ನ್ಯಾಯಾಲಯದ ಕಟಕಟೆಯಲ್ಲಿ ಧರ್ಮ!

  •  
  •  
  •  
  •  
  •    Views  

ದ್ವೇಷ-ವೈಷಮ್ಯಗಳಿಂದ ಕೂಡಿದ ಸ್ಥಳದಲ್ಲಿ ಮಂದಿರ-ಮಸೀದಿಯನ್ನು ನಿರ್ಮಿಸುವುದು ಸರಿಯೇ? ಅದರ ಬದಲು ಆ ಜಾಗದಲ್ಲಿ ಒಂದು ಸುಂದರ ಉದ್ಯಾನವನವನ್ನು ನಿರ್ಮಿಸಿ ಹಿಂದೂಗಳೂ, ಮುಸ್ಲಿಮರೂ ಮತ್ತು ಇತರ ಎಲ್ಲ ಧರ್ಮೀಯರೂ ಸಕುಟುಂಬ ಪರಿವಾರ ಹೋಗಿ ಸಂತೋಷದಿಂದ ವಿಹರಿಸುವಂತೆ ಮಾಡಲು ಬರುವುದಿಲ್ಲವೇ? 

  • ನಿಮ್ಮ ಮನೆಯನ್ನು ಕೆಡವಿ ಅದರಲ್ಲಿ ಉದ್ಯಾನವನವನ್ನು ನಿರ್ಮಾಣ ಮಾಡಿದರೆ ನೀವು ಕೋರ್ಟಿಗೆ ಹೋಗದೆ ಸುಮ್ಮನಿದ್ದು ಬೀದಿ ಭಿಕಾರಿಗಳಾಗಿ ಹೆಂಡತಿಮಕ್ಕಳೊಂದಿಗೆ ಬೀದಿಯಲ್ಲಿ ಬಿಕ್ಷೆಬೇಡಿಕೊಂಡು ಇರುತ್ತೀರಾ? 
  • ಭಾರತದಲ್ಲಿ ಮಂದಿರವನ್ನು ನಿರ್ಮಿಸಲು ಸಾಧ್ಯವಿಲ್ಲವೆಂದರೆ ಪಾಕಿಸ್ತಾನದಲ್ಲಿ ನಿರ್ಮಿಸಲು ಬರುತ್ತದೆಯೇ? 
  • ಹಾಸ್ಪಿಟಲ್ ಬನಾವೋಂ, ಜಾನ್ ಬಚಾವೋಂ, ಪುಣ್ಯ ಕಮಾವೋಂ, ಯಹ್ ಕೈಸೀ ಜಗಹ್ ಹೈ ಜೋ ದೋಸ್ತಿ ನಹೀಂ, ದುಷ್ಮನೀ ಬನಾ ರಹೀಂ ಹೈಂ! 

ಅಲಹಾಬಾದ್ ಹೈಕೋರ್ಟಿನ ಲಖ್ನೋ ನ್ಯಾಯಪೀಠವು ಸೆಪ್ಟೆಂಬರ್ 24ರಂದು ನೀಡಬೇಕಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಒಂದು ವಾರ ಕಾಲ ತಡೆಹಿಡಿದಿದ್ದ ಹಿನ್ನೆಲೆಯಲ್ಲಿ ಅಂತರಜಾಲದಲ್ಲಿ ಮೂಡಿಬಂದ ಕೆಲವು ಪ್ರತಿಕ್ರಿಯೆಗಳಿವು. ತೀರ್ಪಿನಿಂದ ಉಂಟಾಗಬಹುದಾದ ಕೋಲಾಹಲವನ್ನು ನಿಯಂತ್ರಿಸಲು ಉತ್ತರಪ್ರದೇಶ ಸರಕಾರ 72.5 ಕೋಟಿ ರೂಪಾಯಿಗಳನ್ನು ಮುಂಜೂರು ಮಾಡಿದೆ. ಏತಕ್ಕಾಗಿ? ಪೋಲೀಸರಿಗೆ ಬೇಕಾದ ಲಾಠಿಗಳನ್ನು, ಹೆಲ್ಮೆಟ್‌ ಗಳನ್ನು ಮತ್ತು ರಕ್ಷಣಾಕವಚಗಳನ್ನು ಖರೀದಿಸಲು! ಅಂದರೆ ಸುಮಾರು 19 ಕೋಟಿ ಜನಸಂಖ್ಯೆಯುಳ್ಳ ಉತ್ತರ ಪ್ರದೇಶದ ಜನರಿಗೆ ತಲಾ 3-4 ರಂತೆ ಛಡಿ ಏಟುಗಳು! ಸ್ವತಂತ್ರ ಭಾರತದಲ್ಲಿ ಜನರ, ಜನರಿಗಾಗಿ, ಜನರಿಂದ ನಿರ್ಮಿತವಾದ ಸರಕಾರ ಜನಸಾಮಾನ್ಯರಿಗೆ ಧಾರಾಳವಾಗಿ ನೀಡುವ ಕೊಡುಗೆ! ಯಾವುದೇ ಸಮಸ್ಯೆಗೆ ಪರಿಹಾರವನ್ನು ಬಯಸುವ ಅಥವಾ ಸೂಚಿಸುವ ಮೊದಲು ಸಮಸ್ಯೆಯ ನಿಜ ಸ್ವರೂಪವೇನೆಂಬುದನ್ನು ಸರಿಯಾಗಿ ಗುರುತಿಸಿಕೊಳ್ಳುವುದು ಅತ್ಯಾವಶ್ಯಕ. ರೋಗಿಯು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ವೈದ್ಯ ಮಾಡುವ ಮೊಟ್ಟ ಮೊದಲನೆಯ ಕೆಲಸವೆಂದರೆ ರೋಗ ಪರೀಕ್ಷೆ (Diagnosis). ಒಮ್ಮೆ ರೋಗವೇನೆಂಬುದು ಪತ್ತೆಯಾದರೆ ಅದಕ್ಕೆ ನೀಡಬೇಕಾದ ಔಷಧೋಪಚಾರ ಅಥವಾ ಶಸ್ತ್ರಚಿಕಿತ್ಸೆ ಏನೆಂದು ತಿಳಿಯುತ್ತದೆ. ಯಾವುದೇ ರೋಗವು ಮುಖ್ಯವಾಗಿ ಎರಡು ತೆರನಾಗಿರುತ್ತದೆ: ಒಂದು ಶಾರೀರಿಕ ಮತ್ತೊಂದು ಮಾನಸಿಕ. ಅದೇ ರೀತಿ ಯಾವುದೇ ದೇಶದ ಸಮಸ್ಯೆಗಳನ್ನು ಸ್ಕೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಒಂದು ಪ್ರಾಕೃತಿಕ ಸಮಸ್ಯೆ ಮತ್ತೊಂದು ಪ್ರಜಾನಿರ್ಮಿತ ಸಮಸ್ಯೆ. ಪ್ರಕೃತಿಯ ವಿಕೋಪದಿಂದ ಉಂಟಾಗುವ ಸಮಸ್ಯೆಗಳನ್ನು ಪ್ರಾಕೃತಿಕ ಸಮಸ್ಯೆಗಳೆಂದು ಕರೆದರೆ (natural calamities); ಪ್ರಜೆಗಳ ವಿಕಾರ ಮನಸ್ಸಿನಿಂದ ಉಂಟಾಗುವ ಸಮಸ್ಯೆಗಳನ್ನು ಪ್ರಜಾನಿರ್ಮಿತ ಸಮಸ್ಯೆಗಳೆನ್ನಬಹುದು (problems created by citizens). ಪ್ರಕೃತಿಯ ವಿಕ್ಷುಬ್ದತೆಯಿಂದ ಉಂಟಾಗುವ ಚಂಡಮಾರುತ, ಪ್ರವಾಹ, ಭೂಕಂಪ, ಭೀಕರ ಬರಗಾಲ ಇತ್ಯಾದಿಗಳು ಪ್ರಾಕೃತಿಕ ಸಮಸ್ಯೆಗಳಿಗೆ ಉದಾಹರಣೆ. ಇವುಗಳನ್ನು ಎದುರಿಸುವಲ್ಲಿ ಎಂದಿಗಿಂತ ಇಂದು ವಿಜ್ಞಾನ ಸಾಕಷ್ಟು ಮುನ್ನಡೆಯನ್ನು ಸಾಧಿಸಿದೆ. ಯಾವ ದೇಶದಲ್ಲಿ ಈ ಸಮಸ್ಯೆಗಳು ಉದ್ಭವಿಸುತ್ತವೆಯೋ ಅವುಗಳ ನಿವಾರಣೆಗೆ ಆ ದೇಶವೇ ಏಕೆ, ಅನ್ಯದೇಶಗಳೂ ಸಹ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ ಸಾಧ್ಯವಾದ ಎಲ್ಲ ರೀತಿಯ ನೆರವನ್ನು ನೀಡಲು ಮುಂದಾಗುತ್ತವೆ.

ಇಂದು ದೇಶವನ್ನು ಕಾಡುತ್ತಿರುವ ಸಮಸ್ಯೆಗಳೇನು ಎಂದು ಯಾರನ್ನಾದರೂ ಪ್ರಶ್ನಿಸಿದರೆ ಸಾಮಾನ್ಯವಾಗಿ ಈ ಪ್ರಾಕೃತಿಕ ಸಮಸ್ಯೆಗಳು ಅವರ ನೆನಪಿಗೆ ಬರುವುದಿಲ್ಲ, ತಟ್ಟನೆ ಎಲ್ಲರ ನೆನಪಿಗೆ ಬರುವ ಸಮಸ್ಯೆಗಳೆಂದರೆ ದಿನನಿತ್ಯ ಪತ್ರಿಕೆಗಳಲ್ಲಿ ವರದಿಯಾಗುವ ನೌಕರರ ಮುಷ್ಕರ, ಕಾರ್ಮಿಕರ ಚಳುವಳಿ, ವಿದ್ಯುಚ್ಛಕ್ತಿ ಕೊರತೆ, ನಿರುದ್ಯೋಗ ಬವಣೆ, ಗಡಿವಿವಾದ, ನದಿ ನೀರು ಹಂಚಿಕೆ, ಅಲ್ಪಸಂಖ್ಯಾತರ ಸಂರಕ್ಷಣೆ, ಮೀಸಲಾತಿ, ಭಯೋತ್ಪಾದನೆ, ಕೋಮು ಗಲಭೆ, ಇತ್ಯಾದಿ ಇತ್ಯಾದಿ. ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಪ್ರಾಕೃತಿಕ ಸಮಸ್ಯೆಗಳಿಗಿಂತ ಮಿಗಿಲಾಗಿ ಈ ಪ್ರಜಾನಿರ್ಮಿತ ಸಮಸ್ಯೆಗಳೇ ದೇಶವನ್ನು ಹೆಚ್ಚು ಕಾಡಿಸುತ್ತಿರುವುದನ್ನು ನೋಡುತ್ತೇವೆ. ಇವುಗಳನ್ನು ಈ ದೇಶದ ಸಮಸ್ಯೆಗಳು ಎನ್ನುವುದಕ್ಕಿಂತ ಬೇರೆ ಯಾವುದೋ ಮೂಲಭೂತ ಸಮಸ್ಯೆಯ ಬಾಹ್ಯ ಸ್ವರೂಪ ಅಥವಾ ಚಿಹ್ನೆಗಳಿವು ಎನ್ನುವುದು ಹೆಚ್ಚು ಉಚಿತವಾಗಬಹುದು. ಜ್ವರ, ತಲೆನೋವು, ಕೆಮ್ಮು ಇತ್ಯಾದಿ ಬಾಧೆಗಳಿಂದ ನರಳುತ್ತಿರುವ ರೋಗಿಗೆ ಅವು ತನ್ನನ್ನು ಕಾಡಿಸುತ್ತಿರುವ ರೋಗ ರುಜಿನಗಳಾಗಿ ಕಂಡರೆ ಅವುಗಳಿಗೆ ಚಿಕಿತ್ಸೆ ನೀಡುವ ವೈದ್ಯನಿಗೆ ಅವು ಯಾವುದೋ ಒಂದು ವಿಶಿಷ್ಟ ರೋಗದ ಬಾಹ್ಯ ಚಿಹ್ನೆಗಳಾಗಿ (Symptoms) ಗೋಚರಿಸುತ್ತವೆ. ರೋಗದ ತಾತ್ಕಾಲಿಕ ಉಪಶಮನಕ್ಕಿಂತ ರೋಗದ ಮೂಲೋತ್ಪಾಟನೆಯು ಬಹಳ ಮುಖ್ಯ. ಔಷಧೋಪಚಾರ ನಡೆಯುವಾಗ ಕೆಲವೊಮ್ಮೆ ಪ್ರಾಸಂಗಿಕವಾಗಿ ಬೇರೊಂದು ನೋವು ಕಾಣಿಸಿಕೊಳ್ಳಬಹುದು. ಅದನ್ನು ಸಹಿಸಿಕೊಳ್ಳಲು ರೋಗಿಯು ಸಿದ್ದನಾಗಬೇಕಾಗುತ್ತದೆ. ಹಾಗೆಯೇ ದೇಶದ ಸಮಸ್ಯೆಗಳ ಮೂಲ ಸ್ವರೂಪವನ್ನರಿತು ಅದರ ಮೂಲೋತ್ಪಾಟನೆಯು ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿದವರ ಮೂಲ ಗುರಿಯಾಗಬೇಕು. ಅವುಗಳ ಪರಿಹಾರೋಪಾಯಗಳನ್ನು ಅಳವಡಿಸಲು ಹೊರಟಾಗ ಬರಬಹುದಾದ ಪ್ರಾಸಂಗಿಕ ಸಮಸ್ಯೆಗಳನ್ನು ಎದುರಿಸಲು ಸಿದ್ದರಾಗಬೇಕು. ಆದರೆ ದುರ್ದೈವದಿಂದ ಈ ದೇಶದಲ್ಲಿ ಮೂಲ ಸಮಸ್ಯೆಯ ಮೂಲೋತ್ಪಾಟನೆ ಮಾಡುವ ಪ್ರಯತ್ನಕ್ಕಿಂತ, ತಾತ್ಕಾಲಿಕವಾಗಿ ಉಪಶಮನವನ್ನು ಮಾಡುವ ಮಾರ್ಗವನ್ನೇ ಹೆಚ್ಚು ಅನುಸರಿಸಲಾಗುತ್ತಿದೆ.

ಹಾಗಾದರೆ ಈ ದೇಶದ ಮೂಲಭೂತ ಸಮಸ್ಯೆ ಯಾವುದು? ಇದನ್ನು ತಿಳಿಯಲು ಹೊರಡುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ದೇಶದಲ್ಲಿ ಮೂರು ಬಗೆಯ ಜನರಿದ್ದಾರೆ: (1)ಓದು ಬಾರದ ಜನಸಾಮಾನ್ಯರು (2)ಓದು ಬಲ್ಲ ಜಾಣ ಜನರು (3)ಓದಿದವರನ್ನೂ ಮೀರಿಸಬಲ್ಲ ಧೂರ್ತ ಜನನಾಯಕರು. ಇವರಲ್ಲಿ ಮೊದಲನೆಯ ವರ್ಗಕ್ಕೆ ಸೇರಿದ ಓದುಬಾರದ ಜನಸಾಮಾನ್ಯರು ಈ ದೇಶಕ್ಕೆ ಒಂದು ಸಮಸ್ಯೆಯೇ ಅಲ್ಲವೆಂದು ನಮ್ಮ ಭಾವನೆ. ಬಡತನ, ದಟ್ಟ ದಾರಿದ್ರ, ರೋಗರುಜಿನಗಳಿಂದ ನರಳುವ ಈ ಜನರು ದೇಶದಿಂದ ಏನನ್ನೂ ನಿರೀಕ್ಷಿಸದೆ, ತಮ್ಮ ಹಣೆಯ ಬರಹವನ್ನು ಹಳಿಯುತ್ತಾ, ದೇಶಕ್ಕೆ ನೇರವಾಗಿ ಹೊರೆಯಾಗದೆ ಹೇಗೋ ತಮ್ಮ ಜೀವನವನ್ನು ನಿರ್ವಹಿಸುತ್ತಾರೆ. ಎರಡನೆಯ ವರ್ಗಕ್ಕೆ ಸೇರಿದ ಓದು ಬರಹ ಬಲ್ಲ ಜಾಣ ಜನರು ದೇಶಕ್ಕೆ ತಮ್ಮಿಂದ ಏನಾಗಬೇಕೆಂಬುದನ್ನು ಯೋಚಿಸದೆ, ದೇಶದಿಂದ ತಮಗೆ ಏನಾಗಬೇಕು ಎಂಬುದನ್ನು ಸದಾ ಚಿಂತಿಸುತ್ತಿರುತ್ತಾರೆ. ಅದಕ್ಕಾಗಿ ಸಂಘಟಿತರಾಗಿ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಡುತ್ತಾರೆ. ತಾವು ಪಡೆಯುವ ಸಂಬಳಕ್ಕೂ ಮತ್ತು ತಾವು ಮಾಡುವ ಕೆಲಸಕ್ಕೂ ಇರುವ ಅಂತರವನ್ನು ಗಮನಿಸಿ ಸ್ವಲ್ಪವೂ ನಾಚಿಕೆಪಟ್ಟುಕೊಳ್ಳುವುದಿಲ್ಲ. ಇನ್ನು ಮೂರನೆಯ ವರ್ಗಕ್ಕೆ ಸೇರಿದ ಧೂರ್ತ ಜನನಾಯಕರು ದೇಶೋದ್ಧಾರದ ಸೋಗಿನಲ್ಲಿ ತಮ್ಮ ಉದ್ದಾರದ ಸವಿಗನಸನ್ನು ಕಾಣುತ್ತಾರೆ.

“ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ....” ಎಂದು ಶರಣರು ಹೇಳಿದ ಮಾತನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಬದಲಾಯಿಸಿ ಹೇಳುವುದಾದರೆ ಈ ನಾಡಿನ ರಾಜಕಾರಿಣಿಗಳಿಗೆ 

ಚುನಾವಣೆ ಬಂದರೆ ಟಿಕೆಟ್ಟಿನ ಚಿಂತೆ, 
ಟಿಕೆಟ್ಟು ಸಿಕ್ಕರೆ ಓಟಿನ ಚಿಂತೆ. 
ಶಾಸಕನಾದರೆ ಮಂತ್ರಿಯಾಗುವ ಚಿಂತೆ, 
ಮಂತ್ರಿಯಾದರೆ ಖಾತೆಯ ಚಿಂತೆ !
ದೇಶದ ಚಿಂತೆ ಯಾರಿಗೂ ಇಲ್ಲ ಕಾಣಾ!....

ಮಂತ್ರಿಗಳನ್ನು ಗಾದಿಯಿಂದ ಇಳಿಸುವ, ಏರಿಸುವ ಮತ್ತು ಕುಣಿಸುವ ಕೋತಿಗಳ ದೊಂಬರಾಟವೇ ಈ ದೇಶದಲ್ಲಿ ನಡೆಯುತ್ತಿದೆ. ಈ ದೊಂಬರಾಟವನ್ನು ನೋಡುವುದರಲ್ಲಿಯೇ ಜನರು ತಮ್ಮ ಬವಣೆಯನ್ನು ಮರೆಯಬೇಕಾಗಿದೆಯೇ ಹೊರತು ನಿಜ ಜೀವನದಲ್ಲಿ ಅವರ ಸಂಕಷ್ಟಗಳು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

ಒಟ್ಟಾರೆ ಹೇಳಬೇಕೆಂದರೆ ಈ ದೇಶದಲ್ಲಿ ನಡೆದಿರುವುದು ಮುಗ್ಧಜನರ ಶೋಷಣೆ, ಜಾಣಜನರ ಪೋಷಣೆ, ಧೂರ್ತ ಜನನಾಯಕರ ಭಕ್ಷಣೆ. ದೇಶವು ಆರ್ಥಿಕ ದುಸ್ಥಿತಿಯಲ್ಲಿದ್ದರೂ ದೇಶವನ್ನು ಆಳುತ್ತಿರುವ ಈ ಜನರು ಮಾತ್ರ ಆರ್ಥಿಕವಾಗಿ ಸುಸ್ಥಿತಿಯಲ್ಲಿಯೇ ಇದ್ದಾರೆ. ಜನಸಾಮಾನ್ಯರ ಮುಗ್ಧತೆಯನ್ನು, ಧಾರ್ಮಿಕ ಭಾವನೆಗಳನ್ನು ತಮ್ಮ ಬಂಡವಾಳವಾಗಿಸಿಕೊಂಡು, ಜಾಣಜನರ ಮೈತ್ರಿಯನ್ನು ಬೆಳೆಸಿಕೊಂಡು, ಅವರ ಸಂಬಳ ಸಾರಿಗೆ, ತುಟ್ಟಿಭತ್ಯೆಗಳನ್ನು ಕಾಲಕಾಲಕ್ಕೆ ಏರಿಸುತ್ತಾ, ಉದ್ದಿಮೆದಾರರಿಗೆ ಲೈಸೆನ್ಸ್ಗಳನ್ನು ನೀಡುತ್ತಾ, ತಮ್ಮ ಅಧಿಕಾರ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಇಂದಿನ ಭ್ರಷ್ಟ ರಾಜಕಾರಣಿಗಳ ಕೈಯಲ್ಲಿ ಇಂದು ದೇಶ ಕೊಳೆ ಹೋಗುತ್ತಿದೆ. ಅವರ ಸ್ವಾರ್ಥಪೂರಿತ ಬಕಾಸುರನ ಹೊಟ್ಟೆಗೆ ದೇಶವು ಅರೆಕಾಸಿನ ಮಜ್ಜಿಗೆಯಾಗಿದೆ. ದೇಶದ ಘನತೆ ಗೌರವಗಳನ್ನು ಎತ್ತಿ ಹಿಡಿಯುವ, ಸಮಸ್ಯೆಗಳ ಕಗ್ಗಂಟನ್ನು ಬಿಡಿಸುವ ಪ್ರಾಮಾಣಿಕ ಪ್ರಯತ್ನ ಇವರಿಂದ ನಡೆದೇ ಇಲ್ಲವೆಂದು ಹೇಳಿದರೆ ತಪ್ಪಾಗಲಾರದು. “ಹುಚ್ಚು ಮುಂಡೇ ಮದುವೆಯಲ್ಲಿ ಉಂಡವನೇ ಜಾಣ” ಎಂಬ ಕನ್ನಡದ ಗಾದೆ ಮಾತಿನಂತೆ ಇವರ ಧೋರಣೆ ಇರುವಂತೆ ಕಾಣಿಸುತ್ತದೆ. ಬಡತನದ ಬೇಗೆಯಲ್ಲಿ ಬದುಕು ಮಾಡುವಾಗ ಬೆವರು ಸುರಿಸುವ ಶ್ರಮಜೀವಿಗಳು ಒಂದೆಡೆ ಕಾಣಿಸಿದರೆ, ಉಣ್ಣುವಾಗ ಬೆವರು ಸುರಿಸುವ ಹೊಣೆಗೇಡಿ ಜನರು ಮತ್ತೊಂದೆಡೆ ಕಾಣಿಸುತ್ತಾರೆ. ಬಡವ, ಬಲ್ಲಿದರೆಂಬ ಭೇದವನ್ನು ಹೋಗಲಾಡಿಸಲು ಯಾವ ಕಾಲದಲ್ಲಿಯೂ ಸಾಧ್ಯವಾಗಿಲ್ಲ. ಆದರೆ ಕೊನೆಯ ಪಕ್ಷ ಬಡವನು ಬದುಕಿನ ಮೂಲಭೂತ ಸೌಲಭ್ಯಗಳನ್ನಾದರೂ ಪಡೆದು ಜೀವಿಸುವಂತಾದರೆ ಎಷ್ಟೋ ಸಮಾಧಾನಪಟ್ಟುಕೊಳ್ಳಬಹುದು. ನಮ್ಮ ದೃಷ್ಟಿಯಲ್ಲಿ ಈ ದೇಶದ ಸಮಸ್ಯೆಗಳಿಗೆ ಇರುವ ಪರಿಹಾರೋಪಾಯಗಳೆಂದರೆ ಮೂರು: (1) ಜಾತೀಯ ರಾಜಕಾರಣ ನಿರ್ಮೂಲನ (2) ನೌಕರಷಾಹೀ ದಮನ (3) ಪರಿಪಕ್ವ ಪ್ರಜಾತನ. ಇವುಗಳನ್ನು ಪ್ರಾಯೋಗಿಕವಾಗಿ ಅಳವಡಿಸುವುದು ಸದ್ಯದ ಪರಿಸ್ಥಿತಿಯಲ್ಲಿ “ಬೆಕ್ಕಿಗೆ ಗಂಟೆ ಕಟ್ಟುವ” ಗಾದೆ ಮಾತಿನಂತಾಗಿದೆ. ಆದರೆ ಯಾವುದೇ ರೋಗಕ್ಕೆ ನೀಡುವ ಚಿಕಿತ್ಸೆಯಿಂದ ಗುಣಮುಖರಾಗುವುದು, ಆಗದಿರುವುದು ಆ ರೋಗಿಯ ದೇಹದಾರ್ಢ್ಯ ಮತ್ತು ಮನೋದಾರ್ಢ್ಯವನ್ನು ಅವಲಂಬಿಸಿರುತ್ತದೆ.

ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತಡೆಹಿಡಿಯಬಾರದಾಗಿತ್ತು; ಯಾರ ಪರ-ವಿರುದ್ದವಾಗಿಯೇ ಆಗಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದೇ ಇದೆ ಎನ್ನುವವರಿದ್ದಾರೆ. ಇದು ನಿಜವಾದರೂ ಮುಂದೊಂದು ದಿನ ಸುಪ್ರೀಂ ಕೋರ್ಟು ತೀರ್ಮಾನಿಸಿದ ಮೇಲೂ ಈ ಸಮಸ್ಯೆಯನ್ನು ಹಿಂದೂಗಳಾಗಲೀ, ಮುಸ್ಲಿಮರಾಗಲೀ ಎದುರಿಸಲೇಬೇಕಲ್ಲವೇ? ಯಾರೂ ಗೆದ್ದೆವೆಂದು ಬೀಗಿ ವಿಜಯೋತ್ಸವವನ್ನು ಆಚರಿಸುವುದು ಬೇಡ, ಸೋತೆವೆಂದು ರೊಚ್ಚಿಗೆದ್ದು ಶಾಂತಿಭಂಗವಾಗುವಂತೆ ಸಂಘರ್ಷಕ್ಕೆ ಇಳಿಯುವುದು ಬೇಡ, ಎಲ್ಲರೂ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎಂದು ನಾಗರೀಕರ ಕರ್ತವ್ಯದ ಬಗ್ಗೆ ಎಚ್ಚರಿಸುವವರಿದ್ದಾರೆ. ಹೀಗೆ ಹೇಳುವವರು ಒಂದನ್ನು ಮರೆತಂತೆ ತೋರುತ್ತದೆ. ಇಂತಹ ವಿಷಯಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದು ಸರಿಯೇ ಎಂಬ ಮೂಲಭೂತ ಪ್ರಶ್ನೆ. ಕೌಟುಂಬಿಕ ಜೀವನದಲ್ಲಿ ಒಂದು ಮನೆತನದ ಜಗಳವನ್ನು ಬೀದಿಗೆ ತರಲು ಕುಟುಂಬದ ಸದಸ್ಯರಾರೂ ಇಷ್ಟಪಡುವುದಿಲ್ಲ. ಇನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಂತುಕೊಳ್ಳುವುದೆಂದರೆ ತುಂಬಾ ಅವಮಾನಕರವೆಂದು ಭಾವಿಸುತ್ತಾರೆ. ಹೀಗಿರುವಾಗ ಧಾರ್ಮಿಕ ನಂಬುಗೆಗೆ ಸಂಬಂಧಪಟ್ಟ ವಿಚಾರವನ್ನು ನ್ಯಾಯಾಲಯಕ್ಕೆ ಕೊಂಡೊಯ್ದು ಧರ್ಮವನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಇದು ಹಿಂದೂ ಧರ್ಮಕ್ಕಾಗಲೀ, ಇಸ್ಲಾಂ ಧರ್ಮಕ್ಕಾಗಲೀ ಗೌರವ ತರುವಂತಹ ಸಂಗತಿಯೇ? ಯಾವುದೇ ದೇಶದ ಕಾನೂನು ಒಂದು ಪ್ರಾದೇಶಿಕ ಚೌಕಟ್ಟಿಗೆ ಸಂಬಂಧಪಟ್ಟಿರುತ್ತದೆ. ಭಾರತದ ಕಾನೂನು ಪಾಕಿಸ್ತಾನಕ್ಕಾಗಲೀ, ಇಂಗ್ಲೆಂಡ್  ಅಮೇರಿಕಾ ದೇಶಗಳಿಗಾಗಲೀ ಅನ್ವಯಿಸುವುದಿಲ್ಲ. ಹಾಗೆಯೇ ಆ ದೇಶದ ಕಾನೂನುಗಳಿಗೆ ನಮ್ಮ ದೇಶದಲ್ಲಿ ಬೆಲೆಯಿಲ್ಲ. ಆದರೆ ಧರ್ಮದ ವಿಚಾರ ಹಾಗಲ್ಲ. ಯಾವುದೇ ಧರ್ಮವಿರಲಿ ತಾತ್ವಿಕವಾಗಿ ಯಾವ ಪ್ರಾದೇಶಿಕ ಚೌಕಟ್ಟು ಮತ್ತು ಪರಿಮಿತಿಗೆ ಒಳಪಡುವುದಿಲ್ಲ. ಕಾನೂನಿನಲ್ಲಿ ಧರ್ಮದ ನೈತಿಕಮೌಲ್ಯಗಳು ಅಡಕವಾಗಿವೆಯಾದರೂ ಕಾನೂನಿಗಿಂತಲೂ ಧರ್ಮದ ಹರವು ವಿಸ್ತಾರವಾದುದು. ಹೀಗಿರುವಾಗ ಮಾನವತೆಯ ಒಳಿತಿಗಾಗಿ ಸ್ಥಾಪಿತಗೊಂಡ ವಿಶಾಲ ತತ್ವಗಳನ್ನೊಳಗೊಂಡ ಧರ್ಮಗಳು ಒಂದು ದೇಶದ ಕಾನೂನಿನ ಕಟಕಟೆಯಲ್ಲಿ ನಿಲ್ಲುವಂತಾದರೆ ಅವಮಾನಕರವೆನಿಸುವುದಿಲ್ಲವೇ?

ಕೌಟುಂಬಿಕ ಕಲಹಗಳಲ್ಲಿ ಯಾರಾದರೂ ಕೋರ್ಟಿಗೆ ಹೋದರೆ ಮತ್ತಷ್ಟೂ ಜಿದ್ದು ಬೆಳೆಸಿಕೊಳ್ಳುತ್ತಾರೆ. ಆ ಮನೆತನದ ಬಂಧುಬಾಂಧವರು ಸೌಹಾರ್ದಯುತವಾಗಿ ಬಗೆಹರಿಸಲು ಎಷ್ಟೇ ಪ್ರಯತ್ನಿಸಿದರೂ ಯಾರ ಮಾತನ್ನೂ ಕೇಳುವುದಿಲ್ಲ. ಕೋರ್ಟಿನಲ್ಲೇ ನೋಡಿಕೊಳ್ಳುತ್ತೇನೆ ಎಂಬ ಠೇಂಕಾರದ ಮಾತುಗಳನ್ನಾಡುತ್ತಾರೆ. ಈಗ ಅಲಹಾಬಾದ್ ಹೈಕೋರ್ಟಿನಲ್ಲಿ ನಡೆದಿರುವುದಾದರೂ ಇಂತಹುದೇ ಜಿದ್ದು. ಎರಡೂ ಜನಾಂಗಗಳ ಮಧ್ಯೆ ಬೆಳೆದು ಬಂದಿರುವ ಅನೇಕ ಶತಮಾನಗಳ ದ್ವೇಷದ ದಾವಾನಲ. ಭಾರತ ಸ್ವತಂತ್ರಗೊಂಡ ವರ್ಷದಲ್ಲಿ ಗುಜರಾತಿನಲ್ಲಿದ್ದ ಇಂತಹ ಒಂದು ಸಮಸ್ಯೆಯನ್ನು ಬಗೆಹರಿಸಿದವರೆಂದರೆ ಆಗಿನ ಉಪಪ್ರಧಾನಿ ಸರ್ದಾರ್ ವಲ್ಲಭ್ ಭಾಯಿ ಪಟೇಲ್. ಹಿಂದೂ-ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶತಮಾನಗಳ ಸಮಸ್ಯೆಯನ್ನು ಕೆಲವೇ ತಿಂಗಳಲ್ಲಿ ಕೊನೆಗಾಣಿಸಿದರು. ಘಜ್ನಿ ಮಹಮ್ಮದ್‌ ನಿಂದ ಅನೇಕ ಬಾರಿ ಧಾಳಿಗೆ ಒಳಗಾಗಿದ್ದ ಸೌರಾಷ್ಟ್ರದ ಸೋಮನಾಥ ದೇವಾಲಯವನ್ನು ಮತ್ತು ಆ ಜಾಗದಲ್ಲಿದ್ದ ಮಸೀದಿಯನ್ನು ಎರಡೂ ಜನಾಂಗದವರು ಒಪ್ಪುವ ರೀತಿಯಲ್ಲಿ ಪುನರ್ನಿರ್ಮಾಣಗೊಳ್ಳುವಂತೆ ಮಾಡಿದರು. ಅವರು ಇನ್ನೂ ಕೆಲವಾರು ವರ್ಷ ಬದುಕಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಹಿಂದೂ-ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಯೋಧ್ಯೆಯ ಸಮಸ್ಯೆಯನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸುವ ಅಂತಹ ಧಾರ್ಮಿಕ ಮತ್ತು ರಾಜಕೀಯ ನಾಯಕತ್ವ ಇಂದು ದೇಶದಲ್ಲಿ ಇಲ್ಲದೇ ಇರುವುದು ತೀರಾ ವಿಷಾದನೀಯ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 29.9.2010.