ಸಮ್ಮೇಳನಗಳ ಸಾರ್ಥಕತೆ

  •  
  •  
  •  
  •  
  •    Views  

ಳೆದ ವಾರ ಸುತ್ತೂರು ಮಠದಲ್ಲಿ ಶಿವರಾತ್ರೀಶ್ವರ ಜಾತ್ರೆ ನಡೆಯಿತು. ದನಗಳ ಪರಿಷೆಯ ಮುಕ್ತಾಯ ಸಮಾರಂಭಕ್ಕೆ ನಮ್ಮನ್ನು ಆಹ್ವಾನಿಸಲಾಗಿತ್ತು. ಸಕಾಲದಲ್ಲಿ ಸಭೆಗೆ ಹೋಗಿ ಗಣ್ಯವ್ಯಕ್ತಿಗಳ ಮಧ್ಯೆ ಕುಳಿತಾಗ ವೇದಿಕೆಯ ಕೆಳಭಾಗದಲ್ಲಿ ಕಾಣಿಸಿದ್ದು ದನಗಳಲ್ಲ, ಜಾತ್ರೆಗೆ ಬಂದಿದ್ದ ಜನರು, ದನಗಳು ಇಲ್ಲದೆ ದನಗಳ ಪರಿಷೆಯ ಮುಕ್ತಾಯ ಸಮಾರಂಭ ಹೇಗೆ ಎಂಬ ನಮ್ಮ ಸಂದೇಹಕ್ಕೆ ಉತ್ತರರೂಪವಾಗಿ ಪಕ್ಕದಲ್ಲಿದ್ದ ಸುತ್ತೂರು ಶ್ರೀಗಳು ಸಭಾಮಂಟಪದ ಸಮೀಪದಲ್ಲಿಯೇ ಮೈದುಂಬಿಕೊಂಡು ಲಕ್ಷಾಂತರ ರೂ. ಬೆಲೆಬಾಳುವ ನೂರಾರು ಹೋರಿಗಳು ನಿಂತಿರುವುದನ್ನು ಕೈಸನ್ನೆ ಮಾಡಿ ತೋರಿಸಿದರು. ಒಂದು ಕಡೆ ಜನರು ಮತ್ತೊಂದೆಡೆ ಜಾನುವಾರುಗಳು ಸೇರಿರುವುದನ್ನು ನೋಡಿದಾಗ ತಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡಿಬಂದ ವಿಚಾರಲಹರಿ: ಈ ಸೃಷ್ಟಿಯಲ್ಲಿ ಅನೇಕ ಪ್ರಾಣಿಗಳು ಇವೆ. ಹಾಗೆ ನೋಡಿದರೆ ಮನುಷ್ಯನೂ ಒಬ್ಬ ಪ್ರಾಣಿಯೇ, ಅನೇಕ ವಿಷಯಗಳಲ್ಲಿ ಪ್ರಾಣಿಗಳಿಗೂ ಮನುಷ್ಯನಿಗೂ ಸಮಾನಗುಣವಿಶೇಷಗಳು ಇವೆಯೆಂದರೂ ಕತ್ತೆಗೆ ಕತ್ತೆ ಎನ್ನುತ್ತಾರೆಯೇ ಹೊರತು ಕುದುರೆ ಎನ್ನುವುದಿಲ್ಲ. ಹಾಗೆಯೇ ಕುದುರೆಯನ್ನು ಕುದುರೆ ಎನ್ನುತ್ತಾರೆಯೇ ಹೊರತು ಕತ್ತೆ ಎನ್ನುವುದಿಲ್ಲ. ಆದರೆ ಮನುಷ್ಯ ಮಾತ್ರ ಅವನ ಸಲ್ಲದ ನಡವಳಿಕೆಗಳಿಂದ ಕತ್ತೆ, ಕುದುರೆ, ಕೋಣ, ಕೋತಿ, ಗೂಬೆ, ನಾಯಿ, ನರಿ ಹೀಗೆ ಏನೆಲ್ಲ ಕರೆಸಿಕೊಳುವ ಅರ್ಹತೆ ಹೊಂದಿದ್ದಾನೆಂಬುದು ಒಂದು ವಿಶೇಷ! ಈ ಸೃಷ್ಟಿಯಲ್ಲಿ ಎಷ್ಟು ಪ್ರಾಣಿಗಳು ಇವೆಯೋ ಅಷ್ಟೂ ಆಸನಗಳು ಇವೆಯೆಂದು ಯೋಗಾಸನ ಪ್ರವೀಣರು ಹೇಳುತ್ತಾರೆ. ಹಾಗೆಯೇ ಈ ಜಗತ್ತಿನಲ್ಲಿ ಎಷ್ಟು ಪ್ರಾಣಿಗಳು ಇವೆಯೋ ಅಷ್ಟೂ ಪ್ರಾಣಿಗಳ ಸಾಕಾರಸ್ವರೂಪ ಮನುಷ್ಯನೆಂದರೆ ಅತಿಶಯೋಕ್ತಿಯಾಗಲಾರದು. ಯೋಗಾಸನಗಳಲ್ಲಿ ಮಯೂರಾಸನ, ಕುಕ್ಕುಟಾಸನ, ಕೂರ್ಮಾಸನ, ಭುಜಂಗಾಸನ, ಶಲಭಾಸನ ಇತ್ಯಾದಿ ಅನೇಕ ಪ್ರಾಣಿಗಳ ಹೆಸರಿನ ಕಠಿಣವಾದ ಆಸನಗಳಿವೆ. ಆ ಎಲ್ಲ ಆಸನಗಳನ್ನು ಕರಗತಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆಸನಗಳು ಕಷ್ಟವಾಗಬಹುದು ಅವಿವೇಕವನ್ನು ಮೈಗೂಡಿಸಿಕೊಳ್ಳುವುದು ಕಷ್ಟಕರ ಸಂಗತಿಯೇನೂ ಅಲ್ಲ, ಯಾವ ಆಚಾರ್ಯರ ಧರ್ಮಬೋಧೆಯೂ ಇಲ್ಲದೆ ಕತ್ತೆ ಕತ್ತೆಯಾಗಿಯೇ ನಡೆದುಕೊಳ್ಳುತ್ತದೆ, ಕುದುರೆ ಕುದುರೆಯಾಗಿ ನಡೆದುಕೊಳ್ಳುತ್ತದೆ. ಆದರೆ ಸಹಸ್ರಾರು ವರ್ಷಗಳಿಂದ ಯಾರು ಎಷ್ಟೇ ಬೋಧಿಸಿದರೂ ಮನುಷ್ಯ ಮಾತ್ರ ಮನುಷ್ಯನಾಗಿ ನಡೆದುಕೊಳ್ಳುತ್ತಿಲ್ಲ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯ ಆಶಯ ಇದೇ ಆಗಿದೆ. ಪ್ರಾಣಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಅನುಕರಿಸದ ಮನುಷ್ಯನ ಕೆಟ್ಟತನವನ್ನು ಕಂಡು ಬಸವಣ್ಣನವರು ಹೀಗೆ ಉದ್ಗರಿಸುತ್ತಾರೆ: 

ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವನು! 
ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ 
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ ಕಾಗೆ ಕೋಳಿಯಿಂದ ಕರಕಷ್ಟ 
ಕೂಡಲಸಂಗಮದೇವಾ

ಸುತ್ತೂರು ಜಾತ್ರೆಯಲ್ಲಿ ದನಗಳ ಪರಿಷೆಯ ಜೊತೆಗೆ ವಿವಿಧ ಕ್ರೀಡಾಸ್ಪರ್ಧೆ, ಕುಸ್ತಿಪಂದ್ಯ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಅರಮನೆಯ ಮುಂದೆ ನಡೆಯುತ್ತಿದ್ದ ಈಗಲೂ ದಸರಾ ಸಂದರ್ಭದಲ್ಲಿ ನಡೆಯುವ ಕುಸ್ತಿಪಂದ್ಯದ ನೆನಪು ಮರುಕಳಿಸಿತು. ಹಳೆಯ ಮೈಸೂರಿನ ಮಾರ್‌ಪೀಟ್ ಕುಸ್ತಿಯ ನಿಯಮಾವಳಿಗಳಿಗೂ ಉತ್ತರ ಕರ್ನಾಟಕದ ಕುಸ್ತಿಯ ನಿಯಮಾವಳಿಗಳಿಗೂ ಇರುವ ಸೂಕ್ಷ್ಮ ವ್ಯತ್ಯಾಸ ಸುತ್ತೂರುಶ್ರೀಗಳಿಂದ ತಿಳಿಯಿತು. ಕುಸ್ತಿಪಟುಗಳಿಗೆ ಶ್ರೀರಾಮನಿಗಿಂತಲೂ ಆತನ ಬಂಟ ಹನುಮಂತನ ಮೇಲೆಯೇ ಹೆಚ್ಚು ಭಕ್ತಿ. ಆಂಜನೇಯನೇ ಅವರ ಆರಾಧ್ಯದೇವರು. ಶಾರೀರಿಕ ದಾರ್ಢ್ಯವುಳ್ಳಕುಸ್ತಿಪಟುಗಳು ಅಖಾಡಕ್ಕಿಳಿದು ಕೆಮ್ಮಣ್ಣನ್ನು ಮೈಗೆ ಸವರಿಕೊಳ್ಳುತ್ತಾ ಎದುರಾಳಿಯನ್ನು ಹಿಡಿದು ಸೆಣೆಸಾಡುತ್ತಿದ್ದ ದೃಶ್ಯ ಕೊಬ್ಬಿದ ಎರಡು ಗೂಳಿಗಳು ಕಾಲಿನಲ್ಲಿ ಕೆಂಧೂಳನ್ನು ಕೆದರಿ ಕೋಡಿಗೆ ಕೋಡನ್ನು ಸಿಕ್ಕಿಸಿಕೊಂಡು ಸೆಣೆಸಾಡುವಂತಿತ್ತು! ಭಾರತ ಸ್ವತಂತ್ರಗೊಂಡ ಮೇಲೆ ಕೆಮ್ಮಣ್ಣಿನ ಅಖಾಡಗಳಲ್ಲಿ ನಡೆಯುವ ಇಂತಹ ಜಂಗೀ ಕುಸ್ತಿಗಳಿಗಿಂತ ಚುನಾವಣಾ ಅಖಾಡಗಳಲ್ಲಿ ನಡೆಯುವ ಜಂಗೀಕುಸ್ತಿಗಳೇ ಹೆಚ್ಚಾಗಿರುವಂತೆ ತೋರುತ್ತವೆ. ಅಖಾಡಗಳಲ್ಲಿ ಸೆಣೆಸಾಡುವ ಪೈಲ್ವಾನರ ಪಟ್ಟುಗಳೇ ಬೇರೆ ಚುನಾವಣಾ ಕಣದಲ್ಲಿ ಸೆಣೆಸಾಡುವ ರಾಜಕೀಯ ಜಟ್ಟಿಗರ ಮಾರ್‌ಪೀಟ್ ಪಟ್ಟುಗಳೇ ಬೇರೆ ಎಂಬುದನ್ನು ಪ್ರಜ್ಞಾವಂತ ಓದುಗರಾದ ನಿಮಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. 

ಮೈಸೂರಿನಿಂದ ಹಿಂದಿರುಗುವಾಗ ಬೆಂಗಳೂರಿನಲ್ಲಿ 77 ನೆಯ ಕನ್ನಡಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆದಿತ್ತು. ಕಳೆದ ಒಂದು ವಾರದಿಂದ ಪತ್ರಿಕೆಗಳ ಮುಖಪುಟ ಮತ್ತು ಒಳಪುಟಗಳಲ್ಲಿ ಕನ್ನಡ ನಾಡು-ನುಡಿಯ ಸುದ್ದಿಗಳು ವಿಜೃಂಭಿಸಿವೆ. ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ ಎನ್ನುವಂತೆ ಕನ್ನಡ ಪರ ಸಂಘಟನೆಗಳ ಶಕ್ತಿ ದಾಪುಗಾಲಿಡುತ್ತಿದೆ. ಹೀಗೆ ವರ್ಷದುದ್ದಕ್ಕೂ ನಾಡಿನ ನಾನಾ ಭಾಗಗಳಲ್ಲಿ ಜಾತ್ರೆಗಳು, ಪರಿಷೆಗಳು, ಉತ್ಸವಗಳು, ಸಮ್ಮೇಳನಗಳು, ಸಭೆ-ಸಮಾರಂಭಗಳು ಲೆಕ್ಕವಿಲ್ಲದಷ್ಟು ನಡೆಯುತ್ತವೆ. ಅವುಗಳಿಗೆಂದು ವಿಶೇಷವಾಗಿ ನಿರ್ಮಾಣವಾದ ಪೆಂಡಾಲುಗಳಿಗೆ, ವೇದಿಕೆಗಳಿಗೆ ಕೋಟ್ಯಂತರ ರೂ. ಖರ್ಚಾಗುತ್ತದೆ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆ ಮಾತಿನಂತೆ ಇದೆಲ್ಲಾ ಆಡಂಬರಕ್ಕಾಗಿ ಮಾಡುವ ಅನಾವಶ್ಯಕ ಖರ್ಚು, ದುಂದುವೆಚ್ಚ ಎಂಬ ಅಪಸ್ವರದ ಮಾತುಗಳು ಕೇಳಿಬರುತ್ತಿವೆ. ನಾಲ್ಕು ದಿನಗಳ ಆಡಂಬರದ ಆಟಾಟೋಪಕ್ಕಾಗಿ ಮಾಡುವ ಇಂತಹ ಅದ್ದೂರಿ ಸಭೆ-ಸಮಾರಂಭ, ಜಾತ್ರೆ-ಪರಿಷೆಗಳನ್ನು ಕೈಬಿಟ್ಟು ಅವುಗಳಿಗೆಂದು ವ್ಯರ್ಥವಾಗಿ ಖರ್ಚು ಮಾಡುವ ಹಣವನ್ನು ಬಡಬಗ್ಗರ, ದೀನದಲಿತರ ಏಳಿಗೆಗಾಗಿ ಖರ್ಚುಮಾಡಿದರೆ ಹಣದ ಸದ್ಬಳಕೆಯಾಗುತ್ತದೆಯಲ್ಲವೇ ಎಂದು ಕೇಳುವವರಿದ್ದಾರೆ. ಈ ಕಾರಣಕ್ಕಾಗಿ ಗಣ್ಯಮಾನ್ಯ ವ್ಯಕ್ತಿಗಳು ಕೆಲವರು ಸಭೆ-ಸಮಾರಂಭಗಳಲ್ಲಿ ಗೌರವಾರ್ಥವಾಗಿ ನೀಡಲಾಗುವ ಹಾರ-ತುರಾಯಿಗಳನ್ನು ಸ್ವೀಕರಿಸುವುದಿಲ್ಲ. ವಂದನಾರ್ಪಣೆಯ ಸಂದರ್ಭದಲ್ಲಿ ಹಾರ ಹಾಕಲು ಹೋದಾಗ ಸೌಜನ್ಯದಿಂದಲೇ ನಿರಾಕರಿಸುತ್ತಾರೆ. ಸಭಿಕರು ಪಕ್ಕದಲ್ಲಿದ್ದವರ ಕಡೆ ತಿರುಗಿ ಅವರು ಹಾರ ಹಾಕಿಸಿಕೊಳ್ಳುವುದಿಲ್ಲವೆಂದು ಮೆಚ್ಚುಗೆಯ ಭಾವದಿಂದ ಪಿಸುನುಡಿಯುತ್ತಾರೆ. ಇದನ್ನು ಮನಗಂಡ ಸಮಾರಂಭದ ಸಂಘಟಕರು ಕೆಲವರು ಇತ್ತೀಚೆಗೆ ಹಾರವನ್ನು ಕೊಡುವ ಬದಲು ಅತಿಥಿಗಳಿಗೆ ಉಪಯುಕ್ತವಾದ ವಸ್ತುಗಳನ್ನು, ಪುಸ್ತಕಗಳನ್ನು ಕೊಡುವ ವಿನೂತನ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಪುಸ್ತಕಗಳನ್ನು ಕೊಡುವುದರಿಂದ ಸಾಹಿತ್ಯಪ್ರಚಾರ ಆಗುತ್ತದೆ ಎನ್ನುವುದು ಅವರ ನಿಲುವು. ಇದು ಒಂದು ದೃಷ್ಟಿಯಿಂದ ಸರಿ. ಆದರೆ ಸಾಹಿತ್ಯಪ್ರಚಾರ ಮಾಡಲು ಪುಸ್ತಕದ ಮಳಿಗೆಗಳು ಇರುವಾಗ ಹೂವಿನ ಹಾರ ಹಾಕುವ ಪದ್ಧತಿಯನ್ನು ಕೈಬಿಡುವುದು ಸರಿಯೇ? 

ಅತಿಥಿಗಳಿಗೆ ಸಭೆ-ಸಮಾರಂಭಗಳಲ್ಲಿ ಕೊಡುವ ಹೂವಿನ ಹಾರ ಬಾಡಿಹೋಗುತ್ತದೆ ಎಂಬುದು ನಿಜ. ಹಾಗೆಂದು ಹೂವಿನ ಹಾರ ಹಾಕುವುದೇ ತಪ್ಪು ಎಂಬ ನಿರ್ಧಾರಕ್ಕೆ ಬರುವುದು ಸರಿಯೇ? ಮಲ್ಲಿಗೆಯ ಹೂ ಮರುದಿನವೇ ಬಾಡಿ ಹೋಗುತ್ತದೆಯೆಂದು ಯಾರೂ ತಮ್ಮ ಮಡದಿಯರ ಮುಡಿಗೆ ಮಾರುಕಟ್ಟೆಯಿಂದ ಹೂವನ್ನು ಕೊಂಡುತರದೇ ಇರುತ್ತಾರೆಯೇ? ಮದುವೆ ಮಂಟಪದಲ್ಲಿ ಹೂ ಅಲಂಕಾರ ಮಾಡುವುದಿಲ್ಲವೇ? ಹೆಸರಾಂತ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್ ನರಸಿಂಹಸ್ವಾಮಿಯವರು ತಮ್ಮ ಒಂದು ಕವನದಲ್ಲಿ ಹೂಮುಡಿವ ಮಡದಿ ದೂರದ ತೌರಿನಲ್ಲಿರುವಾಗ ಬಾಗಿಲಿಗೆ ಬಂದ ಹೂವಾಡಗಿತ್ತಿಯ ಬುಟ್ಟಿಯಲ್ಲಿನ ಹೂವಿನ ಮಾಲೆಗಳನ್ನು ಕಂಡು ಹೀಗೆ ಕಳವಳಿಸುತ್ತಾರೆ:

ಹೂವೆಲ್ಲ ನೋಡಿದವು ಹಂಬಲಿನ ಕಣ್ಣೆರೆದು, 
ಮನದೊಳಗೆ ಕೂಡಿದುದು ಬೇವು-ಬೆಲ್ಲ 
ಮಾಲೆಯಲಿ ನಾನೊಂದು ಹೂವಾಗಿ ನೋಡಿದೆನು 
ಮನೆಯೊಳಗೆ ಹೂಮುಡಿವ ಮಡದಿಯಿಲ್ಲ 
(ಹೂವಾಡಗಿತ್ತಿ, ಮೈಸೂರ ಮಲ್ಲಿಗೆ)

ಅವರೇ ಇನ್ನೊಂದು ಕವಿತೆಯಲ್ಲಿ ಹೇಳುವಂತೆ ಹೊವರಳಿ ನಳನಳಿಸುತ್ತದೆ. ಅದು ನಂತರ ಬಾಡಿ ಉರುಳುವುದೂ ನಿಜ. ಆದರೆ ಆ ಹೊತ್ತಿಗೆ ಮತ್ತೊಂದು ಮೊಗ್ಗು ಹೂವಾಗಿ ಅರಳಿ ಚೆಲುವನ್ನು ಬೀರುತ್ತದೆ. ಹೀಗೆ ಹೂವು ಆದಿ-ಅಂತ್ಯವಿಲ್ಲದ. ಚೆಲುವಿನ ಪ್ರತಿನಿಧಿ. ಚೆಲುವೇ ಬದುಕಿನ ಬೆಳಕು, ಚೆಲುವಿಲ್ಲದ ಬದುಕು ಬರಡು. ಮೊಗ್ಗರಳಿ ಹೂವಾಗಿ ನಸುನಗುವ ಮಲ್ಲಿಗೆಯ ಮಾಲೆಯನ್ನು ಗಂಡನು ತನ್ನ ಪ್ರೀತಿಯ ಮಡದಿಯ ಮುಡಿಗೇರಿಸಬಹುದೇ ಹೊರತು ಅಯ್ಯೋ ಬಾಡುವ ಹೂಮಾಲೆಯಿಂದೇನು ಪ್ರಯೋಜನವೆಂದು ಅಡಕೆ/ಏಲಕ್ಕಿ ಮಾಲೆಯನ್ನು ಮಡದಿಯ ಮುಡಿಗೇರಿಸಿದರೆ ಏನಾಗಬಹುದು! ಇಲ್ಲಿ ಹೂ ಪ್ರೀತಿಯ ಪ್ರತೀಕ. ಹೂ ಬಾಡಬಹುದು, ಆದರೆ ಗಂಡ-ಹೆಂಡಿರ ಪ್ರೀತಿ ಬಾಡುವುದಿಲ್ಲ, ಬಾಡಬಾರದು. 

ಹೂವಿನಂತೆ ಎಂದೂ ಬಾಡದ ಘಮಘಮಿಸುವ ಗಂಧದ ಹಾರಗಳು, ಆಕರ್ಷಕವಾದ ಏಲಕ್ಕಿ ಹಾರಗಳು ಸಭೆ ಸಮಾರಂಭಗಳಲ್ಲಿ ಇತ್ತೀಚೆಗೆ ಬಳಕೆಗೆ ಬಂದಿವೆ. ಇನ್ನು ಕೆಲವು ಕಡೆ ತೆಂಗಿನಸೀಮೆಯಾದರೆ ಕೊಬ್ಬರಿಬಟ್ಟಲಿನಿಂದ ತಯಾರಿಸಿದ ಕೊಬ್ಬರಿ ಹಾರ, ಅಡಿಕೆ ಬೆಳೆಯುವ ಸೀಮೆಯಾದರೆ ಸ್ವಾಮಿಗಳಾದವರ ಕೊರಳಲ್ಲಿರುವ ರುದ್ರಾಕ್ಷಿಯಂತೆ ಕಾಣುವ ಸುಂದರವಾದ ಅಡಿಕೆಹಾರ, ಬದನೆಕಾಯಿ ಬೆಂಡೆಕಾಯಿಗಳಿಂದ ಮಾಡಿದ ತರಕಾರಿ ಹಾರಗಳು ಇತ್ಯಾದಿ. ಹೀಗೆ ಕಾಲಕಾಲಕ್ಕೆ ಹಾರಗಳು ರೂಪಾಂತರಗೊಂಡಿರುವುದನ್ನು ನೀವು ಕಾಣಬಹುದು. ಅತಿಥಿಗಳ ಕೊರಳಿಗೆ ಹೂವಿನ ಹಾರ ಹಾಕುವ ಪದ್ಧತಿ ನಮ್ಮ ದೇಶದಲ್ಲಿರುವಂತೆ ಪಾಶ್ಚಾತ್ಯರಾಷ್ಟ್ರಗಳಲ್ಲಿ ಇಲ್ಲ. ಪರದೇಶದವರು ನಮ್ಮ ದೇಶಗಳಿಗೆ ಭೇಟಿ ನೀಡಿದಾಗ ಗೌರವಾರ್ಥವಾಗಿ ಅವರ ಕೊರಳಿಗೆ ಹಾಕಿದ ಹಾರಗಳನ್ನು ಅವರು ಸಮಾರಂಭ ಮುಗಿಯುವವರೆಗೂ ಹಾಕಿಕೊಂಡೇ ಇರುತ್ತಾರೆ. ಅವರನ್ನು ನೋಡಿ ಹಾರ ಹಾಕಿ ಗೌರವಿಸಿದ ಜನರು ಮತ್ತು ಸಭಿಕರು ಒಳಗೊಳಗೆ ಮುಸಿ ಮುಸಿ ನಗುತ್ತಾರೆ. ಹಾಕಿದ ಹಾರವನ್ನು ತಕ್ಷಣವೇ ತೆಗೆಯಬೇಕೆಂದು ನಮ್ಮವರ ನಿರೀಕ್ಷೆ, ತಕ್ಷಣವೇ ತೆಗೆದರೆ ಪ್ರೀತಿಯಿಂದ ಹಾರ ಹಾಕಿದವರನ್ನು ಅಗೌರವಿಸಿದಂತಾಗಬಹುದೆಂದು ವಿಭಿನ್ನ ಸಂಸ್ಕೃತಿಯ ವಿದೇಶೀಯರು ಭಾವಿಸುತ್ತಾರೆ. ಹೆಚ್ಚಿನ ಹೊತ್ತು ಹಾರಹಾಕಿಕೊಂಡು ಬೀಗುವ ಸ್ವಭಾವ ಅವರದಲ್ಲ. ನಮ್ಮ ದೇಶೀಯ ಅತಿಥಿಗಳಿಗೆ ಬಹಳ ಹೊತ್ತು ಹಾರ ಹಾಕಿಕೊಂಡಿದ್ದರೆ ಜನ ಏನು ತಿಳಿದುಕೊಳ್ಳುತ್ತಾರೋ ಎಂಬ ಸಭ್ಯತೆಯ ಸಂಕೋಚವೆಂಬುದನ್ನು ಅಲ್ಲಗಳೆಯಲಾಗದು. 

ಅತಿಥಿಗಳಿಗೆ ಹಾರ ಹಾಕುವುದನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡಬಾರದು. ಒಂದು ವೇಳೆ ಹಾಗೆ ನೋಡಿದರೂ ಈ ಪದ್ಧತಿಯಿಂದ ಬಡವರಿಗೇ ಅನುಕೂಲವಾಗುತ್ತದೆ. ಹೂವನ್ನು ಬೆಳೆಯುವ ರೈತರು, ಅವುಗಳನ್ನು ಕಲಾತ್ಮಕವಾಗಿ ಕಟ್ಟುವ ಮಾಲೆಕಾರರು, ಮಾರುವ ಹೂವಾಡಿಗರು ಆಗರ್ಭ ಬಡವರೆಂಬುದನ್ನು ನೀವು ಬಲ್ಲಿರಿ. ಅವರೂ ಬದುಕಬೇಕು, ಅವರ ಕಲೆಯೂ ಬದುಕಿ ಉಳಿಯಬೇಕಲ್ಲವೆ? ಅದಕ್ಕೇ ಇರಬೇಕು ಮಹಮದ್ ಪೈಗಂಬರ್ ಹೇಳಿದ್ದು: “ನನಗೆ ಒಂದು ರೂಪಾಯಿ ದೊರೆತರೆ ಎಂಟಾಣೆ ಕೊಟ್ಟು ರೊಟ್ಟಿಯನ್ನು ಕೊಂಡುಕೊಳ್ಳುತ್ತೇನೆ. ಉಳಿದ ಎಂಟಾಣೆ ಕೊಟ್ಟು ಹೂವನ್ನು ಕೊಳ್ಳುತ್ತೇನೆ, ರೊಟ್ಟಿ ಹೊಟ್ಟೆಯ ಹಸಿವಿನ ಸಂಕೇತವಾದರೆ ಹೂವು ಕಲೆ-ಸಾಹಿತ್ಯ-ಸಂಸ್ಕೃತಿಯ ಸಂಕೇತ. Man cannot live by bread alone ಎನ್ನುತ್ತದೆ ಬೈಬಲ್.

ಕಟ್ಟಿಗೆ ಹೊರೆಯನು ಹೊತ್ತರೂ ತಲೆಯೊಳು 
ಮುಡಿಯೊಳಗಿರಲೊಂದು ಹೂವು 
ಹೊರೆ ಭಾರವಾದಾಗ ಹೂವಿನ ಕಂಪೊಳು 
ಕಡಿಮೆಯೆಂದೆನಿಪುದು ನೋವು!

ಎಂದು ಹೇಳುವ ಹಿರಿಯ ಸಾಹಿತಿ ಪ್ರೊ. ಎಸ್.ವಿ ಪರಮೇಶ್ವರ ಭಟ್ಟರ ಮಾತನ್ನು ನೀವು ಖಂಡಿತಾ ಅಲ್ಲಗಳೆಯಲಾರಿರಿ. ನೀವು ಬಡವರಿಗೆಂದು ಕೈಯೆತ್ತಿ ಕೊಡದಿದ್ದರೂ ನಿಮ್ಮ ಖುಷಿಗಾಗಿ ಮಾಡಿದ ವೆಚ್ಚ ಬಡವರನ್ನೇ ತಲುಪುತ್ತದೆ. ದಾನಿ ಎನಿಸಿಕೊಳ್ಳುವ ಹಿರಿಮೆಯಾಗಲೀ ದೇಹಿ ಎನ್ನುವ ದೈನ್ಯವಾಗಲೀ ಇಲ್ಲಿರುವುದಿಲ್ಲ. ಯಾರ ಹಂಗೂ ಇಲ್ಲದೆ ಸ್ವಾಭಿಮಾನದಿಂದ ದುಡಿವ ಬಡವರ ತುತ್ತಿನ ಚೀಲ ತುಂಬುತ್ತದೆಯಾದ್ದರಿಂದ ನೀವು ಮಾಡಿದ ವೆಚ್ಚ ವ್ಯರ್ಥ ಎನಿಸಲಾರದು! 

ಕನ್ನಡ ಸಾಹಿತ್ಯಸಮ್ಮೇಳನದ ನಂತರ ಬೆಂಗಳೂರಿನಲ್ಲಿ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವ ಇಂದಿನಿಂದ ಒಂಭತ್ತು ದಿನಗಳ ಕಾಲ ಅರಮನೆಯ ಆವರಣದಲ್ಲಿ ನಡೆಸಲು ಏರ್ಪಾಡಾಗಿದೆ. ಅದಕ್ಕಾಗಿ ಮೈಸೂರು ಅರಮನೆಯಂತೆ ವಿದ್ಯುದ್ದೀಪಗಳಿಂದ ಜಗಮಗಿಸುವ ಭವ್ಯವಾದ ಮಹಾಮಂಟಪ ನಮ್ಮ ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರ ಹೆಸರಿನಲ್ಲಿ ನಿರ್ಮಾಣಗೊಂಡಿದೆ. ಕಳೆದ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ನಾಡಿನ ನಾನಾಭಾಗಗಳಲ್ಲಿ ಆಚರಿಸಿಕೊಂಡು ಬಂದ ಸುದೀರ್ಘ ಇತಿಹಾಸವುಳ್ಳ ಈ ಮಹೋತ್ಸವ ಕಾವ್ಯರ್ಷಿ ಕುವೆಂಪುರವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿ ಜನಮನ್ನಣೆಯನ್ನು ಪಡೆದು ಬಾವೈಕ್ಯದ ಬೆಸುಗೆಯಾಗಿದೆ. 50 ರ ದಶಕದಲ್ಲಿ ಹಿರಿಯ ತಲೆಮಾರಿನ ಹೆಸರಾಂತ ಕನ್ನಡ ಸಾಹಿತಿಗಳಾದ ಫ.ಗು ಹಳಕಟ್ಟಿಯವರು, ಬಿ ಶಿವಮೂರ್ತಿ ಶಾಸ್ತ್ರಿಗಳು, ತ.ರಾ.ಸು, ಅ.ನ.ಕೃ, ಟಿ.ಎಸ್ ವೆಂಕಣ್ಣಯ್ಯನವರು, ಕನ್ನಡದ ಗಾಂಧಿ ಎನಿಸಿದ್ದ ಹರ್ಡೇಕರ್ ಮಂಜಪ್ಪ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು. 36 ವರ್ಷಗಳ ಹಿಂದೆ ಬೆಂಗಳೂರಿನ ಸುಭಾಷ್ ಮೈದಾನದಲ್ಲಿ ಅಂದರೆ ಈಗಿನ ಸಿಟಿ ಬಸ್ಸ್ಟಾಂಡ್ ಆವರಣದಲ್ಲಿ ನಮ್ಮ ಪರಮಾರಾಧ್ಯ ಗುರುವರ್ಯರ ಸಮ್ಮುಖದಲ್ಲಿ ನಡೆದಿತ್ತು. ಆಗಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸುರವರ ಮಂತ್ರಿಮಂಡಲದಲ್ಲಿ ಗೃಹಸಚಿವರಾಗಿದ್ದ ಎಚ್ ಸಿದ್ಧವೀರಪ್ಪನವರು ಮಠದ ಶಿಷ್ಯರು. ಮೊದಲದಿನ ಉದ್ಘಾಟಕರಾಗಿ ಆಗಮಿಸಬೇಕಾಗಿದ್ದ ಅರಸುರವರು ಬರುವುದು ಕೆಲವು ನಿಮಿಷಗಳ ತಡವಾಯಿತು. ಕಾಲನಿಷ್ಠರಾದ ನಮ್ಮ ಗುರುವರ್ಯರು ಮುಖ್ಯಮಂತ್ರಿಗಳಿಗಾಗಿ ಕಾಯದೆ ಮಹಾಮಂಟಪವನ್ನು ತಾವೇ ಉದ್ಘಾಟಿಸಿ ಸಭೆಯ ಕಾರ್ಯಕಲಾಪಗಳನ್ನು ಆರಂಭಿಸಿದ್ದು ಆಗಿನ ಪತ್ರಿಕೆಗಳ ಪ್ರಮುಖ ಸುದ್ದಿಗೆ ಗ್ರಾಸವಾಗಿತ್ತು. 

ಏನಿದು ತರಳಬಾಳು? ಬಸವಣ್ಣನವರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು ಮಾಘಶುದ್ಧ ಹುಣ್ಣಿಮೆಯಂದು (ಭಾರತ ಹುಣ್ಣಿಮೆ) ತಮ್ಮ ಶಿಷ್ಯ ತೆಲಗುಬಾಳು ಸಿದ್ಧನನ್ನು ಸದ್ಧರ್ಮಪೀಠದಲ್ಲಿ ಕುಳಿರಿಸಿ ಅಪ್ಪಟ ಕನ್ನಡದಲ್ಲಿ ಹರಸಿದ ಆಶೀರ್ವಾದ ಮಂತ್ರವೇ ತರಳಾ, ಬಾಳು! ಜಗತ್ತಿನ ಎಲ್ಲ ಮಕ್ಕಳಿಗೆ ಮಾಡಿದ ಮಾತೃಹಾರೈಕೆ. ಇದರ ತಾತ್ವಿಕ ಸಂದೇಶವೇ ಇತರೆ ಭಾಷೆಗಳಲ್ಲಿ ಎಲ್ಲರಿಗೂ ಸುಪರಿಚಿತವಾದ: ಜೀತೇ ರಹೋ ಬೇಟಾ, Long Live my son!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 10.2.2011