ಉತ್ತಮ ನ್ಯಾಯಾಧೀಶರಾಗಲು ಹತ್ತು ಹಿತನುಡಿಗಳು :

  •  
  •  
  •  
  •  
  •    Views  

 ಉತ್ತಮ ನ್ಯಾಯಾಧೀಶರಾಗಲು ಹತ್ತು ಹಿತನುಡಿಗಳು 

ಳೆದ ಭಾನುವಾರ ಬೆಂಗಳೂರಿನ ಪಿಟೀಲು ಚೌಡಯ್ಯ ಸಭಾಭವನದಲ್ಲಿ ಸಭಿಕರು ಕಿಕ್ಕಿರಿದು ನೆರೆದಿದ್ದರು. 

ಅದೊಂದು ಸಂಗೀತ ಸಮಾರಂಭವಾಗಿರಲಿಲ್ಲ. ದೇಶದ ಸಂವಿಧಾನದ ಹೊಣೆ ಹೊತ್ತ ನ್ಯಾಯಾಧೀಶರ “ಅಧಿವೇಶನ”ವೇ ಅದಾಗಿತ್ತು. ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ದೇಶಾದ್ಯಂತ ಆಗಮಿಸಿದ್ದ ಅನೇಕ ನ್ಯಾಯಾಧೀಶರೂ, ನ್ಯಾಯವಾದಿಗಳೂ ಸಭಾಂಗಣದಲ್ಲಿ ಆಸೀನರಾಗಿದ್ದರು. ಸಂದರ್ಭ: ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಶಿವರಾಜ್ ವಿ. ಪಾಟೀಲ್ ರವರು  ಬರೆದ "Time Spent Distance Travelled” ಎಂಬ ಆತ್ಮಕಥನ ಪುಸ್ತಕದ ಲೋಕಾರ್ಪಣೆ. ಸಾಮಾನ್ಯವಾಗಿ ಆತ್ಮಚರಿತ್ರೆ ಬರೆಯುವವರು ಯಾವುದಾದರೂ ಒಂದು ಭಾಷೆಯಲ್ಲಿ ಬರೆಯುತ್ತಾರೆ. ಅದನ್ನು ನಂತರ ಬೇರೆಯವರು ಬೇರೆಯ ಭಾಷೆಗಳಿಗೆ ಅನುವಾದ ಮಾಡುತ್ತಾರೆ. ಆದರೆ ಜಸ್ಟೀಸ್ ಶಿವರಾಜ ಪಾಟೀಲರು ತಮ್ಮ ಆತ್ಮಕಥನವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸ್ವತಃ ಬರೆದಿರುತ್ತಾರೆ. ಅದಕ್ಕೆ ಅವರಿಗೆ ಕಾಲಾವಕಾಶ ದೊರೆತದ್ದು ಕೊರೊನಾ ಕಾಲಾವಧಿಯಲ್ಲಿ.

ಇಂಗ್ಲಿಷ್ ಆವೃತ್ತಿಯ ಕರಡು ಪ್ರತಿಯನ್ನು ನ್ಯಾ. ಪಾಟೀಲರು ನಮಗೆ 5-6 ತಿಂಗಳ ಹಿಂದೆಯೇ ಕಳುಹಿಸಿ ಅದನ್ನು ಕುರಿತು ಆಂಗ್ಲಭಾಷೆಯಲ್ಲಿ ಒಂದು ಮುಂಬರಹವನ್ನು ಬರೆದು ಕೊಡಲು ಕೋರಿದ್ದರು. ಶ್ರೀಮಠ ಮತ್ತು ಸಮಾಜದ ಕಾರ್ಯನಿರ್ವಹಣೆಯಲ್ಲಿ ಓದಿ ಬರೆಯಲು ಕಾಲಾವಕಾಶವಾಗದೆ ನ್ಯಾಯಮೂರ್ತಿಗಳಿಂದ ಬಹಳ “Adjournment” ಗಳನ್ನು ತೆಗೆದುಕೊಳ್ಳಬೇಕಾಯಿತು. ಇನ್ನೇನು ಪುಸ್ತಕ ಮುದ್ರಣಕ್ಕೆ ಹೋಗಬೇಕಾದ ದಿನ ಹತ್ತಿರ ಬಂದಾಗ ಅಜ್ಞಾತ ಸ್ಥಳದಲ್ಲಿ “ಭೂಗತ”ರಾಗಿ ಕುಳಿತು ಅವರ ಆತ್ಮಚರಿತ್ರೆಯನ್ನು ಓದಲು ಆರಂಭಿಸಿದಾಗ ನಮ್ಮ ನೆನಪಿಗೆ ಬಂದದ್ದು ಹೆಸರಾಂತ ಇಂಗ್ಲಿಷ್ ನಾಟಕಕಾರ ಷೇಕ್ಸ್ ಪಿಯರ್ ಬರೆದ “Twelfth Night” ಎಂಬ ನಾಟಕದಲ್ಲಿ ಬರುವ ಪ್ರಸಿದ್ಧವಾದ ನುಡಿಗಟ್ಟು: “Some are born great, some achieve greatness and some have greatness thrust upon them" (ಕೆಲವರು ಹುಟ್ಟಿನಿಂದ ದೊಡ್ಡವರಾಗಿರುತ್ತಾರೆ, ಕೆಲವರು ಸಾಧನೆಯಿಂದ ದೊಡ್ಡವರಾಗುತ್ತಾರೆ, ಇನ್ನು ಕೆಲವರು ಸ್ಥಾನದ ಬಲದಿಂದ ದೊಡ್ಡವರಂತೆ ಕಾಣಿಸುತ್ತಾರೆ). ನ್ಯಾ. ಶಿವರಾಜ ಪಾಟೀಲರು ಹುಟ್ಟಿನಿಂದ ಅಥವಾ ಸ್ಥಾನದ ಬಲದಿಂದ ದೊಡ್ಡವರಾದವರಲ್ಲ. ಕಡುಬಡತನದಲ್ಲಿ ಹುಟ್ಟಿ ಸತತ ಪರಿಶ್ರಮ ಮತ್ತು ಸಾಧನೆಯಿಂದ ದೊಡ್ಡವರಾದವರು. ರಾಯಚೂರು ಜಿಲ್ಲೆಯ “ಮಲದಕಲ್” ಎಂಬ ಕುಗ್ರಾಮವೊಂದರಲ್ಲಿ ಜನಿಸಿದ ಅವರು ನಿರ್ಮಲ ಮನಸ್ಸು ಮತ್ತು ದೈವೀಭಾವನೆಯಿಂದ ಕಷ್ಟಪಟ್ಟು ಓದಿ ದೇಶದ ವರಿಷ್ಠನ್ಯಾಯಾಲಯದ ನ್ಯಾಯಾಧೀಶರಾಗಿ ಬೆಳೆದರು. 

ಸಾಮಾನ್ಯವಾಗಿ ನ್ಯಾಯಾಧೀಶರಾದವರು ಸಾಹಿತಿಗಳಾಗಿರುವುದು ಅಪರೂಪ. ಅವರು ತಮ್ಮ ತೀರ್ಪುಗಳನ್ನು ಬರೆಯುವಾಗ ಸತ್ಯಶೋಧನೆಯ ಕಡೆ ಹೆಚ್ಚು ಗಮನ ಕೊಡುತ್ತಾರೆಯೇ ಹೊರತು ತಮ್ಮ ಬರವಣಿಗೆಯ ಶೈಲಿಗಲ್ಲ. ನ್ಯಾ. ಶಿವರಾಜ ಪಾಟೀಲರ ಈ ಆತ್ಮಕಥನದ ಮುಖಪುಟದ ವಿನ್ಯಾಸ ತುಂಬಾ ಆಕರ್ಷಕವಾಗಿದೆ- ಕೆಳಭಾಗದಲ್ಲಿ ಒಂದು ಎತ್ತಿನ ಬಂಡಿಯ ಚಿತ್ರ, ಮೇಲ್ಬಾಗದಲ್ಲಿ ಸುಪ್ರೀಂ ಕೋರ್ಟಿನ ಚಿತ್ರ! ಈ ಎರಡೂ ಚಿತ್ರಗಳು ಇರಲೇಬೇಕೆಂದು ಮುಖಪುಟ ವಿನ್ಯಾಸಕಾರನಿಗೆ ಒತ್ತಾಯಿಸಿದವರು ನ್ಯಾ. ಶಿವರಾಜ ಪಾಟೀಲರೇ ಎಂದು ದೂರವಾಣಿಯಲ್ಲಿ ಅವರೊಂದಿಗೆ ಮಾತನಾಡುವಾಗ ತಿಳಿದು ಅವರ ಕಲಾರಾಧನೆಯ ಅಭಿರುಚಿಯನ್ನು ಕಂಡು ಅಚ್ಚರಿಯಾಯಿತು. ಇವೆರಡೂ ಚಿತ್ರಗಳು ಅವರ ಆತ್ಮಕಥನದ ಆರಂಭದಲ್ಲಿ ಮುದ್ರಿತವಾದ “By Bullock Cart to Supreme Court" ಎಂಬ ನಮ್ಮ ಆಂಗ್ಲಭಾಷೆಯ ಮುಂಬರಹಕ್ಕೆ ಪ್ರೇರಣೆಯನ್ನು ನೀಡಿದವು. ಇವು ಅವರ ಜೀವನದ ಎರಡು ಪ್ರಮುಖ ಮೈಲುಗಲ್ಲುಗಳನ್ನು ಸೂಚಿಸುತ್ತವೆ: ಬಾಲ್ಯದಲ್ಲಿ ಎತ್ತಿನ ಬಂಡಿಯಲ್ಲಿ ಕುಳಿತು ಶಾಲೆಗೆ ಹೋಗುತ್ತಿದ್ದ ಬಡಕುಟುಂಬದ ಹಳ್ಳಿಯ ಹುಡುಗ! 


ದೇಶದ ವರಿಷ್ಠ ನ್ಯಾಯಾಲಯದ ನ್ಯಾಯಪೀಠದಲ್ಲಿ ಕುಳಿತು ತೀರ್ಪು ನೀಡುವ ಮಟ್ಟಕ್ಕೆ ಏರಿದ ಗೌರವಾನ್ವಿತ ನ್ಯಾಯಾಧೀಶ! ಇವೆರಡರ ಮಧ್ಯದ ಅವರ ಕಠಿಣ ಪರಿಶ್ರಮ ಮತ್ತು ಸಾಧನೆಯನ್ನು ಇಡೀ ಆತ್ಮಕಥನದ ಬರಹ ಒಳಗೊಂಡಿದೆ. 

ಈ ಹಿಂದೆ ಪ್ರಕಟಗೊಂಡ “ಮುಂಜಾವಿಗೊಂದು ನುಡಿಕಿರಣ” ಎಂಬ ಅವರ ಸ್ವಾನುಭವದ 365 ನಲ್ನುಡಿಗಳಿರುವ ಗ್ರಂಥದಲ್ಲಿ ಅವರೇ ಹೇಳುವಂತೆ: “ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಕೊನೆಯ ಮಹಡಿಗೆ ತಲುಪಿದಾಗ ಆಗುವ ಅನುಭವ ಲಿಫ್ಟ್ ನಲ್ಲಿ ಏರಿದ ಅನುಭವಕ್ಕಿಂತ ತೀರಾ ಭಿನ್ನ.” ಮೆಟ್ಟಿಲುಗಳನ್ನು ಹತ್ತುವಾಗ ಉಂಟಾಗುವ ಪರಿಶ್ರಮ ಲಿಫ್ಟ್ ನಲ್ಲಿ ಹೋಗುವಾಗ ಇರುವುದಿಲ್ಲ. ಆರೋಗ್ಯಕರವಾಗಿರುವವರು ಮಾತ್ರ ಹೋದರೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯ. ಅನಾಯಾಸವಾಗಿ ಲಿಫ್ಟ್ ನಲ್ಲಿ ಏರಿ ಹೋಗಲು ಬಯಸುವವರು ಕೆಲವೊಮ್ಮೆ ಲಿಫ್ಟ್ ಕೆಟ್ಟು ಹೋದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ನ್ಯಾ. ಶಿವರಾಜ ಪಾಟೀಲರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ದಿಢೀರನೆ ಲಿಫ್ಟ್ ಮೂಲಕ ಏರಿದವರಲ್ಲ; ನ್ಯಾಯಾಂಗದ ಒಂದೊಂದೇ ಮೆಟ್ಟಿಲನ್ನು ಸತ್ಯ, ನ್ಯಾಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಷ್ಟಪಟ್ಟು ಹತ್ತಿ ಮೇಲೇರಿದವರು. ನಿಷ್ಕಲಂಕ ನ್ಯಾಯಾಧೀಶರಾಗಿ ಎಲ್ಲರ ಮನ್ನಣೆ ಪಡೆದವರು. ಕರ್ನಾಟಕದ ಲೋಕಾಯುಕ್ತರಾಗಿ ನೇಮಕಗೊಂಡಾಗ ಮಾಧ್ಯಮದ ಎಲ್ಲೋ ಮೂಲೆಯೊಂದರಲ್ಲಿ ಅವರನ್ನು ಕುರಿತು ಬಂದ ನಿರಾಧಾರ ಆರೋಪದಿಂದ ಬೇಸತ್ತು ಅಧಿಕಾರ ವಹಿಸಿಕೊಂಡ 45 ದಿನಗಳಲ್ಲಿ ರಾಜೀನಾಮೆ ಕೊಟ್ಟು ನಿರ್ಗಮಿಸಿ ಆ ಸ್ಥಾನದ ಘನತೆಯನ್ನು ಹೆಚ್ಚಿಸಿದರು. ಸಾರ್ವಜನಿಕ ಜೀವನದಲ್ಲಿ ಟೀಕೆ ಟಿಪ್ಪಣಿಗಳು ಬರುವುದು ಸಹಜ ಹಾಗೆ ರಾಜೀನಾಮೆ ಕೊಡಬಾರದಾಗಿತ್ತು ಎಂದು ಮುಖ್ಯ ಅತಿಥಿಗಳಾಗಿ ದೆಹಲಿಯಿಂದ ಆಗಮಿಸಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಆರ್.ಎಫ್.ನಾರಿಮನ್ ರವರು ಸಭೆಯನ್ನುದ್ದೇಶಿಸಿ ಮಾತನಾಡುವಾಗ ವಿಷಾದಿಸಿದರು.

ಬಸವಣ್ಣನವರು “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...” ಎಂಬ ವಚನದಲ್ಲಿ ಸಪ್ತಶೀಲಗಳನ್ನು ಬೋಧಿಸಿದಂತೆ ಬೈಬಲ್ ನ ಹಳೆಯ ಟೆಸ್ಟ್ ಮೆಂಟ್ ನಲ್ಲಿ ದಾಖಲಾಗಿರುವ ಪ್ರಕಾರ ಸಂತ ಮೋಸೆಸ್ ದೇವರನ್ನು ಪ್ರಾರ್ಥಿಸಿದಾಗ ದೇವರು ಕೊಟ್ಟ ಹತ್ತು ನೀತಿಯ ಉಪದೇಶದ ಮಾತುಗಳನ್ನು ಕ್ರೈಸ್ತರು “Ten Commandments” ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಹಲವು ವರ್ಷಗಳ ಹಿಂದೆ ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ 120 ನ್ಯಾಯಾಧೀಶರು ಆಯ್ಕೆಯಾದ ಸಂದರ್ಭದಲ್ಲಿ ಅವರನ್ನು ಉದ್ದೇಶಿ ಮಾತನಾಡಿದ ನ್ಯಾ. ಶಿವರಾಜ ಪಾಟೀಲರು ಒಬ್ಬ ಉತ್ತಮ ನ್ಯಾಯಾಧೀಶನಾಗಬೇಕೆಂದರೆ ಏನು ಮಾಡಬೇಕೆಂದು ನೀಡಿದ ಹತ್ತು ಹಿತನುಡಿಗಳು ತುಂಬಾ ಬೋಧಪ್ರದವಾಗಿವೆ. ಆ ಹತ್ತು ನಲ್ನುಡಿಗಳನ್ನು ಉಲ್ಲೇಖಿಸಿ ಅವರ ಇಂಗ್ಲಿಷ್ ಆತ್ಮಕಥನ "Ten Commandments for a Judge" ಎಂಬ ಅಧ್ಯಾಯದೊಂದಿಗೆ ಕೊನೆಗೊಳ್ಳುತ್ತದೆ. ಆವುಗಳ ಕನ್ನಡ ಭಾವಾನುವಾದ: 

1. To be a good judge, one must first be a good human being.

(ಒಬ್ಬ ಒಳ್ಳೆಯ ನ್ಯಾಯಾಧೀಶನಾಗಬೇಕೆಂದರೆ, ಮೊಟ್ಟಮೊದಲು ಅವನು ಒಬ್ಬ ಒಳ್ಳೆಯ ಮನುಷ್ಯನಾಗಿರಬೇಕು).

2. Remember you are not divine but that divine functions are assigned to you. These functions are extraordinary and demand close attention and sensitivity.

(ನೆನಪಿರಲಿ: ನೀವು ದೈವೀ ಪುರುಷರಲ್ಲ. ದೈವೀಕಾರ್ಯಗಳನ್ನು ನಿರ್ವಹಿಸಲು ನಿಮಗೆ ವಹಿಸಲಾಗಿದೆ. ಈ ಕಾರ್ಯಗಳು ಅಸಾಧಾರಣವಾದವುಗಳು. ಇವುಗಳನ್ನು ತುಂಬಾ ಕಾಳಜಿಯಿಂದ, ಸೂಕ್ಷ್ಮ ದೃಷ್ಟಿಯಿಂದ ನಿರ್ವಹಿಸಬೇಕಾಗುತ್ತದೆ).

3.Your oath is your religion, be true to it; your conscience is your watchman, obey it.

(ನೀವು ನ್ಯಾಯಾಧೀಶರಾಗಿ ತೆಗೆದುಕೊಳ್ಳುವ ಪ್ರಮಾಣ ವಚನವೇ ನಿಮ್ಮ ಧರ್ಮ. ಅದಕ್ಕೆ ನಿಷ್ಠರಾಗಿರಿ. ನಿಮ್ಮ ಆತ್ಮಸಾಕ್ಷಿಯೇ ನಿಮ್ಮ ಕಾವಲುಗಾರ, ಅದನ್ನು ಪಾಲಿಸಿರಿ).

4. Extend courtesy to others as you would expect it from them. Be polite yet firm in your judgements.

(ನೀವು ಬೇರೆಯವರಿಂದ ಹೇಗೆ ಸೌಜನ್ಯವನ್ನು ನೀರೀಕ್ಷಿಸುತ್ತೀರೋ ಹಾಗೆಯೇ ನೀವು ಅವರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ವಿನಯವಾಗಿರಿ, ಆದರೆ ನಿಮ್ಮ ತೀರ್ಪಿನಲ್ಲಿ ದೃಢತೆ ಇರಲಿ). 

5. Listen patiently and attentively to arguments; this aids in better understanding and writing your sound judgments.

(ಶಾಂತಚಿತ್ತರಾಗಿ, ಗಮನವಿಟ್ಟು ವಾದ-ವಿವಾದಗಳನ್ನು ಆಲಿಸಿರಿ. ಇದು ನಿಮ್ಮ ಮುಂದಿರುವ ಪ್ರಕರಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಉತ್ತಮವಾದ ತೀರ್ಪನ್ನು ಬರೆಯಲು ಸಹಾಯಕವಾಗುತ್ತದೆ). 

6. Consider evidence and arguments carefully and objectively; not doing so will have an adverse impact on the verdict.

(ಸಾಕ್ಷ್ಯಾಧಾರಗಳನ್ನು ಮತ್ತು ವಾದಗಳನ್ನು ಎಚ್ಚರಿಕೆಯಿಂದ ಮತ್ತು ವಸ್ತುನಿಷ್ಠವಾಗಿ ಪರಿಗಣಿಸಿರಿ. ಇಲ್ಲದಿದ್ದರೆ ನೀವು ನೀಡುವ ತೀರ್ಪಿಗೆ ಬಾಧಕ ಉಂಟಾಗುತ್ತದೆ). 

7. Use technology but do not become its slave; do not surrender your creativity, innovation and original thinking.

(ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಿ. ಆದರೆ ಅದರ ದಾಸರಾಗಬೇಡಿ. ನಿಮ್ಮ ಸೃಜನಶೀಲತೆ, ಆವಿಷ್ಕಾರ ಮತ್ತು ಸ್ವಂತ ಆಲೋಚನೆಯನ್ನು ಕಳೆದುಕೊಳ್ಳಬೇಡಿ.

8. Do your best to decide cases early and deliver judgements on the appointed date, keeping in mind that litigants may have been waiting for a long period.

(ಪ್ರಕರಣಗಳನ್ನು ಬೇಗನೆ ಇತ್ಯರ್ಥಪಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿರಿ ಮತ್ತು ನಿಗದಿತ ದಿನಾಂಕದಂದು ತೀರ್ಪನ್ನು ನೀಡಿರಿ. ದಾವೆದಾರರು ಬಹಳ ದಿನಗಳಿಂದ ನಿಮ್ಮ ತೀರ್ಪಿಗಾಗಿ ಕಾಯುತ್ತಿರುತ್ತಾರೆಂಬುದು ನಿಮ್ಮ ಗಮನದಲ್ಲಿರಲಿ).

9. Endeavour to find out what is right and where justice lies in a case and not merely who is right between the parties.

(ಯಾವುದೇ ಪ್ರಕರಣದಲ್ಲಿ ಯಾರು ಸರಿ ಎಂಬುದನ್ನಷ್ಟೇ ನೋಡದೆ, ಯಾವುದು ಸರಿ ಮತ್ತು ಯಾವುದು ನ್ಯಾಯಯುತವಾಗಿದೆ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿ).

10. Maintain good conduct both inside and outside the court, respecting principles of justice and human values.

(ನ್ಯಾಯಾಂಗ ತತ್ತ್ವಗಳು ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸುವುದರ ಜೊತೆಗೆ, ನ್ಯಾಯಾಲಯದ ಒಳ-ಹೊರಗೆ ನಿಮ್ಮ ನಡತೆ ಸಭ್ಯತೆಯಿಂದ ಕೂಡಿರಲಿ).

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.25-01-2023.