ಶಿವರಾತ್ರಿ ಜಾಗರಣೆ ಮತ್ತು ಮಹಿಳಾ ದಿನಾಚರಣೆ
ದಿನಾಂಕ : 8-3-2024
ಮೈಸೂರು
ಈ ವರ್ಷ ಶಿವರಾತ್ರಿ ಜಾಗರಣೆ ಮತ್ತು ಮಹಿಳಾ ದಿನಾಚರಣೆ ಒಂದೇ ದಿನ ಬಂದಿವೆ. ವೈದ್ಯಕೀಯ ವಿಜ್ಞಾನ ಮುಂದುವರಿದಂತೆ ಕೆಲವೊಂದು ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ಹೆಚ್ಚಿವೆ. ಅವುಗಳಲ್ಲಿ ಹೊಟ್ಟೆಯೊಳಗಿರುವ ಕೂಸಿನ ಲಿಂಗಪರೀಕ್ಷೆಯೂ ಒಂದು. ಇದು ಅವಿದ್ಯಾವಂತ ಮಹಿಳೆಯರಿಗಿಂತ ವಿದ್ಯಾವಂತ ಮಹಿಳೆಯರಲ್ಲೇ ಹೆಚ್ಚು. ಜಗತ್ತಿನಲ್ಲಿ ಸ್ತ್ರೀಭ್ರೂಣ ಹತ್ಯೆಯಾಗುತ್ತಿರುವುದು ಚೀನಾ ದೇಶವನ್ನು ಬಿಟ್ಟರೆ ಭಾರತದಲ್ಲಿಯೇ ಜಾಸ್ತಿ ಎಂದು ಒಂದು ಸಮೀಕ್ಷೆ ಹೇಳುತ್ತದೆ. ವಿಶ್ವರಾಷ್ಟ್ರಸಂಸ್ಥೆ ಒದಗಿಸಿರುವ ಅಂಕಿಸಂಖ್ಯೆಗಳ ಪ್ರಕಾರ ಭಾರತದಲ್ಲಿ 2007ನೇ ಇಸವಿಯಲ್ಲಿ ದಿನಕ್ಕೆ ಎರಡು ಸಾವಿರದಂತೆ ಅಂದರೆ ಇಡೀ ವರ್ಷ ಒಟ್ಟು 7,30,000 ಹೆಂಗೂಸುಗಳು ತಾಯಗರ್ಭದಲ್ಲಿದ್ದಾಗಲೇ ಕೊಲೆಯಾಗಿವೆ. ಇಂತಹ ಮಾರಣಹೋಮದ ವಿರುದ್ಧ ಜನಜಾಗೃತಿ ಆಗಬೇಕಾಗಿದೆ. “ಅಪುತ್ರಸ್ಯ ಗತಿರ್ನಾಸ್ತಿ” ಎಂದು ಸ್ವರ್ಗದಲ್ಲಿರುವ ಪಿತೃಗಳಿಗೆ ತರ್ಪಣ ಕೊಡಲು ಗಂಡುಮಗನೇ ಆಗಬೇಕೆಂದು ಹೊಟ್ಟೆಯಲ್ಲಿರುವ ಏನೂ ಅರಿಯದ ಹೆಂಗೂಸಿಗೆ ಹುಟ್ಟುವ ಮೊದಲೇ ಎಳ್ಳುನೀರು ಬಿಡುವುದು ಅಮಾನವೀಯ ಕೃತ್ಯ.
ಒಬ್ಬ ಅಸಹಾಯಕ ತಾಯಿಯ ಕರುಳಿನ ಕುಡಿಯ ಕಾಲ್ಪನಿಕ ರೋದನವನ್ನು ಕುರಿತು ಅಂತರಜಾಲದಲ್ಲಿ ಪ್ರಚಲಿತವಾಗಿರುವ ಒಂದು ಮನಮಿಡಿಯುವ ಇಂಗ್ಲೀಷ್ ವಿದ್ಯುನ್ಮಾನ ಪತ್ರವಿದೆ. ಅದನ್ನು ಆಧರಿಸಿ ನಾವು ಕನ್ನಡದಲ್ಲಿ ಬರೆದ ಕವಿತೆ ಹೀಗಿದೆ:
ಅಮ್ಮಾ! ನೀನಾದರೂ ಜೋಕೆ..!
ಅಮ್ಮಾ! ನಾನಿನ್ನ ಮುದ್ದಿನ ಮಗಳಾಗ ಬಯಸಿದ್ದೆ,
ಅದಾವ ಜನ್ಮದ ಸಂಬಂಧವೋ ನಾ ಕಾಣೆ
ನಿನ್ನೊಡಲೊಳಗೆ ಕುಳಿತು ಹಾಯಾಗಿದ್ದೆ
ನಿನ್ನ ಮುಖವ ನೋಡಲು ತವಕಿಸುತಲಿದ್ದೆ.
ಕತ್ತಲಲ್ಲಿ ತಡಕಾಡಿದರೂ ಬೆಚ್ಚನೆಯ ನಿನ್ನುದರದೊಳಗೆ
ಸದಾಕಾಲ ಚಿಂತಿಸುತ ನಿದ್ರಿಸುತಲಿದ್ದೆ
ಕತ್ತಲಾಗೂಡಿಂದ ಬೆಳಕಿನೆಡೆಗೆ
ಹೊರಬರಲು ಅನುದಿನವು
ನಾ ಕನವರಿಸುತ್ತಲಿದ್ದೆ!
ಆಗಾಗ ನೀನಳುವುದು ಕೇಳುತಲಿತ್ತು ನನಗೆ
ಏಕೆ ಅಳುತಿರುವೆಯೆಂದು ಏನೂ ತಿಳಿಯದೆ
ಸುರಿವ ನಿನ್ನ ಕಣ್ಣೀರ ಒರೆಸಲಾಗದೆ
ಅಳುತಲಿದ್ದೆ ನಾನೂ ನಿನ್ನೊಟ್ಟಿಗೆ.
ಅಪ್ಪ ಬಯ್ದಾಗಲೆಲ್ಲ ನೀನನುಭವಿಸಿದಾ ಬವಣೆ
ನೋಡಿ ನನಗಾಗಿತ್ತು ಅಸಹನೆ, ವೇದನೆ!
ಎಲ್ಲ ಸರಿಹೋಗುವುದೆಂದು ನಾ ತಿಳಿದಿದ್ದೆ....
ಏಕೆ ಹೀಗಾಗುತಿದೆ ನಿಮ್ಮಿಬ್ಬರ ಮಧ್ಯೆ ಘರ್ಷಣೆ?
ನಿನ್ನೆಯಿಂದ ಒಂದೇ ಸಮನೆ ನೀನಳುತಲಿರುವೆ
ಏನಾಯಿತೆಂದು ನಾನಿನ್ನ ಕೇಳಿ ತಿಳಿಯುವುದರೊಳಗೆ
ಬಂದನದೋ ಚಾಕುಚೂರಿ ಹಿಡಿದ ರಕ್ಕಸ!
ಘೂರ್ಣಿಸುತ ನಿನ್ನುದರವ ಬಗಿದ
ನಿಷ್ಕರುಣಿ ಪಾಪಿ ಹೋಗೆಲವೋ ಬೇರೆಡೆಗೆ!
ಮುರಿದನಾ ಕ್ರೂರಿ ನನ್ನ ಕೈಕಾಲುಗಳ ಲಟಲಟನೆ
ಒದ್ದಾಡುತಿರುವೆ ನಿನ್ನುದರದೊಳಗೆ ವಿಲವಿಲನೆ
ಅಯ್ಯೋ ಸೈರಿಸಲಾರೆ ಈ ನರಕಯಾತನೆ
ಅಮ್ಮಾ, ಕೇಳದೆ ನಿನಗೆ ನನ್ನೀ ವೇದನೆ?
ನಿನ್ನನೊಮ್ಮೆ ಕಣ್ತುಂಬ ನೋಡುವ ಮುನ್ನವೆ
ನಿನ್ನ ಮಡಿಲೊಳಗೆ ಅರೆಗಳಿಗೆ ಸುಖನಿದ್ರೆ ಮಾಡುವ ಮುನ್ನವೆ
ನಿನ್ನ ಬಿಗಿದಪ್ಪಿ ಕಿವಿಯೊಳಗೆ ಅಮ್ಮಾ ಎಂದು ಉಸುರುವ ಮುನ್ನವೆ
ಏಕೀ ಕ್ರೂರ ಶಿಕ್ಷೆ ನನಗೆ ಹುಟ್ಟುವ ಮುನ್ನವೆ?
ನಿನ್ನ ಎದೆಹಾಲ ಸವಿಯುವ ಭಾಗ್ಯವಿಲ್ಲವೆನಗೆ
ನಿನ್ನ ಸಿಹಿಮುತ್ತ ಪಡೆಯುವ ಪುಣ್ಯವಿಲ್ಲವೆನಗೆ
ನಿನ್ನ ಜೋಗುಳವ ಕೇಳುವ ಅದೃಷ್ಟವಿಲ್ಲವೆನಗೆ
ಭೂತಪ್ರೇತಗಳ ಮಸಣವೇ ತೊಟ್ಟಿಲಾಯಿತೆನಗೆ
ಅಮ್ಮಾ, ಉಸಿರುಗಟ್ಟುತಿದೆ... ಹೋಗಿಬರುವೆ,
ನೀನಾದರೂ ಜೋಕೆ!
ಶ್ರೀ ತರಳಬಾಳು ಜಗದ್ಗುರು
ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.