ಕೃಷಿಕಾಯಕ, ನೇಗಿಲಯೋಗಿ, ಸಂಚಾರ ಮೂರ್ತಿ : ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳವರು

  •  
  •  
  •  
  •  
  •    Views  

ಚರಂತಮುನಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರಾಗಿದ್ದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು :

---------------------------

ಸಿರಿಗೆರೆ ಗ್ರಾಮದ ರೈತಾಪಿ ಕುಟುಂಬದ ಶರಣ ಶಿವಲಿಂಗಯ್ಯ ಶರಣೆ ನೀಲಮ್ಮ ದಂಪತಿಗಳ ಪುಣ್ಯ ಗರ್ಭದಲ್ಲಿ 1922 ಜೂನ್ 2 ನೇ ತಾರೀಖಿನಂದು ಜನಿಸಿದ್ದ ರೇವಣಸಿದ್ಧಯ್ಯನವರಲ್ಲಿದ್ದ ಚುರುಕುತನ, ಧಾರ್ಮಿಕ ಶ್ರದ್ದೆ, ಕಾಯಕ ನಿಷ್ಠೆ, ಸಾಮಾಜಿಕ ಚಿಂತನೆಗಳನ್ನು ನೋಡಿದ ತರಳಬಾಳು ಮಠದ 19 ನೇ ಜಗದ್ಗುರುಗಳಾಗಿದ್ದ ಪೂಜ್ಯ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳು ಇವರನ್ನು ಉನ್ನತ ವ್ಯಾಸಂಗ ಮಾಡಿಸಲು ಕಾಶಿಗೆ ಕಳಿಸುತ್ತಾರೆ. ಆದರೆ ನಂತರದ ದಿನಗಳಲ್ಲಿ ಕುತಂತ್ರಿಗಳ ಮೋಸದಿಂದ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳು ಅಸಹಜವಾಗಿ ಸಾವನ್ನಪ್ಪಿದ ಮೇಲೆ ಶ್ರೀ ಯಲಹಂಕ ಶಾಖಾ ಮಠದಲ್ಲಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನು ಅನಿರೀಕ್ಷಿತ ಘಟನೆಯಿಂದಾಗಿ ಸಿರಿಗೆರೆ ಮಠಕ್ಕೆ  ಭಕ್ತರ ಆಶಯದಂತೆ 20 ನೇ ಜಗದ್ಗುರುಗಳಾನ್ನಾಗಿ ನೇಮಕ ಮಾಡಿದ ನಂತರ ಮಠದಲ್ಲಿದ್ದ ಬೆಟ್ಟದಂತಹ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಿ ಧೈರ್ಯವಾಗಿ ಮುನ್ನಡೆಯಲು ತಮ್ಮ ಜೊತೆಗೆ ಮತ್ತೊಬ್ಬ ಸಮಾಜ ಜೀವಿಗಾಗಿ ಹುಡುಕುತ್ತಿರುವಾಗ ಶ್ರೀ ಪೂಜ್ಯರ ಕೃಪಾದೃಷ್ಠಿಗೆ ಕಂಡ ಕಾಶಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೀ ರೇವಣಸಿದ್ದಯ್ಯನವರನ್ನು ಸಿರಿಗೆರೆ ಮಠಕ್ಕೆ ಕರೆಸಿಕೊಂಡು 1945 ನೆಯ ಜೂನ್ 23 ರಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿಧಾನದಿಂದ ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರನ್ನಾಗಿ ನೇಮಕ ಮಾಡಿದಂದಿನಿಂದ ಸುದೀರ್ಘ ಕಾಲ ಕಾಯ, ವಾಚ, ಮನಸಾ ತರಳಬಾಳು ಮಠದ ಶ್ರೇಯೋಭಿವೃದ್ಧಿಗೆ ಶ್ರೀಗಳು ತಮ್ಮನ್ನು  ತಾವು ಅರ್ಪಿಸಿಕೊಂಡಿದ್ದರು. 

ತರಳಬಾಳು ಜಗದ್ಗುರು ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು  ಕಂಡ ಕನಸುಗಳನ್ನು ನನಸು ಮಾಡಲು ಎಲೆ ಮರೆಯ ಕಾಯಿಯಂತೆ, ಬೃಹನ್ಮಠದ ಜೀವನಾಡಿಯಂತೆ ಪ್ರಚಾರ ಬಯಸದೆ, ಸರ್ವಸಂಗ ಪರಿತ್ಯಾಗಿಗಳಾಗಿ, ಕಷ್ಟ ನಿಷ್ಟುರಗಳಿಗೆ, ಸ್ತುತಿ ನಿಂದನೆಗಳಿಗೆ ಎದೆಗುಂದದೆ, ಕೃಷಿ ಕಾಯಕವೇ ಪೂಜೆ ಎಂದು ನಂಬಿ ಶ್ರೀಮಠದ  & ಶಾಖಾ ಮಠಗಳ ಹೆಸರಿನಲ್ಲಿದ್ದ  ಜಮೀನುಗಳನ್ನೆಲ್ಲ ಹದ್ದು ಬಸ್ತು ಮಾಡಿಸಿ ತಮ್ಮನ್ನು ಸಂಪೂರ್ಣ ಕೃಷಿ ಕಾಯಕಕ್ಕೆ ಅಳವಡಿಸಿಕೊಂಡು ತಾವೇ ಸ್ವತಃ ಉಳುಮೆ, ಬಿತ್ತನೆ ಮಾಡಿ, ಮಾಡಿಸಿ ಅದರಲ್ಲಿ ತೆಂಗು, ಬಾಳೆ, ಅಡಕೆ, ಹಲಸು & ಮಾವು ಇತ್ಯಾದಿ ಗಿಡ-ಮರ-ಪೈರುಗಳನ್ನು ಬೆಳಸಿ ಇಡೀ ಜಮೀನುಗಳಲ್ಲಿ  ಹಚ್ಚ ಹಸಿರು ಕಂಗೊಳಿಸುವಂತೆ ಮಾಡಿದ್ದಲ್ಲದೆ, ಶ್ರೀ ಮಠಕ್ಕೆ  ಲಕ್ಷಾಂತರ ರೂಪಾಯಿಗಳ ಶಾಶ್ವತ ಆಧಾಯ ಬರುವಂತೆ ಮಾಡಿದ ಶ್ರೀಗಳು ಪ್ರಗತಿ ಪರ ಕೃಷಿಕರಾಗಿ, ಕೃಷಿ ಋಷಿ, ಕೃಷಿ ತಪಸ್ವಿ, ಕಾಯಕಯೋಗಿ, ಕರ್ಮಯೋಗಿ ಮುಂತಾದ ಕೃಷಿ ಬಿರುದುಗಳಿಗೆ ಪಾತ್ರರಾಗಿದ್ದಲ್ಲದೆ, ಪೂಜ್ಯರು ಕೃಷಿ ಸಂತರಾಗಿ, ಕೃಷಿ ತಜ್ಞರಾಗಿ ಕೃಷಿ ಜ್ಞಾನವನ್ನು ಧಾರೆಯರೆದು ಅವರ ಸತ್ಯ ಶುದ್ಧ ಕಾಯಕದಿಂದ ಮಠದ ಅಭಿವೃದ್ಧಿಗೆ ಕೈ ಜೋಡಿಸಿದವರು ಲಿಂಗೈಕ್ಯ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು.

 ಕೃಷಿ ಕೃತ್ಯ ಕಾಯಕದಿಂದಾಡೇನು
ತನು ಮನ ಬಳಸಿ ತಂದು ದಾಸೋಹ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ
ಅದೆಂತೆನೆ ಆತನ ತನು ಶುದ್ಧ
ಆತನ ಮನ ಶುದ್ಧ ಆತನ ನಡೆ ಶುದ್ಧ ನುಡಿಯೆಲ್ಲಾ ಪಾವನವು
ಆತನಿಗೆ ಉಪದೇಶವ ಮಾಡಿದಾತನೆ ಪರಮ ಸದ್ಗುರು ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು

ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ

ಇಂಥಪ್ಪವರ ನಾನು ನೆರೆ ನಂಬಿ ನಮೋನಮಃ ಎಂಬೆನಯ್ಯ ಕೂಡಲಸಂಗಮದೇವ ||

ಎಂಬ ಬಸವಣ್ಣ ನವರ ಈ ವಚನಕ್ಕೆ ಸಾಕ್ಷಿಯಾಗಿ "ಕಾಯಕದಲ್ಲಿ ನಿರತನಾದೊಡೆ ಗುರು ಲಿಂಗ ಜಂಗಮವನು ಮರೆಯಬೇಕು" ಎಂಬ ವಚನಕಾರರ ಆಶಯವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮಠದ ಅಭಿವೃದ್ಧಿಗೆ ಹೆಗಲೆಣೆಯಾಗಿ ದುಡಿದ ಏಕ ನಿಷ್ಠೆ  ಶ್ರೀಗಳು ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು.

ಶ್ರೀಗಳು ಶ್ರೀ ಮಠದಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಠದ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅಷ್ಟಾಗಿ ಉತ್ತಮ ಸ್ಥಿತಿಯಲ್ಲಿರದೆ ದುಗ್ಗಾಣಿ ಮಠವಾಗಿತ್ತು. ಅಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಾಗಿ ಇದ್ದ ಶ್ರೀ ಮಠದ ಭಕ್ತರನ್ನು ಕಾಣಲು  ಹಳ್ಳಿ-ಹಳ್ಳಿ ಗಳಿಗೆ, ಮನೆ -ಮನೆಗಳಿಗೆ ವಾಹನ ಸೌಕರ್ಯಗಳಿಲ್ಲದಿದ್ದರೂ ಎತ್ತು ಬಂಡಿ ಕಟ್ಟಿಕೊಂಡು ಹೋಗಿ ಅಲ್ಲಿಯೇ ದೇವಸ್ಥಾನಗಳಲ್ಲಿ 4-5 ದಿನಗಳವರೆಗೆ ಬಿಡಾರ ಹೂಡಿ ಶ್ರೀ ಮಠಕ್ಕೆ ಬೇಕಾಗುವ " ದವಸ - ದಾನ್ಯಗಳನ್ನು, ಹಣವನ್ನು, ಕಾಣಿಕೆ" ಗಳನ್ನು ಭಕ್ತರಿಂದ ಸಂಗ್ರಹಿಸಿಕೊಂಡು ಬರುತ್ತಿದ್ದ ಶ್ರೀಗಳು "ಸಂಚಾರ ಮೂರ್ತಿ" ಯೇ ಆಗಿದ್ದರು. ಇದರ ಜೊತೆಗೆ ಭಕ್ತರು ಏರ್ಪಡಿಸುತ್ತಿದ್ದ   ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಕ್ತರಿಗೆ ಇಷ್ಟಲಿಂಗ ಪೂಜೆ,ಸತ್ಯ-ಶುದ್ಧ -ಕಾಯಕದ ಮಹತ್ವದ ಬಗ್ಗೆ ತಿಳಿಹೇಳುವುದರೊಂದಿಗೆ ಸೋಮಾರಿತನದಿಂದ, ಮೂಢನಂಬಿಕೆಯಿಂದ, ದುಶ್ಚಟ ಗಳಿಂದ ದೂರವಿರಲು ಉಪದೇಶಿಸುತ್ತಿದ್ದರು. ಶ್ರೀಗಳವರ ಸತ್ಯ, ಶುದ್ಧ, ಕಾಯಕದಿಂದ ಸಿರಿಗೆರೆ ಮಠ ಕೃಷಿಮಠ, ಸಿರಿವಂತ ಮಠವಾಗಲು ಜಗದ್ಗುರುಗಳವರೊಂದಿಗೆ ಹಗಲು, ಇರುಳುಗಳನ್ನು ಒಂದು ಮಾಡಿ ಶ್ರೀ ಮಠದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ದುಡಿದು ಆತ್ಮಕಲ್ಯಾಣ ಮತ್ತು ಸಮಾಜ ಕಲ್ಯಾಣ ಸಾಧಿಸಿದ ಸಾಧಕರು. ಹೀಗೆ ಸಮಾಜದ ಸಮಷ್ಟಿಯ ಹಿತಕ್ಕಾಗಿ ದುಡಿದು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದು ಅಮರರೆನಿಸಿದ ಮೆದು ಮಾತಿನ, ಮೃದು ಹೃದಯದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ದಿನಾಂಕ :15-02-2024 ರಂದು ನಡೆಯುವ 16 ನೇ ಶ್ರದ್ಧಾಂಜಲಿಯ ಪ್ರಯುಕ್ತ ಪೂಜ್ಯ ಶ್ರೀಗಳ ವರನ್ನು ಸ್ಮರಣೆಮಾಡಿಕೊಳ್ಳುವುದರೊಂದಿಗೆ ಭಕ್ತಿ ಪೂರ್ವಕ ನಮನಗಳು.

ಕೊಂಡಜ್ಜಿ ಬಣಕಾರ್ ಶಿವಕುಮಾರ್