ಧರ್ಮದೊಂದಿಗೆ ಕಾನೂನು ಕೈಜೋಡಿಸಿದಾಗ!

  •  
  •  
  •  
  •  
  •    Views  

ಬ್ರಹ್ಮಾಂಡದಲ್ಲಿ ಭೂಮಿಯನ್ನು ಬಿಟ್ಟರೆ ಬೇರಾವ ಗ್ರಹನಕ್ಷತ್ರಗಳಲ್ಲಿಯೂ ಜೀವರಾಶಿ ಇರುವುದು ಕಂಡು ಬಂದಿಲ್ಲ. ಭೂಮಿಯಿಂದ ಅಲ್ಲಿಗೆ ಹೋಗಿ ಮನುಷ್ಯ ವಾಸಿಸಲು ಸಾಧ್ಯವೇ ಎಂದು ಕಂಡುಹಿಡಿಯಲು ವಿಜ್ಞಾನಿಗಳ ಸತತ ಪ್ರಯತ್ನ ಸಾಗಿದೆ. ಸಹಸ್ರಾರು “ಜ್ಯೋತಿರ್ವರ್ಷ”ಗಳ (Light Years) ದೂರದಲ್ಲಿರುವ ಗ್ರಹ ನಕ್ಷತ್ರಗಳತ್ತ ಬಾಹ್ಯಾಕಾಶ ವಿಜ್ಞಾನಿಗಳು ಗಗನಯಾತ್ರೆ ನಡೆಸುತ್ತಿದ್ದಾರೆ. ಆದರೆ ನಮ್ಮ ಕಣ್ಣಿಗೆ ರಾತ್ರಿ ವೇಳೆ ಕಾಣಿಸುವ ಸಾವಿರಾರು ಗ್ರಹ ನಕ್ಷತ್ರಗಳು ಈಗ ಇವೆಯೇ ಎಂಬುದೇ ಒಂದು ಯಕ್ಷ ಪ್ರಶ್ನೆ! ಏಕೆಂದರೆ ಯಾವುದೇ ವಸ್ತು ಕಣ್ಣಿಗೆ ಗೋಚರಿಸಬೇಕೆಂದರೆ ಬೆಳಕು ಬೇಕೇ ಬೇಕು. ಬೆಳಕಿನ ವೇಗ ಒಂದು ಸೆಕೆಂಡಿಗೆ 3 ಲಕ್ಷ ಕಿ.ಮೀ. ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವೇಗದಲ್ಲಿ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ ಸುಮಾರು ಹತ್ತು ಟ್ರಿಲಿಯನ್ ಕಿ.ಮೀ. ಈ ದೂರವನ್ನು ಒಂದು “ಜ್ಯೋತಿರ್ವರ್ಷ” (Light Year) ಎಂದು ಕರೆಯುತ್ತಾರೆ. ಇದು ಖಗೋಳ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿರುವ ಗ್ರಹ ನಕ್ಷತ್ರಗಳ ದೂರವನ್ನು ಅಳೆಯಲು ಬಳಸುವ ಮಾನದಂಡ. ಈ ಮಾನದಂಡವನ್ನು ಅನುಸರಿಸಿ ಹೇಳುವುದಾದರೆ ಆಗಸದಲ್ಲಿರುವ ಗ್ರಹನಕ್ಷತ್ರಗಳ ಬೆಳಕು ಭೂಮಿಗೆ ಬಂದು ತಲುಪುವ ವೇಳೆಗೆ ಸಹಸ್ರಾರು ವರ್ಷಗಳೇ ಆಗುವುದರಿಂದ ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಲಾಗದ ಮನುಷ್ಯನ ಕಣ್ಣುಗಳಿಗೆ ಗೋಚರಿಸುವ ಗ್ರಹನಕ್ಷತ್ರಗಳು ಈಗಿನವುಗಳಲ್ಲ. ಎಷ್ಟೋ ಸಹಸ್ರಾರು ವರ್ಷಗಳ ಹಿಂದಿನವು. ಆದಕಾರಣ ಅವು ಈಗ ಇವೆಯೆಂದೇ ನಂಬಲು ಸಾಧ್ಯವಿಲ್ಲ. ಇದೊಂದು ರೀತಿಯಲ್ಲಿ “ಮಾಯಾಪ್ರಪಂಚ”! ಆದಿ ಶಂಕರರು ಪ್ರತಿಪಾದಿಸುವ “ಬ್ರಹ್ಮ ಸತ್ಯಂ, ಜಗನ್ಮಿಥ್ಯಾ” ಎಂಬ ಮಾಯಾ ಸಿದ್ಧಾಂತಕ್ಕೂ ಮತ್ತು “ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ; ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಾ” ಎಂದು ಉದ್ಗರಿಸುವ ಬಸವಣ್ಣನವರ ವಿಚಾರಧಾರೆಗೂ ವಿಜ್ಞಾನಿಗಳ ಈ ಶೋಧನೆ ಹತ್ತಿರವಾಗಿದೆ.

ಬಾಹ್ಯಾಕಾಶದಲ್ಲಿ “ಜೀವತಂತು” ಇದೆಯೇ ಎಂಬ ಶೋಧನೆಯಲ್ಲಿ ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದರೆ ಈ ಭೂಮಿಯ ಮೇಲಿರುವ ಅಜ್ಞಾನಿಗಳು ನಿರಂತರವಾಗಿ “ಜೀವಹತ್ಯೆ” ಮಾಡುತ್ತಲೇ ಬಂದಿದ್ದಾರೆ. ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಧರ್ಮ ಮತ್ತು ದೇವರ ಹೆಸರಿನಲ್ಲಿ ಹಿಂಸೆ ಮತ್ತು ರಕ್ತಪಾತ ನಡೆಯದ ದೇಶವೇ ಜಗತ್ತಿನಲ್ಲಿಲ್ಲ! ಧರ್ಮಗಳೆಂಬುವು ಜನರ ಕೈಗಳಲ್ಲಿ ಮಾನವೀಯ ಭಾವನೆಯ ಪರಿಮಳ ಬೀರುವ ಸುಮಧುರ ಹೂಗಳಾಗಬೇಕಾಗಿತ್ತು. ಆದರೆ ಅವು ಇಂದು ಅನ್ಯ ಧರ್ಮೀಯರನ್ನು ಮತ್ತು ಅನ್ಯ ಜೀವಿಗಳನ್ನು ಕೊಲ್ಲುವ ಪ್ರಾಣಾಂತಿಕ ಆಯುಧಗಳಾಗಿ ಬಿಟ್ಟಿವೆ! ವಿಶ್ವಶಾಂತಿಗೆ ಅತಿ ದೊಡ್ಡ ಕಂಟಕವೆಂದರೆ ಮನುಷ್ಯ! ಆಧುನಿಕ ತಂತ್ರಜ್ಞಾನವು ಗಗನವನ್ನು ಭೇದಿಸಲು ಶಕ್ತವಾಗಿದೆಯೇ ಹೊರತು ಮಾನವನ ಹೃದಯವನ್ನು ತಟ್ಟಲು ಅಸಮರ್ಥವಾಗಿದೆ! 

ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕಾ, ಪೂರ್ವಮೀಮಾಂಸಾ ಮತ್ತು ಉತ್ತರ ಮೀಮಾಂಸಾ (ವೇದಾಂತ) ಎಂಬ ಭಾರತೀಯ ಷಡ್ದರ್ಶನಗಳ ಬೆನ್ನೆಲುಬಾದ ವೇದದಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ: ಒಂದು ಕರ್ಮಕಾಂಡ ಮತ್ತೊಂದು ಜ್ಞಾನ ಕಾಂಡ. ಕರ್ಮಕಾಂಡವು ಯಜ್ಞ ಯಾಗಾದಿಗಳನ್ನು ವಿಧಿಸಿದರೆ ಜ್ಞಾನಕಾಂಡದ ಭಾಗವಾದ ಉಪನಿಷತ್ತುಗಳು ಆತ್ಮಜ್ಞಾನವನ್ನು ಬೋಧಿಸುತ್ತವೆ. ವೇದದ ಕರ್ಮಕಾಂಡವನ್ನೇ ಪ್ರಧಾನವಾಗಿ ಆಧರಿಸಿದ ಪೂರ್ವಮೀಮಾಂಸಾ ದರ್ಶನವು “ಯಾಗಾದಿರೇವ ಧರ್ಮಃ” ಅಂದರೆ ಯಜ್ಞ ಯಾಗಾದಿಗಳನ್ನು ಮಾಡುವುದೇ ಧರ್ಮ ಎಂದು ಬೋಧಿಸುತ್ತದೆ. ಮಕ್ಕಳನ್ನು ಬಯಸುವವನು “ಪುತ್ರಕಾಮೇಷ್ಠಿ” ಯಾಗವನ್ನು ಮಾಡಬೇಕು. “ಜ್ಯೋತಿಷ್ಟೋಮೇನ ಸ್ವರ್ಗಕಾಮೋ ಯಜೇತ” ಅಂದರೆ ಸ್ವರ್ಗವನ್ನು ಬಯಸುವವನು “ಜ್ಯೋತಿಷ್ಟೋಮ” ಎಂಬ ಯಜ್ಞ ಮಾಡಬೇಕು. ಅಂತಹ ಯಜ್ಞ ಯಾಗಾದಿಗಳಲ್ಲಿ ಇಂತಿಂತಹ ಬಣ್ಣದ ಮತ್ತು ವಯೋಮಾನದ ಪ್ರಾಣಿಗಳನ್ನು ಬಲಿ ಕೊಡಬೇಕು ಎಂದು ಕರ್ಮಠತನವನ್ನು ವಿಧಿಸುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡೇ ಬಸವಣ್ಣನವರು ಬರೆದ ವಚನ: “ದಯವಿಲ್ಲದ ಧರ್ಮವದೇವುದಯ್ಯಾ?” ಇಂತಹ ಪ್ರಾಣಿಹಿಂಸೆಯು ಏನನ್ನು ತಾನೆ ಕೊಡಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. “ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ” ಎಂಬ ಮಾನವೀಯ ಭಾವನೆಯನ್ನು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. 

ಸಂಸ್ಕೃತ ವಾಙ್ಮಯದಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬಸವಣ್ಣನವರು ಪ್ರಾಚೀನ ಧರ್ಮಗ್ರಂಥವಾದ “ಗೌತಮ ಧರ್ಮಸೂತ್ರ”ದ ಆರಂಭದಲ್ಲಿ ಬರುವ “ವೇದೋ ಹಿ ಧರ್ಮಸ್ಯ ಮೂಲಮ್” (ವೇದವೇ ಧರ್ಮದ ಮೂಲ) ಎಂಬ ಮಾತನ್ನು ಒಪ್ಪದೆ “ದಯವೇ ಧರ್ಮದ ಮೂಲವಯ್ಯಾ” ಎಂದು ಪರಿಷ್ಕರಿಸಿ ಹೇಳಿದ್ದಾರೆ. ಬಲಿಕೊಡಲು ಎಳೆದುಕೊಂಡು ಹೋಗುತ್ತಿದ್ದ ಕುರಿ ತನ್ನನ್ನು ಕೊಲ್ಲುತ್ತಾರೆ ಎಂಬ ಅರಿವಿಲ್ಲದೆ ಹೊಟ್ಟೆ ಹಸಿವಿನಿಂದ ಹಬ್ಬದಲ್ಲಿ ಕಂಬಗಳಿಗೆ ಕಟ್ಟಿದ್ದ ತಳಿರು ತೋರಣವನ್ನು ತಿನ್ನಲು ಮುಂದಾದ ಕುರಿಯನ್ನು ಕಂಡು ಮನ ಮಿಡಿದು ಬರೆದ ವಚನ. ನಿನ್ನನ್ನು ಕೊಂದವರೇನಾದರೂ ಶಾಶ್ವತವಾಗಿ ಈ ಭೂಮಿಯ ಮೇಲೆ ಉಳಿದಿದ್ದಾರೆಯೇ? “ಎಲೆ ಹೋತೇ! ನೀನು ಅಳು. ನಿನ್ನನ್ನು ಕೊಂದವರಿಗೆ ದೇವರು ತಕ್ಕ ಶಿಕ್ಷೆಯನ್ನು ಕೊಡುತ್ತಾನೆ” ಎಂದು ಅನುಕಂಪೆ ತೋರಿಸಿದ್ದಾರೆ:

ಹಬ್ಬಕ್ಕೆ ತಂದ ಹರಕೆಯ ಕುರಿ, 
ತೋರಣಕ್ಕೆ ತಂದ ತಳಿರ ಮೇಯಿತ್ತು
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತಲ್ಲದೆ! 
ಅಂದಂದೇ ಹುಟ್ಟಿತ್ತು, ಅಂದಂದೇ ಹೊಂದಿತ್ತು;
ಕೊಂದವರುಳಿದರೇ, ಕೂಡಲಸಂಗಮದೇವಾ?

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು 
ಎಲೆ ಹೋತೇ ಅಳು ಕಂಡಾ
ವೇದವನೋದಿದವರ ಮುಂದೆ ಅಳು ಕಂಡಾ!
ಶಾಸ್ತ್ರವ ಕೇಳಿದವರ ಮುಂದೆ ಅಳು ಕಂಡಾ!! 
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವಾ!

ಒಂದೆಡೆ “ಮಾ ಹಿಂಸ್ಯಾತ್ ಸರ್ವಭೂತಾನಿ” ಎಂದು ಪ್ರಾಣಿಹಿಂಸೆಯನ್ನು ಮಾಡಬಾರದೆಂದು ನಿಷೇಧಿಸುವ ವೇದವೇ ಮತ್ತೊಂದೆಡೆ “ಪಶುಮಾಲಭೇತ” ಎಂದು ಯಜ್ಞಯಾಗದಲ್ಲಿ ಬಲಿಕೊಡಬೇಕೆಂದು ವಿಧಿಸುವುದು ವಿಪರ್ಯಾಸವಲ್ಲವೇ? ಎಂಬ ಪ್ರಶ್ನೆಗೆ ಪೂರ್ವ ಮೀಮಾಂಸಾಕಾರರು ಕೊಡುವ ಉತ್ತರ: ಇದರಲ್ಲಿ ಯಾವುದೇ ವಿಪ್ರತಿಪತ್ತಿ ಇಲ್ಲ. ವೇದವು ನಿಯಮಿಸಿದ ಯಾಗವನ್ನು ಬಿಟ್ಟು ಬೇರೆಡೆ ಕೊಂದರೆ ಮಾತ್ರ ಪ್ರಾಣಿಹಿಂಸೆಯಾಗುತ್ತದೆ. ವೇದವಿಹಿತವಾದ ಯಾಗದಲ್ಲಿ ಪ್ರಾಣಿಗಳನ್ನು ಬಲಿಕೊಡುವುದು ಹಿಂಸೆ ಎನಿಸುವುದಿಲ್ಲ. ಅಲ್ಲದೆ ಅಂತಹ ಯಾಗದಲ್ಲಿ ಬಲಿ ಕೊಟ್ಟ ಪ್ರಾಣಿಯೂ ಸ್ವರ್ಗಕ್ಕೆ ಹೋಗುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ನಾಸ್ತಿಕನೆನಿಸಿದ ಚಾರ್ವಾಕ ಮಾಡುವ ವಿಡಂಬನೆ: “ಪಶುಶ್ಚೇನ್ನಿಹತಃ ಸ್ವರ್ಗ೦ ಜ್ಯೋತಿಷ್ಟೋಮೇ ಗಮಿಷ್ಯತಿ, ಸ್ವಪಿತಾ ಯಜಮಾನೇನ ಕಸಾನ್ನಹಂತುಂ ಶಕ್ಯತೇ”! ಅಂದರೆ “ಜ್ಯೋತಿಷ್ಟೋಮ ಯಾಗದಲ್ಲಿ ಕೊಂದ ಪಶುವು ಸ್ವರ್ಗಕ್ಕೆ ಹೋಗುವುದಾದರೆ ಆ ಪಶುವಿನ ಬದಲು ತನ್ನ ತಂದೆಯನ್ನೇ ಏಕೆ ಬಲಿಕೊಡಬಾರದು?” ಎಂದು ಚಾರ್ವಾಕ ವ್ಯಂಗ್ಯವಾಡುತ್ತಾನೆ. 

ನಮ್ಮ ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರು ಬಸವಣ್ಣನವರ ಹಿರಿಯ ಸಮಕಾಲೀನರು. 

ಸಿದ್ಧರಾಮೇಶ್ವರರು ತಮ್ಮ ವಚನದಲ್ಲಿ ಸ್ಮರಿಸಿಕೊಂಡಿರುವ ಅವರು ಬಾಲ್ಯದಲ್ಲಿ ತಮ್ಮ ಸಾಕು ತಂದೆ ಬಾಚನಗೌಡರು ಬರಗಾಲದ ಕಾರಣ ಊರ ಜನರ ಒತ್ತಾಸೆ ಮೇರೆಗೆ ಏರ್ಪಡಿಸಿದ್ದ ಮಾರಿಜಾತ್ರೆಯಲ್ಲಿ ಕೋಣನ ಬಲಿಕೊಡುವುದನ್ನು ತಡೆದು ನಿಲ್ಲಿಸುತ್ತಾರೆ. ಅಂತಹದೇ ಒಂದು ಪ್ರಸಂಗ ಪ್ರತಿ ಸೋಮವಾರ ನಡೆಸುವ ನಮ್ಮ “ಸದ್ಧರ್ಮ ನ್ಯಾಯಪೀಠದ” ಮುಂದೆ ಎರಡು ತಿಂಗಳ ಹಿಂದೆ ವಿಚಾರಣೆಗೆ ಬಂದಿತ್ತು. ದೂರು ತಂದವರು ಮಠದ ಖಾಸಾ ಶಿಷ್ಯರಲ್ಲ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಒಂದು ಹಳ್ಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾವಂತ ಯುವಕರು. “ನಮ್ಮ ಊರಿನಲ್ಲಿ ತಮ್ಮ ಮಠದ ಶಿಷ್ಯರೇ ಕೋಣನ ಬಲಿ ಕೊಡಲು ಮುಂದಾಗಿದ್ದಾರೆ. ಇದನ್ನು ತಾವೇ ತಡೆದು ನಿಲ್ಲಿಸಬೇಕು” ಎಂದು ನೀವೇದಿಸಿಕೊಂಡರು. ನೀವೇ ನಮ್ಮ ಮಠದ ನಿಜವಾದ ಶಿಷ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮದ ಪ್ರಮುಖರಿಗೆ ನೋಟೀಸ್ ಜಾರಿ ಮಾಡಿದೆವು. ವಿಚಾರಣೆ ನಡೆಸಿ ಒಪ್ಪಿಸಿದ್ದರೂ ಜಾತ್ರೆ ನಡೆಯುವ ವಾರದ ಮೊದಲು ಎರಡು ಕೋಣಗಳಲ್ಲಿ ಒಂದು ನಾಪತ್ತೆಯಾಗಿದೆ ಎಂದು ಹಿಂದುಳಿದ ವಿದ್ಯಾವಂತ ಯುವಕರು ಮತ್ತೆ ನಮ್ಮ ನ್ಯಾಯಪೀಠಕ್ಕೆ ಬಂದು ದೂರು ನೀಡಿದರು. ಗ್ರಾಮಸ್ಥರಲ್ಲಿ ಕೆಲವರು ಒಳಗೊಳಗೆ ಅನಕ್ಷರಸ್ಥರಾದ ತಮ್ಮ ಹಿರಿಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದು ದಲಿತ ವಿದ್ಯಾವಂತ ಯುವಕರ ದೂರು. ಪೋಲೀಸರಿಗೆ ಕರೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇಲೆ ನಾಪತ್ತೆಯಾಗಿದ್ದ ಕೋಣ ಜೀವಂತ ಮಾರಿಕಾಂಬಾ ಗುಡಿಗೆ ಬಂತು. ಶಿಷ್ಯರು ನಮ್ಮ ಒತ್ತಾಸೆಗೆ ಮಣಿದು ಬಲಿ ಕೊಡಲಿಲ್ಲ. ಮಾರಿ ಹಬ್ಬ ಮುಗಿದ ಮೇಲೆ ಬಂದ ರೋಚಕ ಸುದ್ದಿ: ಯಾವ ಕೋಣವನ್ನೂ ಬಲಿ ಕೊಡದೆ ಮಣ್ಣಿನಲ್ಲಿ ಕೋಣನ ಪ್ರತಿಮೆ ಮಾಡಿಸಿ ಅದರ ತಲೆಯನ್ನು ತುಂಡರಿಸಿದರು! ಇದೇ ಮಾಘಶುದ್ಧ ಹುಣ್ಣಿಮೆಯಂದು “ತರಳಾ ಬಾಳು!” ಎಂದು ಹರಸಿದ ವಿಶ್ವಬಂಧು ಮರುಳಸಿದ್ಧರ ದಿವ್ಯ ಪಂಚಾಕ್ಷರಿ ಮಂತ್ರ ಫಲಿಸಿತು ಎನಿಸಿತು! 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.22-02-2024.