ಚುನಾವಣಾ ನೀತಿ ಸಂಹಿತೆ ಬದುಕಿನ ನೀತಿ ಸಂಹಿತೆಯಾಗಬೇಕು : ಶ್ರೀ ತರಳಬಾಳು ಜಗದ್ಗುರುಗಳವರು
ಸಿರಿಗೆರೆ ಜ.26 : ಸಂವಿಧಾನದ ಆಶಯಗಳನ್ನು ರಾಜಕೀಯ ಧುರೀಣರು ಗಾಳಿಗೆ ತೂರಿ ಪರಸ್ಪರ ವೈಯಕ್ತಿಕ ನಿಂದನೆ ತೊಡಗಿರುವುದು ತುಂಬಾ ವಿಷಾದನೀಯ. ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅದನ್ನು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ಧುರೀಣರು ಚಾಚೂ ತಪ್ಪದೇ ಪಾಲಿಸುತ್ತಾರೆ. ಅದನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಬದುಕು ಹಸನಾಗುತ್ತದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದರು.
ಇಲ್ಲಿನ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳ 75ನೆಯ ಗಣರಾಜ್ಯೋತ್ಸವ ದಿನಾಚರಣೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎರಡುವರೆ ವರ್ಷಗಳ ನಂತರ ಡಾ. ಅಂಬೇಡ್ಕರ್ ಮತ್ತು ಅವರ ಸಂವಿಧಾನ ಸಮಿತಿಯ ಸದಸ್ಯರು ಸೇರಿ ರಚಿಸಿದ ಸಂವಿಧಾನವನ್ನು ಜಾರಿಗೆ ಬಂದಿತು. ಸಂವಿಧಾನ ರಚಿಸಿದ ಹಿರಿಯರ ಆಶಯಗಳು ಇಂದಿಗೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಎಲ್ಲರೂ ಸ್ವಾತಂತ್ರ್ಯ ಪ್ರೇಮ ಬೆಳಸಿಕೊಳ್ಳುವ ಬದಲು ಅಧಿಕಾರ ಪ್ರೇಮ, ಸ್ವಾರ್ಥವನ್ನು ಬೆಳಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು. ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಪರಿಹಾರ ನೀಡುವಂತಹ ಕೆಲಸವಾಗಬೇಕು.
ಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕಬೇಕು. ರಾಷ್ಟ್ರಲಾಂಛನದಲ್ಲಿರುವಂತೆ “ಸತ್ಯಮೇವ ಜಯತೆ” ಎಂಬ ಉದ್ಘೋಷ ವಾಕ್ಯವಿದೆ. ಇಂದಿನ ರಾಜಕೀಯ ಸತ್ಯ ಮಾರ್ಗದಲ್ಲಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳಾದ ನೀವು ಹಿಂದಿನ ತಲೆಮಾರಿನ ಹಿರಿಯರ ಆದರ್ಶಗಳನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರ ಹೋರಾಟ, ತ್ಯಾಗ, ಬಲಿದಾನಗಳ, ಇತಿಹಾಸವನ್ನು ತಿಳಿಯಬೇಕು ಎಂದರು.
ಸಂವಿಧಾನದ ಹಲವು ಆಶಯಗಳಿಗೆ ಮೂಲ “ಬಸವಣ್ಣನವರ ವಚನ ಸಾಹಿತ್ಯ” ಎಂದು ವಚನ ಸಾಹಿತ್ಯದಲ್ಲಿನ ವ್ಯಕ್ತಿ ಸ್ವಾತಂತ್ರ್ಯ, ನ್ಯಾಯ, ಸಮಾನತೆ, ಜಾತ್ಯಾತೀತ ಮತ್ತು ಭಾತೃತ್ವ ಭಾವನೆಗಳು ವಚನ ಸಾಹಿತ್ಯದ ಕೊಡುಗೆಗಳಾಗಿವೆ ಎಂದರು.
ನರ್ಸರಿ ಪೈಮರಿ ಶಾಲೆಯ ಪುಟಾಣಿಗಳು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರಭೋಸ್, ಜವಹರಲಾಲ ನೆಹರು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂತಾದವರ ಪೋಷಾಕು ಧರಿಸಿ ಶ್ರೀಗಳ ಪ್ರೀತಿಗೆ ಪಾತ್ರರಾದರು. ಪೋಷಾಕು ಧರಿಸಿದ ಪುಟಾಣಿಗಳನ್ನು ವೇದಿಕೆಯ ತಮ್ಮ ಎಡಬಲಗಳಲ್ಲಿ ಕೂರಿಸಿಕೊಂಡು ಮುಕ್ತ ಕಂಠದಿಂದ ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಬ್ಬಗಳಂದು ರಜೆ ನೀಡಬಾರದು. ಧ್ವಜಾರೋಹಣ ನಂತರ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಬ್ಬಗಳ ಮಹತ್ವ ತಿಳಿಸುವ ಉಪನ್ಯಾಸಗಳು ಹಾಗೂ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಬೇಕು ಎಂದು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಿಗೆ ಹಾಗು ವಿಶೇಷ ಅಧಿಕಾರಿಗಳಿಗೆ ಸೂಚಿಸಿದರು. ಅದು ಮುಂದಿನ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲನೆಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶರಣ ಗುತ್ತಿ ಜಂಬುನಾಥ್, ನಿವೃತ್ತ ಕಾರ್ಯನಿರ್ವಹಣಾಧಿಕಾರಿಗಳವರು ದಾವಣಗೆರೆ ಜಿಲ್ಲಾ ಪಂಚಾಯಿತಿ ಇವರು ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಜಗತ್ತಿನ ಎಲ್ಲಾ ದೇಶಗಳಲ್ಲಿನ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ನಾಗರೀಕರಿಗೆ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಹಾಗೆಯೇ ನಾಲ್ಕನೆಯ ಭಾಗದಲ್ಲಿ ತಿಳಿಸಿರುವ ಮೂಲಭೂತ ಕರ್ತವ್ಯಗಳನ್ನು ನಾಗರೀಕರು ಮರೆಯಬಾರದು ಎಂದರು.
ಭಾರತ ಇಂದು ಅಭಿವೃದ್ಧಿ ಹೊಂದುತ್ತಿರುವ ದೇಶವಲ್ಲ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ, ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ ಎಂದರು. ಡಾ. ಬಿ. ಆರ್. ಅಂಬೇಡ್ಕರ್ ರಚಿಸಿರುವ “ಭಾರತದ ಸಂವಿಧಾನದ” ಪ್ರತಿಯನ್ನು ತಾವೆಲ್ಲರೂ ತಮ್ಮ ಬಳಿಯಲ್ಲಿಟ್ಟುಕೊಂಡು ಅದ್ಯಯನ ಮಾಡಬೇಕು ಎಂದರು.
ಪ್ರಾಮಾಣಿಕತೆಯಿಂದ ವ್ಯಕ್ತಿ ಮೇಲೆ ಬರುವಂತಾಗಬೇಕು. ವಾಮ ಮಾರ್ಗಗಳನ್ನು ಅನುಸರಿಸಿ ವ್ಯಕ್ತಿ ಮೇಲೆ ಬಂದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭರತನಾಟ್ಯ, ದೇಶಭಕ್ತಿ ಸಾರುವ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಆಕರ್ಷಕ ಪಥಸಂಚಲನದಲ್ಲಿ ಎನ್.ಸಿ.ಸಿ. ಸ್ಕೌಟ್ಸ್ ಅಂಡ್ ಗೈಡ್ಸ್, ಬಾಲಕ ಬಾಲಕಿಯರ ಪರೇಡ್ ಎಲ್ಲರ ಮನಸೂರೆಗೊಂಡಿತು.
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಹೆಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ, ವೀರಣ್ಣ ಎಸ್. ಜತ್ತಿ, ಸಮಾರಂಭದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳ ಮುಖ್ಯಸ್ಥರು, ನೌಕರರು, ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು, ಪೋಷಕರು, ಸಿರಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಬಿ.ಎಸ್. ಮರುಳಸಿದ್ದಯ್ಯ ನಿರೂಪಿಸಿದರು. ಮುಖ್ಯ ಶಿಕ್ಷಕ ಎಂ.ಎಸ್. ಸೋಮಶೇಖರ ಸ್ವಾಗತಿಸಿದರು. ಉಪ ಪ್ರಾಚಾರ್ಯ ಕೆ.ಈ. ಬಸವರಾಜಪ್ಪ ವಂದಿಸಿದರು.