ತಾಯಿ ಎದೆ ಹಾಲಿಗಿಂತಲೂ ಮಿಗಿಲಾದ ಪೌಷ್ಠಿಕ ಆಹಾರ ಮತ್ತೊಂದಿಲ್ಲ: ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ತಾಯಿ ಎದೆ ಹಾಲಿಗಿಂತ ಮಿಗಿಲಾದ ಪೌಷ್ಠಿಕ ಆಹಾರ ಮತ್ತೊಂದಿಲ್ಲ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ1108  ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.

ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಇಂದು ಎದೆ ಹಾಲಿನ ಭಂಡಾರ ಸೇರಿದಂತೆ, ನವೀಕೃತ ಶಸ್ತ್ರ ಚಿಕಿತ್ಸಾ ಕೇಂದ್ರ ಮತ್ತು ವಿಸ್ತರಿತ ನವಜಾತ ಶಿಶು ಆರೈಕೆ ಕೇಂದ್ರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಜಗದ್ಗುರುಗಳು ಆಶೀರ್ವಚನ  ನೀಡಿದರು.

ನಮಗೆ ಬ್ಲಡ್ ಬ್ಯಾಂಕ್ ಗೊತ್ತಿತ್ತು, ಆದರೆ ಮದರ್ ಮಿಲ್ಕ್ ಬ್ಯಾಂಕ್ ಗೊತ್ತಿರಲಿಲ್ಲ. ನಮ್ಮ ತಾಯಿ ಎದೆ ಹಾಲನ್ನು ಬಹಳ ದಿನದವರೆಗೆ ಒತ್ತಾಯ ಮಾಡಿ ಕುಡಿಸಿದ ಕಾರಣವೇ ನಮ್ಮ ಆರೋಗ್ಯ ಹೀಗೆ ಉತ್ತಮವಾಗಿರಲು ಸಾಧ್ಯವಾಗಿದೆ. ಹಾಗಾಗಿ ತಾಯಿ ಎದೆ ಹಾಲಿಗಿಂತ ಬೇರೆ ಪೌಷ್ಠಿಕ ಆಹಾರ ಇಲ್ಲ ಎಂದರು.

ಮಕ್ಕಳ ತಜ್ಞರಾಗಿ ಮಕ್ಕಳ ಸೇವೆ ಮಾಡಿ, ಮಕ್ಕಳಂತೆ ಆಗಿದ್ದ ಡಾ.ನಿರ್ಮಲ ಕೇಸರಿ  ಈಗ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ಈ ಎದೆ ಹಾಲು ಕೇಂದ್ರವನ್ನು ಸ್ಥಾಪಿಸುವ ಮೂಲಕ ಮತ್ತು ಆಧುನಿಕ ಆಪರೇಷನ್ ಥಿಯೇಟರ್ ಮತ್ತು ಆರೈಕೆ ಕೇಂದ್ರಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ  ಮೂಲಕ ಸಚಿವ ಶಾಮನೂರು ಮಲ್ಲಿಕಾರ್ಜುನ್‌ ಮತ್ತು ಆಸ್ಪತ್ರೆ ವೈದ್ಯರುಗಳು  ಡಾ.ನಿರ್ಮಲಾ ಕೇಸರಿಯವರ ಆಶೋತ್ತರಗಳನ್ನು ಈಡೇರಿಸಿದ್ದಾರೆ ಎಂದು  ಶ್ರೀಗಳು ಶ್ಲ್ಯಾಘಿಸಿದರು.

ಆಸ್ಪತ್ರೆ ತುಂಬಾ ಅಭಿವೃದ್ಧಿಯಾಗಿದೆ. ಆರೋಗ್ಯ ರಕ್ಷಣೆಗಿಂತ ಪುಣ್ಯದ ಕಾರ್ಯ ಮತ್ತೊಂದು ಇಲ್ಲ. ಮಂದಿರ, ಮಸೀದಿ ಮತ್ತು ಚರ್ಚ್‌ಗಳಿಗೆ ಹೋಗುವುದಕ್ಕಿಂತ ಆಸ್ಪತ್ರೆಗಳಿಗೆ ಪ್ರತಿ ವಾರ ಬರುವುದೇ ಆರೋಗ್ಯಕ್ಕೆ ಉತ್ತಮ ಎಂದು ಶ್ರೀಗಳು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚೇರ್ಮನ್‌, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಶ್ರೀ ತರಳಬಾಳು ಜಗದ್ಗುರುಗಳಿಗೆ ಗೌರವ ಸಮರ್ಪಿಸಿ, ನೆನಪಿನ ಕಾಣಿಕೆ ನೀಡಿದರು.

ಮುಖ್ಯ ಅತಿಥಿಗಳಾಗಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರಾದ ಎ.ಎಸ್.ವೀರಣ್ಣ, ಕಿರುವಾಡಿ ಗಿರಿಜಮ್ಮ, ಎ.ಎಸ್.ನಿರಂಜನ್, ಸಂಪನ್ನ ಮುತಾಲಿಕ್  ಆಗಮಿಸಿದ್ದರು.

ಆರಂಭಕ್ಕೆ ಸ್ವಾಗತಿಸಿದ  ಬಾಪೂಜಿ ಮಕ್ಕಳ ಆಸ್ಪತ್ರೆ    ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ. ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜೆಜೆಎಂಎಂಸಿ ಮಕ್ಕಳ ವಿಭಾಗದ ಮುಖ್ಯಸ್ಥ ರಾದ ಡಾ.ಮೂಗನಗೌಡ ಪಾಟೀಲ್, ಡಾ.ಬಿ.ಎಂ.ಹರ್ಷ, ಜೆಜೆಎಂಎಂಸಿ ಪ್ರಿನ್ಸಿಪಾಲ್ ಡಾ.ಶುಕ್ಲ ಎಸ್.ಶೆಟ್ಟಿ, ಡೀನ್ ಡಾ.ಆಲೂರು ಮಂಜುನಾಥ್, ಮೆಡಿಕಲ್ ಡೈರೆಕ್ಟರ್ ಡಾ.ಡಿ.ಎಸ್.ಕುಮಾರ್, ಟಿ.ಸತ್ಯನಾರಾಯಣ, ಡಾ.ಸಿ.ಆರ್.ಬಾಣಾಪುರ ಮಠ್ ಮತ್ತಿತರರು ಹಾಜರಿದ್ದರು.