದು ಪ್ರಕಟಿಸಿದರು.
ಭರಮಸಾಗರ ಏತನೀರಾವರಿ ಯೋಜನೆ ವಿನೂತನವಾದುದು. ಇದರಲ್ಲಿ ಸಾಧ್ಯವಾದ ಎಲ್ಲಾ ವೈಜ್ಞಾನಿಕ ಚಿಂತನೆ ಅಳವಡಿಸಲಾಗಿದೆ. ಕರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿಲ್ಲದೇ ಇದ್ದಲ್ಲಿ ಇಷ್ಟೊತ್ತಿಗೆ ಕೆರೆ ತುಂಬಿ ನೋಡುಗರ ಕಣ್ಮನ ಸೆಳೆಯುತ್ತಿತ್ತು ಎಂದು ಶ್ರೀ ಜಗದ್ಗುರುಗಳವರು ತಿಳಿಸಿದರು.
ಕೆಲವರು ಭರಮಸಾಗರ ಈ ಏತನೀರಾವರಿ ಯೋಜನೆಗೆ ತಮ್ಮ ಹೆಸರನ್ನು ಇಡಲು ಪ್ರಸ್ತಾಪ ಮಾಡುತ್ತಿದ್ದಾರೆ. ಭರಮಸಾಗರದ ಐತಿಹಾಸಿಕ ಕೆರೆ 100 ವರ್ಷಗಳ ಹಿಂದೆ ನಿರ್ಮಿಸಿದವರು ಭರಮಣ್ಣನಾಯಕರು. ಅವರ ಹೆಸರೇ ಮುಂದುವರೆಯಬೇಕು. ಯೋಜನೆಯ ತುರ್ತು ಕೆಲಸ ನಿರ್ವಹಿಸಲು ಸರ್ಕಾರ ನಂಬಿಕೊಂಡು ಇರಬಾರದು. ಅದಕ್ಕಾಗಿ ಎಲ್ಲಾ ಕೆರೆಗಳ ಬಳಕೆದಾರರ ಸಂಘ ರಚಿಸಿ, ನಿರ್ವಹಣೆಗೆ ಆಪತ್ ನಿಧಿ ಸಂಗ್ರಹಿಸಿಡಬೇಕೆಂದರು.
ಹವಾಮಾನ ವೈಪರೀತ್ಯ: ಭೂಮಿ, ನೀರಿಗೆ ಆಪತ್ತು
---------------------------------------------
ಭರಮಸಾಗರ ಏತ ನೀರಾವರಿ ಯೋಜನೆ ವೀಕ್ಷಿಸಿ ತದನಂತರ ನಡೆದ ಸಭೆಯಲ್ಲಿ ರಾಜೇಂದ್ರ ಪೊದ್ದಾರ್ ಕಳವಳ
---------------------------------------------
ಹವಾಮಾನದಲ್ಲಿ ಉಂಟಾಗುತ್ತಿರುವ ವೈಪರೀತ್ಯದಿಂದ ಭೂಮಿ, ಜಲ ಮತ್ತು ಪಕ್ಷಿಸಂಕುಲಗಳಿಗೆ ಗಂಡಾಂತರ ಎಂದು ಧಾರವಾಡದ ಇಂಡಿಯನ್ ನೆಟ್ವರ್ಕ್ ಆಫ್ ಪಾರ್ಟಿಸಿಪೇಟರಿ ಇರಿಗೇಷನ್ ಮ್ಯಾನೆಜ್ಮೆಂಟ್ ಅಧ್ಯಕ್ಷ ರಾಜೇಂದ್ರ ಪೊದ್ದಾರ್ ಹೇಳಿದರು.
ಭರಮಸಾಗರ ಏತನೀರಾವರಿ ಯೋಜನೆ ಭರಮಣ್ಣನಾಯಕನ ಕೆರೆ ವೀಕ್ಷಣೆ ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮುಂದೆ ನೀರಿಗಾಗಿ ಪರಿತಪಿಸುವಂತಹ ದಿನಗಳು ಬರುತ್ತವೆ. ಹವಾಮಾನ ಏರುಪೇರಿನ ಕಾರಣ ನೀರಿನ ಕೊರತೆ ಉಂಟಾಗಲಿದೆ. ಶುದ್ಧ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗಲಿದೆ. ಆದ್ದರಿಂದ ನೀರಿನ ಮಹತ್ವ ಅರಿತು ಪ್ರತಿ ಹನಿ ನೀರನ್ನೂ ರಕ್ಷಣೆ ಮಾಡಬೇಕು ಮತ್ತು ಮಿತವಾಗಿ ಬಳೆಸಬೇಕು ಎಂದರು.
ಹಲವು ದೇಶಗಳಲ್ಲಿ ನೀರಿಗಾಗಿ ಪರದಾಟ ನಡೆಯುತ್ತಿದೆ. ನೀರಿನ ಬಳಕೆಯ ಮೇಲೆ ಕಟ್ಟುಪಾಡು ವಿಧಿಸಲಾಗಿದೆ. ಮುಂಬರುವ ದಿನಗಳಿಗೆ ಇದೊಂದು ಜಾಗತಿಕ ಎಚ್ಚರಿಕೆಯ ಗಂಟೆ ಎಂದರು. 56ಕಿ.ಮೀ ದೂರದ ಭರಮಸಾಗರ ಏತನೀರಾವರಿ ಯೋಜನೆಗೆ 600 ಕೋಟಿ ರೂಗಳನ್ನು ಸರ್ಕಾರ ವೆಚ್ಚ ಮಾಡಿದೆ. ಇದು ಜನರ ತೆರಿಗೆಯ ಹಣ. ಅದನ್ನು ಅರಿತು ಜನರು ಅಪವ್ಯಯವಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಜನರ ಹಣ ಹಾಳಾಗುತ್ತದೆ ಎಂದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ,107 ಕೆರೆಗಳಿಗೆ ನೀರು ಉಣಿಸಬೇಕಾದ ಸಾಸ್ಪೆಹಳ್ಳಿ ಏತನೀರಾವರಿ ಯೋಜನೆ ಪ್ರಗತಿ ಕುಂಠಿತವಾಗಿದೆ. ತರಳಬಾಳು ಶ್ರೀಗಳ ಮಾರ್ಗದರ್ಶನದಲ್ಲಿ ಸಭೆಗಳು ನಡೆದಿವೆ. ಕೆಲವರು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ನೀರಾವರಿ ಯೋಜನೆ ಸರ್ಕಾರ ಆಧ್ಯತೆ ಮೇಲೆ ಪೂರೈಸಬೇಕು ಎಂದರು. ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಅಧ್ಯಕ್ಷ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, ರಾಜ್ಯದಲ್ಲಿಯೇ ಇದೊಂದು ವಿನೂತನ ಯೋಜನೆ 56 ಕಿ.ಮೀ. ದೂರದ ರೈಸಿಂಗ್ ಮೇನ್ ಇರುವಂತಹ ಯೋಜನೆಗೆ ರಾಜ್ಯದಲ್ಲಿ ಬೇರೆ ಎಲ್ಲಿಯೂ ಇಲ್ಲ. 600 ಕೋಟಿ ರೂಗಳ ವೆಚ್ಚದಲ್ಲಿ ಈ ಯೋಜನೆ ಕೇವಲ ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ತರಳಬಾಳು ಶ್ರೀಗಳ ಇಚ್ಚಾಶಕ್ತಿ ಮತ್ತು ಅವರು ಹೆಜ್ಜೆಹೆಜ್ಜೆಗೂ ತೋರಿದ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯಾರಿಂದಲೂ ಒಂದು ಇಂಚು ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ ಎಂದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಭರಮಸಾಗರ ಯೋಜನೆ ಯಶಸ್ಸಿನಿಂದ ತರಳಬಾಳು ಶ್ರೀಗಳ ಹೆಸರು ಸೂರ್ಯ ಚಂದ್ರರು ಇರುವ ತನಕ ಅಜರಾಮರ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಜಿ.ಬಿ.ತೀರ್ಥಪ್ಪ ಶಶಿಪಾಟೀಲ್ ಮಾತನಾಡಿದರು. ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ, ಡಿ.ವಿ.ಶರಣಪ್ಪ, ಎಚ್.ಬಿ.ಮಲ್ಲಪ್ಪ ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ್, ಮಂಜುನಾಥ್, ಮನೋಜ್ ಕುಮಾರ್, ಸಿ.ಆರ್. ನಾಗರಾಜ್ ಭಾಗವಹಿಸಿದ್ದರು.