ವೈಚಾರಿಕತೆಯನ್ನು ಮೆಟ್ಟಿ ನಿಲ್ಲುವ ಭಾವನೆಗಳು!
ಬಹಳ ವರ್ಷಗಳ ಹಿಂದೆ ನಮ್ಮ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವಿಚಾರವಂತ ಮಹಿಳೆಯೊಬ್ಬರು “ಮೂಢನಂಬಿಕೆ” ವಿಷಯ ಕುರಿತು ಮಾತನಾಡಿದ ಹಳೆಯ ನೆನಪು. “ಮರವನ್ನು ಸುತ್ತುವರಿಯುವುದರಿಂದ ಮಕ್ಕಳಾಗುವುದಾದರೆ ಮದುವೆ ಯಾಕಾಗಬೇಕು?” ಎಂಬುದು ಅವರ ತಾರ್ಕಿಕ ಪ್ರಶ್ನೆ. ಅವರ ಪ್ರಶ್ನೆಯಲ್ಲಿ ವೈಚಾರಿಕ ದೃಷ್ಟಿಯಿಂದ ತಪ್ಪೇನೂ ಇಲ್ಲ. ಆದರೆ ಶಾಸ್ತ್ರೋಕ್ತವಾಗಿ ಮದುವೆಯಾದ ಮಾತ್ರಕ್ಕೆ, ರಿಜಿಸ್ಟರ್ ಮದುವೆಯಾದ ಮಾತ್ರಕ್ಕೆ ಮಕ್ಕಳಾಗುತ್ತವೆ ಎಂದು ಹೇಳಲು ಬಾರದು. ಮದುವೆಯಾಗದೆಯೂ ಅಕ್ರಮ ಸಂಬಂಧದಿಂದ, ಲೈಂಗಿಕ ದೌರ್ಜನ್ಯದಿಂದ ಮಕ್ಕಳಾಗುವುದು ನೈಸರ್ಗಿಕ ನಿಯಮ. ಇಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು ಉದ್ಭವಿಸುತ್ತವೆ. ಮಕ್ಕಳಿಲ್ಲದ ಮಹಿಳೆಯು ಮರ ಸುತ್ತುವರಿಯುವುದರಿಂದ ತನಗೆ ಮಗುವಾಗುತ್ತದೆ ಎಂದು ನಂಬಿದ್ದರೆ ಅಂತಹ ನಂಬಿಕೆಯಿಂದ ಆಕೆಗೆ ವೈಯಕ್ತಿಕ ಹಾನಿಯೇನೂ ಇಲ್ಲ: ಸಮಾಜದ ಸಮಷ್ಟಿ ಹಿತಕ್ಕೆ ಧಕ್ಕೆಯೂ ಇಲ್ಲ. ವೈಚಾರಿಕತೆಯ ದೃಷ್ಟಿಯಿಂದ ಅದೊಂದು ಮೂಢನಂಬಿಕೆ ಎನಿಸಿದರೂ ಆಕೆಯದು ಆಶಾದಾಯಕವಾದ ನಂಬಿಕೆ. ಅದನ್ನು ಭಾವನಾತ್ಮಕ ದೃಷ್ಟಿಯಿಂದ ಅಲ್ಲಗಳೆಯಲು ಬರುವುದಿಲ್ಲ.
ನಂಬಿಕೆ ಮತ್ತು ಮೂಢನಂಬಿಕೆಗಳ ಮಧ್ಯೆ ಗೆರೆ ಎಳೆಯುವುದು ತುಂಬಾ ಕಠಿಣ. ಒಬ್ಬರ ನಂಬಿಕೆಯು ಇನ್ನೊಬ್ಬರಿಗೆ ಕುರುಡು ನಂಬಿಕೆಯಾಗಿ ಕಾಣಬಹುದು. ಆದಕಾರಣ ಒಬ್ಬರ ನಂಬಿಕೆಯನ್ನು ಮತ್ತೊಬ್ಬರು ಮೂಢನಂಬಿಕೆಯೆಂದು ಹಂಗಿಸುವುದು ಸರಿಯಲ್ಲ. ಇಲ್ಲಿ ಖಂಡಿಸಬೇಕಾದುದು ನಿಷ್ಪಾಪಿ ಶ್ರದ್ಧಾಳುಗಳನ್ನು ಮತ್ತು ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಕೊಳಕು ಮನಸ್ಸಿನ ಧೂರ್ತರನ್ನು! ಬುದ್ಧಿಯ ಸ್ತರದ ಚಿಂತನೆಯು ವೈಚಾರಿಕತೆಗೆ ಇಂಬುಕೊಟ್ಟರೆ ಹೃದಯದ ಸ್ತರದ ಭಾವುಕತೆಯು ಭಾವನೆಗಳ ಗಂಗೋತ್ರಿಯಾಗುತ್ತದೆ. ಪ್ರತಿ ವ್ಯಕ್ತಿಯಲ್ಲೂ ಬುದ್ಧಿಯ ತರ್ಕ ಮತ್ತು ಹೃದಯದ ಭಾವತೀವ್ರತೆಗಳ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅವುಗಳಲ್ಲಿ ಯಾವುದು ಪ್ರಬಲವಾಗಿರುತ್ತದೆಯೋ ಅದು ಮೇಲುಗೈ ಸಾಧಿಸುತ್ತದೆ.
ಇತ್ತೀಚೆಗೆ ನಮ್ಮ ಅನುಭವಕ್ಕೆ ಬಂದ ಎರಡು ಮನಮಿಡಿಯುವ ಘಟನೆಗಳು ಹೀಗಿವೆ: ನಮ್ಮ ವಿದ್ಯಾಸಂಸ್ಥೆಯ ಕಾಲೇಜೊಂದರಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸುದೀರ್ಘ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತರಾದವರು, ಕನ್ನಡಸಾಹಿತ್ಯದಲ್ಲಿ ಅಪಾರ ಒಲವು, ಪರಿಶ್ರಮವುಳ್ಳ RVS ಎಂದೇ ವಿದ್ಯಾರ್ಥಿ ಸಮೂಹದಲ್ಲಿ ಖ್ಯಾತನಾಮರಾಗಿದ್ದ ರಾ. ವೆಂಕಟೇಶ ಶೆಟ್ಟಿಯವರು. ಅವರ ಪತ್ನಿ ಸುಕನ್ಯಾ ಕಳೆದ ಕೆಲವಾರು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ನಾವು ಆರೋಗ್ಯ ವಿಚಾರಿಸಲು ದೂರವಾಣಿಯಲ್ಲಿ ಮಾತನಾಡಿದಾಗಲೆಲ್ಲಾ “ನಾನು ಧೈರ್ಯವಾಗಿದ್ದೇನೆ; ನಮ್ಮ ಯಜಮಾನರಿಗೆ ಧೈರ್ಯ ಹೇಳಿರಿ ಬುದ್ದಿ” ಎನ್ನುತ್ತಿದ್ದರು. ತಾನು ಪತ್ನಿಯಾಗಿ ಪತಿಯ ಸೇವೆಯನ್ನು ಮಾಡುವ ಬದಲು ತಾನೇ ಪತಿಯಿಂದ ಸೇವೆ ಮಾಡಿಸಿಕೊಳ್ಳಬೇಕಾದ ದುಃಸ್ಥಿತಿ ಬಂತಲ್ಲಾ ಎಂದು ಆ ಸಾಧ್ವಿ ತುಂಬಾ ನೋವಿನಿಂದ ಹೇಳಿಕೊಳ್ಳುತ್ತಿದ್ದರು. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಸಾವು ಬದುಕಿನ ತೂಗುಯ್ಯಾಲೆಯಲ್ಲಿದ್ದಾಗ ಅವರ ಪತಿ ಒಂದು ದಿನ ಬೆಳಗ್ಗೆ ದೂರವಾಣಿಯಲ್ಲಿ ಕರೆ ಮಾಡಿ “ಡಾಕ್ಟರುಗಳ ಕೆಲಸ ಮುಗಿಯಿತು; ತಮ್ಮ ಆಶೀರ್ವಾದ ಮಾತ್ರ ನನ್ನ ಪತ್ನಿಯನ್ನು ಉಳಿಸಬೇಕು!” ಎಂದು ದುಃಖದಿಂದ ಹೇಳಿಕೊಂಡರು. ತಕ್ಷಣವೇ ದಾವಣಗೆರೆಗೆ ಅವರ ಮಗನ ಮನೆಗೆ ಧಾವಿಸಿದಾಗ ಕಣ್ತೆರೆದು ನೋಡಿದರೂ ಯಾರನ್ನೂ ಗುರುತಿಸಲಾರದೆ ತುಂಬಾ ವೇದನೆಯಿಂದ ನರಳುತ್ತಿದ್ದರು. ಮನೆಯವರೆಲ್ಲರಿಗೂ ಸಾಂತ್ವನ ಹೇಳಿ ಅವರ ಕೈಗಳಿಗೆ ಒಂದು ಸೇಬು ಹಣ್ಣನ್ನು ಕೊಟ್ಟಾಗ ಅದನ್ನು ಹಿಡಿದುಕೊಳ್ಳಲೂ ಆಗದಷ್ಟು ನಿತ್ರಾಣ. ಅವರ ಸೊಸೆ ಲಾವಣ್ಯ “ಗುರುಗಳು ದಯಮಾಡಿಸಿದ್ದಾರೆ, ನೋಡಮ್ಮಾ” ಎಂದು ಹೇಳಿ ಕಷ್ಟಪಟ್ಟು ಹಣ್ಣನ್ನು ಹಿಡಿದುಕೊಳ್ಳುವಂತೆ ಮಾಡಿದರು. ತುಂಬಾ ಹೊತ್ತು ಅವರ ಕುಟುಂಬದ ಸದಸ್ಯರಿಗೆ ಸಾಂತ್ವನದ ಮಾತುಗಳನ್ನು ಹೇಳಿ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಮಠಕ್ಕೆ ಹಿಂದಿರುಗಿದ ಮೇಲೆ ಅದೇ ರಾತ್ರಿಯೇ ಕೊನೆಯುಸಿರೆಳೆದರೆಂಬ ದಾರುಣ ಸುದ್ದಿ ಮುಂಜಾನೆ ಬಂತು!
1976 ರಲ್ಲಿ ನಡೆದ ಅವರ ಮದುವೆಗೆ ನಮ್ಮ ಗುರುವರ್ಯರು ದಯಮಾಡಿಸಿದ್ದರು. ಆಗತಾನೇ ಕಾಶೀ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದು ಮುಗಿಸಿ ಬಂದ ನಮ್ಮನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಆಗ ಮದುವೆ ಮಂಟಪದಲ್ಲಿ ಸಪ್ತಪದಿ ತುಳಿದು ಹಸೆಮಣೆ ಏರಿದ್ದ ಅವರಿಗೆ ನಮ್ಮ ಗುರುವರ್ಯರು ಹರಸಿದರೆ, ಅವರ ಅಂತಿಮ ಯಾತ್ರೆಗೆ ವಿದಾಯ ಹೇಳುವುದು ನಮ್ಮ ಪಾಲಿಗೆ ಬಂದಿತ್ತು. ಸಾವಿನ ಪ್ರಶಾಂತ ಅಂಬುಧಿಯನ್ನು ಸೇರುವ ಮೊದಲು ನಮ್ಮ ಕೊನೆಯ ದರ್ಶನಕ್ಕಾಗಿ ಜೀವ ಕಾಯುತ್ತಿತ್ತೇನೋ ಎನಿಸಿತು! “ನನ್ನ ಮಡದಿಯ ಶುಶ್ರೂಷೆಯನ್ನು ಆಕೆಯ ಕೊನೆಯುಸಿರಿನವರೆಗೂ ಪ್ರೀತಿಯಿಂದ ಮಾಡಿದ್ದೇನೆ” ಎಂದು ವೆಂಕಟೇಶ ಶೆಟ್ಟರು ಭಾವುಕರಾಗಿ ಆಡಿದ ಮಾತು “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ..” ಎಂಬ ಭಗವದ್ಗೀತೆಯ ಸಾಲುಗಳನ್ನು ನೆನಪಿಗೆ ತಂದು ಕೊಟ್ಟಿತು. ಯಾವುದೇ ಕಾರ್ಯವನ್ನು ಮಾಡುವಾಗ ಫಲಾಫಲಗಳನ್ನು ಗಮನದಲ್ಲಿರಿಸಿಕೊಂಡು ಮಾಡದೆ ತನ್ನ ಕರ್ತವ್ಯ ಎಂದು ಪರಿಭಾವಿಸಿ ಮಾಡಬೇಕೆಂಬುದು ಗೀತೆಯ ಮಾತಿನ ತಾತ್ಪರ್ಯ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಾಡಬೇಕಾದ ಕರ್ತವ್ಯವನ್ನು ಗೊಣಗುತ್ತಾ ಮಾಡದೆ ಪ್ರೀತಿಯಿಂದ ಮಾಡಬೇಕು ಎಂಬ ವಿನೂತನ ಅರ್ಥ ನಮಗೆ ಧ್ವನಿಸಿ ಗೀತೆಗೆ ಹೊಸ ಭಾಷ್ಯವನ್ನು ಬರೆದಂತಿತ್ತು!
ನಂತರ ಚಿತ್ರದುರ್ಗದ ವಾಸವಿ ದೇವಾಲಯದಲ್ಲಿ ನಡೆದ ವೈಕುಂಠ ಸಮಾರಾಧನೆಗೆ ಹೋದಾಗ ಮನಮಿಡಿಯುವ ಸಂಗತಿ ಹೊರಬಂದಿತು. ಅಂದು ನಾವು ಅವರ ಪತ್ನಿಗೆಂದು ಕೊಟ್ಟಿದ್ದ ಸೇಬಿನ ಹಣ್ಣನ್ನು ಯಾರು ತಿನ್ನಬೇಕು ಎಂಬ ಜಿಜ್ಞಾಸೆ ಕುಟುಂಬದ ಸದಸ್ಯರಲ್ಲಿ ಉಂಟಾಯಿತಂತೆ! ಬದುಕಿದ್ದಾಗ ಕಾಶಿಯನ್ನು ನೋಡಬೇಕೆಂಬ ತಾಯ ಹಂಬಲವನ್ನು ಮನಗಂಡ ಮಗ ಶ್ರೀನಿವಾಸ ಚಿಂತಾಲ್ ಚಿತಾಭಸ್ಮದ ಜೊತೆಗೆ ನಾವು ಕೊಟ್ಟಿದ್ದ ಸೇಬಿನ ಹಣ್ಣನ್ನೂ ವಿಮಾನದಲ್ಲಿ ಕಾಶಿಗೆ ಕೊಂಡೊಯ್ದು ಗಂಗಾನದಿಯಲ್ಲಿ ವಿಸರ್ಜಿಸಿದನಂತೆ! ವಿಚಾರವಂತರು ಇಲ್ಲಿ ಕೇಳಬಹುದಾದ ಪ್ರಶ್ನೆ: ಅಷ್ಟು ದೂರ ಕಾಶಿಗೆ ವಿಮಾನದಲ್ಲಿ ದುಬಾರಿ ವೆಚ್ಚ ಮಾಡಿ ಹೋಗಿ ಚಿತಾಭಸ್ಮವನ್ನು ಮತ್ತು ಯಃಕಶ್ಚಿತ್ ಸೇಬಿನ ಹಣ್ಣನ್ನು ಗಂಗೆಗೆ ಅರ್ಪಿಸಿದ್ದು ಯಾವ ಪುರುಷಾರ್ಥಕ್ಕಾಗಿ? ಗಂಗೆಯನ್ನು ಮಲಿನಗೊಳಿಸಿದಂತಾಗಲಿಲ್ಲವೆ? ಇಂತಹ ತಾರ್ಕಿಕ ಪ್ರಶ್ನೆಗಳು ನೊಂದವರ ಮನಸ್ಸಿನಲ್ಲಿ ತರ್ಕಿಸಲರಿಯದೆ ಮೂಕವಾಗುತ್ತವೆ! ಬುದ್ಧಿಯ ಸ್ತರದಲ್ಲಿ ಹುಟ್ಟುವ ಪ್ರಶ್ನೆಗಳು ಹೃದಯದ ಭಾವನೆಗಳ ಹೆದ್ದೊರೆಯಲ್ಲಿ ಕೊಚ್ಚಿಹೋಗುತ್ತವೆ!
ಸಮಾರಾಧನೆ ನಡೆದ ಮರುದಿನವೇ ದೂರದ ಅಮೇರಿಕೆಯಿಂದ ನಮಗೆ ಮತ್ತೊಂದು ದಾರುಣ ದೂರವಾಣಿ ಕರೆ. ನಮ್ಮ ಗುರುವರ್ಯರ ಆತ್ಮೀಯ ಶಿಷ್ಯರೂ, ದೇವರಾಜ ಅರಸರ ಕಾಲದಲ್ಲಿ ಶಾಸಕರೂ ಆಗಿದ್ದ ದಿವಂಗತ ಜಿ.ಶಿವಪ್ಪನವರ ಮಗಳಾದ ಡಾ. ಗೀತಾಮೂರ್ತಿಯವರು ತಮ್ಮ ಪತಿ ಡಾ. ಸದಾಶಿವಮೂರ್ತಿ ಮರಣ ಹೊಂದಿದ್ದು ಅಂತಿಮ ಸಂಸ್ಕಾರವನ್ನು ಹೇಗೆ ಮಾಡಬೇಕೆಂದು ಅವರ ದುಃಖತಪ್ತ ಪ್ರಶ್ನೆ. ಸುಮಾರು 40 ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದು ಅವರ ಮನೆಗೆ ಹೋದಾಗಲೆಲ್ಲಾ ತುಂಬಾ ಭಕ್ತಿಗೌರವಗಳಿಂದ ನಮ್ಮನ್ನು ಉಪಚರಿಸುತ್ತಿದ್ದ ಅವರ ದನಿ ನೋವಿನಿಂದ ಗದ್ಗದಗೊಂಡಿತ್ತು. ಶರಣಧರ್ಮದ ಪ್ರಕಾರ ಪತಿಯ ಮೃತಶರೀರವನ್ನು ಅಮೇರಿಕಾದಲ್ಲಿಯೇ ಮಾಡಬೇಕೇ? ಭಾರತಕ್ಕೆ ತಂದು ಸಮಾಧಿ ಮಾಡಬೇಕೇ? ಅವರ ಚಿತಾಭಸ್ಮವನ್ನು ಭಾರತಕ್ಕೆ ತರುವುದು ಸುಲಭ. ಆದರೆ ಸಂಪ್ರದಾಯವನ್ನು ಮೀರಿ ಹಾಗೆ ಮಾಡಬಹುದೇ? ವೃತ್ತಿಯಿಂದ ವೈದ್ಯೆಯಾದರೂ ಧರ್ಮದ ಬಗ್ಗೆ ಅಪಾರ ಶ್ರದ್ಧೆಯುಳ್ಳ ಅವರು ಧರ್ಮಗುರುಗಳಾದ ನಮ್ಮಿಂದ ಮಾರ್ಗದರ್ಶನ ಬಯಸಿದ್ದರು. ಉದ್ವಿಗ್ನಗೊಂಡಿದ್ದ ಅವರ ಮನಸ್ಸು ನಮ್ಮ ಸಾಂತ್ವನದ ನುಡಿಗಳಿಂದ ಶಮನಗೊಂಡ ಮೇಲೆ ಅವರ ಹೃದಯದ ಭಾವನೆಗಳು ಏನಿವೆಯೆಂದು ತಿಳಿಯಿತು.
ಅವರ ವಿಚಾರಧಾರೆಯ ಪ್ರಕಾರ ಶರೀರವನ್ನು ಸುಟ್ಟರೆ ವಾಯುಮಾಲಿನ್ಯ ಉಂಟಾಗುತ್ತದೆ. ಮೃತ ಶರೀರವನ್ನು ಹೂಳಿದರೆ ದೇಹ ಕೊಳೆತು ಹೋಗುತ್ತದೆ (decompose). ಅದರ ಬದಲು ಈಗ ಹೊಸತೊಂದು ವಿಧಾನವಾದ ನೈಸರ್ಗಿಕ ಪುನಃಚೇತನ (recompose) ಎಂಬುದು ಬಂದಿದೆ. ಅದರ ಪ್ರಕಾರ ಮೃತಶರೀರವನ್ನು ಮಣ್ಣಾಗಿ ಪರಿವರ್ತಿಸುವುದು. ಅದನ್ನು ಭಾರತಕ್ಕೆ ತಂದು ತಮ್ಮ ತೋಟದ ಮಣ್ಣಿನಲ್ಲಿ ಸೇರಿಸಿ ಅದರ ಮೇಲೆ ಗಿಡಮರಗಳನ್ನು ಬೆಳೆಸುವುದು. ಸಸ್ಯರಾಶಿಯಿಂದ, ಗಿಡಮರಗಳಿಂದ ಪೋಷಣೆಗೊಂಡು ಬೆಳೆದ ಈ ಶರೀರ ಅವುಗಳಿಗೇ ಸಮರ್ಪಣೆಗೊಳ್ಳಬೇಕು. ಹುಟ್ಟಿದಂದಿನಿಂದ ಪ್ರಕೃತಿಯಿಂದ ಪಡೆದ ಉಪಕಾರಕ್ಕೆ ಅವುಗಳ ಋಣ ತೀರಿಸಬೇಕು ಎಂದು ಡಾ. ಗೀತಾಮೂರ್ತಿ ಹೇಳಿದಾಗ ಮೂಕವಿಸ್ಮಿತರಾದೆವು. “ಮಣ್ಣಿಂದ ಕಾಯ ಮಣ್ಣಿಂದ ದೇಹ, ಮಣ್ಣಿಂದಲೇ ಸಕಲ ವಸ್ತುಗಳೆಲ್ಲಾ...” ಎಂಬ ಭಜನಾಪದ ನೆನಪಾಗಿ ಮರು ಮಾತನಾಡದೆ ಧರ್ಮಭೀರುವಾದ ಆ ಸಾಧ್ವಿ ಸತಿಗೆ ನಮ್ಮ ಒಪ್ಪಿಗೆಯನ್ನು ಸೂಚಿಸಿದಾಗ ಅವರ ಮಾನಸಿಕ ತುಮುಲ ನಿವಾರಣೆಯಾಗಿ ದುಃಖದಲ್ಲಿಯೂ ಒಂದು ರೀತಿಯ ಸಮಾಧಾನ ಉಂಟಾಯಿತು.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 7.3.2024.