ಹಿಟ್ಲರನ್ನು ಹಿಮ್ಮೆಟ್ಟಿಸಿದ ಭಾರತೀಯ ಯೋಧ!
“ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಯಾವಾಗ?” ಈ ಪ್ರಶ್ನೆ ಕೇಳಿದವರು ಹಿರಿಯರೂ ಮಾಜಿ ಸಭಾಪತಿಗಳೂ ಆದ ಶಂಕರಮೂರ್ತಿಯವರು. ಸಂದರ್ಭ: ಸಿರಿಗೆರೆಯಲ್ಲಿ ಡಿಸೆಂಬರ್ ತಿಂಗಳ ಕೊನೆಯ ಮೂರು ದಿನಗಳ ಕಾಲ ಏರ್ಪಡಿಸಿದ್ದ 2023ನೇ ಸಾಲಿನ ವಾರ್ಷಿಕ ತರಳಬಾಳು ಕ್ರೀಡಾಮೇಳದ ಉದ್ಘಾಟನೆ. ನಮ್ಮ ತರಳಬಾಳು ವಿದ್ಯಾಸಂಸ್ಥೆಯ 250ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ಹತ್ತು ವಲಯಗಳಲ್ಲಿ ಗೆದ್ದು ಉತ್ಸಾಹದಿಂದ ಬಂದಿದ್ದ ಸುಮಾರು ಎರಡು ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಿವಿಧ ಕ್ರೀಡೆಗಳ ಅಂತಿಮ ಸ್ಪರ್ಧೆ. ಧ್ವಜಾರೋಹಣದ ನಂತರ ವಿದ್ಯಾರ್ಥಿಗಳು ಶಿಸ್ತಿನಿಂದ ಪಥ ಸಂಚಲನ ನಡೆಸಿ ಧ್ವಜವಂದನೆ ಮಾಡಿ ಸಾಲಾಗಿ ನಿಂತ ಮೇಲೆ ಉದ್ಘಾಟನಾ ಭಾಷಣ ಮಾಡುವ ಸಂದರ್ಭದಲ್ಲಿ ಶಂಕರಮೂರ್ತಿಯವರು ಕೇಳಿದ ಮೇಲಿನ ಪ್ರಶ್ನೆಗೆ ವಿದ್ಯಾರ್ಥಿಗಳೆಲ್ಲರೂ ಏಕಕಂಠದಲ್ಲಿ “1947 ಆಗಸ್ಟ್ 15” ಎಂದು ಕೂಗಿ ಹೇಳಿದ್ದು ಆಗಸದಲ್ಲಿ ಗೂಂಜಿಡುತ್ತಿತ್ತು. “ಹಾಗಾದರೆ ನಮ್ಮ ದೇಶದ ಸ್ವಾತಂತ್ರ್ಯ ಕಳೆದು ಹೋಗಿದ್ದು ಯಾವಾಗ?” ಎಂದು ಅವರು ಮರುಪ್ರಶ್ನೆ ಹಾಕಿದಾಗ ವಿದ್ಯಾರ್ಥಿಗಳು ತಬ್ಬಿಬ್ಬಾಗಿ ಮೌನಮುದ್ರೆ ಧರಿಸಿದರು. ಅವರನ್ನು ಸ್ವಲ್ಪ ಹೊತ್ತು ಕಾಯಿಸಿ ಶಂಕರಮೂರ್ತಿಯವರು ನಗುತ್ತಾ ನೀಡಿದ ಉತ್ತರ: “ನನಗೂ ಗೊತ್ತಿಲ್ಲ!” ಅವರ ಭಾಷಣ ಮುಗಿಯುವವರೆಗೂ ನಮ್ಮ ಮನಸ್ಸಿನಲ್ಲಿ ಅವರ ಪ್ರಶ್ನೆ ಮತ್ತು ನಿರುತ್ತರ ಮಾರ್ದನಿಸುತ್ತಿದ್ದವು. ಕೊನೆಯಲ್ಲಿ ನಮ್ಮ ಭಾಷಣದ ಸರದಿ ಬಂದಾಗ ಪ್ರತಿಕ್ರಿಯಿಸಿದ್ದು: “ಕಿತ್ತೂರು ವೀರ ರಾಣಿ ಚೆನ್ನಮ್ಮ ಮೈಸೂರು ಹುಲಿ ಟಿಪ್ಪೂಸುಲ್ತಾನ್, ಝಾನ್ಸಿರಾಣಿ ಲಕ್ಷ್ಮಿಬಾಯಿ ಮೊದಲಾದವರು ಬ್ರಿಟಿಷರ ವಿರುದ್ಧ ಏಕಾಂಗಿಗಳಾಗಿ ಕತ್ತಿ ಝಳಪಿಸಿದಂತೆ ಭಾರತದ ವಿವಿಧ ಪ್ರಾಂತ್ಯಗಳನ್ನು ಆಳುತ್ತಿದ್ದ ಎಲ್ಲ ರಾಜ ಮಹಾರಾಜರುಗಳು ಸಂಘಟಿತರಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡದೇ ಇದ್ದಾಗ ಭಾರತದ ಸ್ವಾತಂತ್ರ್ಯ ಕಳೆದು ಹೋಯಿತು! ಭಾರತೀಯರೆಲ್ಲರೂ ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ಪೂಜಾದಿ ಕಾರ್ಯಗಳನ್ನು ಆರಂಭಿಸುವ ಮೊದಲು “ಜಂಬೂದ್ವೀಪೇ ಭರತಖಂಡೇ ಭರತವರ್ಷೇ...” ಎಂದು ಜಪಿಸುತ್ತಾ ಬ0ದಿರುವ ಸಂಕಲ್ಪ ಮಂತ್ರವನ್ನು ವೈಯಕ್ತಿಕ ಹಿತಾಸಕ್ತಿಯ ಸಿದ್ಧಿಯ ಬದಲು ಅಖಂಡ ಭಾರತದ ಸಿದ್ಧಿಗಾಗಿ ಜಪಿಸಿದ್ದರೆ ಭಾರತದ ಸ್ವಾತಂತ್ರ್ಯ ಕಳೆದುಹೋಗುತ್ತಿರಲಿಲ್ಲ!”
ಮೊನ್ನೆ ತಾನೆ ಅಮೆರಿಕಾ ಮತ್ತು ಇಂಗ್ಲೆಂಡಿನಿಂದ ಮಠಕ್ಕೆ ಆಗಮಿಸಿದ್ದ ಇಬ್ಬರು ಶಿಷ್ಯದಂಪತಿಗಳೊಂದಿಗೆ ಬೆಳಗಿನ ಉಪಾಹಾರದ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ ಇದೇ ಪ್ರಶ್ನೆಯನ್ನು ಕೇಳಿದಾಗ ಸುಮಾರು 50 ವರ್ಷಗಳಿಂದ ಇಂಗ್ಲೆಂಡಿನ ನ್ಯೂಕ್ಯಾಸೆಲ್ ನಲ್ಲಿ ನೆಲೆಸಿರುವ ಶ್ರೀಮತಿ ವಿಜಯಾ ಕೊಟೂರ್ ಕೊಟ್ಟ ಮಾರ್ಮಿಕ ಉತ್ತರ: "We lost our freedom to our politicians on the very day of 15th Aug 1947 when we celebrated getting freedom from the British Imperialism. Our country got divided and both arms (left and right) of Mother India were cut off by our politicians and made her disabled!" ವಿಜಯಾ ಕೊಟೂರ್ ಪ್ರಕಾರ ನಮ್ಮ ದೇಶದ ಸ್ವಾತಂತ್ರ್ಯ ಕಳೆದು ಹೋಗಿದ್ದೇ 1947 ಆಗಸ್ಟ್ 15 ರಂದು ದೇಶ ಇಬ್ಬಾಗವಾದಾಗ! ಭಾರತ ಮಾತೆಯ ಎರಡೂ ಬಾಹುಗಳನ್ನು ರಾಜಕಾರಣಿಗಳು ಕತ್ತರಿಸಿ ಹಾಕಿ ಅಂಗವಿಕಲೆಯನ್ನಾಗಿ ಮಾಡಿದರು! ನಮ್ಮ ದೇಶ ಶ್ರೀಮಂತ ರಾಷ್ಟ್ರವಾಗಿದ್ದರೂ ರಾಜಕಾರಣಿಗಳು ಮತ್ತು ಶ್ರೀಮಂತರು ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ, ಬಡವರು ಮತ್ತು ಕೃಷಿಕರು ಹೆಚ್ಚು ಹೆಚ್ಚು ಕಡುಬಡವರಾಗುತ್ತಿದ್ದಾರೆ!”
ಕ್ರೀಡಾಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ಯಾರಾ ಅಥ್ಲೆಟ್ ಏಷಿಯನ್ ಗೇಮ್ಸ್ ನಲ್ಲಿ ಅಂಧಳಾಗಿ ಗಾಢಾಂಧಕಾರದಲ್ಲಿದ್ದರೂ ದಿಟ್ಟ ಸಾಧನೆ ಮಾಡಿ ಬಂಗಾರದ ಪದಕ ಗಳಿಸಿದ ಕು.ರಕ್ಷಿತಾ ರಾಜು ಮತ್ತು 2022 ರ ಏಷಿಯನ್ ಗೇಮ್ಸ್ ಪದಕ ವಿಜೇತೆ ಕು.ನಂದಿನಿ ಅಗಸರ ಸ್ವಾನುಭವದ ಮಾತುಗಳು ಕ್ರೀಡಾಸ್ಪರ್ಧಿಗಳಾದ ನಮ್ಮ ವಿದ್ಯಾರ್ಥಿಗಳಿಗೆ ರೋಮಾಂಚನವನ್ನುಂಟು ಮಾಡಿದವು. ಇಬ್ಬರೂ ಕಡುಬಡತನದಿಂದ ಬಂದಿದ್ದರೂ ಭಾರತ ಮಾತೆಯ ಮುಡಿಗೆ ಸಿರಿಸಂಪಿಗೆಯನ್ನು ಮುಡಿಸಿದವರು. ಇದೇ ಸಂದರ್ಭದಲ್ಲಿ ನಮ್ಮ ವಿದ್ಯಾಸಂಸ್ಥೆಯ ವಿಶೇಷ ಅಧಿಕಾರಿಗಳಾದ ವೀರಣ್ಣ ಎಸ್. ಜತ್ತಿಯವರು 1936 ರಲ್ಲಿ ಜರ್ಮನಿಯಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ನಡೆದ ಹಾಕಿ ಕ್ರೀಡಾ ಸ್ಪರ್ಧೆಯಲ್ಲಿ ಭಾರತೀಯ ಯೋಧ ಧ್ಯಾನ್ ಚಂದ್ ಮಾಡಿದ ಸಾಧನೆ ಕುರಿತು ನೀಡಿದ ವಿವರಣೆ ಎಲ್ಲರ ಮೈಜುಮ್ಮೆನಿಸುವಂತಿತ್ತು. ಜರ್ಮನಿಯ ಹಾಕಿ ತಂಡ ಮತ್ತು ಭಾರತೀಯ ಹಾಕಿ ತಂಡ ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗಿತ್ತು. ಸ್ಪರ್ಧೆಗೆ ಮೊದಲು ನಡೆದ ಪ್ರದರ್ಶನ ಪಂದ್ಯದಲ್ಲಿ ಜರ್ಮನಿಯ ತಂಡ 4-1 ಗೋಲುಗಳ ಅಂತರದಲ್ಲಿ ಭಾರತೀಯ ತಂಡವನ್ನು ಸೋಲಿಸಿತ್ತು. ಹಿಂದೆ 1928 ಮತ್ತು 1932 ರಲ್ಲಿ ನಡೆದ ಎರಡು ಸ್ಪರ್ಧೆಗಳಲ್ಲಿಯೂ ಬಂಗಾರದ ಪದಕಗಳನ್ನು ಗಳಿಸಿದ್ದ ಭಾರತೀಯ ತಂಡಕ್ಕೆ ತುಂಬಾ ಮುಜುಗರ ಉಂಟಾಯಿತು.
ಇದರಿಂದ ಜರ್ಮನಿಯಲ್ಲಿದ್ದ ಭಾರತೀಯ ನಾಗರಿಕರು ಹತಾಶರಾಗಿ ನುರಿತ ಹಾಕಿ ಆಟಗಾರ ಕ್ಯಾಪ್ಟನ್ అಲಿ ಇಖ್ತೆದಾರ್ ಷಾ ನನ್ನು ಕಳುಹಿಸುವಂತೆ ನವದೆಹಲಿಗೆ ತುರ್ತು ಟೆಲಿಗ್ರಾಂ ಮಾಡಿದರು. ಆದರೆ ಭಾರತದ ಬ್ರಿಟಿಷ್ ಸೇನಾಧಿಕಾರಿ ರಜಾ ಮಂಜೂರು ಮಾಡಲು ನಿರಾಕರಿಸಿದ. ಆತನ ಬದಲು ಪಂಜಾಬ್ ರೆಜಿಮೆಂಟಿನ ಸಾಮಾನ್ಯ ಸಿಪಾಯಿಯಾಗಿದ್ದ ಧ್ಯಾನ್ ಚಂದ್ ಎಂಬ ಹಾಕಿ ಆಟಗಾರನನ್ನು ವಿಮಾನದಲ್ಲಿ ಕಳುಹಿಸಲಾಯಿತು.
1936ರ ಆಗಸ್ಟ್ 15 ರಂದು ಇನ್ನೇನು ಸ್ಪರ್ಧೆ ಆರಂಭವಾಗಬೇಕು ಆ ವೇಳೆಯೊಳಗೆ ಧ್ಯಾನ್ ಚಂದ್ ಜರ್ಮನಿಯ ಒಲಂಪಿಕ್ಸ್ ಕ್ರೀಡಾಂಗಣ ತಲುಪಿದ. ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಹಿಟ್ಲರ್ ಬಂದು ಕ್ರೀಡಾಂಗಣದ ಅಗ್ರಾಸನದಲ್ಲಿ ಕುಳಿತು ಜರ್ಮನ್ ತಂಡದ ವಿಜಯವನ್ನು ನಿರೀಕ್ಷಿಸಿ ವೀಕ್ಷಿಸತೊಡಗಿದ. ಮೊದಲ ಅರ್ಧ ಆಟದಲ್ಲಿ ಭಾರತೀಯ ತಂಡ ಬಲಶಾಲಿಯಾದ ಜರ್ಮನಿಯ ತಂಡವನ್ನು ಎದುರಿಸಲು ಆಗಲಿಲ್ಲ. ಜರ್ಮನಿಯ ಗೋಲ್ ಕೀಪರ್ ನ ಹಾಕಿ ಸ್ಟಿಕ್ ಧ್ಯಾನ್ ಚಂದ್ ಮುಖಕ್ಕೆ ಬಡಿದು ಹಲ್ಲುಗಳಿಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ನೆಲಕ್ಕೆ ಕುಸಿದು ಬಿದ್ದ. ಈ ಮಧ್ಯೆ ಜರ್ಮನಿಯ ತಂಡ ಒಂದು ಗೋಲನ್ನು ಬಾರಿಸಿತು. ಹಲ್ಲುಗಳು ಉದುರಿಬಿದ್ದರೂ ಧ್ಯಾನ್ ಚಂದ್ ಧೃತಿಗೆಡದೆ ಮತ್ತೆ ಕ್ರೀಡಾಮೈದಾನಕ್ಕೆ ಇಳಿದು ರಬ್ಬರ್ ಶೂಗಳನ್ನು ಬಿಚ್ಚಿ ಮಾಮೂಲಿ ಪಿ.ಟಿ ಶೂಗಳನ್ನು ಧರಿಸಿ ಆಡತೊಡಗಿದ. ಸತತವಾಗಿ ಮೂರು ಗೋಲುಗಳನ್ನು ಬಾರಿಸಿದಾಗ ಹಿಟ್ಲರ್ ಸಹಿಸಲಾಗದೆ ಆಸನದಿಂದ ಮೇಲೆದ್ದು ನಿರ್ಗಮಿಸಿದ. ಆಟ ಮುಕ್ತಾಯದ ಹಂತ ತಲುಪಿದಾಗ ಭಾರತದ ತಂಡ 8-1 ಅಂತರದಲ್ಲಿ ಜಯಭೇರಿ ಸಾಧಿಸಿತ್ತು!
ಆ ದಿನ ಸಂಜೆ ಕ್ಯಾಪ್ಟನ್ ಧ್ಯಾನ್ ಚಂದ್ ನನ್ನು ಹಿಟ್ಲರ್ ಬಳಿ ಕರೆದುಕೊಂಡು ಹೋದರು. ಹಿಟ್ಲರ್ ಆತನನ್ನು ಆಪಾದ ಮಸ್ತಕ ನೋಡಿದ. ಅವರಿಬ್ಬರ ಮಧ್ಯೆ ನಡೆದ ಸಂಭಾಷಣೆ ಹೀಗಿದೆ:
- ಹಿಟ್ಲರ್: “ನಿನ್ನ ತಂಡ ನಿರೀಕ್ಷೆಗೂ ಮೀರಿ ತುಂಬಾ ಚೆನ್ನಾಗಿ ಆಟ ಆಡಿದೆ, ಅಭಿನಂದನೆಗಳು. ನಿನಗೇನೋ ಗಾಯವಾಯಿತು ಎಂದು ತಿಳಿದು ಬಂತು. ಈಗ ಹೇಗಿದ್ದೀಯಾ?”
- ಧ್ಯಾನ್ ಚಂದ್: “ಇಂದಿನ ಸ್ಪರ್ಧೆಯಲ್ಲಿ ನನ್ನ ಒಂದು ಹಲ್ಲನ್ನು ಜರ್ಮನಿಯ ಕ್ರೀಡಾಂಗಣದಲ್ಲಿ ನೆಟ್ಟಿದ್ದೇನೆ. ಈಗ ಪರವಾಗಿಲ್ಲ, ನಿಮ್ಮ ಆದರಾತಿಥ್ಯಕ್ಕೆ ಧನ್ಯವಾದಗಳು.”
- ಹಿಟ್ಲರ್: (ನಗುತ್ತಾ) ನೀನು ಹಾಕಿ ಆಡದೇ ಇದ್ದಾಗ ಏನು ಕೆಲಸ ಮಾಡುತ್ತೀಯಾ?”
- ಧ್ಯಾನ್ ಚಂದ್: “ಭಾರತೀಯ ಸೈನ್ಯದಲ್ಲಿ ನಾನೊಬ್ಬ ಸಾಧಾರಣ ಸಿಪಾಯಿ”
- ಹಿಟ್ಲರ್: “ನಿನ್ನ ಹಾಗೆಯೇ ನಾನೂ ಒಬ್ಬ ಸಾಧಾರಣ ಸಿಪಾಯಿ ಆಗಿದ್ದೆ. ಬ್ರಿಟಿಷರು ನಿನ್ನ ಶಕ್ತಿಸಾಮರ್ಥ್ಯವನ್ನು ಗುರುತಿಸುವುದಿಲ್ಲ. ನನ್ನ ಜರ್ಮನ್ ಸೈನ್ಯದಲ್ಲಿ ನಿನ್ನನ್ನು ಒಬ್ಬ ಆಫೀಸರನ್ನಾಗಿ ಮಾಡುತ್ತೇನೆ. ನನ್ನ ನಾಜಿ ಸೈನ್ಯಕ್ಕೆ ಸೇರುತ್ತೀಯಾ?” (ಕೆಲಹೊತ್ತು ಮೌನ ಆವರಿಸಿತು. ಧ್ಯಾನ್ ಚಂದ್ ಒಪ್ಪಬಹುದೆಂಬ ನಿರೀಕ್ಷೆಯಲ್ಲಿ ನಾಜಿ ಸೈನಿಕರು ಅವನ ಮುಖ ನೋಡತೊಡಗಿದರು).
- ಧ್ಯಾನ್ ಚಂದ್: “ನೀವು ತೋರಿದ ಗೌರವಾದರಗಳಿಗೆ ಮತ್ತು ಧಾರಾಳತನಕ್ಕೆ ಧನ್ಯವಾದಗಳು. ಭಾರತದಲ್ಲಿ ನಾನಿರುವ ಸಿಪಾಯಿ ಹುದ್ದೆ ಎಷ್ಟೇ ಚಿಕ್ಕದಾದರೂ ನಾನೊಬ್ಬ ಭಾರತೀಯ. ಭಾರತ ನನ್ನ ಮಾತೃಭೂಮಿ. ನಾನು ಭಾರತೀಯನಾಗಿಯೇ ನಮ್ಮ ಜನರೊಡನೆ ಇರಲು ಬಯಸುತ್ತೇನೆ.”
ಹಿಟ್ಲರ್ ಕ್ಯಾಪ್ಟನ್ ಧ್ಯಾನ್ ಚಂದ್ ನನ್ನು ದಿಟ್ಟಿಸಿ ನೋಡಿ ಮರುಮಾತನಾಡದೆ ಎದ್ದು ಹೋದ..
ಈಗ ಮುಂದಿನ ಲೋಕಸಭಾ ಚುನಾವಣೆಗಳ ಮಂತ್ರಾಲೋಚನೆ ದೇಶಾದ್ಯಂತ ನಡೆಯುತ್ತಿದೆ. “ಶಿವನೇ ನಿನ್ನಾಟ ಬಲ್ಲವರ‍್ಯಾರ‍್ಯಾರೋ, ಹರನೇ ನಿನ್ನಾಟ ಬಲ್ಲವರ‍್ಯಾರ‍್ಯಾರೋ ಎಂದು ಉದ್ಗರಿಸುವಂತಾಗಿದೆ. ಲೋಕಸಭೆಯ ಚುನಾವಣೆ ರಣರಂಗವಾಗದೆ ಕ್ರೀಡಾಂಗಣವಾಗಬೇಕು. ಕ್ರೀಡಾಮೈದಾನದಲ್ಲಿ ಎಲ್ಲ ಸ್ಪರ್ಧಿಗಳಿಗೂ “ಪ್ರತಿಜ್ಞಾವಿಧಿ”ಯನ್ನು ಬೋಧಿಸುತ್ತಾರೆ. ಹಾಗೆಯೇ ಮುಂಬರುವ ಲೋಕಸಭಾ ಚುನಾವಣೆಗೆ ನಿಲ್ಲುವ ಎಲ್ಲ ಅಭ್ಯರ್ಥಿಗಳನ್ನೂ, ಬೆಂಗಳೂರಿನ ಕಂಠೀರವ/ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿಸಿ ವಿಭಿನ್ನ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳ ಕೈಯಲ್ಲಿ ಅವರವರ ಧ್ವಜಗಳನ್ನು ಒಟ್ಟುಗೂಡಿಸಿ ಹಿಡಿಯುವಂತೆ ಮಾಡಿ ಗವರ್ನರ್ ಅವರಿಂದ ಈ ಕೆಳಕಂಡಂತೆ “ಪ್ರತಿಜ್ಞಾವಿಧಿ” ಬೋಧಿಸುವುದು ಒಳಿತು:
"2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ನೀತಿ ಸ೦ಹಿತೆಯ ಪ್ರಕಾರ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತೇವೆಂದೂ, ಯಾವುದೇ ಭ್ರಷ್ಟಾಚಾರ ಮಾಡುವುದಿಲ್ಲವೆಂದೂ, ಚುನಾವಣಾ ಪ್ರಚಾರದಲ್ಲಿ ಯಾವುದೇ ಪಕ್ಷದ/ವ್ಯಕ್ತಿಯ ನಿಂದನೆ ಮಾಡುವುದಿಲ್ಲವೆಂದೂ, ಸೋಲು ಗೆಲುವನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ, ಗೆದ್ದು ಬಂದರೆ ಅಧಿಕಾರಕ್ಕಾಗಿ ಕಿತ್ತಾಡದೆ, ರೆಸಾರ್ಟ್ ರಾಜಕೀಯ ಮಾಡದೆ ಜನರ ಹಿತ ಕಾಪಾಡುತ್ತೇವೆಂದೂ, ದೇಶದ ಉನ್ನತಿಗಾಗಿ ಕಾಯಾ, ವಾಚಾ, ಮನಸಾ ಶ್ರಮಿಸುತ್ತೇವೆಂದೂ ಪ್ರತಿಜ್ಞೆ ಮಾಡುತ್ತೇವೆ. ಜೈ ಹಿಂದ್!!!"
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.11-01-2023.