ಶಿವ ಸಹಕಾರ ಬ್ಯಾಂಕ್ ಗಳಿಂದ ಉತ್ತಮ ವ್ಯವಹಾರ: ತರಳಬಾಳು ಶ್ರೀಜಗದ್ಗುರುಗಳವರ ಶ್ಲಾಘನೆ
ಶಿರಾಳಕೊಪ್ಪ ದಲ್ಲಿ ನೂತನ ಶಿವ ಸಹಕಾರ ಬ್ಯಾಂಕ್ ಶಾಖೆ ಉದ್ಘಾಟನೆ.
------------------------------------
ಶಿರಾಳಕೊಪ್ಪ: ಶಿವ ಸಹಕಾರ ಬ್ಯಾಂಕ್ಗಳು ಉತ್ತಮವಾಗಿ ವ್ಯವಹಾರ ನಡೆಸುತಿದ್ದು, ಉತ್ತಮ ಲಾಭಾಂಶದೊಂದಿಗೆ ಇತರ ಬ್ಯಾಂಕ್ಗಳಿಗಿಂತ ಉತ್ತಮ ಎನ್.ಪಿ.ಎ ಹೊಂದಿ ಸುಸ್ಥಿತಿಯಲ್ಲಿದೆ ಎಂದು ಹೇಳಲು ಸಂತಸವಾಗುತ್ತದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕಾರಿಪುರ ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ನೂತನ ಶಿವ ಸಹಕಾರ ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳು ಉತ್ತಮವಾಗಿ ಮುನ್ನಡೆಯಬೇಕು. ಹೀಗಾಗಲು ಬಸವಣ್ಣನವರು ಹೇಳಿದಂತೆ ಶಿವಭಕ್ತರಿರಬೇಕು. ಶಿವಭಕ್ತರು ಎಂದೂ ಸುಳ್ಳನ್ನು ಹೇಳುವದಿಲ್ಲ ಅವರಿಗೆ ಸಾಲ ಕೊಡುವುದರಿಂದ ಬ್ಯಾಂಕು ಒಳ್ಳೆಯ ಸ್ಥಿತಿಯಲ್ಲಿ ಇರಲು ಸಾಧ್ಯ ಎಂದರು.
ಮುಖ್ಯ ಅತಿಥಿ, ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿರಾಳಕೊಪ್ಪ ಪುರಸಭೆಯಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಲ್ಲಿ ಏನೋ ಕೊರತೆ ಇದೆಎಂದು ಅನಿಸುತ್ತಿತ್ತು. ಆದರೆ, ಇಂದು ಜಗದ್ಗುರುಗಳವರು ಇಲ್ಲಿ ಶಿವ ಸಹಕಾರ ಬ್ಯಾಂಕ್ ಶಾಖೆ ಪ್ರಾರಂಭಿಸಿ, ಆ ಕೊರತೆಯನ್ನು ಹೋಗಲಾಡಿಸಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಎನ್.ಮಹಾಲಿಂಗಪ್ಪ ಮಾತನಾಡಿದರು. ಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಗಂಗಾಧರಪ್ಪ ಹಾಗೂ ನಿರ್ದೇಶಕ ಪರಮೇಶ್ವರಪ್ಪ ಅವರು ಬ್ಯಾಂಕು ಬೆಳದು ಬಂದ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ: ಚಂದ್ರಕುಮಾರ್, ಈಶ್ವರಪ್ಪ ಗೌಡ, ಪ್ರಧಾನ ವ್ಯವಸ್ಥಾಪಕ ಬಸವರಾಜಪ್ಪ ಇದ್ದರು. ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.