ಕಾಣದ ತಾಯ ಪ್ರೀತಿಯ ಮಡಿಲಿಗೆ ಹಂಬಲಿಸಿದ ಮನ!

  •  
  •  
  •  
  •  
  •    Views  

ಳೆದ 16 ವರ್ಷಗಳಿಂದ ಬರೆಯುತ್ತಾ ಬಂದಿರುವ ನಮ್ಮ ಅಂಕಣದಲ್ಲಿ ಈ ವಾರ ಯಾವ ವಿಷಯವನ್ನು ಕುರಿತು ಗುರುಗಳು ಬರೆಯಬಹುದೆಂಬ ಕುತೂಹಲ ಓದುಗರಲ್ಲಿದ್ದರೆ, ಏನನ್ನು ಬರೆಯಬೇಕೆಂಬ ಆಲೋಚನೆ ನಮ್ಮ ಮನಸ್ಸಿನೊಳಗೆ ಸುಳಿದಾಡುತ್ತಿರುತ್ತದೆ. ಪ್ರಜ್ಞಾವಂತ ಓದುಗರಿಂದ ಬರುವ ಪ್ರತಿಕ್ರಿಯೆಗಳೇ ನಮ್ಮ ಅಂಕಣ ಬರಹಕ್ಕೆ ಪ್ರೇರಣೆ. ಶಿಷ್ಯರು ನಮ್ಮ ದರ್ಶನವನ್ನು ಪಡೆಯಲು ಬಂದಾಗಲೋ, ಯಾವುದೇ ಸಮಾರಂಭಕ್ಕೆ ಹೋದಾಗಲೋ, ವಿಮಾನದಲ್ಲಿ ಪಯಣಿಸುವಾಗಲೋ ಅಪರಿಚಿತ ಓದುಗರು ನಮ್ಮನ್ನು ಗುರುತಿಸಿ ಹತ್ತಿರ ಬಂದು ತಮ್ಮ ಅಂಕಣವನ್ನು ತಪ್ಪದೆ ಓದುತ್ತಿದ್ದೇನೆ, ಅದಕ್ಕಾಗಿ ಕಾಯುತ್ತಿರುತ್ತೇನೆ, ಅವುಗಳ ಕ್ಲಿಪ್ಪಿಂಗ್ಸ್ ಗಳನ್ನು ನನ್ನ ಬಳಿ ಕಾಯ್ದಿರಿಸಿಕೊಂಡಿದ್ದೇನೆ ಎಂದು ವ್ಯಕ್ತಪಡಿಸುವ ಪ್ರತಿಕ್ರಿಯೆಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿವೆ. ಮೊದ ಮೊದಲು ಪತ್ರಗಳ ಮುಖಾಂತರ ಬರುತ್ತಿದ್ದ ಪ್ರತಿಕ್ರಿಯೆಗಳು ಈಗ ಆಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದಾಗಿ WhatsApp/Email ಗಳಲ್ಲಿ ಬರತೊಡಗಿವೆ. ಜಿಪುಣರು ಸಂಪಾದಿಸಿದ ಹಣವನ್ನು ಟ್ರಜರಿಯಲ್ಲಿಟ್ಟು ಖುಷಿಪಟ್ಟರೆ, ದೇಶವಿದೇಶಗಳ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಅಧ್ಯಯನ ಮಾಡಿ ಸಂಪಾದಿಸಿದ ನಮ್ಮ ಜ್ಞಾನವು ಟಿಪ್ಪಣಿಗಳ ರೂಪದಲ್ಲಿ ನಮ್ಮ Laptop ನಲ್ಲಿದ್ದು ಬಸವಣ್ಣನವರು ಹೇಳುವಂತೆ “ಎಂತಯ್ಯಾ ಎನ್ನ ಪೂರ್ವಲಿಖಿತ! ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ!” (ಬೆಳಗಿನಿಂದ ಸಂಜೆಯವರೆಗೆ ಬೆರಣಿ ಆಯುವುದೇ ಆಗಿದೆ, ಒಲೆ ಹಚ್ಚಿ ಅಡುಗೆ ಮಾಡಿ ಊಟ ಮಾಡಲು ನನಗೆ ಆಗುತ್ತಿಲ್ಲವಲ್ಲಾ ದೇವರೇ!) ಎಂದು ಪರಿತಪಿಸುವಂತಾಗಿದೆ. ಮಠ ಮತ್ತು ಸಮಾಜದ ಕಾರ್ಯಗೌರವದಲ್ಲಿ ಸಾಹಿತ್ಯಶಿಶುವಿಗೆ ಹಾಲೆರೆಯಲಾಗದ ವ್ಯಥೆ ಒಂದು ಕಡೆಯಾದರೆ, ಮತ್ತೊಂದೆಡೆ ಸಮಾಜ ಶಿಶುವಿಗೆ ಹಾಲೆರೆಯುವ ಕೆಲಸ ನಮಗೆ ತೃಪ್ತಿಯನ್ನು ತಂದುಕೊಟ್ಟಿದೆ.

ಈ ವಾರ ಏನು ಬರೆಯಬೇಕೆಂಬ ಆಲೋಚನೆ ಮಾಡಲು ವ್ಯವಧಾನವಿಲ್ಲದೆ ದಣಿವಿನಿಂದ ಮೊನ್ನೆ ರಾತ್ರಿ ಗಾಢ ನಿದ್ರೆಗೆ ಜಾರಿ ಮಧ್ಯರಾತ್ರಿ 3 ಗಂಟೆಗೆ ಎಚ್ಚರವಾದಾಗ ಸುಪ್ತ ಮನಸ್ಸು ಸುಳಿವನ್ನು ನೀಡಿತು. ಅದೇನೆಂದರೆ ಕಳೆದ ವಾರದ ಅಂಕಣದ ಕೊನೆಯಲ್ಲಿ ಉಲ್ಲೇಖಿಸಿದ್ದ ಜಸ್ಟೀಸ್ ಶಿವರಾಜ ಪಾಟೀಲರ ಇಂಗ್ಲಿಷ್ ಆತ್ಮಕಥನ “Time Spent Distance Travelled" ಎಂಬ ಪುಸ್ತಕದ ಕೊನೆಯಲ್ಲಿ ಬರುವ “Ten Commandments for a Judge” (ಉತ್ತಮ ನ್ಯಾಯಾಧೀಶರಾಗಲು ಹತ್ತು ಹಿತನುಡಿಗಳು). ನ್ಯಾಯಾಧೀಶರಾದವರು ಯಾವುದೇ ಪ್ರಕರಣವನ್ನು ಕುರಿತು ತೀರ್ಪು ಕೊಡುವ ಮುನ್ನ ವಕೀಲರ ವಾದ-ವಿವಾದ ಆಲಿಸಿ ವಿವಾದಾಂಶಗಳನ್ನು Does the Plaintiff/Complainant prove that...? Does the Defendant/Respondent prove that...? What relief? ಇತ್ಯಾದಿ ಪ್ರಶ್ನೆಗಳ ರೂಪದಲ್ಲಿ ಪಟ್ಟಿ ಮಾಡಿಕೊಂಡು ದಾಖಲಿಸಿಕೊಳ್ಳುತ್ತಾರೆ. ಅವುಗಳನ್ನು ನ್ಯಾಯಾಲಯದ ಪರಿಭಾಷೆಯಲ್ಲಿ Issues ಎಂದು ಕರೆಯುತ್ತಾರೆ. ಸಾಕ್ಷ್ಯಾಧಾರಗಳ ಮೇಲೆ ಅವುಗಳನ್ನು ಒಂದೊಂದಾಗಿ ವಿಶ್ಲೇಷಣೆ ಮಾಡಿ ಬರೆದ ತೀರ್ಪಿನ ಆರಂಭದಲ್ಲಿ ಆ Issues ಗಳ ಮುಂದೆ Affirmative ಅಥವಾ Negative ಎಂದು ಬರೆಯುವುದು ಪದ್ಧತಿ.

ಅದೇ ಪದ್ಧತಿಯನ್ನು ನಾವು ಅನುಸರಿಸಿ, ಉತ್ತಮ ನ್ಯಾಯಾಧೀಶರಾಗಲು ಅವರು ನೀಡಿದ ಹತ್ತು ಹಿತನುಡಿಗಳನ್ನೇ Issues ಗಳನ್ನಾಗಿ ಮಾಡಿಕೊಂಡು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದ ಜಸ್ಟೀಸ್ ಶಿವರಾಜ ಪಾಟೀಲರ ಸ್ವಾನುಭವದಲ್ಲಿ ಇವುಗಳಿಗೆ ಪೂರಕವಾದ ಪುರಾವೆಗಳು ಏನಾದರೂ ಸಿಗುತ್ತವೆಯೇ ಎಂದು ಮಧ್ಯ ರಾತ್ರಿ ನಾಳೆಯ ಪರೀಕ್ಷೆಗೆ ವಿದ್ಯಾರ್ಥಿಗಳು ಓದುವಂತೆ ಅವರ ಆತ್ಮಕಥನ ಪುಸ್ತಕದ ಒಳಪುಟಗಳ ಮೇಲೆ ಕಣ್ಣು ಹಾಯಿಸಿದಾಗ ಅವರ ಎಲ್ಲ ಹತ್ತು ಹಿತನುಡಿಗಳೂ ನಮಗೆ Affirmative ಆಗಿಯೇ ಗೋಚರಿಸಿದವು. ಓದುತ್ತಾ ಹೋದಂತೆ ಈ ಕೆಳಕಂಡ ಪ್ರಸಂಗಗಳು ನಮ್ಮನ್ನು ಗದ್ಗದಿತಗೊಳಿಸಿದವು. 


“ಒಬ್ಬ ಒಳ್ಳೆಯ ನ್ಯಾಯಾಧೀಶನಾಗಬೇಕೆಂದರೆ, ಮೊಟ್ಟಮೊದಲು ಅವನು ಒಬ್ಬ ಒಳ್ಳೆಯ ಮನುಷ್ಯನಾಗಿರಬೇಕು.”

ಮೊದಲ ಹಿತನುಡಿಯಾದ ಇದಕ್ಕೆ ಪೂರಕವಾದ ಪ್ರಸಂಗ: ಜಸ್ಟೀಸ್ ಶಿವರಾಜ ಪಾಟೀಲರು 28ನೇ ವಯಸ್ಸಿನ ಯುವಕರಾಗಿದ್ದಾಗ ಗುಲ್ಬರ್ಗಾದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದರು. ಚಿಂಚೋಳಿ ಗ್ರಾಮದ ಹನುಮಂತಪ್ಪ ಎಂಬ ಬಡ ರೈತ ತನ್ನ ಜಮೀನಿಗೆ ಸಂಬಂಧಿಸಿದಂತೆ ಕೇಸನ್ನು ಕೊಟ್ಟು 50 ರೂ. ಫೀಜು ಕೊಟ್ಟ. ಪಾಟೀಲರು ಅವನ ಕೇಸನ್ನು ನ್ಯಾಯಾಲಯದಲ್ಲಿ ವಾದ ಮಾಡಿ ಗೆಲ್ಲಿಸಿಕೊಟ್ಟರು. 20 ವರ್ಷಗಳ ನಂತರ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದಾಗ ಆ ಬಡ ರೈತ ಅವರನ್ನು ನೋಡಲು ಬೆಂಗಳೂರಿನಲ್ಲಿರುವ ಅವರ ಮನೆಯನ್ನು ಹುಡುಕಿಕೊಂಡು ಬಂದ. ಸಾಹೇಬರು ಈಗ ಜಡ್ಜ್ ಆಗಿರುವುದರಿಂದ ನನ್ನನ್ನು ಗುರುತಿಸುತ್ತಾರೋ ಇಲ್ಲವೋ, ಮನೆಯ ಮುಂದೆ ಕಾವಲಿದ್ದ ಪೋಲಿಸರು ಮನೆಯೊಳಗೆ ಬಿಡುತ್ತಾರೋ ಇಲ್ಲವೋ

ಎಂದು ಮನೆಯ ಮುಂದೆ ರಸ್ತೆಯಲ್ಲಿ ಅತ್ತಿಂದಿತ್ತ ತಿರುಗಾಡುತ್ತಿದ್ದ. ಕಿಟಕಿಯ ಬಳಿ ಕುಳಿತು ಓದುತ್ತಿದ್ದ ಜಸ್ಟೀಸ್ ಪಾಟೀಲರಿಗೆ ಹನುಮಂತಪ್ಪ ಕಾಣಿಸಿದ. ಅಲ್ಲಿಂದಲೇ “ಹನುಮಂತಪ್ಪ ಒಳಗೆ ಬನ್ನಿ” ಎಂದು ಕೂಗಿ ಕರೆದರು. ಮನೆಯೊಳಗೆ ಕರೆಸಿ ವಿಚಾರವೇನೆಂದು ಕೇಳಿದರು. ಅದಕ್ಕೆ ಆ ರೈತ ಮುಗ್ಧತೆಯಿಂದ “ಸಾಹೇಬರೇ ನಾನು ನಿಮಗೆ ಕೇಸು ಕೊಟ್ಟಾಗ ನೀವು ವಕೀಲರಾಗಿದ್ದಿರಿ. ಈಗ ಜಡ್ಜ್ ಆದ ಮೇಲೆ ಹೇಗೆ ಕಾಣಿಸುತ್ತೀರಿ ಎಂದು ನೋಡುವ ಆಸೆಯಿಂದ ಬಂದೆ. ನೀವು ವಕೀಲರಾಗಿದ್ದಾಗ ಹೇಗೆ ಇದ್ದಿರೋ, ಈಗಲೂ ಹಾಗೆಯೇ ಇದ್ದೀರಿ” ಎಂದು ಭಾವುಕತೆಯಿಂದ ಹೇಳಿದ. ಅವನಿಗೆ ದೂರದ ಗುಲ್ಬರ್ಗಾದಿಂದ ಬಂದು ಅವರನ್ನು ಕಾಣಲು ಬೇರಾವ ಉದ್ದೇಶವೂ ಇರಲಿಲ್ಲ. ಅದನ್ನು ಮನಗಂಡ ಜಸ್ಟೀಸ್ ಪಾಟೀಲರು “ಸ್ಥಾನಮಾನಗಳು ಮತ್ತು ಆಸ್ತಿಪಾಸ್ತಿಗಳು ಬದಲಾಗಬಹುದು. ಆದರೆ ಮಾನವೀಯ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳು ಎಂದೆಂದಿಗೂ ಬದಲಾಗದಂತಿರಬೇಕು” ಎಂದು ತಮ್ಮ ಆತ್ಮಕಥನದಲ್ಲಿ ಉದ್ಗರಿಸುತ್ತಾರೆ.

ಇದರಂತೆಯೇ ಇನ್ನೊಂದು ಮನಮಿಡಿಯುವ ಪ್ರಸಂಗ.

ಜಸ್ಟೀಸ್ ಶಿವರಾಜ ಪಾಟೀಲರು ಗುಲ್ಬರ್ಗಾದಲ್ಲಿ ವಕೀಲರಾಗಿದ್ದಾಗ ಹಿರಿಯ ವಯಸ್ಸಿನ ವಿಧವೆಯೊಬ್ಬಳು ಅವರ ಗೃಹಕಛೇರಿಗೆ ಬಂದಳು. “ಮಾಸಿದ, ಹರಿದ ಸೀರೆ ಆಕೆಯ ಬಡತನವನ್ನು ಹೇಳುತ್ತಿತ್ತು”. ಆಕೆಯ ಗಂಡ ಮರಣ ಹೊಂದಿದ ಮೇಲೆ ಅವಳಿಗೆ ಬರಬೇಕಾದ ಆಸ್ತಿಯನ್ನು ಗಂಡನ ಅಣ್ಣ ಕೊಟ್ಟಿರಲಿಲ್ಲ. ಅವಳಿಗೆ ಅದನ್ನು ಬಿಟ್ಟರೆ ಜೀವನ ನಡೆಸಲು ಬೇರೆ ಯಾವ ಆಸ್ತಿಯೂ ಇರಲಿಲ್ಲ. ತನಗೆ ನ್ಯಾಯ ಒದಗಿಸಿಕೊಡಬೇಕೆಂದು ದೈನ್ಯದಿಂದ ಬೇಡಿಕೊಂಡಳು. ಪಾಟೀಲರು ಆಕೆಯ ಬಡತನಕ್ಕೆ ಮರುಗಿ ಯಾವ ಫೀಸನ್ನೂ ತೆಗೆದುಕೊಳ್ಳದೆ ಕೇಸು ನಡೆಸುವುದಾಗಿ ಸಮಾಧಾನಪಡಿಸಿದರು. ಆಕೆ ಆಫೀಸಿನಿಂದ ಹೊರ ಹೋಗುವಾಗ Suit for Partition and Separate Possession ದಾವೆಯನ್ನು ಹೂಡಲು ನ್ಯಾಯಾಲಯಕ್ಕೆ 15 ರೂ. ಶುಲ್ಕ ತುಂಬಬೇಕಾಗುತ್ತದೆ ಎಂದು ಕ್ಲರ್ಕ್ ಆಕೆಗೆ ಹೇಳಿದ.

ಮರುದಿನ ಆಕೆ ತನ್ನ ಗಂಡ ಕೊಟ್ಟಿದ್ದ ಚಿನ್ನದ ಒಡವೆಯನ್ನು ಅಡವಿಟ್ಟು ಶುಲ್ಕ ತುಂಬಿದ ವಿಚಾರ ತಿಳಿದು ಶಿವರಾಜ ಪಾಟೀಲರಿಗೆ ತುಂಬಾ ದುಃಖವಾಯಿತು. ಆಕೆ ಚಿನ್ನ ಅಡವಿಟ್ಟಿದ್ದ ಅಂಗಡಿಯ ಮಾಲೀಕರು ಪಾಟೀಲರಿಗೆ ಪರಿಚಿತರಿದ್ದರು. ಪಾಟೀಲರೇ ಹಣವನ್ನು ಕೊಟ್ಟು ಆಕೆಗೆ ಚಿನ್ನದ ಸರ ಬಿಡಿಸಿಕೊಟ್ಟರು. ಪ್ರತಿವಾದಿಯಾದ ಗಂಡನ ಅಣ್ಣ ಕೋರ್ಟಿಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ದಾವೆಯ ಜಮೀನು ಪಿತ್ರಾರ್ಜಿತ ಆಸ್ತಿಯೆಂದು ಒಪ್ಪಿಕೊಂಡಿದ್ದರಿಂದ ದಿ. ತಮ್ಮನ ಪತ್ನಿಯಾದ ಆಕೆಗೂ ಅದರಲ್ಲಿ ಪಾಲು ಇದೆಯೆಂದು ಬಲವಾದ ಸಾಕ್ಷಿಯಾಗಿ ಆಕೆ ಗೆದ್ದಳು. ತೀರ್ಪು ಪ್ರಕಟವಾದ ದಿನ ಆಕೆ ಸಂತೋಷದಿಂದ ಕಣ್ಣೀರಿಡುತ್ತಾ ಕೇಸನ್ನು ಗೆದ್ದುಕೊಟ್ಟ ಪಾಟೀಲರ ಕಾಲಿಗೆ ನಮಸ್ಕರಿಸಲು ಹೋದಳು. “ಬೇಡ ತಾಯಿ, ನನ್ನ ತಾಯಿ ಬದುಕಿದ್ದರೆ ಆಕೆಗೂ ನಿನ್ನಷ್ಟೇ ವಯಸ್ಸಾಗಿರುತ್ತಿತ್ತು. ನೀನು ನನ್ನ ಕಾಲಿಗೆ ನಮಸ್ಕರಿಸಬಾರದು” ಎಂದು ಪಾಟೀಲರು ತಡೆಯುತ್ತಾರೆ. ಆಗ ಆಕೆ “ನಿಮಗೂ, ನಿಮ್ಮ ಮನೆಯವರಿಗೂ, ಮಕ್ಕಳಿಗೂ ದೇವರು ಒಳ್ಳೆಯದನ್ನು ಮಾಡಲಿ”. ಎಂದು ಹಾರೈಸುತ್ತಾಳೆ. ಈ ಘಟನೆಯನ್ನು ನ್ಯಾ. ಪಾಟೀಲರು ತಮ್ಮ ಆತ್ಮಕಥನದಲ್ಲಿ ನೆನಪಿಸಿಕೊಂಡು “ಯಾವಾಗಲೂ ಹಣದ ಬಲಕ್ಕಿಂತ ಹಾರೈಕೆ ಹೆಚ್ಚು ಶಕ್ತಿಶಾಲಿ. ಎಷ್ಟೇ ದೊಡ್ಡ ಕೇಸುಗಳನ್ನು ಗೆದ್ದರೂ ಆ ತಾಯಿಯಂತಹ ಬಡ, ಅಸಹಾಯಕರ ಪರವಾಗಿ ಗೆಲ್ಲುವ ಕೇಸುಗಳು ಕೊಡುವ ಸಂತೃಪ್ತಿಗೆ ಯಾವುದೂ ಸಮನಾಗಲಾರದು” ಎಂದು ಉದ್ಗರಿಸುತ್ತಾರೆ.

ಬಾಲ್ಯದಲ್ಲಿ ಎತ್ತಿನ ಬಂಡಿಯಲ್ಲಿ ಕುಳಿತು ರಾತ್ರಿಯೆಲ್ಲಾ ಪ್ರಯಾಣ ಮಾಡಿ ಸಕಾಲದಲ್ಲಿ ಶಾಲೆಗೆ ಹೋಗಿ ಹಂತ ಹಂತವಾಗಿ ನ್ಯಾಯಾಲಯಗಳ ಮೆಟ್ಟಿಲೇರಿ ಸುಪ್ರೀಂ ಕೋರ್ಟಿನ ನ್ಯಾಯಪೀಠದಲ್ಲಿ ಕುಳಿತು ನಿವೃತ್ತರಾದ ಜಸ್ಟೀಸ್ ಶಿವರಾಜ ಪಾಟೀಲರ ಜೀವನವು ಸಂತೃಪ್ತಿಯಿಂದ ಕೂಡಿದ್ದರೂ ಹೃದಯದ ಆಳದಲ್ಲಿ ಯಾವ ವೈದ್ಯರಿಂದಲೂ ನಿವಾರಿಸಲಾಗದ ಒಂದು ನೋವು ಇದೆ. ತಮ್ಮ 2 ವರ್ಷಗಳ ಎಳವೆಯಲ್ಲಿಯೇ ತಾಯಿ ಮಲ್ಲಮ್ಮ ತೀರಿಕೊಂಡಿದ್ದು ಆಕೆಯ ಮುಖವನ್ನು ನೋಡಲು ಅವರ ಹೃದಯ ಈ ಇಳಿ ವಯಸ್ಸಿನಲ್ಲಿಯೂ ಹಂಬಲಿಸುತ್ತಿದೆ. ಭಾವಚಿತ್ರವೂ ಲಭ್ಯವಿಲ್ಲದ ಕಾರಣ ಅವರ ಹೃದಯದ ನೋವು ಇನ್ನೂ ನೂರ್ಮಡಿಯಾಗಿದೆ! “ನಾನು ತಾಯಿಯ ಮಡಿಲಲ್ಲಿ ಆಟವಾಡುತ್ತಾ ಬೆಳೆದ ಕೂಸಲ್ಲ. ಅಮ್ಮನ ಮುಖ ಅಸ್ಪಷ್ಟವಾಗಿಯೂ ನೆನಪಿಲ್ಲ. ತಾಯಿಯ ನೆನಪಾದಾಗಲೆಲ್ಲಾ ಈಗಲೂ ನನ್ನ ಮನಸ್ಸು ಭಾರವಾಗುತ್ತದೆ” ಎಂಬ ಕೊರಗು ಅವರ ಹೃದಯದ ಆಳದಲ್ಲಿದೆ! “At the age of 84, I still feel the pain of my mothers loss. The heart has its own mysteries and mine still bears the weight of childhood sorrow!" ಎಂದು ನ್ಯಾ. ಶಿವರಾಜ ಪಾಟೀಲರು ಅವರ ಇಂಗ್ಲೀಷ್ ಆತ್ಮಕಥನದಲ್ಲಿ ಭಾರವಾದ ಹೃದಯದಿಂದ ಬರೆದಿದ್ದಾರೆ; ಕಾಣದ ತಾಯ ಪ್ರೀತಿಯ ಮಡಿಲಿಗೆ ಅವರ ಮನ ಹಂಬಲಿಸುತ್ತಿದೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.08-02-2024.