ವಚನ ಸಂಪುಟಕ್ಕೆ ಅಮೆರಿಕ ತಂತ್ರಜ್ಞಾನದ ತರಳಬಾಳು ಟೆಕ್ ತಂಡ ರಚನೆ – ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದಿನಾಂಕ : 29-12-2023
 ಸ್ಥಳ : ಸಿರಿಗೆರೆ

ಸಿರಿಗೆರೆ ಶ್ರೀಮಠದಿಂದ ನಾವು ರೂಪಿಸಿರುವ 22 ಸಾವಿರ ವಚನಗಳನ್ನು ಹೊಂದಿರುವ ವಚನ ಸಂಪುಟಗಳ ಮೊಬೈಲ್ ಆಪ್ಅನ್ನು ಇನ್ನು ಹೆಚ್ಚು ಆಧುನಿಕವಾಗಿ ತಾಂತ್ರಿಕವಾಗಿ ಉನ್ನತೀಕರಿಸಲು ಅಮೆರಿಕದ ಪ್ರಸಿದ್ಧ ಸಾಫ್ಟ್ವೇರ್ ತಂತ್ರಜ್ಞರು ಸೇರಿ ಸರಳ ರೂಪದಲ್ಲಿ ವಿಡಿಯೋ, ಅನಿಮೇಷನ್ಗಳು ಸಹ ಅದರಲ್ಲಿ ಲಭ್ಯವಾಗುವ ರೀತಿಯಲ್ಲಿ ತರಳಬಾಳು ಟೆಕ್ ಎನ್ನುವ ತಂತ್ರಜ್ಞಾನದ ತಂಡವನ್ನು ಅಲ್ಲಿ ರೂಪಿಸುತಿದ್ದೇವೆ ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ತಿಳಿಸಿದರು.

ಸಿರಿಗೆರೆಯಲ್ಲಿ ಶುಕ್ರವಾರ ಸಂಜೆ ಜರುಗಿದ ತರಳಬಾಳು ಕ್ರೀಡಾಮೇಳ-2023ರ ಸಾಂಸ್ಕೃತಿಕ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. 

ಇಲ್ಲಿ ಆಗಮಿಸಿರುವ ಅನೇಕ ಗಣ್ಯರು ನಮ್ಮ ಅನುಭವ ಮಂಟಪದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಾಗಿದ್ದಕ್ಕೆ ಸಂತೋಷವಾಗಿದೆ. ಕ್ರೀಡಾಸ್ಪರ್ಧೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.

ಭೂಮಿ ಸಂಪತ್ತು ಮತ್ತು ಹಣದ ಸಂಪತ್ತಿಗಿಂತ ವಿದ್ಯಾ ಸಂಪತ್ತು ಶ್ರೇಷ್ಠ - ಶ್ರೀ ಅಭಿನವ ಸಿದ್ದಾರೂಢ ಸ್ವಾಮೀಜಿಯವರು

ಹುಬ್ಬಳ್ಳಿಯ ಶ್ರೀ ಆರೂಢ ಜ್ಯೋತಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಸ್ವಾಮಿಗಳವರು ಮಾತನಾಡಿ ಭೂಮಿ ಸಂಪತ್ತು ಮತ್ತು ಹಣದ ಸಂಪತ್ತು ಲೂಟಿಯಾದರೂ ವಿದ್ಯಾಸಂಪತ್ತನ್ನು ಕದಿಯುವ ಶಕ್ತಿ ಯಾರಿಗೂ ಇಲ್ಲ. ವಿದ್ಯಾಸಂಪತ್ತಿಗೆ ಯಾರ ಭಯವಿಲ್ಲ. ಇದಕ್ಕೆ ತೆರಿಗೆ ಕಟ್ಟಬೇಕಿಲ್ಲ. ಬಂಗಾರಕ್ಕಿಂತ ಬೆಲೆ ಬಾಳುವುದು ಜ್ಞಾನದ ಸಂಪತ್ತು. ಆದ್ದರಿಂದ ಮಠಗಳಲ್ಲಿ ಶಿಕ್ಷಣ ಪಡೆಯುವ ಎಲ್ಲಾ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದು ಸಮಾಜಲ್ಲಿ ಉನ್ನತ ಸ್ಥಾನಗಳನ್ನು ಪಡೆಯಿರಿ ಎಂದರು.

ಬೆಂಗಳೂರು ಸಿವಿಲ್ ನ್ಯಾಯಾಧೀಶರಾದ ಬಿ.ಎಸ್.ವಿನುತ ಮಾತನಾಡಿ ಎಲ್ಲಾ ಶಾಲೆಗಳು ಪಾಠಗಳನ್ನು ಕಲಿಸುತ್ತವೆ ಆದರೆ ಸಂಸ್ಕಾರವನ್ನು ಕಲಿಸುತ್ತಿರುವುದು ಮಠಗಳು ಮಾತ್ರ. ಸಂಸ್ಕಾರದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಾಗುತ್ತದೆ. ನಮ್ಮ ನಾಡಿನ ಪರಂಪರೆಯನ್ನು ನಿರ್ಮಿಸುವ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಮಾತ್ರ ಕಾಣಬಹುದು ಎಂದರು.

ರಂಗಕರ್ಮಿ ಹಾಗೂ ಪತ್ರಕರ್ತರದ ಶಶಿಕಾಂತ ಯಡಹಳ್ಳಿ ಮಾತನಾಡಿ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ವಿರಕ್ತ ಮಠಗಳ ಸಾಂಸ್ಕೃತಿಕ ಕೊಡುಗೆ ಅತ್ಯದ್ಭುತ. ದಾಸೋಹ ಸಿದ್ದಾಂತದಲ್ಲಿ ಅಕ್ಷರ ಮತ್ತು ಅನ್ನದಾಸೋಹ ಬಹುಮುಖ್ಯ ಎಂದರು.

ಮೈಸೂರಿನ ನಟನರಂಗ ಶಾಲೆಯ ವತಿಯಿಂದ ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನ ಹಾಗೂ ತರಳಬಾಳು ಕಲಾಸಂಘದಿಂದ ಯಕ್ಷಗಾನ, ಜನಪದ ಹಾಗೂ ಭರತನಾಟ್ಯ ನೃತ್ಯಗಳು ಜರುಗಿದವು.

ದಾವಣಗೆರೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಜಿ.ಕರಿಸಿದ್ದಪ್ಪ, ತಿಪ್ಪೇಸ್ವಾಮಿ, ಮಾಜಿ ಸಂಸದ ಜರ್ನಾಧನ ಸ್ವಾಮಿ, ಶ್ರೀಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ.ಎಸ್.ಜತ್ತಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.