'ಕಾವ್ಯಕನ್ನಿಕೆ' - ಮದುವೆ ಮಾತುಕತೆ

  •  
  •  
  •  
  •  
  •    Views  

ಚಿತ್ರದುರ್ಗದಲ್ಲಿ ನಡೆಯಲಿರುವ 75 ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಅಮೃತಮಹೋತ್ಸವವಾಗಿದ್ದು ಕನ್ನಡಕ್ಕೆ ಈ ವರ್ಷ ದೊರೆತಿರುವ ಶಾಸ್ತ್ರೀಯ ಸ್ಥಾನಮಾನದ ಹಿನ್ನೆಲೆಯಲ್ಲಿ ಈ ಸಮ್ಮೇಳನಕ್ಕೆ ಒಂದು ವಿಶೇಷ ಮೆರಗು ಬಂದಿದೆ. ಐತಿಹಾಸಿಕ ಮಹತ್ತ್ವ ಪಡೆದಿರುವ ಚಿತ್ರದುರ್ಗ ನಗರವು ಕರ್ನಾಟಕದ ಹೃದಯ ಭಾಗದಲ್ಲಿದ್ದು ಇಲ್ಲಿ ನಡೆಯುವ ಸಮ್ಮೇಳನಕ್ಕೆ ಹಿಂದೆ ನಡೆದ ಸಮ್ಮೇಳನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಬರುವ ಸಾಧ್ಯತೆ ಇದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯು ಇದುವರೆಗೆ ನಡೆಸಿದ 4 ಸಭೆಗಳಲ್ಲಿ ಸ್ವಾಗತ ಸಮಿತಿ ರಚಿಸಿರುವುದನ್ನು ಬಿಟ್ಟರೆ ಬೇರಾವ ಸಿದ್ಧತೆಗಳೂ ಆದಂತಿಲ್ಲ. ಸ್ವಾಗತ ಸಮಿತಿಯನ್ನು ರಚಿಸುವ ಮೊದಲೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ|| ನಲ್ಲೂರು ಪ್ರಸಾದ್ ರವರು ಚಿತ್ರದುರ್ಗ ಸಾಹಿತ್ಯ ಸಮ್ಮೇಳನ 2009 ರ ಜನವರಿ 29 ರಿಂದ ಫೆಬ್ರವರಿ 1 ರವರೆಗೆ ನಡೆಯುವುದೆಂದು ಪತ್ರಿಕೆಗಳಲ್ಲಿ ಘೋಷಿಸಿದ್ದಾರೆ.  

ಜಿಲ್ಲಾ ಸಮಿತಿಯವರು ದಿನಾಂಕ 19.11.2008 ರಂದು ಸಿರಿಗೆರೆಗೆ ಬಂದು ನಮ್ಮನ್ನು ಕಂಡಾಗ ಜಿಲ್ಲೆಯ ಮೂವರು ಮಂತ್ರಿಗಳು, ಜನಪ್ರತಿನಿಧಿಗಳು ಅದರಲ್ಲೂ ಚಿತ್ರದುರ್ಗದ ಶಾಸಕರಾದ  

______________

*ಚಿತ್ರದುರ್ಗದಲ್ಲಿ 75 ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಪಡಿಸುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಾಗತಸಮಿತಿಯು 30.11.2008 ರಂದು ಏರ್ಪಡಿಸಿದ ಪೂರ್ವಸಿದ್ಧತೆಯ ಸಭೆಯಲ್ಲಿ ಮಂಡಿಸಿದ ಲಿಖಿತ ಅಭಿಪ್ರಾಯ. 

ಶ್ರೀ ಎಸ್.ಕೆ.ಬಸವರಾಜನ್ ಸಕ್ರಿಯವಾಗಿ ಈ ಸಮ್ಮೇಳನದ ಸಿದ್ಧತೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದರು. ಅವರ ಈ ಮಾತಿನ ಹಿನ್ನೆಲೆಯಲ್ಲಿ ಅವರ ಸಮ್ಮುಖದಲ್ಲಿಯೇ ಮೂವರೂ ಮಂತ್ರಿಗಳನ್ನೊಳಗೊಂಡಂತೆ ಎಲ್ಲಾ ಜನಪ್ರತಿನಿಧಿಗಳಿಗೆ ನಾವೇ ನೇರವಾಗಿ ಫೋನ್ ಮಾಡಿದಾಗ ಜಿಲ್ಲಾ ಸಮಿತಿಯವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ತಿಳಿದಂತೆ ಮಾಡುತ್ತಿದ್ದಾರೆ ಎಂಬ ಅಪಸ್ವರದ ಮಾತುಗಳು ಎಲ್ಲರಿಂದಲೂ ಕೇಳಿಬಂದವು. ಹಿಂದೆ ನಡೆದ ಯಾವ ಸಭೆಗೂ ಬರಲು ನಮ್ಮನ್ನು ಪೂರ್ವಭಾವಿಯಾಗಿ ಕರೆಯದ ಕಾರಣ ಇದು ನಿಜವಿರಬಹುದೆಂದು ನಮಗೂ ತೋರಿತು. ಆದರೂ ಜನಪ್ರತಿನಿಧಿಗಳನ್ನು ಸಮಾಧಾನಪಡಿಸಿ ಅನ್ಯ ಕಾರ್ಯಗಳ ನಿಮಿತ್ತ ಅವರಿಗೆ ಬರಲು ಸಾಧ್ಯವಾಗುವುದಿಲ್ಲವೆಂದು ಹೇಳಿದರೂ, ಇದು ಕನ್ನಡದ ಕೆಲಸವಾದುದರಿಂದ ಪೂರ್ವ ನಿಯೋಜಿತವಾದ ಎಷ್ಟೇ ಮುಖ್ಯ ಕೆಲಸಗಳಿದ್ದರೂ ಅವೆಲ್ಲವನ್ನೂ ಬದಿಗೊತ್ತಿ ದಿನಾಂಕ 22.11.2008 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಪ್ತಾಲೋಚನೆ ಮಾಡಲು ಸೇರಬೇಕೆಂದು ಆಗ್ರಹಪಡಿಸಿದೆವು. ಚಿತ್ರದುರ್ಗದ ಶಾಸಕ ಎಸ್. ಬಸವರಾಜನ್ ಅವರನ್ನು ಖುದ್ದಾಗಿ ಸಿರಿಗೆರೆಗೆ ಕರೆಸಿಕೊಂಡು ಸಭೆಗೆ ತಪ್ಪದೇ ಹಾಜರಾಗುವಂತೆ ಹೇಳಿ ಒಪ್ಪಿಸಿದೆವು. ಅಂದಿನ ಸಭೆಗೆ ನಮ್ಮ ಒತ್ತಾಸೆಯಂತೆ ಎಲ್ಲಾ ಮಂತ್ರಿಗಳೂ, ಜನಪ್ರತಿನಿಧಿಗಳೂ ಹಾಜರಾಗಿದ್ದು ಕನ್ನಡದ ಕೆಲಸದ ಬಗ್ಗೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಸ್ವಾಗತ ಸಮಿತಿಯ ಎಲ್ಲ ಪದಾಧಿಕಾರಿಗಳನ್ನೂ, ಜಿಲ್ಲೆಯ ಎಲ್ಲ ಮಠಾಧೀಶರನ್ನೂ ಅಂದಿನ ಸಭೆಗೆ ಆಹ್ವಾನಿಸಬೇಕೆಂದು ಸೂಚಿಸಿದ್ದರೂ ಚಿತ್ರದುರ್ಗದ ಮುರುಘಾಮಠದ ಶ್ರೀಗಳು, ಕಬೀರಾನಂದ ಮಠದ ಶ್ರೀಗಳು ಮತ್ತು ಸಾಣೇಹಳ್ಳಿ ಶ್ರೀಗಳು ಇವರನ್ನು ಹೊರತುಪಡಿಸಿ ಉಳಿದ ಯಾವ ಶ್ರೀಗಳೂ ಅಂದು ಹಾಜರಿರಲಿಲ್ಲ. ಅವರಿಗೆ ಜಿಲ್ಲಾ ಸಮಿತಿಯವರು ಸೂಚನೆ ನೀಡಿಲ್ಲವೆಂದು ನಂತರ ತಿಳಿಯಿತು. ದಿನಾಂಕ 22.11.2008 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದದ್ದು ಸಮ್ಮೇಳನಕ್ಕೆ ಬರಲಿರುವ ಅಂದಾಜು 35 ಸಾವಿರ ಪ್ರತಿನಿಧಿಗಳಿಗೆ ಜನವರಿ ಮಾಸಾಂತ್ಯದಲ್ಲಿ ವಸತಿ ವ್ಯವಸ್ಥೆ ಮಾಡಲು ಚಿತ್ರದುರ್ಗದಲ್ಲಿ ಮೂಲಭೂತ ಸೌಲಭ್ಯಗಳು ಇವೆಯೇ ಎಂಬ ಪ್ರಶ್ನೆ. ಜಿಲ್ಲಾಧ್ಯಕ್ಷರು 45 ಸಾವಿರ ಜನರಿಗೆ ವಸತಿ ಕಲ್ಪಿಸಿಕೊಡಲು ಸಾಧ್ಯ ಎಂದು ಅಂಕಿಸಂಖ್ಯೆಗಳನ್ನು ಮುಂದಿಟ್ಟರೂ, ಅವರು ಪಟ್ಟಿಮಾಡಿದ ಕಲ್ಯಾಣ ಮಂಟಪಗಳಲ್ಲಿ ಆ ದಿನಗಳಲ್ಲಿ ಖಾಲಿ ಇದೆಯೇ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ. ಏಪ್ರಿಲ್ ತಿಂಗಳಿನಲ್ಲಾದರೆ SSLC ಮತ್ತು PUC ಪರೀಕ್ಷೆಗಳು ಮುಗಿಯುವುದರಿಂದ ಶಾಲಾ ಕಾಲೇಜುಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಸಾಕಷ್ಟು ವಸತಿ ಕಲ್ಪಿಸಲು ಅನುಕೂಲವಾಗುತ್ತದೆ, ಸಮ್ಮೇಳನದ ಸಿದ್ಧತೆಗೂ ಸಾಕಷ್ಟು ಸಮಯ ಸಿಗುತ್ತದೆ ಎಂಬ ದೃಷ್ಟಿಯಿಂದ ಅಂತಿಮವಾಗಿ ಏಪ್ರಿಲ್ ನಲ್ಲಿ ಮಾಡುವುದೆಂದು ಸ್ವಾಗತಸಮಿತಿಯು ತೀರ್ಮಾನಿಸಿತು. ಅಂದು  ಹಾಜರಿದ್ದ ರಾಜ್ಯಾಧ್ಯಕ್ಷರಾದ ಡಾ|| ನಲ್ಲೂರು ಪ್ರಸಾದ್ ರವರು  ಸಮ್ಮೇಳನವನ್ನು ಮುಂದೂಡುವ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರೂ, ಮಾರನೆಯ ದಿನ ಕೊಪ್ಪಳದಲ್ಲಿ ಸೇರಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿಟ್ಟು ಚರ್ಚಿಸಿ ನಂತರ ತಿಳಿಸುವುದಾಗಿ ಹೇಳಿ ಹೋದರು. ಅದರಂತೆ ದಿನಾಂಕ 23.11.2008 ರಂದು ಅವರು ಜಿಲ್ಲಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ಕೊಪ್ಪಳದ ಸಭೆಯಲ್ಲಿ ಚಿತ್ರದುರ್ಗ ಸಮ್ಮೇಳನವನ್ನು “ಈ ಹಿಂದೆ ನಿಗದಿ ಮಾಡಿರುವಂತೆ 2009 ಜನವರಿ 29 ರಿಂದ ಫೆಬ್ರವರಿ 1 ರವರೆಗೆ ನಡೆಸಬೇಕೆಂದು ಸಭೆ ತೀರ್ಮಾನಿಸಿತು” ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಸ್ವಾಗತಸಮಿತಿಯ ತೀರ್ಮಾನವನ್ನು ತಿಳಿಸಲು 7 ದಿನಗಳ ಗಡುವನ್ನು ಕೊಟ್ಟಿರುತ್ತಾರೆ.

ಸ್ವಾಗತ ಸಮಿತಿಯನ್ನು ರಚಿಸುವ ಮೊದಲೇ ರಾಜ್ಯಾಧ್ಯಕ್ಷರು ಸಮ್ಮೇಳನ ನಡೆಯುವ ದಿನಾಂಕಗಳನ್ನು ಪ್ರಕಟಿಸಿ ಜಿಲ್ಲಾ ಸಮಿತಿಯನ್ನೂ ಮತ್ತು ಸ್ವಾಗತ ಸಮಿತಿಯನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಕೊಪ್ಪಳದ ಸಭೆಯಲ್ಲಿ ಚರ್ಚೆ ನಡೆಯುವಾಗ ಶಿವಮೊಗ್ಗದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ರವರನ್ನು ಸಮ್ಮೇಳನ ಮುಂದಕ್ಕೆ ಹೋಗಲು ಚಿತ್ರದುರ್ಗ ಮತ್ತು ಸಿರಿಗೆರೆ ಶ್ರೀಗಳ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಕಾರಣವೆಂದು ಅನಗತ್ಯವಾಗಿ ಆಪಾದಿಸಿರುತ್ತಾರೆ. ಅಲ್ಲದೆ ಅದೇ ವೇಳೆಯಲ್ಲಿ ತಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ತೊಂದರೆಯುಂಟಾಗುತ್ತದೆಯೆಂದು ಸಿರಿಗೆರೆ ಶ್ರೀಗಳವರು ಮುಂದೂಡಲು ಪ್ರಯತ್ನ ಮಾಡುತ್ತಿದ್ದಾರೆಂದು ಸಹ ಅವರು ಮಿಥ್ಯಾರೋಪ ಮಾಡಿರುತ್ತಾರೆ. ಈ ಸಂಗತಿಯು ಆ ಕೊಪ್ಪಳದ ಸಭೆಯಲ್ಲಿ ಹಾಜರಿದ್ದ ಇನ್ನುಳಿದ ಸದಸ್ಯರಿಂದ ತಿಳಿದುಬಂದಿರುತ್ತದೆ  ದಿನಾಂಕ 22.11.2008 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸೇರಿದ್ದ ಸಭೆಯು ಸ್ವಾಗತ ಸಮಿತಿಯ ಮೊಟ್ಟಮೊದಲನೆಯ ಸಭೆಯಾಗಿದ್ದು ಸಮ್ಮೇಳನದ ನಾಲ್ಕೂ ದಿನಗಳ ಭೋಜನದ ಖರ್ಚನ್ನು ನಿರ್ವಹಿಸಲು ಚಿತ್ರದುರ್ಗ ಶ್ರೀಗಳು ಒಪ್ಪಿದ್ದಾರೆಂಬ ವಿಷಯ ಚರ್ಚೆಗೆ ಬಂದಾಗ ನಾವೇ ಮಧ್ಯೆ ಪ್ರವೇಶಿಸಿ ಏನಿಲ್ಲೆಂದರೂ ಒಂದು ದಿನಕ್ಕೆ 25 ಲಕ್ಷ ರೂ.ಗಳಂತೆ ಒಟ್ಟು ಒಂದು ಕೋಟಿ ರೂ. ಖರ್ಚು ಬರಬಹದು ಅಷ್ಟೊಂದು ಖರ್ಚನ್ನು ಚಿತ್ರದುರ್ಗ ಶ್ರೀಗಳಿಗೆ ಹೊರಿಸುವುದು ಸರಿಯಲ್ಲ ಎಂದು ಹೇಳಿದೆವು. ಇದಕ್ಕೆ ಚಿತ್ರದುರ್ಗ ಶ್ರೀಗಳು ಪ್ರತಿಕ್ರಿಯಿಸುತ್ತಾ ಭೋಜನದ ಖರ್ಚನ್ನು ಹೊತ್ತುಕೊಂಡಿಲ್ಲವೆಂದೂ, ತಾವು ಅದರ ಉಸ್ತುವಾರಿಯನ್ನು ಮಾತ್ರ ನೋಡಿಕೊಳ್ಳಲು ಒಪ್ಪಿದ್ದಾಗಿಯೂ, ಅದೊಂದು commitment ಎನ್ನುವುದಾದರೆ ಜೋಳಿಗೆ ಹಿಡಿದು ಭಿಕ್ಷೆ ಎತ್ತಿ ನಿರ್ವಹಿಸುವುದಾಗಿಯೂ ಸಭೆಗೆ ತಿಳಿಯಪಡಿಸಿರುತ್ತಾರೆ. ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಉಂಟಾದ ಸಮಸ್ಯೆಗಳು ಏನೆಂಬುದನ್ನು ತಿಳಿದುಕೊಳ್ಳಲು ಅಂದಿನ ಸಭೆಗೆ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್ ರವರನ್ನು ನಾವೇ ಸ್ವತಃ ಹೇಳಿ ಕರೆಸಿಕೊಂಡಿದ್ದರೂ ಅವರು ಇಲ್ಲಿಯ ಸಮಸ್ಯೆಗಳು ಮತ್ತಷ್ಟೂ ಜಟಿಲಗೊಳ್ಳುವಂತೆ ಮಾಡಿರುವುದು ವಿಷಾದನೀಯ.

ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವುದು ಚಿತ್ರದುರ್ಗದಲ್ಲಿ ನಮ್ಮ ಮಠದ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿರುವುದು ದಾವಣಗೆರೆ ನಗರದಲ್ಲಿ ಫೆಬ್ರವರಿ 1 ರಿಂದ 9 ರವರೆಗೆ. ಒಂದು ಮುಗಿಯುತ್ತದೆ ಮತ್ತೊಂದು ಆರಂಭವಾಗುತ್ತದೆ. ಹೀಗಾಗಿ ಫೆಬ್ರವರಿ ಒಂದು ದಿನ ಮಾತ್ರ overlap ಆಗುತ್ತದೆ. ನಮ್ಮ ದೃಷ್ಟಿಯಲ್ಲಿ ಯಾವುದೇ ಮಠದ ಅಥವಾ ಜಾತ್ರೆಯ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕಗಳಲ್ಲಿ ಬದಲಾವಣೆಯಾಗಬೇಕಾಗಿಲ್ಲ, ಆಗಲೂ ಬಾರದು. ನಮ್ಮನ್ನು ರಾಜ್ಯಾಧ್ಯಕ್ಷರಾದ ಡಾ|| ನಲ್ಲೂರು ಪ್ರಸಾದ್ರವರು ಖಾಸಗಿಯಾಗಿ ಸಿರಿಗೆರೆಯಲ್ಲಿ ಭೇಟಿಯಾದಾಗ ಈ ವಿಷಯ ಪ್ರಸ್ತಾಪಕ್ಕೆ ಬಂದರೂ ನಾವು ಅವರಿಗೆ ದಿನಾಂಕಗಳನ್ನು ಬದಲಾಯಿಸಲು ಆಗ್ರಹಪಡಿಸಿಲ್ಲ. ಒಂದೇ ನಗರದಲ್ಲಿ ಒಂದು ಕಲ್ಯಾಣಮಂಟಪದಲ್ಲಿ ಮದುವೆಯಾಗುತ್ತಿದ್ದರೆ ಮತ್ತೊಂದು ಕಲ್ಯಾಣಮಂಟಪದಲ್ಲಿ ಮದುವೆಯಾಗಬಾರದೆಂದು ಯಾವ ಬೀಗರೂ ಹೇಳಲು ಬರುವುದಿಲ್ಲ. ಮದುವೆ ದಿನಾಂಕವನ್ನು ಗಂಡು ಮತ್ತು ಹೆಣ್ಣಿನ ಕಡೆಯವರು ಒಂದುಗೂಡಿ ಚರ್ಚಿಸಿ ನಿಗದಿಪಡಿಸಬೇಕಾದ್ದು ಧರ್ಮ. ಆದರೆ ಈಗ ಚಿತ್ರದುರ್ಗದ ಸಮ್ಮೇಳನದ ವಿಚಾರವಾಗಿ ಆಗಿರುವುದು ಗಂಡಿನವರ ದೌರ್ಜನ್ಯ. ಹೆಣ್ಣಿನವರ ಕಷ್ಟಸುಖಗಳೇನೆಂಬುದನ್ನು ತಿಳಿದುಕೊಳ್ಳುವ ಸೌಜನ್ಯವಿಲ್ಲ. ಇಂತಹ ದಿನಾಂಕದಂದೇ ಇಂತಹ ಕಲ್ಯಾಣಮಂಟಪದಲ್ಲಿಯೇ ಮದುವೆ ಮಾಡಿಕೊಡಬೇಕು, ಇಲ್ಲದಿದ್ದರೆ ನಿಮ್ಮ ಹೆಣ್ಣೆ ಬೇಡ, ನಮಗೆ ಹೆಣ್ಣು ಕೊಡುವವರು ಬೇಕಾದಷ್ಟು ಜನ ಇದ್ದಾರೆ ಎಂಬ ಧೋರಣೆ ರಾಜ್ಯಸಮಿತಿಯು ಕೈಗೊಂಡ ತೀರ್ಮಾನದಲ್ಲಿದೆ. ಇದರಿಂದ ಮರ್ಯಾದೆ ಹರಾಜಾಗುವುದು ಹೆಣ್ಣುಹೆತ್ತವರದು. ಗಂಡಿನವರಿಗೆ ಏನಾಗಬೇಕಾಗಿದೆ? ಹೀಗಾಗಿ ಜಿಲ್ಲಾ ಸಮಿತಿಗೆ ಮತ್ತು ಮತ್ತು ಸ್ವಾಗತ ಸಮಿತಿಗೆ ಚಿತ್ರದುರ್ಗದ ಮರ್ಯಾದೆಯನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯಸಮಿತಿಯ ಈ "ಆದೇಶ"ವನ್ನು ಒಪ್ಪಿಕೊಳ್ಳದೆ ಗತ್ಯಂತರವಿಲ್ಲ. ಆದರೆ ನಿಶ್ಚಿತಾರ್ಥ ಮಾಡಿಕೊಂಡ ಹೆಣ್ಣನ್ನು ಬಿಟ್ಟು ಬೇರೆ ಹೆಣ್ಣನ್ನು ಮದುವೆಯಾಗಲು ಹಾತೊರೆಯುವವರಿಗೆ ತಕ್ಕ ಪಾಠ ಕಲಿಸಬೇಕು. ಚಿತ್ರದುರ್ಗದ ಎಲ್ಲ ಮಠಾಧೀಶರ ಆಶೀರ್ವಾದ ಪಡೆದು ಇಲ್ಲಿಯ ಗುಡ್ಡಬೆಟ್ಟಗಳಲ್ಲಿ ಕನ್ನಡದ ತೇರನ್ನು ಎಳೆಯಲು ತಯಾರದ ಚಿತ್ರದುರ್ಗದ ಸಾಹಿತಿಗಳಿಗೆ ಮತ್ತು ನಾಗರಿಕರಿಗೆ ತೊಡರಗಾಲು ಕೊಡಲು ಮುಂದಾದ ಮತ್ತು ಮರೆಯಲ್ಲಿ ನಿಂತು ತೇರಿನ ಮಿಣಿಯನ್ನೇ ಕತ್ತರಿಸುವ ಹೀನಕೃತ್ಯಮಾಡಲು ಹವಣಿಸಿದವರನ್ನು ಸುಮ್ಮನೆ ಬಿಡಬಾರದು. ಗಂಡೆದೆಯ ಚಿತ್ರದುರ್ಗದ ಸಾಹಿತಿಗಳ ಲೇಖನಿಗೆ ಇದೇನೂ ಕಷ್ಟದ ಕೆಲಸವಾಗಲಾರದು. ಒಪ್ಪಿದ ಹೆಣ್ಣನ್ನು ಬಿಟ್ಟು ಬೇರೆ ಹೆಣ್ಣನ್ನು ಮದುವೆಯಾಗ ಬಯಸುವವರಿಗೆ ತಕ್ಕ ಪಾಠವನ್ನು ಕಲಿಸಬೇಕು.  

ಇನ್ನು ಮುಂದಿನ ಸಮ್ಮೇಳನಗಳಲ್ಲಾದರೂ ಸಮ್ಮೇಳನ ಯಾವ ತಿಂಗಳೊಳಗೆ ಮುಗಿಯಬೇಕೆಂದು ಮುಗಿಯಬೇಕೆಂದು ಸ್ಥೂಲವಾಗಿ ನಿರ್ದೇಶಿಸುವ ಅಧಿಕಾರ ಮಾತ್ರ ರಾಜ್ಯಸಮಿತಿಗೆ ಇದ್ದು, ಸನ್ನಿವೇಶಗಳಿಗನುಗುಣವಾಗಿ ಸ್ಥಳೀಯ ಸಮ್ಮೇಳನದ ದಿನಾಂಕಗಳನ್ನು ನಿಗದಿಪಡಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಸ್ವಾಗತಸಮಿತಿಗೆ ಮಾತ್ರ ಇರಬೇಕೆಂಬುದು ನಮ್ಮ ಸ್ಪಷ್ಟ ಅಭಿಪ್ರಾಯ. ಸ್ವಾಗತ ಸಮಿತಿಯ ರಚನೆಗೆ ಮೊದಲೇ ರಾಜ್ಯಾಧ್ಯಕ್ಷರು ಸಮ್ಮೇಳನ ನಡೆಸುವ ದಿನಾಂಕಗಳನ್ನು ನಿಗದಿಪಡಿಸಿ ಸ್ವಾಗತ ಸಮಿತಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಪುರುಷಪ್ರಧಾನ ಸಮಾಜದಲ್ಲಿ ಗಂಡಿನವರು ತೋರುವ ಮನೋಧರ್ಮವೇ ಹೊರತು ಬೇರೆ ಏನೂ ಅಲ್ಲ. ಜಿಲ್ಲಾಸಮಿತಿಯು ಆರ್ಥಿಕ ಕಾರಣಗಳಿಂದಾಗಿ 4 ದಿನಗಳ ಸಮ್ಮೇಳನವನ್ನು 3 ದಿನಗಳಿಗೆ ಇಳಿಸಿದಂತೆ ತೋರುತ್ತದೆ. ಇದೂ ಸಹ ರಾಜ್ಯಸಮಿತಿಯ ನಿರ್ದೇಶನಕ್ಕೆ ವಿರುದ್ಧವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೇ ಕಷ್ಟವಾದರೂ ಸ್ವಾಗತ ಸಮಿತಿ ಮತ್ತು ಜಿಲ್ಲಾ ಸಮಿತಿ ಈ ಹಿಂದೆ ರಾಜ್ಯ ಸಮಿತಿ ನಿರ್ದೇಶಿಸಿರುವ ದಿನಾಂಗಳಂದೇ ಚಿತ್ರದುರ್ಗ ಸಮ್ಮೇಳನವನ್ನು ನಡೆಸಲು ಈ ಸಭೆ ಒಪ್ಪಿ ಎಲ್ಲರ ಸಹಕಾರ ಮತ್ತು ಸಹಯೋಗ ಪಡೆದು ಯಶಸ್ವಿಗೊಳಿಸುವಿರಾಗಿ ಆಶಿಸುತ್ತೇವೆ. 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 30.11.2008.