ಸಾದರು-ನೊಳಂಬ ಸಮಾಜಗಳು ದುರ್ಬಲರೆಂದು ಕರೆದವರ ಮುಂದೆ ತಲೆ ಎತ್ತಿ ಬಾಳುತ್ತಿವೆ : ಶ್ರೀ ತರಳಬಾಳು ಜಗದ್ಗುರುಗಳವರು
ಬ್ಯಾಡಗಿ, ಜ.14 : ಶ್ರೀ ಗುರು ಸಿದ್ದರಾಮೇಶ್ವರದ ಮತ್ತು ಶ್ರೀ ಮರುಳಸಿದ್ದರ ಕಾಲದ ನಂತರವೂ ಈ ಎರಡೂ ಸಮಾಜಗಳ ಅವಿನಾಭಾವ ಸಂಬಂಧ ಗಟ್ಟಿಯಾಗಿ ಉಳಿದುಕೊಂಡು ಬಂದಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಂತಸ ವ್ಯಕ್ತಪಡಿಸಿದರು.
ಅವರು, ಭಾನುವಾರ ಬ್ಯಾಡಗಿ ತಾಲ್ಲೂಕು ಚಿಕ್ಕಬಾಸೂರಿನಲ್ಲಿ ನೊಳಂಬ ಲಿಂಗಾಯತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗುರು ಸಿದ್ದರಾಮೇಶ್ವರರ 851ನೇ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಶಿವಯೋಗಿ ಸಿದ್ದರಾಮೇಶ್ವರರೇ ತಮ್ಮ ಒಂದು ವಚನದಲ್ಲಿ ದಾಖಲಿಸಿದಂತೆ ಮರುಳಸಿದ್ದರು 68 ಸಾವಿರ ವಚನಗಳನ್ನು ರಚಿಸಿದ್ದರು. ಆದರೆ ಅವುಗಳೆಲ್ಲ ಕಳೆದುಹೋಗಿ ಈಗ ಒಂದೇ ಒಂದು ವಚನ ಉಳಿದಿದೆ. ಆ ಒಂದು ವಚನವನ್ನು ಹಿರಿಯ ತಲೆಮಾರಿನ ವಿದ್ವಾಂಸರಾದ ಡಿ.ಎಲ್. ನರಸಿಂಹಾಚಾರ್ ರವರು ಸಂಶೋಧಿಸಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಬುದ್ಧ ಕರ್ನಾಟಕದಲ್ಲಿ ಲೇಖನ ಬರೆದಿರುತ್ತಾರೆ. ಮರುಳಸಿದ್ದರ ವಚನಗಳು ಕಳೆದು ಹೋಗಿದ್ದರೂ ನಮ್ಮ ಈ ಎರಡೂ ಸಮಾಜಗಳ ಸಂಬಂಧ ಮಾತ್ರ ಕಳೆದು ಹೋಗದೆ ಉಳಿದಿದ್ದು, ನಮ್ಮ ಹಿರಿಯರು ಸಂಘಟಿತರಾಗಿ ಹೋರಾಟ ಮಾಡಿದ್ದರಿಂದ ಈ ಮಟ್ಟಕ್ಕೆ ಬೆಳೆದು ಬಂದಿದ್ದೇವೆ. ಶ್ರೀ ಗುರು ಸಿದ್ದರಾಮೇಶ್ವರರ ಜಯ೦ತಿಯನ್ನು ಪ್ರತಿವರ್ಷ ಆಚರಿಸುವಂತೆ ಹೇಳಿ ನೆರವು ನೀಡಿದವರು ನಮ್ಮ ಹಿರಿಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಎಂಬುದನ್ನು ಹೇಳಲು ಸಂತೋಷವಾಗುತ್ತದೆ ಎಂದರು.
1915ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನ ಸೊಲ್ಲಾಪುರದ ಮಠದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದಾಗ ತೆರೆಮರೆಯಲ್ಲಿ ತಂತ್ರಗಾರಿಕೆ ಮಾಡಿ, ವೀರಶೈವ ಸಮಾಜವನ್ನು 4 ವರ್ಣಗಳಾಗಿ ಗುರುತಿಸಿ, ವಿಭಜಿಸುವ ಸನ್ನಾಹ ನಡೆದಿತ್ತು. ಜಂಗಮರನ್ನು ಬ್ರಾಹ್ಮಣರೆಂದೂ, ಬಣಜಿಗರನ್ನು ವೈಶ್ಯರೆಂದೂ, ದೇಸಾಯಿ ದೇಶಪಾಂಡೆಯರನ್ನು ಕ್ಷತ್ರಿಯರೆಂದೂ ಮತ್ತು ಸಾದರು, ನೊಳಂಬರನ್ನು ಶೂದ್ರರೆಂದೂ ಠರಾವು ಪಾಸ್ ಮಾಡಲು ಹೊರಟಿದ್ದರು. ಇದನ್ನು ತಿಳಿದ ನಮ್ಮ ಮಠದ ಶಿಷ್ಯರಾದ ಮೈಸೂರು ಬಸವಯ್ಯನವರು ವಿರೋಧಿಸಿ, ಪತ್ರವನ್ನು ಹರಿದು ಹಾಕಿ ಪ್ರಬಲವಾಗಿ ವಿರೋಧಿಸಿದರು.
ಆಗ ಹಾನಗಲ್ ಕುಮಾರ ಸ್ವಾಮಿಗಳವರು ತೆರೆಮರೆಯಲ್ಲಿ ಆಗಿನ ಪ್ರಮುಖರೊಂದಿಗೆ ಮಾತನಾಡಿ ಹಿಂಪಡೆಯುವಂತೆ ಸಂಧಾನ ನಡೆಸಿದರು. ಆದರೂ ನಂತರ ಈ ಎರಡೂ ಸಮಾಜಗಳನ್ನು ದುರ್ಬಲರೆಂದು ಕಾಣಲಾಗುತ್ತಿತ್ತು. ಅದನ್ನು ಮೆಟ್ಟಿನಿಂತು ನಾವು ತಲೆ ಎತ್ತಿ ಬಾಳುವಂತೆ ಬೆಳೆದಿದ್ದೇವೆ. ನಿಮ್ಮನ್ನು ಎದುರಿಸುವ ತಾಕತ್ತು ಇಲ್ಲಿ ಯಾರಿಗೂ ಇಲ್ಲ ಎಂದಾಗ ಸಮಾರಂಭದಲ್ಲಿ ಜೋರಾಗಿ ಚಪ್ಪಾಳೆ ಕೇಳಿ ಬಂದವು.
ಈ ಭಾಗದಲ್ಲಿ ಈ ಹಿಂದೆ ಶ್ರೀ ಗುರುಸಿದ್ದರಾಮೇಶ್ವರರು ಕಟ್ಟಿಸಿದ ಕೆರೆ-ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ, ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಜೆ.ಸಿ.ಮಾಧುಸ್ವಾಮಿ ಅವರೂ ಈ ವೇದಿಕೆಯಲ್ಲಿದ್ದು, ರೈತರ ಪರವಾಗಿ ಅವರನ್ನು ಅಭಿನಂದಿಸುತ್ತೇವೆ.
ಅಷ್ಟೇ ಅಲ್ಲ, ದಾವಣಗೆರೆ, ಜಗಳೂರು ಮತ್ತು ಭರಮಸಾಗರ ಕೆರೆಗಳಿಗೆ ನೀರು ಹರಿಸಲು ಏತ ನೀರಾವರಿ ಯೋಜನೆಗೆ 1200 .ಕೋಟಿ ರೂ. ಅನುದಾನ ಮತ್ತು ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಕೊಟ್ಟ ಮಾತಿನಂತೆ ರಣಘಟ್ಟ ಯೋಜನೆ ಮೂಲಕ ಯಗಚಿ ಜಲಾಶಯದಿಂದ ಹಳೇಬೀಡು, ಕೆರೆಗಳಿಗೆ ನೀರು ಹರಿಸಲು 145 ಕೋಟಿ ಅನುದಾನ ನೀಡಿದ ಬಿ.ಎಸ್.ಯಡಿಯೂರಪ್ಪ ಅವರು, ಆಧುನಿಕ ಸಿದ್ದರಾಮರಾಗಿದ್ದರೆಂದು ಶ್ರೀಗಳು ಹೇಳಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವರಾಗಿದ್ದಾಗ ತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದ್ದ. 362 ಪ್ರತಿಭಾವಂತ ವಿದ್ಯಾರ್ಥಿಗಳ ಕೆಪಿಎಸ್ ಪರೀಕ್ಷೆಯ ಫಲಿತಾಂಶವನ್ನು ಸರಿಪಡಿಸಿದ್ದರಿಂದ ಅವರೆಲ್ಲರೂ ಇಂದು ಉನ್ನತ ಹುದ್ದೆಯಲಿದ್ದಾರೆ ಎಂದು ಸಿರಿಗೆರೆ ಶ್ರೀಗಳು ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಮಾತನಾಡಿ, ಶ್ರೀ ಗುರು ಸಿದ್ದರಾಮೇಶ್ವರರು ಚಿಕ್ಕಬಾಸೂರಿಗೆ ಆಗಮಿಸಿ, ಇಲ್ಲಿನ ಪಾಳೇಗಾರರ ಸಹಕಾರ ಪಡೆದು, ಕೆರೆ-ಕಟ್ಟೆ ನಿರ್ಮಿಸಿದ್ದರು. ಅದಕ್ಕಾಗಿ ಇಲ್ಲಿ ಸಿದ್ದರಾಮೇಶ್ವರರ ದೇವಸ್ಥಾನವನ್ನು ಕಟ್ಟಿಸಲಾಗಿದೆ, ಅಲ್ಲದೇ, ಅವರು ಕಟ್ಟಿಸಿದ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸ್ವಾಭಿಮಾನ, ಪರಿಶ್ರಮದ ಸಂಕೇತವಾಗಿ ನೊಳಂಬ ಸಮಾಜ ಬೆಳೆದು ಬಂದಿದೆ. ನೊಳಂಬ ಸಮಾಜದ ಒಗ್ಗಟ್ಟಿನಲ್ಲಿ ನಾಡಿನ ಒಳಿತು ಕೂಡಾ ಇದೆ. ಆದರೆ, ವೀರಶೈವ ಲಿಂಗಾಯತ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದ್ದು, ಸಮಾಜದವರು ಜಾಗೃತರಾಗಬೇಕೆಂದು ಸೂಕ್ಷ್ಮವಾಗಿ ಹೇಳಿದರು.
ಜಯಂತ್ಯೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸಿದ್ಧರಾಮೇಶ್ವರರನ್ನು ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬ ಪ್ರತೀತಿ ಇದೆ. ಅಂತಹ ಮಹಾಶಿವಯೋಗಿಗಳು ನಡೆದಾಡಿದ ಸ್ಥಳದಲ್ಲಿ ಅವರ ಜಯಂತಿ ಆಗುತ್ತಿರುವುದು ಸಂತೋಷ ತಂದಿದೆ. ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬಲು ರಾಜ್ಯ ಪ್ರವಾಸ ಮಾಡುವ ಉದ್ದೇಶ ಹೊಂದಿದ್ದೇನೆ. ಯಾವುದೇ ಸರ್ಕಾರವಾಗಲೀ ನೀರಾವರಿಗೆ ಹೆಚ್ಚು ಒತ್ತು ನೀಡಿ, ರೈತರಿಗೆ ನೀರು ಒದಗಿಸುವ ಕೆಲಸ ಮಾಡಬೇಕೆಂದು ಯಡಿಯೂರಪ್ಪ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಶ್ರಮ ಜೀವನವನ್ನು ಪ್ರೀತಿಸದ ಹೊರತು ಬದುಕು ಸ್ಥಿರವಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀ ಗುರು ಪರದೇಶೀ ಕೇಂದ್ರ ಸ್ವಾಮೀಜಿ, ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಪುರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು. ಈ ವೇಳೆ ದಾವಣಗೆರೆಯ ಕಿರುವಾಡಿ ಸುರೇಂದ್ರಪ್ಪ ಅವರಿಗೆ “ನೊಳಂಬ ಶ್ರೀ” ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ನೊಳಂಬ ಲಿಂಗಾಯತ ಸಂಘದ ಉಜ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಬಸವರಾಜ್ ಶಿವಣ್ಣನವರ್, ಬಿ.ಪಿ.ಹರೀಶ್, ಹೈಕೋರ್ಟ್ ವಕೀಲ ಸಂದೀಪ್ ಪಾಟೀಲ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್, ಡಾ. ಡಿ.ಜಿ.ಗಂಗಪ್ಪ, ದಾವಣಗೆರೆಯ ಕಿರುವಾಡಿ ಸೋಮಶೇಖರ್, ಶಿಕಾರಿಪುರದ ಭೂಕಾಂತ್, ನೊಳಂಬ ಸಂಘದ ಉಧ್ಯಕ್ಷ ಬಿ.ಕೆ.ಚಂದ್ರಶೇಖರ್, ನಿರ್ದೇಶಕ ದಾವಣಗೆರೆಯ ಸಿ.ಬಿ.ಈಶ್ವರಪ್ಪ, ಜಿಗಳಿಯ ಇಂದೂಧರ್, ಜಿ.ದೇವಿನಹಳ್ಳಿಯ ಜಿ.ಕೆ.ಮಹೇಶ್ವರಪ್ಪ, ಮಲೇಬೆನ್ನೂರಿನ ಬಿ.ವೀರಯ್ಯ, ಹರಿಹರ ಪಿಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಹೊನ್ನಾಳಿ ಶಾಂತರಾಜ್ ಪಾಟೀಲ್, ನಿವೃತ್ತ ಡಿವೈಎಸ್ಪಿ ಸೊಲಭೇಶ್ವರಪ್ಪ, ಕುಕ್ಕವಾಡದ ರುದ್ರಗೌಡ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.