ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಿಗೆ ಡೆಸ್ಕ್ ಪೂರೈಕೆ - ಹೊಸ ವರ್ಷದ ಸಂಕಲ್ಪ : ಮಧು ಬಂಗಾರಪ್ಪ
ಸಿರಿಗೆರೆ-ಡಿ.31 :ವಿದ್ಯಾರ್ಥಿಗಳಾದ ನೀವು ಮನಸ್ಸಿಗೆ ಉಲ್ಲಾಸ, ಖುಷಿ ಪಡುವ ಆಟಗಳನ್ನು ಆಡುವುದರ ಜೊತೆಗೆ ಕಠಿಣ ಶ್ರಮದಿಂದ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕು ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಹೇಳಿದರು.
ಸಿರಿಗೆರೆಯಲ್ಲಿ ಜರುಗಿದತರಳಬಾಳು ಕ್ರೀಡಾಮೇಳ-2023ರ ಸಮರೋಪ ಸಮಾರಂಭದ ಸಾಂಸ್ಕೃತಿಕ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದ ಜಿಲ್ಲೆಗಳ ವಿವಿಧ ಶಾಲೆಗಳ ಕ್ರೀಡೆಗಳಲ್ಲಿ ಆಸಕ್ತಿಯುಳ್ಳ ಮಕ್ಕಳನ್ನು ಮುಂದಿನ ಫೆಬ್ರವರಿಯಲ್ಲಿ ಸಿರಿಗೆರೆಯಲ್ಲಿ ನಡೆಯುವ ಸರಳ ತರಳಬಾಳು ಹುಣ್ಣಿಮೆಯಲ್ಲಿ ಆಹ್ವಾನಿಸಿ ಅವರ ವಿರುದ್ಧ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಬೇಕೆಂಬ ಅಭಿಲಾಷೆ ನಮ್ಮದಾಗಿದೆ. ಉತ್ತಮ ಮಟ್ಟದಲ್ಲಿ ಕ್ರೀಡಾಮೇಳವನ್ನು ಆಯೋಜಿಸಿದ ನಮ್ಮ ಸಂಸ್ಥೆಯ ಎಲ್ಲಾ ಅಧ್ಯಾಪಕ ವರ್ಗದವರ ಶ್ರಮ ಸಾರ್ಥಕವಾದದ್ದು ಎಂದರು.
ಧಾರವಾಡ ಹಾಗೂ ಗವಿಮಠ ಮುಳಗುಂದದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಕೇಂದ್ರೀಕರಿಸುವ ಹಾಗೂ ಮನಸ್ಸನ್ನು ಸದೃಢ ಗೊಳಿಸುವ ಆಟವಾಗಿದೆ. ವಿದ್ಯಾರ್ಥಿಗಳು ಪ್ರದರ್ಶಿಸಿದ ಮಲ್ಲಿಹಗ್ಗ ಅದ್ಭುತವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಸಾಧನೆಯ ತುಡಿತವಿರಬೇಕೆಂದರು.
ಶ್ರೀ ಸಂಸ್ಥೆಯು ತರಳಬಾಳು ಯುನಿವರ್ಸಿಟಿಯಾಗಿ ಬೆಳೆಯುತ್ತಿದೆ - ಮಧುಬಂಗಾರಪ್ಪ
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಮಾತನಾಡಿ ಸಿರಿಗೆರೆ ಮಠವೇ ಒಂದು ಚಿಕ್ಕ ಸರ್ಕಾರ. ಜೊತೆಗೆ ಶ್ರೀ ಸಂಸ್ಥೆಯು ತರಳಬಾಳು ಯುನಿವರ್ಸಿಟಿಯಾಗಿ ಬೆಳೆಯುತ್ತಿದೆ. ಶ್ರೀಗಳ ಮಾರ್ಗದರ್ಶನ, ಅನುಭವದ ಭಂಡಾರ ನಮಗೆ ಶ್ರೀರಕ್ಷೆ. ರಾಜ್ಯದ್ಯಂತ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಮಕ್ಕಳು ನೆಲದ ಮೇಲೆ ಕೂರದೆ ಡೆಸ್ಕ್ ಗಳ ಮೇಲೆ ಕೂರಲು ಇಲಾಖೆ ವತಿಯಿಂದ ಮುಂದಿನ ಡಿಸೆಂಬರ್ ಅಂತ್ಯದ ಒಳಗೆ ಶಾಲೆಗಳಿಗೆ ಡೆಸ್ಕ್ ಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ದೇವರ ಸಮಾನ ಎಂದರು.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಒಟ್ಟು 76 ಸಾವಿರ ಶಾಲೆಗಳಿದ್ದು, 1.20 ಕೋಟಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೇಶದ ಬಹುದೊಡ್ಡ ಆಸ್ತಿಯೆಂದರೆ ಶಿಕ್ಷಣ. ಮಕ್ಕಳಿಗೆ ಶಿಕ್ಷಣ ನೀಡುವುದು ಬಂಗಾರಕ್ಕಿಂತ ಮಿಗಿಲು. ಒಬ್ಬ ಶಾಸಕರು 5 ಕೆಪಿಎಸ್ ಶಾಲೆಗಳನ್ನ ತೆರೆಯಲು ಯೋಜನೆ ರೂಪಿಸಿದ್ದೇವೆ. ಮಕ್ಕಳು ಎಲ್ಲ ರಂಗಗಳಲ್ಲಿಯೂ ಬೆಳೆಯುವಂತಾಗಬೇಕು. ಮಕ್ಕಳ ಪ್ರತಿಭೆಗೆ ಕೊಡಗೆ ನೀಡಲು ನಾನು ಸದಾ ಸಿದ್ದ ಎಂದರು.
ಶ್ರೀಮಠದಿಂದ 2024ರ ತರಳಬಾಳು ತೂಗು ಪಂಚಾಂಗವನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳು ಕ್ರೀಡೆಗಳ ಮಾದರಿಗಳನ್ನು ಹಾಗೂ ಅಂಕಗಳನ್ನು ರಂಗೋಲಿಗಳ ಮೂಲಕ ಚಿತ್ರಿಸಿ ಅಥಿತಿಗಳಿಂದ ಮೆಚ್ಚುಗೆ ಪಡೆದರು. ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಸಿದ ಯೋಗಪಟುಗಳಿಂದ ಯೋಗ, ಸಿರಿಗೆರೆಯ ತರಳಬಾಳು ಕಲಾಸಂಘದಿAದ ಮಲ್ಲಿಹಗ್ಗ, ಡೊಳ್ಳುಕುಣಿತ, ಯಕ್ಷಗಾನ, ಜಡೆಕೋಲಾಟ ನೃತ್ಯಗಳು ಜರುಗಿದವು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಹಣಕಾಸು ನಿಗಮ ನಿಯಮಿತ ನಿರ್ದೇಶಕರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ್, ಚಿತ್ರದುರ್ಗ ಬಿ.ಇ.ಓ ಎಸ್.ನಾಗಭೂಷಣ್, ಉಪನಿರ್ದೇಶಕರಾದ ಕೆ.ರವಿಶಂಕರ್ ರೆಡ್ಡಿ, ಮಾಜಿ ಸಚಿವ ಹೆಚ್. ಆಂಜನೇಯ, ಬಿ.ಜೆ.ಪಿ. ಯುವ ಮುಖಂಡ ರಘು ಚಂದನ್, ಶ್ರೀಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ಎಸ್.ಬಿ. ರಂಗನಾಥ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಸಿರಿಗೆರೆಯಲ್ಲಿ ಭಾನುವಾರ ಸಂಜೆ ತರಳಬಾಳು ಕ್ರೀಡಾಮೇಳ ಸ್ಪರ್ಧೆಗಳು 2023ರ ಸಮರೋಪ ಸಮಾರಂಭದ ಸಾಂಸ್ಕೃತಿಕ ಸಮಾರಂಭದಲ್ಲಿ ತರಳಬಾಳು ಕಲಾಸಂಘದ ವಿದ್ಯಾರ್ಥಿಗಳು ಮಲ್ಲಿಹಗ್ಗ ಪ್ರದರ್ಶಿಸಿದರು.