ಬಿಜಾಪುರದ “ಆಧ್ಯಾತ್ಮ ಗೋಲಗುಮ್ಮಟ” ಶ್ರೀ ಸಿದ್ದೇಶ್ವರ ಸ್ವಾಮಿಗಳು: ಶ್ರೀ ತರಳಬಾಳು ಜಗದ್ಗುರುಗಳವರ ಗೌರವದ ನುಡಿ.

  •  
  •  
  •  
  •  
  •    Views  

ದಿನಾಂಕ:02-01-2024
ಸ್ಥಳ: ಜ್ಞಾನ ಯೋಗಾಶ್ರಮ, ವಿಜಯಪುರ.

ಅಲ್ಲಮ ಪ್ರಭುಗಳ “ಬಯಲು ವಚನದ” ವ್ಯಕ್ತಿತ್ವ, ಚನ್ನಬಸವಣ್ಣನವರ ಕೇಶ ಕಾಷಾಂಬರವನಿಕ್ಕಿದರೇನು? ವಚನಕ್ಕೆ ನಿದರ್ಶನ ಶ್ರೀ ಸಿದ್ದೇಶ್ವರ ಶ್ರೀಗಳು.
--------------------------------------

ಅರಿವು ಆಚಾರಗಳ ಸಮ್ಮಿಳತವಾಗಿ, ಬಿಜಾಪುರದ ಆಧ್ಯಾತ್ಮ ಗೋಲಗುಮ್ಮಟದಂತೆ ಬಹುಮಾನ್ಯರಾದವರು ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿವರು ಎಂದು ಅಪೂರ್ವವಾದ ಕಲ್ಪನೆಯನ್ನು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಲಿಂಗೈಕ್ಯ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರುಗಳವರು ಸಾನ್ನಿಧ್ಯ ವಹಿಸಿ ಶ್ರದ್ಧಾಂಜಲಿಯ ಆಶೀರ್ವಚನ ನೀಡಿದ ಪೂಜ್ಯರು: ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರು 1915 ರಲ್ಲಿ ಇಲ್ಲಿಗೆ 109 ವರ್ಷಗಳ ಹಿಂದೆ ಅ ಅಂದಿನ ಬಿಜಾಪುರ ಇಂದಿನ ವಿಜಯಪುರಕ್ಕೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದರು. ಕಾರ್ಯಕ್ರಮದ ಸಂಘಟಕರು ಬಿಜಾಪುರದ ಗೋಲಗುಮ್ಮಟವನ್ನು ತೋರಿಸಲು ಆಸಕ್ತಿಯಿಂದ ಮುಂದಾದರು, ಆಗ ಬಿ.ಎಂ.ಶ್ರೀ ನಾನು ಭೌತಿಕ ಗೋಲಗುಮ್ಮಟ ನೋಡಲು ಬಂದಿಲ್ಲ ಅದಕ್ಕಿಂತ ದೊಡ್ಡದಾದ ಬಿಜಾಪುರದಲ್ಲಿರುವ ಗೋಲಗುಮ್ಮಟ ನೋಡಬಬೇಕಾಗಿದೆ ಎಂದರು. ಸಂಘಟಕರಿಗೆ ಆಶ್ಚರ್ಯವಾಯಿತು, ಬಿಜಾಪುರದಲ್ಲಿ ಇದಕ್ಕಿಂತ ದೊಡ್ಡ ಇನ್ನೊಂದು ಗೋಲಗುಮ್ಮಟ ಎಲ್ಲಿದೆ ಎಂದರು. ಆಗ ಸಂಘಟಕರಿಗೆ ಬಿ.ಎಂ.ಶ್ರೀ ಹೇಳಿದ್ದು, ತಾಳೆ ಗರಿಯಲ್ಲಿ ಅಡಗಿದ್ದ ಬಸವಾದಿ ಶರಣರ ವಚನಗಳನ್ನು ಹೊರ ತಂದ ಬಹುದೊಡ್ಡ “ವಚನ ಗೋಲಗುಮ್ಮ”  ಫ.ಗು.ಹಳಕಟ್ಟಿಯವರನ್ನ ನೋಡಲು ಬಂದಿರುವುದಾಗಿ ತಿಳಿಸಿದರು. ಬಹುಶಃ ಬಿ.ಎಂ.ಶ್ರೀ ರವರು ಈಗ ಬಂದಿದ್ದರೆ “ಆಧ್ಯಾತ್ಮದ ಗೋಲಗುಮ್ಮಟ” ವಾಗಿ ಜನತೆಯನ್ನು ಉತ್ತುಂಗ ದಾರಿಯಲ್ಲಿ ಕರೆದೊಯ್ದ ಶ್ರೀಸಿದ್ದೇಶ್ವರ ಸ್ವಾಮೀಜಿಯವರನ್ನು ನೋಡಲು ಬಂದಿರುವುದಾಗಿ ತಿಳಿಸುತ್ತಿದ್ದರು ಎಂದು ನಮಗೆ ಅನಿಸುತ್ತಿರುವುದಾಗಿ ಅಪೂರ್ವವಾದ ಕಲ್ಪನೆಯನ್ನು ಶ್ರೀ ಜಗದ್ಗುರುಗಳವರು ಭಾವಪೂರ್ಣವಾಗಿ ಅಭಿಪ್ರಾಯಪಟ್ಟರು.

ಚನ್ನಬಸವಣ್ಣನವರು  ವಚನದಲ್ಲಿ ಉಲ್ಲೇಖಿಸಿದಂತೆ....
ಕೇಶ ಕಾಷಾಯಾಂಬರವನಿಕ್ಕಿದರೇನು?
ವಿಭೂತಿ ರುದ್ರಾಕ್ಷಿ ಧರಿಸಿದರೇನು?
ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ,
ಪರಮಾರ್ಥದಲ್ಲಿ ಪರಿಣಾಮಿಯಲ್ಲ.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ತುರುಬಾಗಲಿ, ಬೋಳಾಗಲಿ,
ಅರಿವು ಆಚಾರವುಳ್ಳೊಡೆ ಜಂಗಮ.

ಶ್ರೀ ಸಿದ್ದೇಶ್ವರ ಸ್ವಾಮಿಗಳವರನ್ನು ಚನ್ನಬಸವಣ್ಣನವರ ಈ ವಚನಕ್ಕೆ ಅಕ್ಷರಶಃ ಉದಾಹರಿಸಬಹುದಾದಗಿದೆ ಎಂದು ಅಭಿಮತಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮಿಗಳವರು ಕಾವಿ, ರುದ್ರಾಕ್ಷಿ ಧರಿಸಿದವರಲ್ಲ, ಆದರೆ ಅವರ ದಿವ್ಯವಾದ ವ್ಯಕ್ತಿತ್ವದಿಂದ ಗುರು ಜಗದ್ಗುರುಗಳಿಗಿಂತ ದೇಶದಲ್ಲಿಯೇ ಬಹುಮಾನ್ಯರಾದವರು. ಶ್ರೀಗಳವರು ಅರಿವು ಆಚಾರಗಳ ಸಮ್ಮಿಳತದ ವ್ಯಕ್ತಿತ್ವ ಹೊಂದಿ ಬಹುಎತ್ತರದಲ್ಲಿರುವಾಗ ನಾವು ಎದ್ದು ನಿಂತು ಮಾತನಾಡುವುದು ಏನೂ ಅಲ್ಲವೆಂದು ಬಹು ಹೆಮ್ಮೆಯಿಂದ ನುಡಿದರು.

ಸಿದ್ದೇಶ್ವರ ಶ್ರೀಗಳು ಮತ್ತು ಸುತ್ತೂರು ಜಗದ್ಗುರುಗಳವರ ಬಾಂಧವ್ಯವನ್ನು ನಾವು ಅವಲೋಕಿಸಿದಾಗ ಮೈಸೂರು ಮಹಾರಾಜರ ಕಾಲದ ಮತ್ತು ಕರ್ನಾಟಕ ಸರ್ಕಾರದ ರಾಜ ಲಾಂಛನವಾಗಿರವ  “ಗಂಡಭೇರುಂಡ” ದಂತೆ ಸಂಗಮವಾಗಿದ್ದರು ಎನ್ನಲು ಯಾವುದೇ ಉತ್ಪ್ರೇಕ್ಷೆ ಅನಿಸುವುದಿಲ್ಲ. ಸುತ್ತೂರು ಶ್ರೀಗಳು ಶಾಲಾ ಕಾಲೇಜುಗಳ ಮೂಲಕ ಜ್ಞಾನ ಪ್ರಸಾರದ ಕೇಂದ್ರವಾದರೆ, ಸಿದ್ದೇಶ್ವರ ಶ್ರೀಗಳು ಜ್ಞಾನ ಭಂಡಾರವಾಗಿದ್ದರು. ಶ್ರೀಗಳದು ಅಪರೂಪದ ವ್ಯಕ್ತಿತ್ವ ವಿಜಯಪುರದ ಸಮೀಪ ನಾವು ಕಾರಿನಲ್ಲಿ ಬರುವಾಗ “ಲಿಂಗಾಯತರ ಖಾನಾವಳಿ” ಎಂಬ ನಾಮಫಲಕದ ಪಕ್ಕ ಸಿದ್ದೇಶ್ವರ ಶ್ರೀಗಳ ಭಾವಚಿತ್ರವು ಗಮನ ಸೆಳೆಯಿತು. ಖಾನಾವಳಿಯಲ್ಲಿ ಹೊಟ್ಟೆಗೆ ರೊಟ್ಟಿ ಬುತ್ತಿ ಸಿಕ್ಕರೆ, ಜ್ಞಾನ ಯೋಗಾಶ್ರಮದಲ್ಲಿ ಜನರ ನೆತ್ತಿಗೆ ಪ್ರವಚನದ ಬುತ್ತಿ ಸಿಗುತ್ತಿತ್ತು ಎಂದು ನುಡಿದರು.

ಅಲ್ಲಮ ಪ್ರಭುಗಳ ವಚನ:
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು 
ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 
ಬಯಲ ಜೀವನ ಬಯಲ ಭಾವನೆ, 
ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು 
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ.

ವಚನದ ಅಂಕಿತ ನಾಮವನ್ನು ನಾ ನಿಮ್ಮ ನಂಬಿ ಬಯಲಾದೆ ಸಿದ್ದೇಶ್ವರ ಎಂದು ಪರಿಷ್ಕರಿಸಿ ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಅರ್ಥಪೂರ್ಣವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲಮ ಪ್ರಭುಗಳ ವ್ಯಕ್ತಿತ್ವದಂತೆ ಬಾಳಿ ಬದುಕಿದ ಬಯಲಾದ ಅಪೂರ್ವ ದಿವ್ಯಾತ್ಮ ಶ್ರೀ ಸಿದ್ದೇಶ್ವರ ಸ್ವಾಮಿಗಳು. ಅವರ ಕೊನೆಯ ದಿನ ನಾವು ಇಲ್ಲಿಗೆ ಬಂದಾಗ ಅವರ  ಉಸಿರಾಟವ ನೋಡಿದಾಗ ಇನ್ನೂ ಕೆಲವು ದಿನಗಳು ಬದುಕಬಹುದೆಂದು ಆಶಾ ಭಾವನೆ ಹೊಂದಿದ್ದೆವು. ಅವರ ದೇಹಸ್ಥಿತಿಯನ್ನು ನೋಡಿ ಎಲ್ಲರೂ ಕಾಯತ್ತಿದ್ದಾಗ ನಮ್ಮ ಆತ್ಮಕ್ಕೆ ಅನಿಸಿದ್ದು ಶ್ರೀ ಸಿದ್ದೇಶ್ವರ ಶ್ರೀಗಳ ಅಗಲುವಿಕೆಯನ್ನು ನಾವು ಕಾಯಬಾರದೆಂದು ತೀರ್ಮಾನಿಸಿ ಮರಳಿ ಸಿರಿಗೆರೆಗೆ ಪ್ರಯಾಣಿಸಿದೆವು. ಸಿರಿಗೆರೆಗೆ ಹೋಗಿ ಮಠದ ಮಹಾದ್ವಾರ ಸಮೀಪಿಸುತ್ತಿದ್ದಂತೆ ಶ್ರೀಗಳು ಕೊನೆಯ ಉಸಿರನ್ನು ಎಳೆದಿರುವ  ಧಾರುಣ ಸುದ್ದಿ ಬಂತು. ಆ ಕ್ಷಣವೇ ಪುನಃ ವಿಜಯಪುರಕ್ಕೆ ಬಂದು ಶ್ರೀಗಳ ಸಂಸ್ಕಾರ ಕಾರ್ಯಕ್ರಮಕ್ಕೆ ಬಂದಿದ್ದನ್ನು ಶ್ರೀ ಜಗದ್ಗುರುಗಳವರು ಅಂತರಂಗದ ಗೌರವದ ನುಡಿ ಸಮರ್ಪಿಸಿದರು.

ಕುಳಿತು ಆಶೀರ್ವಚನ ನೀಡಲೊಪ್ಪದ ಶ್ರೀ ತರಳಬಾಳು ಜಗದ್ಗುರುಗಳು..!

ಶ್ರೀ ತರಳಬಾಳು ಜಗದ್ಗುರುಗಳವರು ಎಲ್ಲಾ ಸಭೆ ಸಮಾರಂಭಗಳಲ್ಲಿ ಆಸೀನರಾಗಿ ಆಶೀರ್ವಚನ ನೀಡುವ ಪದ್ಧತಿಯನ್ನು ಬದಲಿಸಿ ಗುರುನಮನ ಕಾರ್ಯಕ್ರಮದ ಆಯೋಜಕರ ಮನವಿಯನ್ನು ಒಪ್ಪದೇ ನಿಂತು ಆಶೀರ್ವಚನ ನೀಡಿದ್ದು ಭಕ್ತಾಧಿಗಳಿಗೆ ಆಶ್ಚರ್ಯವಾಗಿ ಕಂಡರೆ, ಶ್ರೀ ತರಳಬಾಳು ಜಗದ್ಗುರುಗಳವರಿಗೆ ಸಿದ್ಧೇಶ್ವರ ಸ್ವಾಮೀಜಿಯವರ ಮೇಲಿರುವ ಗೌರವದ ಪ್ರತೀಕದ ದ್ಯೋತಕವಾಗಿ ಸಾಕ್ಷಿಯಾಯಿತು.

ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಹಾಗೂ ಜಿಲ್ಲೆಯಾದ್ಯಂತ ಒಂದು ತಿಂಗಳಿನಿಂದ ಗುರುನಮನ ಕಾರ್ಯಕ್ರಮ ಹಮ್ಮಿಕೊಂಡು ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇಂದಿನ ಗುರುನಮನ ಕಾರ್ಯಕ್ರಮದಲ್ಲಿ ಪೂಜ್ಯ ಸುತ್ತೂರು ಶ್ರೀ ಜಗದ್ಗುರುಗಳವರು, ಕನ್ಹೇರಿ ಸಿದ್ಧಗಿರಿ ಮಠದ  ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ, ಭಾಲ್ಕಿಯ ಶ್ರೀ ಚೆನ್ನಬಸವ ಪಟ್ಟದೇವರು, ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಸಚಿವರುಗಳಾದ ಶ್ರೀ ಎಂ.ಬಿ.ಪಾಟೀಲ್, ಶ್ರೀ ಹೆಚ್.ಕೆ.ಪಾಟೀಲ್, ಶ್ರೀ ಶಿವಾನಂದ ಪಾಟೀಲ್, ಸಂಸದರಾದ ಶ್ರೀ ಗದ್ದೀಗೌಡರ್, ಶಾಸಕರಾದ ಶ್ರೀ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು, ಅಪಾರ ಭಕ್ತಾದಿಗಳು ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಭಕ್ತಿ ನಮನ ಸಲ್ಲಿಸಿದರು.